Ragini Chandran: ಹೆಣ್ಣು ತನಗಾದ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡ್ಬೇಕು- ಲಾ ನಾಯಕಿ ರಾಗಿಣಿ ಚಂದ್ರನ್​ ಸ್ಪಷ್ಟಮಾತು

LAW: ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಲಾ ಸಿನಿಮಾ ನಾಳೆ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ. ಈ ಸಿನಿಮಾಗಳ ವಿಶೇಷತೆ ಬಗ್ಗೆ ಸಿನಿಮಾದ ನಾಯಕಿ ರಾಗಿಣಿ ಚಂದ್ರನ್​ ನ್ಯೂಸ್​18 ಕನ್ನಡದ ಜೊತೆ ಮಾತನಾಡಿದ್ದಾರೆ.

ರಾಗಿಣಿ ಚಂದ್ರನ್​

ರಾಗಿಣಿ ಚಂದ್ರನ್​

  • Share this:
ನೃತ್ಯದ ಮೂಲಕ ಗಮನ ಸೆಳೆದಿದ್ದ ರಾಗಿಣಿ ಚಂದ್ರನ್​ ‘ಲಾ’ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್​ ಒಡೆತನದ ಪಿಆರ್​ಕೆ ಪ್ರೊಡಕ್ಷನ್​ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ವಿಶೇಷ. ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮೊದಲ ಸಿನಿಮಾದಲ್ಲಿ ಇಂಥದ್ದೊಂದು ಪಾತ್ರ ಸಿಕ್ಕಿರುವುದುಕ್ಕೆ ಖುಷಿಯಾಗಿದ್ದಾರೆ ರಾಗಿಣಿ. ರಘು ಸಮರ್ಥ್​ ನಿರ್ದೇಶನದ ಈ ಚಿತ್ರಕ್ಕೆ ವಾಸುಕಿ ವೈಭವ್​ ಸಂಗೀತ ಇದೆ. ಈ ಸಿನಿಮಾ ಶುಕ್ರವಾರ (ಜು.17) ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ. ಸಿನಿಮಾದ ಶೂಟಿಂಗ್​, ಚಿತ್ರ ಹೇಗಿದೆ ಎನ್ನುವ ಬಗ್ಗೆ ನ್ಯೂಸ್​18 ಕನ್ನಡ ವೆಬ್​ತಂಡದ ಜೊತೆ ಮಾತನಾಡಿದ್ದಾರೆ.

ಹಿರಿತೆರೆಗೆ ಕಾಲಿಡುತ್ತಿರುವುದಕ್ಕೆ ಭಯ ಆಗ್ತಿದೆ!:

“ನಾನು ಲಾ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಡುತ್ತಿದ್ದೇನೆ. ನನ್ನ ಮೊದಲ ಸಿನಿಮಾಗೆ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಹೀಗಾಗಿ, ಭಯ, ಖುಷಿ, ಎಗ್ಸೈಟ್​ಮೆಂಟ್​ ಎಲ್ಲವೂ ಆಗುತ್ತಿದೆ. ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನೂ ಮೀರಿರುತ್ತದೆ, ಎನ್ನುತ್ತಾರೆ ರಾಗಿಣಿ ಚಂದ್ರನ್​.

ಇದು ಬೆಸ್ಟ್​ ಆಯ್ಕೆ:

ನಿರ್ದೇಶಕ ರಘು ಅವರು ಮೊದಲ ಬಾರಿಗೆ ಬಂದು ಕಥೆ ಹೇಳಿದಾಗ ಪಿಆರ್​ಕೆ ಪ್ರೊಡಕ್ಷನ್​ ನಿರ್ಮಾಣದ ಜವಾಬ್ದಾರಿ ಹೊತ್ತಿರಲಿಲ್ಲ. ನಂತರ ಪುನೀತ್​ ಅವರು ಈ ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಆಗ ನನ್ನಲ್ಲಿ ಮತ್ತಷ್ಟು ಕಾನ್ಫಿಡೆನ್ಸ್​ ಬಂದಿತು. ಏಕೆಂದರೆ, ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಮೂಡಿ ಬಂದ ಎಲ್ಲ ಚಿತ್ರಗಳು ಅದ್ಭುತವಾಗಿದ್ದವು. ಲಾ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಎಂದು ವಿಶ್ವಾಸ ಹೊರ ಹಾಕುತ್ತಾರೆ ರಾಗಿಣಿ.

ಇದು ಕಾನೂನಿನ ಬಗ್ಗೆ ಮಾತ್ರ ಇಲ್ಲ:

ಸಿನಿಮಾದ ಟೈಟಲ್​ ನೋಡಿದವರಿಗೆ ಈ ಚಿತ್ರ ಕಾನೂನಿನ ಬಗ್ಗೆ ಇರಬಹುದು ಎಂದೆನಿಸಿ ಬಿಡುತ್ತದೆ. ಆದರೆ, ಸಿನಿಮಾ ಕೇವಲ ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ನಿಲ್ಲುತ್ತಿಲ್ಲ ಎಂಬುದು ರಾಗಿಣಿ ಮಾತು. ಸಾಕಷ್ಟು ಹೆಣ್ಣುಮಕ್ಕಳು ಸಮಾಜಕ್ಕೆ ಹೆದರುತ್ತಾರೆ. ಹೀಗೆ ಹೆದರಿ ಸಾಕಷ್ಟು ವಿಚಾರಗಳನ್ನು ಹೇಳಿಕೊಳ್ಳಲು ಹೆದರುತ್ತಾರೆ. ಲಾ ಸಿನಿಮಾದಲ್ಲಿ ನಾವು ತೋರಿಸಿದ್ದೂ ಇದನ್ನೇ. ಪ್ರತಿ ಹುಡುಗಿ ತನಗೆ ತೋಚಿದ್ದನ್ನು ಮಾಡಲು ಹಾಗೂ ಹೇಳಲು ಹೆದರಬಾರದು ಎನ್ನುವ ಸಂದೇಶ ಇದೆ. ಇದು ನನ್ನದೇ ಕಥೆ ಎನ್ನುವ ಭಾವನೆ ಪ್ರತಿಯೊಬ್ಬ ಪ್ರೇಕ್ಷಕರಲ್ಲೂ ಕಾಡುತ್ತದೆ ಎನ್ನುವ ರಾಗಿಣಿ ಇದೊಂದು ಫುಲ್​ ಎಂಟ್ರಟೈನ್​ಮೆಂಟ್​ ಸಿನಿಮಾ ಎನ್ನುತ್ತಾರೆ.

ಪ್ರಜ್ವಲ್​ ಸಾಕಷ್ಟು ವಿಚಾರ ಹೇಳಿಕೊಟ್ರು:

ಮೊದಲ ಸಿನಿಮಾ ಎಂದಾಕ್ಷಣ ಕ್ಯಾಮೆರಾ ಫೇಸ್​ ಮಾಡೋಕೆ ಎಲ್ಲರಿಗೂ ಕಷ್ಟವಾಗುತ್ತದೆ. ಆದರೆ, ರಾಗಿಣಿ ಡಾನ್ಸರ್​ ಆದ್ದರಿಂದ ಅವರಿಗೆ ಕ್ಯಾಮೆರಾ ಫೇಸ್​ ಮಾಡಿದ ಅನುಭವ ಇತ್ತಂತೆ. ಹೀಗಾಗಿ, ಕ್ಯಾಮೆರಾ ಎದುರಿಸುವುದು ಅವರಿಗೆ ಕಷ್ಟ ಆಗಲೇ ಇಲ್ಲ. ನೃತ್ಯ ಮಾಡುವಾಗ ನಾವು ವೇದಿಕೆಯ ಮೇಲೆ ಹೆಚ್ಚಿ ಎಕ್ಸ್​ಪ್ರೆಷನ್ ನೀಡುತ್ತೇವೆ. ಆದರೆ, ಸಿನಿಮಾದಲ್ಲಿ ಆ ರೀತಿ ಆಗಲ್ಲ. ಅಲ್ಲಿ ನಟನೆ ತುಂಬಾನೇ ನೈಸರ್ಗಿಕವಾಗಿ ಮೂಡಿಬರಬೇಕು. ಇನ್ನು, ನಿರರ್ಗಳವಾಗಿ ಡೈಲಾಗ್​ ಹೇಳುವುದು ನನಗೆ ಸವಾಲಾಗಿತ್ತು. ನನ್ನ ಗಂಡ ಪ್ರಜ್ವಲ್​ ಇದನ್ನು ಕಲಿಸಿಕೊಟ್ರು ಎನ್ನುತ್ತಾರೆ ರಾಗಿಣಿ.

ಡಾನ್ಸ್​ ಇಲ್ಲ ಅನ್ನೋದೆ ಬೇಸರ!:

ನಟ ಪ್ರಜ್ವಲ್ ದೇವರಾಜ್ ಅವರ ಮಡದಿ ರಾಗಿಣಿ ಮೂಲತಃ ಡಾನ್ಸರ್​. ಆದರೆ, ಮೊದಲ ಸಿನಿಮಾದಲ್ಲಿ ಒಂದೇ ಒಂದು ಡಾನ್ಸ್​ ಇಲ್ಲ. ಈ ವಿಚಾರದಲ್ಲಿ ಅವರಿಗೆ ಕೊಂಚ ಬೇಸರ ಇದೆಯಂತೆ! "ನಾನು ವೃತ್ತಿಯಲ್ಲಿ ಡಾನ್ಸರ್​ ಆಗಿ ಮೊದಲ ಸಿನಿಮಾದಲ್ಲಿ ನೃತ್ಯ ಮಾಡೋಕೆ ಅವಕಾಶ ಇಲ್ಲ ಅನ್ನೋದು ಕೊಂಚ ಬೇಸರ ಮಾಡಿಸಿದೆ. ಆದರೆ, ನನ್ನನ್ನು ಡಾನ್ಸರ್​ ಆಗಿ ಹಾಗೂ ಮಾಡೆಲ್​ ಆಗಿ ಎಲ್ಲರೂ ನೋಡಿದ್ದಾರೆ. ಈ ಸಿನಿಮಾ ಮೂಲಕ ಎಲ್ಲರೂ ನನ್ನನ್ನು ಕಲಾವಿದೆಯಾಗಿ ನೋಡಲಿದ್ದಾರೆ,” ಎಂದು ಸಂತಸ ಹಂಚಿಕೊಳ್ಳುತ್ತಾರೆ ಅವರು.ಪ್ರಜ್ವಲ್​ ಜೊತೆ ಡೆಬ್ಯೂ ಮಾಡಬೇಕೆಂದೇನು ಇರಲಿಲ್ಲ:

ಪ್ರಜ್ವಲ್​ ದೇವರಾಜ್​ ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗಾಗಿ, ಪ್ರಜ್ವಲ್​ ಸಿನಿಮಾ ಮೂಲಕ ರಾಗಿಣಿಗೆ ಡೆಬ್ಯೂ ಮಾಡೋ ಇಚ್ಛೆ ಇದ್ದಿತ್ತೇನೋ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ರಾಗಿಣಿ ಚಂದ್ರನ್​ ತುಂಬಾನೇ ಭಿನ್ನ. “ನಾನು ಈ ಸಿನಿಮಾ ಮಾಡೋಕೆ ಮುಖ್ಯ ಕಾರಣ, ಚಿತ್ರದ ಕಥೆ ಹಾಗೂ ನನ್ನ ಪಾತ್ರ. ಪ್ರಜ್ವಲ್​ ಸಿನಿಮಾ ಮೂಲಕವೇ ಬಣ್ಣ ಹಚ್ಚಬೇಕು ಎನ್ನುವ ಆಸೆ ಇರಲಿಲ್ಲ.” ಎನ್ನುತ್ತಾರೆ.

ಅಪ್ಪು ಅಣ್ಣ​ ನಮ್ಮ ಕುಟುಂಬದವರಿದ್ದಂತೆ:

ಪುನೀತ್​ ರಾಜ್​ಕುಮಾರ್ ಹಾಗೂ ದೇವರಾಜ್​ ಕುಟುಂಬ ತುಂಬಾನೇ ಕ್ಲೋಸ್​. ಹೀಗಾಗಿ, ಪುನೀತ್​ ಜೊತೆ ಸಿನಿಮಾ ಮಾಡ್ತಿರೋದು ನನಗೆ ಕುಟುಂಬದ ಜೊತೆ ಸಿನಿಮಾ ಮಾಡಿದ ಅನುಭವ ನೀಡಿತ್ತು. ನನಗೆ ಅವರು ತುಂಬಾನೇ ಕಂಪರ್ಟೆಬಲ್​ ಫೀಲ್​ ಕೊಟ್ಟಿದ್ದರು ಎನ್ನುವುದು ರಾಗಿಣಿ ಮಾತು.

ಗ್ಲಿಸರಿನ್​ ಇಲ್ಲದೆ ಅತ್ತಿದ್ದೆ:

ನಮ್ಮ ಸಿನಿಮಾದಲ್ಲಿ ಸಾಕಷ್ಟು ಹಿರಿಯ ನಟರಿದ್ದಾರೆ. ಈ ಚಿತ್ರದಲ್ಲಿ ಅವಿನಾಶ್​ ನನ್ನ ತಂದೆಯ ಪಾತ್ರ ಮಾಡಿದ್ದಾರೆ. ಒಂದು ದೃಶ್ಯ ಮಾಡುವಾಗ ನಾನು ಗ್ಲಿಸರಿನ್​ ಇಲ್ಲದೆ ಅತ್ತಿದ್ದೆ. ಈ ಸಿನಿಮಾ ಅಷ್ಟು ಭಾವನಾತ್ಮಕವಾಗಿ ಕನೆಕ್ಟ್​ ಆಗಿತ್ತು ಎನ್ನುತ್ತಾರೆ.

1 ಪರ್ಸೆಂಟ್​ ಬೇಸರ 99 ಪರ್ಸೆಂಟ್​ ಖುಷಿ:

ಮೊದಲ ಸಿನಿಮಾ ರಿಲೀಸ್​ ಆಗುತ್ತಿದೆ ಎಂದಾಗ ಫಸ್ಟ್​ ಡೇ ಫಸ್ಟ್​ ಶೋ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ಜೊತೆ ನೋಡಬೇಕು ಎನ್ನುವ ಆಸೆ ಬಹುತೇಕರಲ್ಲಿ ಇರುತ್ತದೆ. ಇದಕ್ಕೆ ರಾಗಿಣಿ ಕೂಡ ಹೊರತಾಗಿಲ್ಲ. ಆದರೆ, ಇಂಥ ಅನಿವಾರ್ಯ ಸಂದರ್ಭದಲ್ಲಿ ಆನ್​ಲೈನ್​ ಪ್ಲಾಟ್​ ಫಾರ್ಮ್​ಗಳಲ್ಲಿ ಸಿನಿಮಾ ರಿಲೀಸ್​ ಮಾಡೋದು ಅನಿವಾರ್ಯ. ಒಟಿಟಿ ಪ್ಲಾಟ್​ಫಾರ್ಮ್​​ ಮೂಲಕ ವಿಶ್ವದ ಮೂಲೆ ಮೂಲೆಯನ್ನೂ ನಾವು ತಲುಪಬಹುದು ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ.
Published by:Rajesh Duggumane
First published: