ಕರುಣಾನಿಧಿ VS ಎಂಜಿಆರ್: ಇಬ್ಬರು ಗೆಳೆಯರು ಶತ್ರುಗಳಾದ ಕಥೆಯಿದು

zahir | news18
Updated:August 8, 2018, 9:41 PM IST
ಕರುಣಾನಿಧಿ VS ಎಂಜಿಆರ್: ಇಬ್ಬರು ಗೆಳೆಯರು ಶತ್ರುಗಳಾದ ಕಥೆಯಿದು
  • Advertorial
  • Last Updated: August 8, 2018, 9:41 PM IST
  • Share this:
-ನ್ಯೂಸ್ 18 ಕನ್ನಡ

ತಮಿಳುನಾಡು ಎಂದರೆ ಸಿನಿಮಾ ಮತ್ತು ರಾಜಕೀಯ ಪಕ್ಷಗಳು ಕಣ್ಮುಂದೆ ಬರುವುದು ಸಹಜ. ಏಕೆಂದರೆ ಸಿನಿಮಾದಲ್ಲಿ ಮಿಂಚಿದವರಲ್ಲಿ ಹೆಚ್ಚಿನವರು ತಮಿಳುನಾಡಿನ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದುಕೊಂಡಿರುವ ತಮಿಳ್ ಮಕ್ಕಳ್ ಸಿನಿರಂಗದಲ್ಲಿ ಗುರುತಿಸಿಕೊಂಡವರಿಗೆ  ಹಲವು ಬಾರಿ ರಾಜ್ಯದ ಚುಕ್ಕಾಣಿ ನೀಡಿದ್ದಾರೆ.

ಈ ಸಾಲಿನಲ್ಲಿ ತಮಿಳರ ಜನಮೆಚ್ಚಿದ ನಾಯಕ ಎಂಜಿಎರ್ ಅಗ್ರಸ್ಥಾನದಲ್ಲಿದ್ದರೆ, ಮಂಗಳವಾರ ನಿಧನ ಹೊಂದಿದ ಕರುಣಾನಿಧಿ ನಂತರದ ಸ್ಥಾನದಲ್ಲಿರುತ್ತಾರೆ. ರಾಜಕೀಯ ಅಂಗಳದ ಬದ್ಧ ವೈರಿಗಳಾಗಿದ್ದ ಕರುಣಾನಿಧಿ ಮತ್ತು ನಟ ಎಂಜಿಆರ್ ಅಂದಕಾಲತ್ತಿಲ್ ಕುಚುಕುಗಳಾಗಿದ್ದವರು ಎಂದರೆ ನಂಬಲೇಬೇಕು.

ಅದರಲ್ಲೂ ತಮಿಳುನಾಡಿನ ಈ ಇಬ್ಬರು ಮಾಜಿ ಸಿಎಂಗಳು ಸಿನಿಮಾ ಮೂಲಕ ಗುರುತಿಸಿಕೊಂಡಿದ್ದವರು. ಜೊತೆಯಾಗಿ ಸಿನಿಮಾ ಜೀವನ ಆರಂಭಿಸಿದ್ದ ಕಲೈನರ್ ಮತ್ತು ಎಂಜಿಆರ್​ ರಾಜಕೀಯದಲ್ಲೂ ಕೂಡಿ ಹೆಜ್ಜೆಯಿಟ್ಟಿದ್ದರು. ನಟ ಎಂಜಿಆರ್ ಪಾಲಿಟಿಕ್ಸ್​ ಜೊತೆಗೆ ಚಿತ್ರರಂಗದಲ್ಲಿ ಹೆಸರುಗಳಿಸಬೇಕೆಂಬ ಪ್ರಯತ್ನದಲ್ಲಿದ್ದರೆ, ಕರುಣಾನಿಧಿ ರಾಜಕೀಯದಿಂದ ಏನಾದರೂ ಸಾಧಿಸಬೇಕೆಂದು ಹೊರಟಿದ್ದರು. ಜನಪ್ರಿಯತೆ ಎಂಬ ದೋಣಿಯಲ್ಲಿ ಪಯಣಸಿದ್ದ ಇಬ್ಬರು ನಾಯಕರು ಒಂದೇ ಸಮಯದಲ್ಲಿ ಗುರಿಮುಟ್ಟಿದ್ದರು.

ರಾಜಕೀಯದ ಉತ್ತುಂಗಕ್ಕೇರಿದ ಕರುಣಾನಿಧಿ ಸಿಎಂ ಆದರು. ಗೆಳೆಯ ಮುಖ್ಯಮಂತ್ರಿ ಆಗುತ್ತಿದ್ದಂತೆ ಎಂಜಿಆರ್ ಮಂತ್ರಿ ಪದವಿಯನ್ನು ಬಯಸಿದರು. ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಪಡೆದಿದ್ದ ಎಂಜಿಆರ್ ಡಿಎಂಕೆ ಪಕ್ಷದ ಸದಸ್ಯರಾಗಿದ್ದರು. ಆದರೆ ಇದೊಂದೇ ಅರ್ಹತೆಗೆ ಮಂತ್ರಿ ಸ್ಥಾನವನ್ನು ನೀಡಲಾಗುವುದಿಲ್ಲ ಎಂದು ಕರುಣಾನಿಧಿ ಖಂಡತುಂಡವಾಗಿ ಹೇಳಿದ್ದರು. ಇದರಿಂದ ಗೆಳೆಯರ ನಡುವೆ ವೈಮನಸ್ಯ ಮೂಡಿತು. ಕರುಣಾನಿಧಿ ಸಿಎಂ ಮೊದಲ ಬಾರಿ ಸಿಎಂ ಆಗಲು ಎಂಜಿಆರ್ ಅವರ ಜನಪ್ರಿಯತೆ ಕೂಡ ಕಾರಣವಾಗಿತ್ತು. ಗೆಳೆಯನ ನಿರ್ಲಕ್ಷ್ಯದಿಂದ ಎಂಜಿಆರ್ ರೋಸಿ ಹೋಗಿದ್ದರು.  ಇದುವೇ ಮುಂದೆ ಎಐಎಡಿಎಂಕೆ ಎಂಬ ಪಕ್ಷದ ಉದಯಕ್ಕೆ ಕಾರಣವಾಯಿತು.

ಇಂತಹದೊಂದು ಕಥೆಯ ಎಳೆಯನ್ನಿಟ್ಟು ಖ್ಯಾತ ನಿರ್ದೇಶಕ ಮಣಿರತ್ನಂ ತಮಿಳಿನಲ್ಲಿ ಒಂದು ಅಧ್ಭುತ ಚಿತ್ರ ನಿರ್ದೇಶಿಸಿದ್ದರು. ಅದುವೇ 'ಇರುವರ್'. 1997ರಲ್ಲಿ ತೆರೆಕಂಡಿದ್ದ 'ಇರುವರ್' ಚಿತ್ರಕ್ಕೆ ಕರುಣಾನಿಧಿ ಮತ್ತು ಎಂಜಿಆರ್ ಅವರ ರಾಜಕೀಯ ಏರಿಳಿತವೇ ಮೂಲ ಪ್ರೇರಣೆಯಾಗಿತ್ತು. ಈ ಸಿನಿಮಾದಲ್ಲಿ ನಟ ಮೋಹನ್ ಲಾಲ್ ಜನಮೆಚ್ಚಿದ ನಾಯಕ ಎಂಜಿಆರ್ ಪಾತ್ರ ಮಾಡಿದ್ದರು. ಹಾಗೆಯೇ ಕನ್ನಡ ನಟ ಪ್ರಕಾಶ್ ರೈ ಇಲ್ಲಿ ಕರುಣಾನಿಧಿ ಪಾತ್ರಕ್ಕೆ ಜೀವ ತುಂಬಿದ್ದರು. ತಮಿಳುನಾಡಿನ ಅಗ್ರಗಣ್ಯ ನಾಯಕರ ಗಾಢ್​ಫಾದರ್ ಅಣ್ಣಾದೊರೈ ಪಾತ್ರದಲ್ಲಿ ನಾಸರ್ ಕಾಣಿಸಿಕೊಂಡಿದ್ದರು.

ಅಂದಿನ ಕರುಣಾನಿಧಿಯವರ ಪ್ರೇಮಕಥೆ, ನಟನಾಗಬೇಕೆಂಬ ಎಂಜಿಆರ್ ಅವರ ತುಡಿತಗಳನ್ನು ದೃಶ್ಯ ರೂಪದಲ್ಲಿ ಮಣಿರತ್ನಂ ಕಟ್ಟಿ ಕೊಟ್ಟಿದ್ದರು. ತಮ್ಮದೇ ನೆಲದ ಕಥೆಯಾದರಿಂದ ತಮಿಳು ಮಕ್ಕಳು ಚಿತ್ರವನ್ನು ಬಾಚಿ ಅಪ್ಪಿಕೊಂಡಿದ್ದರು. ಎಲ್ಲವನ್ನೂ ಮೀರಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.ಅಷ್ಟೇ ಅಲ್ಲದೆ 1997ರಲ್ಲಿ ಟೊರಾಂಟೊ ಇಂಟರ್​ನ್ಯಾಷನಲ್​ ಫಿಲ್ಮ್​ ಫೇಸ್ಟಿವಲ್​ನಲ್ಲಿ 'ಇರುವರ್'​ ಪ್ರದರ್ಶನ ಕಂಡಿತು. ಈ ಚಿತ್ರದ ಅಭಿನಯಕ್ಕಾಗಿ ನಟ ಪ್ರಕಾಶ್ ರೈ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಬ್ರಿಟಿಷ್ ಫಿಲ್ಮ್ ಇನ್ಸಿ​ಟ್ಯೂಟ್​ ಸೈಟ್ ಅಂಡ್ ಸೌಂಡ್ ಪ್ರಕಟಿಸಿದ ವಿಶ್ವದ ಅತ್ಯುತ್ತಮ 1000 ಸಿನಿಮಾಗಳ ಪಟ್ಟಿಯಲ್ಲಿ 'ಇರುವರ್' ಸಿನಿಮಾಗೆ ಸ್ಥಾನ ನೀಡಲಾಗಿದೆ. ಇದರಿಂದ ಎಲ್ಲೊ ತಮಿಳುನಾಡಿನಲ್ಲಿ ಹುದುಗಿ ಹೋಗಬೇಕಿದ್ದ ಇಬ್ಬರು ಗೆಳೆಯರ ಏರಿಳಿತದ ಕಥೆಯೊಂದು ವಿಶ್ವದ ಗಮನ ಸೆಳೆಯಿತು.

ಕರುಣಾನಿಧಿ ಅವರ ಡಿಎಂಕೆ ಪಕ್ಷಕ್ಕೆ ಪರ್ಯಾಯವಾಗಿ ಎಐಎಡಿಎಂಕೆ ಪಕ್ಷ ಕಟ್ಟಿದ್ದ ಎಂಜಿಆರ್ ಜೀವನ ಪರ್ಯಂತ ಕರುಣಾನಿಧಿಯವರ ರಾಜಕೀಯ ಶತ್ರುವಾಗಿ ಗುರುತಿಸಿಕೊಂಡರು. ಎಲ್ಲಿಯತನಕ ಎಂದರೆ ಎಂಜಿಆರ್ ಅಧಿಕಾರಕ್ಕೇರಿದ ಬಳಿಕ ಮತ್ಯಾವತ್ತೂ ಕಲೈನರ್​ಗೆ ಸಿಎಂ ಗಾದಿ ಮರೀಚಿಕೆಯಾಗಿತ್ತು. ತಮಿಳ್ ಮಕ್ಕಳ ಪ್ರೀತಿ ಸಂಪಾದಿಸಿದ್ದ ಎಂಜಿಆರ್ ಮತ್ತು ಕರುಣಾನಿಧಿ ಇಂದು ನಮ್ಮೊಂದಿಗಿಲ್ಲ. ಆದರೆ ಮಣಿರತ್ನಂ ಅವರ 'ಇರುವರ್' ಸದಾ ಕಾಲ ಇಬ್ಬರು ನಾಯಕರ ಕಥೆ ಹೇಳಲಿದೆ.
First published:August 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ