'ನೀರ್ದೋಸೆ' ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗಿರುವುದು ಗೊತ್ತೇ ಇದೆ. ಮೊದಲ ಬಾರಿ ದೋಸೆ ತಿನ್ನಿಸಿದ್ದ ಈ ಜೋಡಿ ಈ ಬಾರಿ 'ತೋತಾಪುರಿ' ತಿನ್ನಿಸಲು ರೆಡಿಯಾಗಿದೆ. ಅದು ಕೂಡ ಎರಡು ಬಾರಿ ಎಂಬುದೇ ವಿಶೇಷ.
ಹೌದು, 'ತೋತಾಪುರಿ' ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ. ಈ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ 'ಕೆ.ಜಿ.ಎಫ್' ಚಿತ್ರವನ್ನು ಎರಡು ಪಾರ್ಟ್ಗಳಲ್ಲಿ ತೆರೆಗೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಅದರಲ್ಲಿ 'ಕೆ.ಜಿ.ಎಫ್ ಚಾಪ್ಟರ್ 1' ಈಗಾಗಲೇ ವಿಶ್ವದಾದ್ಯಂತ ಅಬ್ಬರಿಸಿದೆ. ಇನ್ನು ರಾಕಿ ಭಾಯ್ಯ 'ಚಾಪ್ಟರ್-2' ಗಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ಇದೇ ಮಾದರಿಯಲ್ಲಿ ಎರಡು ಚಾಪ್ಟರ್ಗಳಲ್ಲಿ ನಗೆ ಹಬ್ಬ ಮಾಡಲು ಜಗ್ಗೇಶ್ ಮತ್ತು ತಂಡ ನಿರ್ಧರಿಸಿದೆ. ಈಗಾಗಲೇ ಚಾಪ್ಟರ್ 1 ರ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮೊದಲ ಭಾಗಕ್ಕೆ 'ತೋತಾಪುರಿ-ತೊಟ್ಟು ಕೀಳ್ಬೇಕು' ಎಂದು ಹೆಸರಿಟ್ಟಿದೆ. ಹಾಗೆಯೇ ಎರಡನೇ ಭಾಗಕ್ಕೆ 'ತೊಟ್ಟು ಕಿತ್ತಾಯ್ತು' ಎಂಬ ವಿಶೇಷ ಟ್ಯಾಗ್ಲೈನ್ ನೀಡಿ ಕಚಗುಳಿಯಿಟ್ಟಿದೆ.
ಮೊದಲ ಭಾಗ ಬಿಡುಗಡೆಯಾಗುವ ಮೊದಲೇ ತೋತಾಪುರಿ ತಂಡ 2ನೇ ಭಾಗದ ಚಿತ್ರೀಕರಣ ಆರಂಭಿಸಿದೆ. ಇಂತಹದೊಂದು ಪ್ರಯೋಗ ಭಾರತೀಯ ಚಿತ್ರರಂಗದಲ್ಲೇ ಮೊದಲು. ಚಾಪ್ಟರ್ 1 ರಿಲೀಸ್ಗೂ ಮುನ್ನವೇ ಚಾಪ್ಟರ್ 2 ಪೂರೈಸಿ ಹೊಸ ದಾಖಲೆ ಬರೆಯಲು ಹೊರಟಿದ್ದೀವಿ ಎಂದು ನಿರ್ಮಾಪಕ ಸುರೇಶ್ ಕುಮಾರ್ ತಿಳಿಸಿದ್ದಾರೆ.
'ನೀರ್ದೋಸೆ'ಯಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ನಟ-ನಟಿಯರು ತೊಟ್ಟು ಕೀಳಲು ತೋತಾಪುರಿಯಲ್ಲಿದ್ದಾರೆ. ಅದರಲ್ಲೂ ದೋಸೆ ಹಾಕಲು ಸಹಾಯ ಮಾಡಿದ ದತ್ತಣ್ಣ ಮತ್ತು ಜಗ್ಗೇಶ್ ಅವರ ಕಾಂಬೋ ಇಲ್ಲೂ ಮುಂದುವರೆಯಲಿದೆ. ಇನ್ನುಳಿದಂತೆ ಸುಮನ್ ರಂಗನಾಥ್, ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.
'ಪ್ರೀಮಿಯರ್ ಪದ್ಮಮಿ' ಎಂಬ ಮನರಂಜನಾತ್ಮಕ ಚಿತ್ರ ನೀಡಿದ್ದ 'ನವರಸ ನಾಯಕ' ಇದೀಗ 'ತೋತಾಪುರಿ' ತೊಟ್ಟುಗಳೊಂದಿಗೆ ಮರಳುತ್ತಿರುವುದು ಜಗ್ಗೇಶ್ ಅಭಿಮಾನಿಗಳಿಗಂತು ಚಿತ್ರದ ಮೇಲೆ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಅಂದಹಾಗೆ ಇಂದು ನವರಸ ನಾಯಕ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದೊಂದಿಗೆ ತೋತಾಪುರಿ ದಾಖಲೆ ಸುದ್ದಿ ಚಿತ್ರತಂಡಕ್ಕೆ ಹೊಸ ಹುರುಪು ನೀಡಿದೆ. ಎನಿವೇ...ಕನ್ನಡ ಕಲಾವಿದರಲ್ಲಿ ಕನ್ನಡದ ಕಟ್ಟಾಳು ಎಂದೇ ಗುರುತಿಸಿಕೊಂಡಿರುವ ಜಗ್ಗೇಶ್ ಅವರಿಗೆ ನ್ಯೂಸ್ 18 ಕನ್ನಡದ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ