News18 India World Cup 2019

ತೆಲುಗು ಸಿನಿ ರಂಗವನ್ನು ಆಳಿದ ಎನ್​ಟಿಆರ್​ ಮಗನಾಗಿ ಹರಿಕೃಷ್ಣ ಅಭಿನಯಿಸಿದ್ದು ಮಾತ್ರ ಬೆರಳೆಣಿಕೆ ಸಿನಿಮಾಗಳಲ್ಲಿ..!

news18
Updated:August 29, 2018, 2:07 PM IST
ತೆಲುಗು ಸಿನಿ ರಂಗವನ್ನು ಆಳಿದ ಎನ್​ಟಿಆರ್​ ಮಗನಾಗಿ ಹರಿಕೃಷ್ಣ ಅಭಿನಯಿಸಿದ್ದು ಮಾತ್ರ ಬೆರಳೆಣಿಕೆ ಸಿನಿಮಾಗಳಲ್ಲಿ..!
news18
Updated: August 29, 2018, 2:07 PM IST
ಅನಿತಾ ಈ, ನ್ಯೂಸ್​ 18 ಕನ್ನಡ

ಎನ್​ಟಿ ಆರ್​ ಅವರ ನಾಲ್ಕನೇ ಮಗ ನಂದಮುರಿ ಹರಿಕೃಷ್ಣ ಇಂದು (ಆ.29) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬಾಲ ನಟನಾಗಿ ಬೆಳ್ಳಿ ತೆರೆಗೆ ಕಾಲಿಟ್ಟ ಹರಿಕೃಷ್ಣ ತನ್ನ ತಂದೆ ಎನ್​ಟಿಆರ್​ ಹಾಗೂ ಸಹೋದರ ಬಾಲಕೃಷ್ಣ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಬಾಲ ನಟನಾಗಿ ಸಿನಿರಂಗಕ್ಕೆ ಕಾಲಿಟ್ಟರೂ ಅವರು ಮಾಡಿದ್ದು ಮಾತ್ರ ಕೆಲವೇ ಸಿನಿಮಾಗಳು. ಅದರಲ್ಲೂ ಸಿನಿಪಯಣದಲ್ಲಿ ಕೆಲ ಕಾಲ ಬ್ರೇಕ್​ ತೆಗೆದುಕೊಂಡಿದ್ದ ಅವರು, ಮತ್ತೆ ಬಣ್ಣ ಹಚ್ಚುವ ಮೂಲಕ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದರು. ಅವರ ಸಿನಿ ಪಯಣದ ಕುರಿತಾದ ಆಸಕ್ತಿಕ ಮಾಹಿತಿ ಇಲ್ಲಿದೆ ಓದಿ.

1956 ಸೆಪ್ಟೆಂಬರ್​ 2ರಂದು ಕೃಷ್ಣ ಜಿಲ್ಲೆಯ ನಿಮ್ಮಕೂರಿನಲ್ಲಿ ಎನ್​ಟಿಆರ್​ ಅವರ ನಾಲ್ಕನೇ ಮಗನಾಗಿ ಜನಿಸಿದ ಹರಿಕೃಷ್ಣ ಅವರಿಗೆ ಇಬ್ಬರು ಹೆಂಡತಿ. ಮೊದಲನೇ ಹೆಂಡತಿ ಲಕ್ಷ್ಮಿ ಅವರಿಗೆ ಮೂವರು ಮಕ್ಕಳು. ಮೊದಲನೇ ಮಗ ಜಾನಕಿ ರಾಮ, ಎರಡನೇ ಮಗ ಕಲ್ಯಾಣ ರಾಮ ಹಾಗೂ ಮಗಳು ಸುಹಾಸಿನಿ. ಎರಡನೇ ಹೆಂಡತಿ ಶಾಲಿನಿ ಅವರ ಮಗನೇ ಜೂನಿಯರ್​ ಎನ್​ಟಿಆರ್​.

1964ರಲ್ಲಿ ಮೊದಲ ಬಾರಿಗೆ ಬಾಲನಟನಾಗಿ ಬಣ್ಣ ಹಚ್ಚಿದ್ದು 'ಶ್ರೀ ಕೃಷ್ಣಾವತಾರಂ' ಸಿನಿಮಾಗಾಗಿ. ಕಮಲಾಕರ್​ ಕಾಮೇಶ್ವರ ರಾವ್​ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಹರಿಕೃಷ್ಣ ಬಾಲ ಕೃಷ್ಣನಾಗಿ ಅಭಿನಯಿಸಿದ್ದರು. 1970ರಲ್ಲಿ 'ತೆಲ್ಲ ಪೆಳ್ಳಾಂ' ಸಿನಿಮಾದಲ್ಲೂ ಬಾಲ ಕಲಾವಿದನಾಗಿ ಅಭಿನಯಿಸಿದ್ದರು. 1974ರಲ್ಲಿ ಎನ್​ಟಿಆರ್ ಅವರೇ ನಿರ್ಮಿಸಿ ನಿರ್ದೇಶಿಸಿದ್ದ​ 'ತಾತಮ್ಮಕಥ' ಸಿನಿಮಾದಲ್ಲಿ ತಂದೆ ಎನ್​ಟಿಆರ್​ ಹಾಗೂ ಸಹೋದರ ಬಾಲಕೃಷ್ಣ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಇದೇ ವರ್ಷ 'ರಾಮ್​ ರಹೀಂ' ಸಿನಿಮಾದಲ್ಲೂ ಅಭಿನಯಿಸಿದ್ದರು. 1977ರಲ್ಲಿ ಅವರೇ ನಿರ್ಮಿಸಿದ್ದ 'ದಾನ ವೀರ ಶೂರ ಕರ್ಣ' ಸಿನಿಮಾದಲ್ಲಿ ಅಭಿನಯಿಸಿದ್ದರು. ಇದಾದ ನಂತರ ಬಹಳ ವರ್ಷಗಳ ಕಾಲ ಅವರು ಸಿನಿ ರಂಗದಿಂದ ದೂರ ಉಳಿದಿದ್ದರು.

1998ರಲ್ಲಿ ನಟ ಮೋಹನ್​ ಬಾಬು ಅಭಿನಯದ 'ಶ್ರೀ ರಾಮುಲಯ್ಯ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1999ರಲ್ಲಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ 'ಸೀತಾರಾಮರಾಜು' ಸಿನಿಮಾದಲ್ಲಿ ಪೋಷಕ ನಟ ಹಾಗೂ ಪ್ರಮುಖ ಪಾತ್ರದ ಮೂಲಕ ಮತ್ತೆ ತಮ್ಮ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದರು. ವೈವಿಎಸ್​ ಚೌಧರಿ ನಿರ್ದೇಶನ 'ಲಾಹಿರಿ ಲಾಹಿರಿ ಲಾಹಿರಿಲೋ' (2002) ಹಾಗೂ 'ಸೀತಯ್ಯ' (2003)ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದರು. 'ಲಾಹಿರಿ ಲಾಹಿರಿ ಲಾಹಿರಿಲೋ' ಸಿನಿಮಾದಲ್ಲಿನ ಅಭಿನಯಕ್ಕಾಗಿ ನಂದಿ ಪ್ರಶಸ್ತ್ರಿ ಸಹ ಸಿಕ್ಕಿತ್ತು.

2005ರಲ್ಲಿ ತೆರೆಕಂಡ 'ಶ್ರಾವಣ ಮಾಸಂ' ಸಿನಿಮಾ ಹರಿಕೃಷ್ಣ ಅಭಿನಯದ ಕೊನೆಯ ಚಿತ್ರ. ಇದರಲ್ಲಿ ಅವರು ಸೂಪರ್​ ಸ್ಟಾರ್​ ಕೃಷ್ಣ ಅವರೊಂಗೆ ತೆರೆಹಂಚಿಕೊಂಡಿದ್ದರು.
Loading...

ಮಾದರಿ ಅಣ್ಣ ತಮ್ಮಂದಿರು

ಇನ್ನು ಹರಿಕೃಷ್ಣ ಅವರ ಕೌಟುಂಬಿಕ ವಿಚಾರಕ್ಕೆ ಬಂದರೆ ಅವರಿಗೆ ಇಬ್ಬರು ಪತ್ನಿಯರಿದ್ದರೂ, ಅವರ ಮಕ್ಕಳು ಮಾತ್ರ ಸಹಬಾಳ್ವೆಯಿಂದ ಜೀವಿಸುತ್ತಿದ್ದರು. ಎಲ್ಲ ಮನೆಯಲ್ಲಿ ಇದ್ದಂತೆ ಹರಿಕೃಷ್ಣ ಅವರ ಮಕ್ಕಳಲ್ಲಿ ದಾಯಾದಿ ಕಲಹ ಇರಲಿಲ್ಲ. ಬೇರೆ ತಾಯಿಯ ಮಕ್ಕಳಾದರೂ ಎಲ್ಲರೂ ಅನ್ಯೋನ್ಯವಾಗಿಯೇ ಇದ್ದಾರೆ. ಜೂ. ಎನ್​ಟಿಆರ್​ ಅವರ ಸಿನಿಮಾಗಳಿಗೆ ಅಣ್ಣ ಕಲ್ಯಾಣ್​ ರಾಮ್ ಹಾಗೂ ಕಲ್ಯಾಣ್​ ರಾಮ್​ ಸಿನಿಮಾಗಳ ಕಾರ್ಯಕ್ರಮಕ್ಕೆ ಜೂ.ಎನ್​ಟಿಆರ್​ ತಪ್ಪದೇ ಬರುತ್ತಾರೆ. ಅಲ್ಲದೆ ಈ ಅಣ್ಣತಮ್ಮಂದಿರ ಸಂಬಂಧ ಟಾಲಿವುಡ್​ನಲ್ಲಿ ಹಲವರಿಗೆ ಮಾದರಿ ಎನ್ನಬಹುದು.

ಜೂ.ಎನ್​ಟಿಆರ್​ ಅಭಿನಯಿಸಿರುವ ನಾನಕು ಪ್ರೇಮತೊ ಸಿನಿಮಾದ ಆಡಿಯೋ ಬಡುಗಡೆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿದ್ದೇ ಕಲ್ಯಾಣ ರಾಮ್​. ಇನ್ನೂ ಹರಿಕೃಷ್ಣ ಅವರ ದೊಡ್ಡ ಮಗ ಜಾನಕಿ ರಾಮ್​ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು.

ದೊಡ್ಡ ಮಗನ ನಂತರ ಹರಿಕೃಷ್ಣ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ರಾಜಕೀಯ ಸೇರಿದಂತೆ ಎಲ್ಲದರಿಂದ ದೂರ ಉಳಿದಿದ್ದರು. ಅದಕ್ಕಾಗಿಯೇ ಕೇವಲ ತನ್ನ ತಂದೆಯ ಕಾರ್ಯಗಳಂದು ಹಾಗೂ ಮಕ್ಕಳ ಸಿನಿಮಾಗಳ ಕಾರ್ಯಕ್ರಮಗಳಿಗೆ ಮಾತ್ರ ಮನೆಯಿಂದ ಹೊರ ಹೋಗುತ್ತಿದ್ದರಂತೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...