'ಪ್ರೀಮಿಯರ್​ ಪದ್ಮಿನಿ' ಏರಲಿರುವ ನವರಸ ನಾಯಕ ಜಗ್ಗೇಶ್​

news18
Updated:April 16, 2018, 6:36 PM IST
'ಪ್ರೀಮಿಯರ್​ ಪದ್ಮಿನಿ' ಏರಲಿರುವ ನವರಸ ನಾಯಕ ಜಗ್ಗೇಶ್​
news18
Updated: April 16, 2018, 6:36 PM IST
ನಳಿನಾಕ್ಷಿಕಾರಳ್ಳಿ, ನ್ಯೂಸ್ 18 ಕನ್ನಡ

ಚಂದನವನಕ್ಕೆ ‘ಪದ್ಮಾವತಿ’ ಎಂಟ್ರಿ ಕೊಟ್ಟಿದ್ದಾಯಿತು. ಈಗ ‘ಪದ್ಮಿನಿ’ ಎಂಟ್ರಿ ಕೊಡೋಕೆ ಸಜ್ಜಾಗುತ್ತಿದ್ದಾಳೆ. ಅರೇ ಯಾರಪ್ಪಾ ಈ ‘ಪದ್ಮಿನಿ’ ಅಂದುಕೊಂಡರ. ನವರಸ ನಾಯಕ ಜಗ್ಗೇಶ್ ಈಗ ರೆಟ್ರೊ ಕಾರೊಂದನ್ನ ಖರೀದಿಸಿದ್ದಾರೆ. ಅದು ಪದ್ಮಿನಿ ಜೊತೆಗೆ. ಯಾರಪ್ಪಾ ಈ ಪದ್ಮಿನಿ ಅಂತೆಲ್ಲ ಶಾಕ್ ಆಗಬೇಡಿ. ಈ ಕುರಿತ ಆಸಕ್ತಿಕರ ವರದಿ ಇಲ್ಲಿದೆ ನೋಡಿ.

ಗಾಂಧಿನಗರದಲ್ಲಿ ಇತ್ತೀಚೆಗೆ ವಿನೂತನ ಪ್ರಯತ್ನಗಳು ನೆಡೆಯುತ್ತಿವೆ. ಅದರಲ್ಲೂ ವಿಭಿನ್ನವಾದ ಚಿತ್ರಗಳು ಮೂಡಿ ಬರುತ್ತಿವೆ. ಜೊತೆಯಲ್ಲಿ ನೈಜ್ಯತೆಯ ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ಇದಕ್ಕೆ ಸಿನಿ ಪ್ರೇಕ್ಷಕರೂ ಸಹ ಸಿನಿಮಾಗಳನ್ನ ಮೆಚ್ಚಿ ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ.  ಹೀಗಿರುವಾಗಲೇ ನವರಸ ನಾಯಕ ಜಗ್ಗೇಶ್ ಮತ್ತೊಂದು ನೈಜ್ಯತೆಯ ಸಿನಿಮಾ ಮಾಡಲು  ಮುಂದಾಗಿದ್ದಾರೆ. ಸದ್ಯ ಈ ಚಿತ್ರದ ಫೋಟೋಶೂಟ್ ಸಹ ಅದ್ಧೂರಿಯಾಗಿ ನೆರವೇರಿದೆ.

ಸದ್ಯ ಜಗ್ಗೇಶ್ ‘8 ಎಂಎಂ’ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಇದ್ಯಾವಾಗಪ್ಪಾ ಸುಧಾರಾಣಿ ಮತ್ತು ಮಧುಬಾಲ ಜೊತೆ ಪಯಣ ಬೆಳೆಸಿದರು ಅಂದುಕೊಂಡರ ಅಂತ ಗೊಂದಲ ಮಾಡಿಕೊಳ್ಳಬೇಡಿ. ‘8 ಎಂಎಂ’ ಚಿತ್ರ ಮುಗಿಸಿದ ಜಗ್ಗೇಶ್ ಈಗ ಮತ್ತೊಂದು ಸಿನಿಮಾ ಮಾಡುದ್ದಾರೆ. ಅಂದಹಾಗೆ ಸಿನಿಮಾದ ಹೆಸರು ‘ಪ್ರೀಮಿಯರ್ ಪದ್ಮಿನಿ’. ‘ಪ್ರೀಮಿಯರ್ ಪದ್ಮಿನಿ’ ಚಿತ್ರಕ್ಕಾಗಿ ಜಗ್ಗೇಶ್, ರೋಜಾ ಖ್ಯಾತಿಯ ಮಧುಬಾಲಾ ಮತ್ತು ಸುಧಾರಾಣಿ  ಒಂದಾಗಲಿದ್ದಾರೆ.

ನವರಸ ನಾಯಕ ಜಗ್ಗೇಶ್ ಈಗ ‘ಪ್ರೀಮಿಯರ್ ಪದ್ಮಿನಿ’ ಕಾರು ಏರಿದ್ದಾರೆ. ಈ ಪಯಣದಲ್ಲಿ ತಮ್ಮೊಂದಿಗೆ ರೋಜಾ ಖ್ಯಾತಿಯ ಮಧುಬಾಲಾ ಮತ್ತು ಸುಧಾರಾಣಿ ಅವರನ್ನು ಕರೆದುಕೊಂಡು ಹೊರಟ್ಟಿದ್ದಾರೆ. ಹೌದು, ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಪಾತ್ರಗಳ ಮೂಲಕ ಸದ್ದು ಮಾಡುತ್ತಿರುವ ಜಗ್ಗೇಶ್, ಈಗ ‘ಪ್ರೀಮಿಯರ್ ಪದ್ಮಿನಿ’ ಎಂಬ ವಿಶಿಷ್ಟ  ಟೈಟಲ್​ ಇರುವ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇದುವರೆಗೂ ನಟಿಸದೇ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಈಗಾಗಲೇ ಕಿರುತೆರೆಯಲ್ಲಿ ಹೆಸರು ಮಾಡಿರುವ ರಮೇಶ್ ಇಂದಿರಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ಕಾರಿನ ಜತೆ ಅವಿನಾಭಾವ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬನ ಕಥೆ ಇರಲಿದೆಯಂತೆ. ಸಂಬಂಧಗಳ ನಡುವಿನ ಸಂಕೀರ್ಣತೆಯನ್ನು ಹೇಳುವ ಚಿತ್ರ ಕಾಮಿಡಿಯ ದೃಶ್ಯಗಳ ಜತೆ ಸಂಬಂಧಗಳ ಸೂಕ್ಷ್ಮತೆಯನ್ನು ಹೇಳುವ ಚಿತ್ರ ಇದಾಗಿದೆ. ಅದನ್ನು ಹೊಸ ರೀತಿಯಲ್ಲಿ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ ಅಂತಾರೆ ನಿರ್ದೇಶಕ ರಮೇಶ್​ ಇಂದ್ರ.

ಇನ್ನು ನಟಿ ಹಾಗೂ ನಿರ್ದೇಶಕಿ ಶ್ರುತಿ ನಾಯ್ಡು ಈ ಚಿತ್ರದ ನಿರ್ಮಾಣದ ಹೊರೆ ಹೊತ್ತಿದ್ದು, ಶೃತಿ ನಾಯ್ಡು ಚಿತ್ರದ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬರಲಿದೆ.

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಕಾರುಗಳು ವಿಶೇಷ ಸ್ಥಾನ ಪಡೆದುಕೊಳ್ಳುತ್ತಿವೆ. ಹಾಗಾಗಿ ನಿರ್ದೇಶಕ ರಮೇಶ್ ಇಂದಿರಾ ಕೂಡ ತಮ್ಮ ಕಥೆಯಲ್ಲಿ ಪ್ರೀಮಿಯರ್ ಪದ್ಮಿನಿ ಕಾರಿಗೆ ವಿಭಿನ್ನ ಪಾತ್ರ ನೀಡಿದ್ದಾರೆ. ಸಿನಿಮಾ ಪೂರ್ತಿ ಆ ಕಾರು ಇರಲಿದೆಯಂತೆ. ಹಿರಿಯ ನಟರ ಜತೆ  ‘ಗೀತಾ ಬ್ಯಾಂಗಲ್​ ಸ್ಟೋರ್’ ಮೂಲಕ ಗಮನ ಸೆಳೆದಿದ್ದ  ಪ್ರಮೋದ್ ಕೂಡ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಯೋಗರಾಜ್ ಭಟ್ ಸಾಹಿತ್ಯದ ಜೊತೆ ಅರ್ಜುನ್ ಜನ್ಯ ಸಂಗೀತವಿರಲಿದೆ. ಜಗ್ಗೇಶ್ ಇದ್ದ ಮೇಲೆ ಕಾಮಿಡಿ ಇದ್ದೇ ಇರುತ್ತದೆ. ಈ ವರ್ಷದ  ಭರ್ಜರಿ ಮನರಂಜನೆಯ ಸಿನಿಮಾ ಇದಾಗೋದರಲ್ಲಿ ಅನುಮಾನವೇ ಇಲ್ಲ. ಅಂತಿದೆ ಗಾಂಧೀನಗರ. ಸದ್ಯ ಈ ಚಿತ್ರದ ಫೋಟೋಶೂಟ್ ಎಲ್ಲ ಸಿನಿರಸಿಕರಲ್ಲಿ ಕುತೂಹಲ ಹುಟ್ಟಿಸಿದ್ದು, ಮೇ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ.
First published:April 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ