ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ (Oscar Award) ಘೋಷಣೆಯಾಗಿದ್ದು ಆಯ್ತು, ಭಾರತೀಯ ಚಿತ್ರರಂಗಕ್ಕೆ ಎರಡು ಪ್ರಶಸ್ತಿಗಳು ಒಲಿದು ಬಂದಿದ್ದೂ ಆಯ್ತು. ಅಮೆರಿಕದಲ್ಲಿ ನಡೆದ 95ನೇ ಸಾಲಿನ ಆಸ್ಕರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆರ್‌ಆರ್‌ಆರ್ ಚಿತ್ರದ (RRR Movie) ನಾಟು ನಾಟು ಹಾಡಿಗೆ 'ಬೆಸ್ಟ್ ಒರಿಜಿನಲ್ ಸಾಂಗ್ 'ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಸಿಕ್ಕಿದರೆ, ಇತ್ತ ʻದಿ ಎಲಿಫಂಟ್ ವಿಸ್ಪರರ್ಸ್’ಗೆ ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಬಂದಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್ ಸಿಕ್ಕಿದ್ದು, ಭಾರತೀಯ ಚಿತ್ರರಂಗದ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.
ʻಆಸ್ಕರ್’ ಪ್ರಶಸ್ತಿಗಾಗಿ 80 ಕೋಟಿ ಖರ್ಚು ವಿಚಾರದ ಅಸಲಿಯತ್ತು ಬಯಲು
ಈ ವಿಚಾರ ಭಾರತದ ಮೂಲೆಮೂಲೆಗೂ ತಿಳಿದಿದ್ದೇ ಬಿಡಿ. ಈ ಆಸ್ಕರ್ ಪ್ರಶಸ್ತಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಒಂದು ಚರ್ಚೆ ಹುಟ್ಟಿಕೊಂಡಿತ್ತು. ಈಗ ಚರ್ಚೆಗೆ ನಿಜವಾದ ಉತ್ತರ ಸಿಕ್ಕಿದ್ದು, ಅಸಲಿಯತ್ತು ಹೊರಬಿದ್ದಿದೆ.
ಕೇವಲ ₹8.5 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾಗಿ ರಾಜಮೌಳಿ ಪುತ್ರ ಸ್ಪಷ್ಟನೆ
ಹೌದು, ರಾಜಮೌಳಿ ಹಾಗೂ ಚಿತ್ರತಂಡ ಆಸ್ಕರ್ ಪ್ರಶಸ್ತಿ ಪಡೆಯಲು ಹಣವನ್ನು ನೀರಿನಂತೆ ಖರ್ಚು ಮಾಡಿದೆ, ಆಸ್ಕರ್ ಅಭಿಯಾನಕ್ಕೆ ರಾಜಮೌಳಿ ತಂಡ ಅಷ್ಟು ಖರ್ಚು ಮಾಡಿದೆ, ಇಷ್ಟು ಖರ್ಚು ಮಾಡಿದೆ ಅಂತಾ ಕೆಲವರು ಹೇಳಿದ್ದು, ಚರ್ಚೆಗೆ ಕಾರಣವಾಗಿತ್ತು. ಆದರೆ ಸಂದರ್ಶನವೊಂದರಲ್ಲಿ, ಸಹಾಯಕ ನಿರ್ದೇಶಕ ಮತ್ತು ಎಸ್‌ಎಸ್ ರಾಜಮೌಳಿ ಅವರ ಮಗನೂ ಆಗಿರುವ ಎಸ್‌ಎಸ್ ಕಾರ್ತಿಕೇಯ ಈಗ ಚಿತ್ರದ ಆಸ್ಕರ್ ಪ್ರಚಾರಕ್ಕಾಗಿ ಖರ್ಚು ಮಾಡಿದ ಬಜೆಟ್ ಅನ್ನು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾರ್ತಿಕೇಯ ಆಸ್ಕರ್ ಪ್ರಶಸ್ತಿ ಅಭಿಯಾನಕ್ಕಾಗಿ ಆರ್‌ಆರ್‌ಆರ್ ಸಿನಿಮಾ ₹8.5 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾಗಿ ಹೇಳಿದ್ದಾರೆ.
80 ಕೋಟಿ ಖರ್ಚು ಮಾಡಿದೆ ಎಂದು ಆರೋಪಿಸಿದ್ದ ನಿರ್ಮಾಪಕ ತಮ್ಮಾರೆಡ್ಡಿ
'ಆರ್‌ಆರ್‌ಆರ್' ಚಿತ್ರದ ನಾಟು ನಾಟು, ಹಾಡು ಆಸ್ಕರ್‌ಗೆ ನಾಮಿನೇಟ್ ಆಗುತ್ತಿದ್ದಂತೆ ದೇಶದ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಈ ಸಂದರ್ಭದಲ್ಲಿ ಆಸ್ಕರ್ ಹಾಗೂ ರಾಜಮೌಳಿ ಬಗ್ಗೆ ಖ್ಯಾತ ತೆಲುಗು ನಿರ್ದೇಶಕ, ನಿರ್ಮಾಪಕ ತಮ್ಮಾರೆಡ್ಡಿ ಭಾರಧ್ವಾಜ್ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದರು.
ಆಸ್ಕರ್‌ಗಾಗಿ ರಾಜಮೌಳಿ 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅಷ್ಟು ಹಣ ಖರ್ಚು ಮಾಡಿ ಆಸ್ಕರ್ ಪ್ರಶಸ್ತಿ ಪಡೆಯುವ ಅಗತ್ಯ ಏನಿದೆ ಅಂತಾ ಹೇಳುವ ಮೂಲಕ ಪ್ರಶಸ್ತಿಗೆ ಭಾರೀ ವೆಚ್ಚ ಮಾಡಿದ್ದಾರೆ ಎಂದು ಹೇಳಿದ್ದರು.
"ಚಿತ್ರದ ಮೇಲಿನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ"
ಪ್ರಸ್ತುತ ತಮ್ಮಾರೆಡ್ಡಿ ಭಾರಧ್ವಾಜ್ ಹೇಳಿಕೆಗೆ ಕಾರ್ತಿಕೇಯ ಸ್ಪಷ್ಟನೆ ನೀಡಿದ್ದು, “ಆಸ್ಕರ್ ಪ್ರಚಾರಕ್ಕಾಗಿ ಹಾಲಿವುಡ್ ಸ್ಟುಡಿಯೊದಲ್ಲಿ ಬ್ಯಾಂಕ್ ಮಾಡಲು ನಮಗೆ ಅವಕಾಶವಿಲ್ಲದ ಕಾರಣ, ನಾವೇ ಅದನ್ನು ಮಾಡಬೇಕಾಯಿತು.
ಆರಂಭದಲ್ಲಿ, ನಾವು ₹ 5 ಕೋಟಿ ಬಜೆಟ್ ಪ್ಲ್ಯಾನ್ ಮಾಡಿದ್ದೆವು. ಆದರೆ ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಕೆಲವು ವಿಶೇಷ ಪ್ರದರ್ಶನಗಳನ್ನು ಮಾಡಿದ್ದರಿಂದ ನಮ್ಮ ಬಜೆಟ್ ನಿರೀಕ್ಷೆ ಮೀರಿ ಸುಮಾರು ₹ 8.5 ಕೋಟಿ ತಲುಪಿತು.
ಇದನ್ನೂ ಓದಿ: Deepika Das: ಮಿನುಗುವ ಡ್ರೆಸ್ನಲ್ಲಿ ದೀಪಿಕಾ ದಾಸ್ ಫುಲ್ ಶೈನ್! ಪಾರ್ಟಿಯಲ್ಲಿ 'ನಾಗಿಣಿ' ಬ್ಯೂಟಿ ಒಂಟಿ
ನಮ್ಮ ಚಿತ್ರತಂಡ ಆಸ್ಕರ್ ಪ್ರಶಸ್ತಿ ಅಭಿಯಾನಕ್ಕೆ ಒಟ್ಟು ₹ 8.5 ಕೋಟಿ ಖರ್ಚು ಮಾಡಿದೆ ಎಂದು ಖರ್ಚಿನ ವಿಚಾರವಾಗಿ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ."ಚಿತ್ರತಂಡ ಕೋಟಿಗಟ್ಟಲೆ ಖರ್ಚು ಮಾಡಿದರೂ, ಚಲನಚಿತ್ರದ ಮೇಲಿನ ಪ್ರೀತಿ ಮತ್ತು ಗೌರವದಿಂದ ಪ್ರೇಕ್ಷಕರು ಚಿತ್ರಕ್ಕೆ ಉಚಿತ ಪ್ರಚಾರವನ್ನು ಮಾಡಿದ್ದಾರೆ.
ಪ್ರೇಕ್ಷಕರ ಪ್ರೀತಿಯನ್ನು ನಾವು ಖರೀದಿಸಲು ಸಾಧ್ಯವಿಲ್ಲ. ಜೇಮ್ಸ್ ಕ್ಯಾಮರೂನ್ ಮತ್ತು ಸ್ಟೀವನ್ ಸ್ಪೀಲ್‌ಬರ್ಗ್‌ರಂತಹವರು ಚಿತ್ರದ ಬಗ್ಗೆ ಮಾತನಾಡಿದ್ದಾರೆ ಎಂದರೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಾವು ಆ ಗೌರವವನ್ನು ಗಳಿಸಿದ್ದಕ್ಕಾಗಿ ನಮಗೆ ಸಂತೋಷವಾಗಿದೆ” ಎಂದು ಕಾರ್ತಿಕೇಯ ಸಂದರ್ಶನದಲ್ಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ