ಸ್ಯಾಂಡಲ್ವುಡ್ನ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇಂದು ಬೆಳಿಗ್ಗೆ ಟ್ವಿಟರ್ನಲ್ಲಿ ಲೈವ್ ಬಂದಿದ್ದ ಜಗ್ಗೇಶ್ ನಿನ್ನೆ ನಡೆದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು, ಕಳೆದ ಕೆಲ ಸಮಯದಿಂದ ಜಗ್ಗೇಶ್, ದರ್ಶನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೇ ವಿಷಯವಾಗಿ ನಿನ್ನೆ ಮೈಸೂರಿನಲ್ಲಿ ತೋತಾಪುರಿ ಸಿನಿಮಾದ ಚಿತ್ರೀಕರಣದ ಸೆಟ್ನಲ್ಲಿದ್ದ ಜಗ್ಗೇಶ್ ಅವರನ್ನು ದರ್ಶನ್ ಅಭಿಮಾನಿಗಳು ಸುತ್ತುವರಿದಿದ್ದರು. ಆಡಿಯೋ ಕ್ಲಿಪ್ ವಿಷಯವಾಗಿ ಸ್ಪಷ್ಟನೆ ಕೊಟ್ಟು, ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು. ಆದರೆ, ತಾನು ಮಾಡದ ತಪ್ಪಿಗೆ ಕ್ಷಮೆ ಕೇಳುವುದಿಲ್ಲ ಎಂದು ಬಂದಿದ್ದ ದರ್ಶನ್ ಅಭಿಮಾನಿಗಳಿಗೆ ಸಮಾಧಾನ ಮಾಡಿ ಕಳುಹಿಸಿದ್ದರು ಜಗ್ಗೇಶ್. ಈಗ ಇದೇ ವಿಷಯವಾಗಿ ಬೆಳಿಗ್ಗೆ ತಮ್ಮ ಟ್ವಿಟರ್ ಖಾತೆಯಿಂದ ಲೈವ್ ಬಂದಿದ್ದ ಜಗ್ಗೇಶ್, ಸಾಕಷ್ಟು ವಿಷಯಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗ ಹಾಳಾಗಿ ಹೋಗ್ತಿದೆ. ಸ್ಯಾಂಡಲ್ವುಡ್ನಲ್ಲಿ 40 ವರ್ಷ ಕಳೆದಿದ್ದೇನೆ. ನನಗೆ ಈಗ 58 ವರ್ಷ. ಇನ್ನೆರಡು ವರ್ಷ ಕಳೆದರೆ 60 ಆಗುತ್ತದೆ. ನನ್ನ 40 ವರ್ಷಗಳ ಕಲಾಸೇವೆಗೆ ಅವಮಾನ ಮಾಡಿದ್ದೀರಾ! ನಾನು ಜಾಲರ ಹಿಡಿದು ಬೆಳೆದವನಲ್ಲ. ಕಷ್ಟಪಟ್ಟು ಕನ್ನಡಿಗರ ಚಪ್ಪಾಳೆಯಿಂದ ಬೆಳೆದವನು. ಯಾವುದು ಈ ಸ್ಟಾರ್ಡಂ ಶೋಕಿ. ಯಾವ ನಟ ಹಾಗೂ ಅವರ ಅಭಿಮಾನಿಗಳು ನನ್ನ ಬಳಿ ಬರಲಾರರು. ನಿನ್ನೆ ಸಹ ನಾನು ಓಡಿ ಹೋಗಲಿಲ್ಲ. ಅಲ್ಲೇ ಕುಳಿತು ಆ ಗುಂಪಿನಲ್ಲಿ ಕೇಳುತ್ತಿದ್ದವರಿಗೆ ಉತ್ತರಿಸುತ್ತಿದ್ದೆ ಎಂದಿದ್ದಾರೆ.
ಇದು ಬೇಕಿತ್ತ ನಿಮಗೆ..
ಸ್ಟಾರ್ಗಳ ಮಧ್ಯೆ ತಂದು ಹಾಕೋದನ್ನ ಬಿಟ್ಟುಬಿಡಿ. ನಾನು ಓಡಿಹೋಗಲ್ಲ, ಇಂಥವನ್ನೆಲ್ಲ ಹೇಗೆ ನಿಭಾಯಿಸಬೇಕು ಅಂತ ನನಗೆ ಗೊತ್ತಿದೆ. ನನಗೂ ಅಭಿಮಾನಿಗಳು ಹಾಗೂ ನೂರಕ್ಕೂ ಹೆಚ್ಚು ಅಭಿಮಾನಿ ಸಂಘಗಳಿವೆ. ಅವರಿಗೆ ಈ ವಿಷಯದಲ್ಲಿ ಪ್ರತಿಕ್ರಿಯಿಸಬೇಡಿ ಎಂದು ನಾನು ಮನವಿ ಮಾಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ನಟಿ ನಭಾ ನಟೇಶ್: ಪ್ಯಾಂಟ್ ಮರೆತೋದ್ರಾ ಎಂದ ನೆಟ್ಟಿಗರು
ಇಂತಹವಕ್ಕೆ ಬೆಂಬಲ ಕೊಟ್ಟರೆ ಮುಂದೆ ಸಿನಿರಂಗದಲ್ಲಿ ರೌಡಿಸಂ ಆರಂಭವಾಗುತ್ತದೆ. ಎಲ್ಲ ನಟರನ್ನೂ ಹೀಗೆ ಹೆದರಿಸೋಕೆ ಆರಂಭಿಸುತ್ತಾರೆ. ಇದನ್ನ ತಡೆಯಬೇಕು, ಇದು ರೌಡಿಸಂ ಸೆಂಟರ್ ಅಲ್ಲ. ಕೂತು ಸಮಾಧಾನದಿಂದ ಮಾತಾಡಬೇಕು, ದೊಡ್ಡವರು ಚಿಕ್ಕವರು ಇದ್ದಾರೆ ಇಲ್ಲಿ. ನಿನ್ನೆ ಆಡಿದ ಮಾತುಗಳನ್ನ ಎತ್ತಿದರೆ ಬೆಂಕಿ ಹಚ್ಚಿದಂಗಾಗುತ್ತೆ. ನನ್ನ ನನ್ನ ಒಕ್ಕಲುತನವನ್ನ ಆ ಹುಡುಗರು ಎತ್ತಿ ಹೀಯಾಳಿಸಿದ್ರು ಎಂದು ಸಿಟ್ಟಿನಿಂದ ನುಡಿದಿದ್ದಾರೆ.
ಕನ್ನಡ ಚಿತ್ರರಂಗ ಯಾವ ದಿಕ್ಕಿಗೆ ಸಾಗಿದೆ. ಒಬ್ಬ ನಟನ ಸಿನಿಮಾ ಹಿಟ್ ಆದರೆ ಮತ್ತೊಬ್ಬ ನಟ, ಅವನನ್ನು ತುಳಿಯಲು ಹುನ್ನಾರ ಮಾಡಲು ಆರಂಭಿಸುತ್ತಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಕುಮಾರ್, ವಿಷ್ಣು, ಅಂಬಿ ಸತ್ತ ಮಾರನೇ ದಿನದಿಂದ ಕನ್ನಡದ ಸ್ವಾಭಿಮಾನ ಸಾಯುತ್ತಿದೆ. ಇನ್ನು ಉಳಿದಿರೋದು ನಾನು, ಶಿವಣ್ಣ, ರವಿಚಂದ್ರನ್, ರಮೇಶ ಅಷ್ಟೇ. ನಾವು ಸತ್ತ ಮೇಲೆ ತಿಥಿ ಮಾಡಿ ಖುಷಿಪಡಿ ಎಂದು ಗರಂ ಆಗಿದ್ದರು ಜಗ್ಗೇಶ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ