ಕೊನೆಯ ಹಂತದಲ್ಲಿ ತೋತಾಪುರಿ! ಪ್ಯಾರ್​ಗೆ ಆಗ್ಬುಟೈತೆ ಶೈಲಿಯ ಹಾಡಿನಲ್ಲಿ ಜಗ್ಗೇಶ್, ಅದಿತಿ

ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೆಯ ಒಂದು ಹಾಡಿನ ಶೂಟಿಂಗ್ ಅಷ್ಟೇ ಬಾಕಿ ಉಳಿದಿದೆ. ಸದ್ಯ ಚಿತ್ರತಂಡ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಈ ಹಾಡಿನ ಚಿತ್ರೀಕರಣವನ್ನು ಮಾಡುತ್ತಿದೆ.

ತೋತಾಪುರಿ

ತೋತಾಪುರಿ

  • Share this:
ನೀರ್​ದೋಸೆ ಚಿತ್ರದ ಯಶಸ್ಸಿನ ಬಳಿಕ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಸಿನಿಮಾ ತೋತಾಪುರಿ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಅವರ ಸಿನಿಮಾವೊಂದು ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ.  ತೋತಾಪುರಿ - ತೊಟ್ ಕೀಳಬೇಕಷ್ಟೇ ಹಾಗೂ ತೋತಾಪುರಿ - ತೊಟ್ ಕಿತ್ತಾಯ್ತು ಎಂಬ ಟೈಟಲ್‍ಗಳಲ್ಲಿ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ.

ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೆಯ ಒಂದು ಹಾಡಿನ ಶೂಟಿಂಗ್ ಅಷ್ಟೇ ಬಾಕಿ ಉಳಿದಿದೆ. ಸದ್ಯ ಚಿತ್ರತಂಡ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಈ ಹಾಡಿನ ಚಿತ್ರೀಕರಣವನ್ನು ಮಾಡುತ್ತಿದೆ. ಬೃಹತ್ ಸೆಟ್ ಹಾಕಿ ಕಲರ್‍ಫುಲ್ ಬ್ಯಾಕ್‍ಗ್ರೌಂಡ್‍ನಲ್ಲಿ ಕಳೆದ ಮೂರು ದಿನಗಳಿಂದ ಚಿತ್ರತಂಡ ಹಾಡಿನ ಶೂಟಿಂಗ್‍ನಲ್ಲಿ ತೊಡಗಿದೆ. ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಕೋರಿಯೋಗ್ರಫಿ ಮಾಡುತ್ತಿದ್ದಾರೆ. ನಾಯಕ, ನಾಯಕಿ ಜೊತೆಗೆ 150ಕ್ಕೂ ಹೆಚ್ಚು ಸಹನೃತ್ಯಗಾರರು ಈ ಹಾಡಿನಲ್ಲಿದ್ದಾರೆ.ಹಿಂದಿ ಹಾಗೂ ಕನ್ನಡ ಮಿಶ್ರಿತ ಸಾಹಿತ್ಯ ಇರುವ ಈ ಹಾಡನ್ನು ಖುದ್ದು ನಿರ್ದೇಶಕ ವಿಜಯ್ ಪ್ರಸಾದ್ ಅವರೇ ರಚಿಸಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ನವರಸನಾಯಕ ಜಗ್ಗೇಶ್ ಸಹೋದರ ನಟ ಕೋಮಲ್ ಕುಮಾರ್ ನಟಿಸಿದ್ದ ಗೋವಿಂದಾಯ ನಮಃ ಚಿತ್ರದ ಪ್ಯಾರ್‍ಗೆ ಆಗ್ಬುಟೈತೆ ಶೈಲಿಯಲ್ಲಿಯೇ ಈ ಹಾಡು ಕೂಡ ಮೂಡಿಬರಲಿದೆ ಎನ್ನಲಾಗಿದೆ. ಈ ಹಾಡಿನ ಚಿತ್ರೀಕರಣ ಕಂಪ್ಲೀಟ್ ಆದರೆ ಚಿತ್ರತಂಡ ಕುಂಬಳಕಾಯಿ ಒಡೆಯಲಿದೆ.ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ, ರಾಜು ಕನ್ನಡ ಮೀಡಿಯಂ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಕೆ. ಎ. ಸುರೇಶ್ ತೋತಾಪುರಿ ಸರಣಿಗೆ ಬಂಡವಾಳ ಹೂಡಿದ್ದಾರೆ. ನವರಸ ನಾಯಕ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ, ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯಾಗಿದ್ದು, ಡಾಲಿ ಧನಂಜಯ, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾ ದತ್ ಸೇರಿದಂತೆ ಸುಮಾರಿ 80ಕ್ಕೂ ಹೆಚ್ಚು ಕಲಾವಿದರು ತೋತಾಪುರಿ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಬೆಂಗಳೂರು, ಮೈಸೂರು, ಮಡಿಕೇರಿ, ಕೇರಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ತೋತಾಪುರಿ ಶೂಟಿಂಗ್ ಮಾಡಲಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ಭಾಗದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು, ಒಂದೇ ಬಾರಿ ಎರಡೂ ಭಾಗದ ಶೂಟಿಂಗ್ ನಡೆಸಿದ ಕೀರ್ತಿ ತೋತಾಪುರಿ ಸರಣಿಗೆ ಸಲ್ಲುತ್ತದೆ. ಬರೋಬ್ಬರಿ 150 ದಿನಗಳ ಕಾಲ ತೋತಾಪುರಿ ತೊಟ್ ಕೀಳಬೇಕಷ್ಟೇ, ತೋತಾಪುರಿ ತೊಟ್ ಕಿತ್ತಾಯ್ತು ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಇನ್ನು ಕೆಲವೇ ದಿನಗಳಲ್ಲಿ ತೋತಾಪುರಿ ಮೊದಲ ಭಾಗ ತೆರೆಗೆ ಬರಲಿದೆ.
Published by:Harshith AS
First published: