ಸೂರ್ಯಪುತ್ರ ಮಹಾವೀರ ಕರ್ಣ. ನಿರ್ದೇಶಕ ಆರ್ ಎಸ್ ವಿಮಲ್ ಅವರ ಕನಸಿನ ಕೂಸು. 2015ರಲ್ಲಿ ಎನ್ನು ನಿಂಟೆ ಮೊಯಿದೀನಿನಂತಹ ಹಿಟ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಮಲ್, ಆ ಬಳಿಕ ಈ ಮೆಗಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದರು. 2016ರಲ್ಲೇ ಸಿನಿಮಾ ಅನೌನ್ಸ್ ಆಗಿತ್ತು. ಕರ್ಣನ ಪಾತ್ರದಲ್ಲಿ ಮಲಯಾಳಂ ಸೂಪರ್‍ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನಟಿಸಬೇಕಿತ್ತು. ದುಬೈನಲ್ಲಿ ಅದ್ಧೂರಿಯಾಗಿ ಸಿನಿಮಾವನ್ನು ಲಾಂಚ್ ಕೂಡ ಮಾಡಲಾಗಿತ್ತು. ಆದರೆ ಬಜೆಟ್ ಕೈಮೀರಿದ ಕಾರಣ ನಿರ್ಮಾಪಕರು ಹಿಂದೆ ಸರಿದರು. ನಂತರ ಸಿನಿಮಾ ಕೂಡ ಅಲ್ಲಿಗೇ ನಿಂತಿತ್ತು.
ಆದರೆ, ನಿರ್ದೇಶಕ ವಿಮಲ್ ಕನಸನ್ನು ಕೈಬಿಡಲಿಲ್ಲ. 2018ರಲ್ಲಿ ಮತ್ತೊಮ್ಮೆ ಸಿನಿಮಾ ರೀಲಾಂಚ್ ಮಾಡಿದರು. ಈ ಬಾರಿ ಮಾಲಿವುಡ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಜಾಗಕ್ಕೆ ಕಾಲಿವುಡ್ ಸೂಪರ್‍ಸ್ಟಾರ್ ವಿಕ್ರಮ್ ಬಂದಿದ್ದರು. 2016ರಲ್ಲಿ 60 ಕೋಟಿ ಲೆಕ್ಕಾಚಾರವಾಗಿದ್ದ ಬಜೆಟ್ 2021ಕ್ಕಾಗಲೆ ಬರೋಬ್ಬರಿ 300 ಕೋಟಿ ಮುಟ್ಟಿತ್ತು. ಸಿನಿಮಾ ಟೈಟಲ್ ಕೂಡ ಈ ಬಾರಿ ಸೂರ್ಯಪುತ್ರ ಮಹಾವೀರ ಕರ್ಣ ಎಂದು ಬದಲಾಗಿತ್ತು.
ಚಿತ್ರಕ್ಕೆ ಯಾವುದೇ ಅಡೆತಡೆಗಳು ಬಾರದಿರಲಿ ಅಂತ ನಿರ್ದೇಶಕ ವಿಮಲ್ 2018ರಲ್ಲಿ ಶಬರಿಮಲೆ ಅಯ್ಯಪ್ಪನ ಬಳಿ ಹೋಗಿ ಸ್ಕ್ರಿಪ್ಟ್ ಪೂಜೆ ಮಾಡಿಸಿಕೊಂಡು ಆಶೀರ್ವಾದ ಪಡೆದು ಬಂದಿದ್ದರು. 2019ರ ಫೆಬ್ರವರಿಯಲ್ಲಿ ಪ್ರೀಪ್ರೊಡಕ್ಷನ್ ಕೆಲಸಗಳೂ ಪ್ರಾರಂಭವಾದವು. ಆದರೆ ಕಳೆದ ವರ್ಷ ಕೊರೊನಾ ಲಾಕ್‍ಡೌನ್‍ನಿಂದಾಗಿ ಸಿನಿಮಾ ಕೆಲಸಗಳು ಅರ್ಧಕ್ಕೇ ನಿಂತಿದ್ದವು. ಮತ್ತೊಂದೆಡೆ ತಮಿಳುನಾಡಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಸಹ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾದರು. ಹೀಗಾಗಿ ಚಿತ್ರತಂಡದಿಂದ ಹೊರಬಿದ್ದ ಹೊಸ ಸುದ್ದಿಯ ಪ್ರಕಾರ ಸದ್ಯ ವಿಕ್ರಮ್ ಕೂಡ ಸೂರ್ಯಪುತ್ರ ಮಹಾವೀರ ಕರ್ಣ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಆದರೆ, ಬರೋಬ್ಬರಿ 6 ವರ್ಷಗಳಿಂದ ಈ ಒಂದೇ ಚಿತ್ರವನ್ನು ಬೆಳ್ಳಿ ತೆರೆ ಮೇಲೆ ತರುವ ಕನಸನ್ನು ನನಸು ಮಾಡಿಕೊಳ್ಳಲು ನಿರ್ದೇಶಕ ವಿಮಲ್ ಪಣ ತೊಟ್ಟಿದ್ದಾರೆ. ಹೀಗಾಗಿಯೇ ಕರ್ಣನ ಪಾತ್ರಕ್ಕೆ ಖ್ಯಾತ ಬಾಲಿವುಡ್ ನಟರೊಬ್ಬರ ಜೊತೆ ಮಾತುಕತೆ ಮಾಡುತ್ತಿದ್ದು, ಇನ್ನು ಕೆಲ ದಿನಗಳಲ್ಲೇ ಅದು ಅಂತಿಮವಾಗಲಿದೆ ಎನ್ನಲಾಗಿದೆ. ಹಾಗೇ ಇತ್ತೀಚೆಗಷ್ಟೇ ಸೂರ್ಯಪುತ್ರ ಮಹಾವೀರ ಕರ್ಣ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಗಮನ ಸೆಳೆಯುವಂತೆ ಮೂಡಿ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ