ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ 'ಕೆ.ಜಿ.ಎಫ್' ಚಿತ್ರದ ಎರಡನೇ ಭಾಗದ ಕೆಲಸಗಳು ಪ್ರಾರಂಭವಾಗಿದೆ. ಖಡಕ್ ಲುಕ್, ಜಬರ್ದಸ್ತ್ ಡೈಲಾಗ್ಗಳ ಮೂಲಕ ವಿಶ್ವದಾದ್ಯಂತ ಆರ್ಭಟಿಸಿದ್ದ ರಾಕಿ ಭಾಯ್ಯ ರಿ ಎಂಟ್ರಿಗೆ ಭರ್ಜರಿ ತಯಾರಿಗಳು ನಡೆಯುತ್ತಿದ್ದರೆ, ಚಾಪ್ಟರ್- 2 ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹೇಗೆ ಕಾಣಿಸಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹುಟ್ಟಿಕೊಂಡಿದೆ.
ಇತ್ತೀಚೆಗಷ್ಟೇ ಆಡಿಷನ್ ನಡೆಸಿ 'ಕೆ.ಜಿ.ಎಫ್' ತಂಡ ಭಾರೀ ಸದ್ದು ಮಾಡಿತ್ತು. ಈ ಆಡಿಷನ್ನಲ್ಲಿ ಗಡ್ಡದಾರಿಗಳ ದಂಡೇ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹೀಗಾಗಿ ಎರಡನೇ ಅವತರಣಿಕೆಯಲ್ಲೂ 'ಕೆ.ಜಿ.ಎಫ್' ಚಿತ್ರಕ್ಕೆ ಗಡ್ಡವೇ ಟ್ರೇಡ್ ಮಾರ್ಕ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇತ್ತ ನಟ ಯಶ್ ಸಹ ಗಡ್ಡಕ್ಕೆ ಕತ್ತರಿ ಹಾಕದೇ ಓಡಾಡುತ್ತಿರುವುದು ಕೂಡ ಈ ಬಾರಿ ಚಿತ್ರದಲ್ಲಿ ರಾಕಿ ಭಾಯ್ ಮತ್ತಷ್ಟು ಖಡಕ್ ಆಗಿ ಕಾಣಿಸಲಿದ್ದಾರೆ ಎಂಬುದರ ಸೂಚನೆ. ಆದರೆ ಯಾವ ಮಟ್ಟದಲ್ಲಿರಲಿದೆ ಯಶ್ ಅವರ ಅವತಾರ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ ಇದೀಗ ಈ ಕಾತುರತೆ ಪುಲಿಸ್ಟಾಪ್ ಇಡಲು ಯಶ್ರ ಲುಕ್ವೊಂದು ಹೊರ ಬಿದ್ದಿದೆ.
ಸ್ವತಃ ರಾಕಿ ಭಾಯ್ ಕ್ಲಿಕ್ಕಿಸಿರುವ ಫೋಟೋವೊಂದು 'ಕೆ.ಜಿ.ಎಫ್ 2'ನ ಅಸಲಿ ಲುಕ್ ಎಂಬ ರೀತಿಯಲ್ಲಿ ವೈರಲ್ ಆಗುತ್ತಿದೆ. ಈ ಹಿಂದಿನ ಅವತಾರಕ್ಕಿಂತ ಮತ್ತಷ್ಟು ಭಯಾನಕವಾಗಿರುವ ಯಶ್ ಅವರ ಲುಕ್ಗೆ ಅಭಿಮಾನಿಗಳು ಈಗಾಗಲೇ ಫಿದಾ ಆಗಿದ್ದಾರೆ. ಇನ್ನು ಇದೇ ಗೆಟಪ್ನಲ್ಲಿ ರಾಕಿ ಭಾಯ್ ಕಾಣಿಸಿಕೊಂಡರೆ ಚಿತ್ರಪ್ರೇಮಿಗಳಿಂದ ಸಿಳ್ಳೆ ಚಪ್ಪಾಳೆಗಳ ಸುರಿಮಳೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಈ ಒಂದು ಫೋಟೋ ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ನಲ್ಲೂ ಸದ್ದು ಮಾಡಿದೆ. ರಾಕಿಂಗ್ ಸ್ಟಾರ್ರ ಹೊಸ ಅವತಾರ, 'ಕೆ.ಜಿ.ಎಫ್2' ಚಿತ್ರದ ರಾಕಿ ಭಾಯ್ ಎಂದು ಈ ಚಿತ್ರಕ್ಕೆ ಶೀರ್ಷಿಕೆ ನೀಡಿ ಸುದ್ದಿಗಳು ಪ್ರಕಟಗೊಂಡಿದೆ.
ಕೇವಲ ಒಂದೇ ಒಂದು ಫೋಟೋ ಮೂಲಕ ಅಲೆಯಿಬ್ಬಿಸಿರುವ ಯಶ್, ಮತ್ತೊಮ್ಮೆ 'ಕೆ.ಜಿ.ಎಫ್' ಮೂಲಕ ಕನ್ನಡ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಹೊತ್ತೊಯ್ಯಲಿದ್ದಾರೆ ಎಂಬುದಕ್ಕೆ ಈ ಕ್ರೇಜ್ ಸಾಕ್ಷಿ. ಸದ್ಯ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ರಾಕಿ ಭಾಯ್ ಶೀಘ್ರದಲ್ಲೇ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ. ಇದೇ ತಿಂಗಳು 13 ರಿಂದ 'ಕೆ.ಜಿ.ಎಫ್2'ಚಿತ್ರದ ಅಧಿಕೃತ ಶೂಟಿಂಗ್ ಪ್ರಾರಂಭವಾಗಲಿದೆ ಎನ್ನಲಾಗಿದೆ. ಎರಡನೇ ಭಾಗದಲ್ಲಿ ಯಶ್ ಎದುರಾಳಿಯಾಗಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗಿದ್ದು, ಇಬ್ಬರ ಕಾಂಬಿನೇಷನ್ ಚಿತ್ರ ಮೂಡಿ ಬಂದರೆ ಬಾಕ್ಸಾಫೀಸ್ ಧೂಳೀಪಟವಾಗುವುದು ಪಕ್ಕಾ ಎನ್ನುತ್ತಿದೆ ಗಾಂಧಿನಗರ.
View this post on Instagram
Yash from #kgfchapter2 🤟 . .#kgf #kgfmovie #kgf2018 #tollywood #telugucinema #telugumovie
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ