ತೆಲುಗು ನೆಲದಲ್ಲೀಗ ಕನ್ನಡಿಗರದ್ದೇ ಡಿಂಡಿಮ: ಟಾಲಿವುಡ್‍ನಲ್ಲಿ ಕನ್ನಡದ ಪ್ರತಿಭೆಗಳ ಹಂಗಾಮ !

news18
Updated:July 28, 2018, 4:30 PM IST
ತೆಲುಗು ನೆಲದಲ್ಲೀಗ ಕನ್ನಡಿಗರದ್ದೇ ಡಿಂಡಿಮ: ಟಾಲಿವುಡ್‍ನಲ್ಲಿ ಕನ್ನಡದ ಪ್ರತಿಭೆಗಳ ಹಂಗಾಮ !
news18
Updated: July 28, 2018, 4:30 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಟಾಲಿವುಡ್‍ನಲ್ಲೀಗ ಕನ್ನಡದ ನಟ-ನಟಿಯರದ್ದೇ ಸದ್ದು. ಅಲ್ಲೀಗ ಅರ್ಧ ಡಜನ್‍ಗೂ ಹೆಚ್ಚು ಕನ್ನಡಿಗರು, ಕನ್ನಡದ ಕಂಪನ್ನ ಪಸರಿಸುತ್ತಿದ್ದಾರೆ. ಅದರಲ್ಲಿ ಸಾನವಿಯಾಗಿ ಕನ್ನಡಿಗರ ನಿದ್ದೆಗೆಡಿಸಿದ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಮುದ್ದು ಮೊಗದ ಈ ಚೆಲುವೆ, ತಮ್ಮ ಸ್ನಿಗ್ಧ ಚೆಲುವಿನಿಂದ, ಮುಗ್ಧ ನಟನೆಯಿಂದ, ಮೋಹಕ ನಗುವಿನಿಂದ ತೆಲುಗು ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ಅಭಿನಯಿಸಿದ ಮೊದಲ ಚಿತ್ರ `ಚಲೋ'ನಲ್ಲೇ ಯಶಸ್ಸು ಕಂಡು 'ಚಮಕ್', 'ಚಲೋ' ಅಂತಿದ್ದಾರೆ. ಸದ್ಯ 'ಗೀತ ಗೋವಿಂದಂ' ಚಿತ್ರದಿಂದ ಸೆನ್ಸೇಷನ್ ಕ್ರಿಯೇಟ್ ಮಾಡುವ ಹಾದಿಯಲ್ಲಿದ್ದಾರೆ.

ಕಡಲೂರ ಚೆಲುವೆ ಪೂಜಾ ಹೆಗಡೆ ತನ್ನ ಗ್ಲಾಮರಸ್ ಪಾತ್ರಗಳಿಂದಲೇ ಟಾಲಿವುಡ್‍ನಲ್ಲಿ ಅಲೆ ಎಬ್ಬಿಸಿದ್ದಾರೆ. 'ಡಿಜೆ' ಚಿತ್ರದಲ್ಲಿ ಅಲ್ಲುಗೆ ಜೋಡಿಯಾದ ಕನ್ನಡ ಮೂಲದ ಈ ಬೆಡಗಿ ತೆಲುಗರ ದಿಲ್ ಕದ್ದು ಬಿಟ್ಟರು. ಅದರಲ್ಲೂ ಗುಡಿಲೋ ಬಡಿಲೋ ಹಾಡಿನಲ್ಲಿ ಈಕೆ ಬಳುಕಿದ ರೀತಿಗಂತೂ ಅದೆಷ್ಟು ಹುಡುಗರು ನಿದ್ದೆಯನ್ನ ಮರೆತು ಹೋಗಿದ್ದಾರೆ ಅದು ಅವರಿಗಷ್ಟೇ ಗೊತ್ತು. ಇಂತಹ ಪೂಜಾ ಈಗ 'ಸಾಕ್ಷ್ಯಂ' ಚಿತ್ರದ ಮೂಲಕ ಮತ್ತೆ ಮೋಡಿ ಮಾಡಲಿದ್ದಾರೆ.

ನಭಾ ನಟೇಶ್ ಈ ಹೆಸರು ಕೇಳಿದ ತಕ್ಷಣ ಅಷ್ಟಾಗಿ ಯಾರಿಗೂ ಅವರ ಮುಖ ನೆನಪಾಗುದಿಲ್ಲವೇನೋ? ಆದರೆ ಪಟಾಕ ಪಾರ್ವತಿ ಅಂದ ತಕ್ಷಣ, 'ವಜ್ರಕಾಯ' ಚಿತ್ರದ ಆ ಬಜಾರಿ ಪಾತ್ರ ಕಣ್ಮುಂದೆ ಬರುತ್ತೆ. ಹೌದು 'ವಜ್ರಕಾಯ' ಚಿತ್ರದಲ್ಲಿ ಧಮಾಕೆದಾರ್ ಅಭಿನಯ ನೀಡಿದ್ದ ಈ ಪಟಾಕಿಯಂತಹ ಹುಡುಗಿ ಎಲ್ಲೋದರು ಅಂದುಕೊಳ್ಳುತ್ತಿರುವಾಗಲೇ ಸೈಲೆಂಟಾಗಿ ಎರಡು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ 'ನನ್ನು ದೋಚುಕುಂದುವಟೆ' ಚಿತ್ರದ ಚಿತ್ರೀಕರಣ ಮುಗಿಸಿದ್ದು ರಿಲೀಸ್‍ಗೆ ರೆಡಿಯಾಗುತ್ತಿದೆ.

ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ಬೇರೆ ಬೇರೆ ರೀತಿ ತನ್ನನ್ನು ತಾನು ಮಾರ್ಪಾಡುಗೊಳಿಸಿಕೊಂಡು ಸ್ಯಾಂಡಲ್‍ವುಡ್‍ನಲ್ಲಿ ತನ್ನದೇ ಆದ ಚಾಪು ಬೀರಿರೋ ಮಧು ಗುರುಸ್ವಾಮಿ ಈಗ ಟಾಲಿವುಡ್‍ಗೆ ಕಾಲಿಟ್ಟಿದ್ದಾರೆ. 'ಸಾಕ್ಷ್ಯಂ' ಎಂಬ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಚಿತ್ರದ ಮಧು ಪಾತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ.

ಸ್ಯಾಂಡಲ್‍ವುಡ್‍ನಲ್ಲಿ ಐದಾರು ಚಿತ್ರಗಳಲ್ಲಿ ಅಭಿನಯಿಸಿದರೂ ಸಹ ಯಶಸ್ಸಿನ ಟ್ರ್ಯಾಕ್‍ಗೆ ಬರಲಾಗದೆ ಒದ್ದಾಡುತ್ತಿರೋ ಸುಮಂತ್ ಶೈಲೇಂದ್ರ ಸಿಮೋಲ್ಲಂಗನ ಮಾಡಿದ್ದಾರೆ. ಟಾಲಿವುಡ್‍ನಲ್ಲಿ ಅದೃಷ್ಟ ಹರಸಿ ಕೂತಿದ್ದಾರೆ.
Loading...

ಸದ್ಯ ಅವರು 'ಬ್ರ್ಯಾಂಡ್ ಬಾಬು' ಎಂಬ ಚಿತ್ರದಲ್ಲಿ ಅಭಿನಯಿಸಿದ್ದು, ಟ್ರೇಲರ್​ನಿಂದಲೇ ಸದ್ದು ಮಾಡುತ್ತಿದ್ದಾರೆ. ಇನ್ನು ಇದಿಷ್ಟೇ ಅಲ್ಲದೆ 'ಆಟಗದರಾ ಶಿವ' ಚಿತ್ರದಲ್ಲಿ ಕನ್ನಡದ ಖ್ಯಾತ ಪೋಷಕ ನಟ ದೊಡ್ಡಣ್ಣ ಕಾಣಿಸಿಕೊಂಡರೆ, 'ಸಾಕ್ಷ್ಯಂ' ಚಿತ್ರದಲ್ಲಿ ಮತ್ತೊಬ್ಬ ಹಿರಿಯ ನಟ ಶಿವರಾಂ ಅಭಿನಯಿಸಿದ್ದಾರೆ. ಒಟ್ಟಾರೆ ಕನ್ನಡದ ನಟನಟಿಯರು ಪರಭಾಷೆಯಲ್ಲಿ ತಮ್ಮ ಪ್ರತಿಭೆಯನ್ನ ತೋರಿಸಿ, ಕನ್ನಡದ ಪ್ರಭೆಯನ್ನ ಹರಡಿಸುತ್ತಿರೋದು ಕನ್ನಡ ಚಿತ್ರೋದ್ಯಮಕ್ಕೂ ಒಂದು ರೀತಿ ಆಶಾದಾಯಕ ಬೆಳವಣಿಗೆಯೇ ಸರಿ.

 

 
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ