ಡಾ. ರಾಜ್ ಕುಮಾರ್ ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೊಟೇಲ್ ಉದ್ಯಮಿ, ನಿರ್ಮಾಪಕ ಹೀಗೆ ನಾನಾ ರೀತಿಯಲ್ಲಿ ವ್ಯವಹಾರ ವಹಿವಾಟು ನಡೆಸುತ್ತಿದ್ದ ವಿಕೆ ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಮನೆಯವರಿಗೆ ಆಪ್ತರಾಗಿದ್ದರೂ, ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡರೂ ಕಪಾಲಿ ಮೋಹನ್ ಆತ್ಮಹತ್ಯೆಯ ನಿರ್ಧಾರವನ್ನು ಯಾಕಾಗಿ ತೆಗೆದುಕೊಂಡರು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿದೆ. ಬಣ್ಣದ ಲೋಕದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದ ಮೋಹನ್ ಅವರು ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂದು ಹುಡುಕುತ್ತಾ ಹೋದರೆ ಸಿಗುವ ಉತ್ತರ ಬೆಂಗಳೂರಿನ ಪೀಣ್ಯ ಬಳಿಯ ಬಸ್ ನಿಲ್ದಾಣ.
ವರ್ಷಗಳ ಹಿಂದೆ ಪೀಣ್ಯ ಬಳಿ ದೊಡ್ಡದೊಂದು ಬಸ್ ನಿಲ್ದಾಣವನ್ನು ಸರ್ಕಾರ ನಿರ್ಮಿಸಿರುವುದು ನೆನಪಿದೆಯೇ. ಅದೇ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರುವ ಬಸ್ಸುಗಳಿಗಾಗಿ ಆ ನಿಲ್ದಾಣ ನಿರ್ಮಿಸಲಾಗಿತ್ತು. ಇತ್ತ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೋಗುವ ಬಸ್ಗಳಿಗಾಗಿ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ನಿರ್ಮಿಸಿ ಯಶಸ್ವಿಯಾದ ಸರ್ಕಾರ ಅತ್ತ ಪೀಣ್ಯದಲ್ಲೂ ಅಂತಹದ್ದೇ ಒಂದು ಬೃಹತ್ ಬಸ್ ನಿಲ್ದಾಣವನ್ನು ನಿರ್ಮಿಸಿತ್ತು.
ಅಷ್ಟೇ ಅಲ್ಲ, ಅದೇ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಗಳಿಗೆ ದೊಡ್ಡದೊಂದು ಟೆಂಡರ್ ಕರೆದಿತ್ತು. ಅದಾಗಲೇ ಸುಸಜ್ಜಿಯ ಬಸ್ ಸ್ಟ್ಯಾಂಡ್ ನೋಡಿದ್ದ ಕಪಾಲಿ ಮೋಹನ್ ಅವರು ತಮ್ಮಲ್ಲಿದ್ದ ಹಣವನ್ನೆಲ್ಲಾ ಬಸ್ ನಿಲ್ಧಾಣದ ಅಂಗಡಿ ಮಳಿಗೆ ಟೆಂಡರ್ಗಾಗಿ ಸುರಿದುಬಿಟ್ಟರು. ಇದಕ್ಕಾಗಿ ಸರ್ಕಾರಕ್ಕೆ 3.10 ಕೋಟಿಯನ್ನು ಡೆಪಾಸಿಟ್ ಕೂಡ ನೀಡಿದ್ದರು ಎನ್ನಲಾಗುತ್ತಿದೆ. ಹಾಗೆಯೇ ಬಸ್ ನಿಲ್ದಾಣವನ್ನು ನಂಬಿ ಅಲ್ಲೇ ಹತ್ತಿರದಲ್ಲೇ ದೊಡ್ಡದೊಂದು ಹೊಟೇಲ್ ಕೂಡ ಕಟ್ಟಿಸಿದ್ರಂತೆ.
ಆದರೆ ಬಸ್ ನಿಲ್ದಾಣ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಸಮಸ್ಯೆಗಳು ತಲೆದೂರಿತ್ತು. ಪ್ರಯಾಣಿಕರ ಕೊರತೆ, ಬಸ್ನವರ ಪ್ರತಿಭಟನೆ, ಹೀಗೆ ನಾನಾ ವಿವಾದಗಳು ತಲೆದೂರುತ್ತಿದ್ದಂತೆ ಸರ್ಕಾರ ಕೂಡ ಹಿಂದಿನಂತೆ ಮೆಜೆಸ್ಟಿಕ್ನಿಂದಲೇ ಬಸ್ ಹೊರಡಲು ಅವಕಾಶ ಮಾಡಿಕೊಟ್ಟಿತು. ಅತ್ತ ಹೊಸ ಬಸ್ ನಿಲ್ದಾಣದಲ್ಲಿ ಬಂಡವಾಳ ಹೂಡಿದವರು ದಿಕ್ಕು ತೋಚದಂತಾದರು.
ಅತ್ತ ಟೆಂಡರುದಾರರಿಗೆ ಸರ್ಕಾರ ಪರಿಹಾರ ಕೊಡುವ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಯಾವುದೇ ಯೋಚನೆ ಕೂಡ ಮಾಡಲಿಲ್ಲ. ಅಲ್ಲಿಗೆ ತಮ್ಮ ಪೀಣ್ಯ ಬಸ್ ಸ್ಟ್ಯಾಂಡ್ನಲ್ಲಿ ಹಣ ಸುರಿದಿದ್ದ ಕಪಾಲಿ ಮೋಹನ್ ಕಂಗೆಟ್ಟು ಹೋದರು. ಇತ್ತ ಬಡ್ಡಿ ಮೇಲೆ ಹಣ ಹೊಂದಿಸಿದ್ದ ಕಪಾಲಿ ಮೋಹನ್ ಅವರ ಹೂಡಿಕೆಯ ಮೇಲೆ ಬಡ್ಡಿ, ಚಕ್ರ ಬಡ್ಡಿ, ಮೀಟರ್ ಬಡ್ಡಿ ಏರುತ್ತಲೇ ಸಾಗಿದೆ.
ಇದರ ಮಧ್ಯೆ ಜೂಜು ನಡೆಸಿದ್ದಾರೆ ಎಂಬ ಕೇಸು, ಮತ್ತಷ್ಟು ವ್ಯವಹಾರಗಳಲ್ಲಿ ಏರಿಳಿತ ಎಲ್ಲಾ ಸೇರಿ ಕಪಾಲಿ ಮೋಹನ್ ಅವರು ಕಂಗೆಟ್ಟರು ಎನ್ನುತ್ತಾರೆ ಆಪ್ತ ಮೂಲಗಳು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮೋಹನ್ ಅವರು ವಿಡಿಯೋವೊಂದನ್ನು ಮಾಡಿದ್ದರು. ಆ ವಿಡಿಯೋನಲ್ಲೂ ಕೂಡ ಸರ್ಕಾರವು ಟೆಂಡರು ಹಣವನ್ನು ವಾಪಾಸು ನೀಡುವಂತೆ, ತಮಗೆ ನ್ಯಾಯ ಒದಗಿಸಿ ಕೊಡುವಂತೆ ಮೋಹನ್ ಅವರು ಕೇಳಿಕೊಂಡಿದ್ದರು.
ಇದೀಗ ಕಪಾಲಿ ಮೋಹನ್ ಅವರ ಆತ್ಮಹತ್ಯೆಯ ಬೆನ್ನಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ ವಿಡಿಯೋ ವೈರಲ್ ಆಗುತ್ತಿದೆ. ಪೀಣ್ಯ ಬಸ್ ಸ್ಟ್ಯಾಂಡ್ನಲ್ಲಿ ಹಣ ಹೂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿಯೇ ಅವರು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡರು ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ