ಪ್ರತಿಯೊಂದು ಚಿತ್ರರಂಗದಲ್ಲೂ ಕೆಲವೊಂದು ದೊಡ್ಡ ಮನೆತನದವರಿಂದ ಬಂದ ನಟರು (Actors) ಇರುತ್ತಾರೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ (Dr Rajkumar) ಅವರ ಕುಟುಂಬ, ಬಾಲಿವುಡ್ ನಲ್ಲಿ ಅಮಿತಾಭ್ (Amitabh Bachchan) ಅವರ ಕುಟುಂಬ, ತಮಿಳು ಚಿತ್ರೋದ್ಯಮ ನೋಡಿದರೆ ರಜನೀಕಾಂತ್ ಅವರ ಕುಟುಂಬ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹಾಗೆಯೇ ತೆಲುಗು ಚಿತ್ರೋದ್ಯಮದಲ್ಲಿ ತುಂಬಾ ದಶಕಗಳಿಂದಲೂ ಎನ್ಟಿಆರ್ (NTR) ಮತ್ತು ಚಿರಂಜೀವಿ (Chiranjeevi) ಅವರ ಕುಟುಂಬ ಪರಂಪರೆಗಳು ತುಂಬಾನೇ ಜನಪ್ರಿಯವಾದ್ದವು ಅಂತ ಹೇಳಬಹುದು. ಇವೆರಡು ಕುಟುಂಬಗಳ ಮಧ್ಯೆ ಅಷ್ಟೇನು ಚೆನ್ನಾಗಿಲ್ಲ ಅಂತ ಅನೇಕ ಸಾರಿ ಸುದ್ದಿಯಾಗಿದ್ದಿದೆ.
ಈಗೇಕೆ ಈ ಹಳೆ ವೈರತ್ವದ ಬಗ್ಗೆ ಮಾತು ಅಂತೀರಾ? ಈಗ ಇವೆರಡೂ ಕುಟುಂಬದ ಮಕ್ಕಳು ಒಂದೇ ಚಿತ್ರದಲ್ಲಿ ಅಭಿನಯಿಸಿದಲ್ಲದೆ, ಕೈ ಕೈ ಹಿಡಿದುಕೊಂಡು ಒಟ್ಟಿಗೆ ಜನಪ್ರಿಯ ಹಾಡೊಂದಕ್ಕೆ ಸ್ಟೆಪ್ಸ್ ಹಾಕಿ ಆ ಹಾಡಿಗೆ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಹ ತಂದುಕೊಡುವಲ್ಲಿ ಸಫಲರಾಗಿದ್ದಾರೆ. ಈಗ ಇಷ್ಟು ಹೇಳಿದ ಮೇಲೆ ನಾವು ಇಲ್ಲಿ ಯಾವ ನಟರ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಈಗಾಗಲೇ ತಿಳಿದಿರುತ್ತದೆ.
ತಮ್ಮ ಕುಟುಂಬಗಳ ಮಧ್ಯೆ ಇರೋ ಸುದೀರ್ಘ ವೈರತ್ವದ ಬಗ್ಗೆ ಏನ್ ಹೇಳಿದ್ರು ಈ ನಟರು?
ಹೌದು. ನಾವು ಮಾತಾಡ್ತಾ ಇರೋದು ತೆಲುಗು ಚಿತ್ರೋದ್ಯಮದಲ್ಲಿನ ನಟರಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಬಗ್ಗೆ. ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಹೊಸ ಅಂತರರಾಷ್ಟ್ರೀಯ ಸಂದರ್ಶನದಲ್ಲಿ ತಮ್ಮ ಕುಟುಂಬಗಳ 3 ದಶಕಗಳ ಸುದೀರ್ಘ ವೈರತ್ವದ ಬಗ್ಗೆ ಮಾತನಾಡಿದ್ದಾರೆ ನೋಡಿ.
ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಪರಂಪರೆಯ ಕುಟುಂಬಗಳಿಂದ ಬಂದವರು ಎಂಬುದು ರಹಸ್ಯವಲ್ಲ. ತೆಲುಗು ಚಿತ್ರೋದ್ಯಮದಲ್ಲಿ ತಾರಕ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಜೂನಿಯರ್ ಎನ್ಟಿಆರ್ ಹಿರಿಯ ನಟ-ರಾಜಕಾರಣಿ ಎನ್ ಟಿ ರಾಮ ರಾವ್ ಅವರ ಪರಂಪರೆಯನ್ನು ಮುಂದುವರಿಸಿದರೆ, ರಾಮ್ ಚರಣ್ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಏಕೈಕ ಸುಪುತ್ರ.
ಈ ಎರಡು ಕುಟುಂಬಗಳ ನಡುವಿನ ಪೈಪೋಟಿ ಇದ್ದರೂ ಆರ್ಆರ್ಆರ್ ಚಿತ್ರದ ತಾರೆಗಳ ಅಭಿಮಾನಿಗಳು ಈ ಇಬ್ಬರು ನಟರ ಸ್ನೇಹದಿಂದ ತುಂಬಾನೇ ಆಶ್ಚರ್ಯಚಕಿತರಾಗಿದ್ದಾರೆ ಅಂತ ಹೇಳಿದರೆ ಸುಳ್ಳಲ್ಲ.
ಕ್ಯಾಮೆರಾ ಹಿಂದೆಯೂ ಸಹ ರಾಮ್ ಮತ್ತು ತಾರಕ್ ಆಪ್ತ ಸ್ನೇಹಿತರು
ಇಂದು, ನಟರು ಪರದೆಯ ಮೇಲೆ ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ ಕ್ಯಾಮೆರಾ ಹಿಂದೆಯೂ ಸಹ ಆಪ್ತ ಸ್ನೇಹಿತರಾಗಿದ್ದಾರೆ.
ತಮ್ಮ ಕುಟುಂಬಗಳ ವೈರತ್ವವನ್ನು ಸ್ನೇಹವಾಗಿ ಪರಿವರ್ತಿಸುವ ಬಗ್ಗೆ ಮಾತನಾಡಿದ ರಾಮ್ ಚರಣ್, ತಾನು ಮತ್ತು ಜೂನಿಯರ್ ಎನ್ಟಿಆರ್ ವೈರತ್ವದ ಸುದ್ದಿಯಿಂದ ತುಂಬಾನೇ ಬೇಸತ್ತಿದ್ದೇವೆ ಮತ್ತು ಈಗ ಸ್ನೇಹಿತರಾಗಲು ಬಯಸಿದ್ದೇವೆ ಎಂದು ಹೇಳಿದರು.
"ಪೈಪೋಟಿಯ ಸಂಪೂರ್ಣ ಪರಿಕಲ್ಪನೆಯು ನಮ್ಮನ್ನು ಒಟ್ಟುಗೂಡಿಸಿತು. ನಾವು ತೆಗೆದುಕೊಳ್ಳಬಹುದಾದ ಏಕೈಕ ಮಾರ್ಗವೆಂದರೆ ಸ್ನೇಹ, ಏಕೆಂದರೆ ಮೂರು ದಶಕಗಳಿಗೂ ಹೆಚ್ಚು ಕಾಲ ಪೈಪೋಟಿಯ ಸುದ್ದಿಯಿಂದ ನಾವು ಬೇಸರಗೊಂಡಿದ್ದೆವು" ಎಂದು ರಾಮ್ ಚರಣ್ ಹೇಳಿದರು.
ಚರಣ್ ತನ್ನಲ್ಲಿ ಇಲ್ಲದ ವಿಷಯಗಳಿಗೆ ನನ್ನ ಕಡೆಗೆ ಆಕರ್ಷಿತನಾಗುತ್ತಾನೆ ಮತ್ತು ನಾನು ನನ್ನಲ್ಲಿ ಏನು ಇಲ್ಲವೋ ಅದನ್ನು ರಾಮ್ ನಲ್ಲಿ ನೋಡಿ ಆಕರ್ಷಿತನಾಗಿದ್ದೇನೆ. ನಾವು ಪರಸ್ಪರ ಪೂರಕವಾಗಿದ್ದೇವೆ. ಎಂದಿಗೂ ಹೊರಬರದ ಕೆಲವು ರಹಸ್ಯಗಳನ್ನು ನಾವು ಇನ್ಮುಂದೆ ಹಂಚಿಕೊಳ್ಳಬಹುದು" ಎಂದು ಹೇಳಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರವು 2023 ರ ಆಸ್ಕರ್ ಪ್ರಶಸ್ತಿಗೆ ಹಲವಾರು ನಾಮನಿರ್ದೇಶನಗಳನ್ನು ಪಡೆಯುತ್ತದೆ ಎಂದು ಭಾರತ ಮತ್ತು ಜಾಗತಿಕವಾಗಿ ಹಲವಾರು ಅಭಿಮಾನಿಗಳು ಆಶಿಸುತ್ತಿದ್ದಾರೆ. ಈ ಚಿತ್ರವು ಈಗಾಗಲೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಎರಡು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ