ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ (Theater) ನಡೆದ 95ನೇ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋಗಳು ಇಂಟರ್ನೆಟ್ ತುಂಬಾ ಹಲ್‌ಚಲ್ ಎಬ್ಬಿಸಿವೆ. ಭಾರತ ಚಿತ್ರರಂಗದ ಮಟ್ಟಿಗಂತೂ ಈ ವರ್ಷದ ಆಸ್ಕರ್ ಸಮಾರಂಭ ತುಂಬಾ ವಿಶೇಷವಾಗಿದೆ. ಭಾರತದ ಎರಡು ಚಿತ್ರಗಳು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿವೆ.
ಆಸ್ಕರ್‌ಗೆ ಆಗಮಿಸಿದ್ದ ಮಲಾಲಾ ಯುಸುಫ್ ಝಾಯ್
ಚಿತ್ರರಂಗದ ಹಲವು ಗಣ್ಯರು ಹಾಜರಾಗುವ ಮೂಲಕ ಸಮಾರಂಭದ ಕಳೆಯನ್ನು ಹೆಚ್ಚಿಸಿದ್ದರು. ಅದರಲ್ಲೂ ವಿಶೇಷವಾಗಿ ಆಸ್ಕರ್‌ಗೆ ಪಾದಾರ್ಪಣೆ ಮಾಡಿದ ಮಲಾಲಾ ಯುಸುಫ್ ಝಾಯ್ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಪತಿಯೊಂದಿಗೆ ಆಗಮಿಸಿದ್ದರು.
ಬಹಳ ವರ್ಷಗಳ ನಂತರ ಕಾಣಿಸಿಕೊಂಡ ಮಲಾಲಾ ಅವರ ಲುಕ್ ಮತ್ತು ಕೆಲ ಮಾತುಕತೆಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು, ಲಾಸ್ ಏಂಜಲೀಸ್‌ನಲ್ಲಿ ನಡೆದ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಆತಿಥೇಯ ಜಿಮ್ಮಿ ಕಿಮ್ಮೆಲ್ ಅವರು ಕೇಳಿದ ಪ್ರಶ್ನೆಗೆ ಮಲಾಲಾ ನೀಡಿದ ಉತ್ತರ ಸಾಕಷ್ಟು ವೈರಲ್ ಆಗಿದ್ದು ಇಂಟರ್‌ನೆಟ್ ತುಂಬಾ ಹರಿದಾಡುತ್ತಿದೆ.
ಅಲ್ಲದೇ ಈ ವಿಡಿಯೋವನ್ನು ಮಲಾಲಾ ತಮ್ಮ ಟ್ವಿಟರ್ ಖಾತೆಯಲ್ಲಿ ರೀಟ್ವಿಟ್ ಮಾಡಿದ್ದು, "ಜನರನ್ನು ದಯೆಯಿಂದ ನಡೆಸಿಕೊಳ್ಳಿ" ಅಂತಾ ಶೀರ್ಷಿಕೆ ಬೇರೆ ನೀಡಿದ್ದಾರೆ.
ಜಿಮ್ಮಿ ಕಿಮ್ಮೆಲ್ ಮಲಾಲಾಗೆ ಕೇಳಿದ ಪ್ರಶ್ನೆ ಏನು?
ಸಮಾರಂಭದಲ್ಲಿ, ನಿರೂಪಕ ಜಿಮ್ಮಿ ಕಿಮ್ಮೆಲ್ ಅವರು ಸಭಿಕರಲ್ಲಿ ಮಲಾಲಾ ಅವರ ಬಳಿಗೆ ಬಂದು ಅವರಿಗೆ ಸ್ವಾಗತ ಕೋರಿದರು. ನಂತರ ಅವರಿಗೆ ಒಂದು ಪ್ರಶ್ನೆ ಸಹ ಕೇಳಲಾಯಿತು.
"ಮಾನವ ಹಕ್ಕುಗಳು ಮತ್ತು ಮಹಿಳೆಯರು ಮತ್ತು ಮಕ್ಕಳ ಶಿಕ್ಷಣದ ನಿಮ್ಮ ಕೆಲಸವು ಸ್ಫೂರ್ತಿದಾಯಕವಾಗಿದೆ. ಇತಿಹಾಸದಲ್ಲಿ ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ವಿಜೇತೆ ನೀವು.
ನೀವು ಈ ಹಿಂದೆ ನಡೆದ ಒಂದು ಘಟನೆಯಲ್ಲಿ ಹ್ಯಾರಿ ಸ್ಟೈಲ್ಸ್ ಕ್ರಿಸ್ ಪೈನ್ ಮೇಲೆ ಉಗುಳಿದ್ದಾರೆ ಎಂದು ನೀವು ಭಾವಿಸುತ್ತೀರಾ?" ಅಂತಾ ಒಂದಕ್ಕೊಂದು ಸಂಬಂಧವಿಲ್ಲದ ಪ್ರಶ್ನೆಯನ್ನು ಮಲಾಲಾಗೆ ಜಿಮ್ಮಿ ಕೇಳಿದರು. ಇದಕ್ಕೆ ನಾಜೂಕಾಗಿ ಉತ್ತರಿಸಿದ ಮಲಾಲಾ "ನಾನು ಶಾಂತಿಯ ಬಗ್ಗೆ ಮಾತ್ರ ಮಾತನಾಡುತ್ತೇನೆ" ಅಂತಾ ಹೇಳಿದರು.
ಮೇಲ್ನೋಟಕ್ಕೆ ಈ ಪ್ರಶ್ನೆ ಕೊಂಚ ವಿವಾದಾತ್ಮಕ ಧಾಟಿಯಲ್ಲಿದ್ದರೂ ಅದನ್ನು ಮಲಾಲಾ ಅವರು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಯಾವುದೇ ವಿವಾದ ಸೃಷ್ಟಿಯಾಗದಂತೆ ನೋಡಿಕೊಂಡರು.
ಏನಿದು ಹ್ಯಾರಿ ಸ್ಟೈಲ್ಸ್ ಮತ್ತು ಕ್ರಿಸ್ ಪೈನ್ ವಿವಾದ?
2022 ರ ವೆನಿಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹ್ಯಾರಿ ಸ್ಟೈಲ್ಸ್ ತನ್ನ ಡೋಂಟ್ ವರಿ ಡಾರ್ಲಿಂಗ್ ಸಹ-ನಟ ಕ್ರಿಸ್ ಪೈನ್ ಮೇಲೆ ಉಗುಳಿದ್ದಾರೆ ಎಂದು ತೋರಿಸುವ ವೈರಲ್ ವಿಡಿಯೋ ಒಂದು ಹರಿದಾಡಿತ್ತು. ಹ್ಯಾರಿ ನನ್ನ ಮೇಲೆ ಉಗುಳಲಿಲ್ಲ ಎಂದು ಕ್ರಿಸ್ ಪೈನ್ ಹೇಳಿದ್ದರೂ ಕೂಡ ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Death Threat: ಸಲ್ಮಾನ್ ಖಾನ್ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ
ಒಟ್ಟಾರೆ ಜಿಮ್ಮಿ ಅವರ ಪ್ರಶ್ನೆಗೆ ಮಲಾಲಾ ನೀಡಿದ ಉತ್ತರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾದ ಮೆಚ್ಚುಗೆ ಬಂದಿದೆ.
ಆಸ್ಕರ್‌ನಲ್ಲಿ ಮಿಂಚಿದ ಮಲಾಲಾ
ಆಸ್ಕರ್‌ನಲ್ಲಿ ಗೇಟ್‌ನಲ್ಲಿ ತನ್ನ ನಾಮನಿರ್ದೇಶಿತ ಕಿರು ಸಾಕ್ಷ್ಯಚಿತ್ರ ಸ್ಟ್ರೇಂಜರ್ ಅನ್ನು ಮಲಾಲಾ ಪ್ರತಿನಿಧಿಸಿದರು. ಮಲಾಲಾ ಯೂಸುಫ್‌ಜಾಯ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತಿ ಅಸರ್ ಮಲಿಕ್ ಜೊತೆ ಬಂದಿದ್ದರು.
ಪಾಕಿಸ್ತಾನದ ಶಿಕ್ಷಣ, ಸಾಮಾಜಿಕ ಹೋರಾಟಗಾರ್ತಿ ಮಲಾಲಾ ಸಿಲ್ವರ್ ಬಣ್ಣದ ಮಿನುಗುವ ಗೌನ್ ಧರಿಸಿದ್ದರೆ, ಅವರ ಪತಿ ಅಸರ್ ಮಲಿಕ್ ಕಪ್ಪು ಮತ್ತು ಬಿಳಿ ಸೂಟ್‌ನಲ್ಲಿ ಕಾಣಿಸಿಕೊಂಡರು.
2020 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ರಾಜಕೀಯ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಮಲಾಲಾ ಯೂಸುಫ್‌ಜಾಯ್, ಶಿಕ್ಷಣದ ಪ್ರತಿಪಾದನೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಪುರಸ್ಕೃತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ