ವರಮಹಾಲಕ್ಷ್ಮಿ ಹಬ್ಬದಂದು ತೆರೆಕಂಡ ಸಿನಿಮಾಗಳೆಲ್ಲ ಏನಾಗುತ್ತವೆ: ಇತಿಹಾಸ ಏನು ಹೇಳುತ್ತೆ?

news18
Updated:August 24, 2018, 1:00 PM IST
ವರಮಹಾಲಕ್ಷ್ಮಿ ಹಬ್ಬದಂದು ತೆರೆಕಂಡ ಸಿನಿಮಾಗಳೆಲ್ಲ ಏನಾಗುತ್ತವೆ: ಇತಿಹಾಸ ಏನು ಹೇಳುತ್ತೆ?
news18
Updated: August 24, 2018, 1:00 PM IST
ನ್ಯೂಸ್​ 18 ಕನ್ನಡ 

ವರಮಹಾಲಕ್ಷ್ಮಿ ಹಬ್ಬದ ದಿನ ಏನೇ ಕೆಲಸ ಮಾಡಿದರೂ ಕೈಗೂಡುತ್ತೆ ಅನ್ನೋದು ನಮ್ಮ ಸಿನಿಮಾ ಮಂದಿ ನಂಬಿಕೆ. ಹೀಗಾಗಿಯೇ ವರಮಹಾಲಕ್ಷ್ಮಿ ಹಬ್ಬದ ದಿನ ಮಹೂರ್ತ, ಆಡಿಯೋ ಬಿಡುಗಡೆ, ಸಿನಿಮಾ ರಿಲೀಸ್ ಹೀಗೆ ಏನಾದರೊಂದು ಕಾರ್ಯಕ್ರಮ ಇಟ್ಟುಕೊಳ್ಳೋದು ಸಿನಿಮಾದವರ ಪ್ರತೀತಿ. ಹಾಗಾದರೆ ನಿಜಕ್ಕೂ ವರಮಹಾಲಕ್ಷ್ಮಿ ಯಾರ್ಯಾರಿಗೆ  ಅದೃಷ್ಟ ದೇವತೆಯಾಗಿದ್ದಾಳೆ. ಈ ಶುಭ ದಿನವನ್ನ ನಂಬಿದವರ ಬುದಕಿಗೆ ಯಾವ ರೀತಿಯ ತಿರುವು ಸಿಕ್ಕಿದೆ ಆ ಕುರಿತ ತಿಳಿಯೋಕೆ ಈ ವರದಿ ಓದಿ..

ಏನೇ ಕೆಲಸ ಮಾಡಿದರೂ ಅದಕ್ಕೆ ಲಕ್ಷ್ಮಿ ಕಟಾಕ್ಷ ಬೇಕೆ ಬೇಕು. ಹೀಗಾಗಿಯೇ ಲಕ್ಷ್ಮಿಯ ವರ ಜೋರಾಗಿ ಇರಲೆಂದು ಬಯಸಿನೇ, ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಸಿನಿಮಾಗಳನ್ನ ರಿಲೀಸ್ ಮಾಡೋಕೆ ಮಹೂರ್ತದ ದಿನವೇ ಎಷ್ಟೋ ನಿರ್ಮಾಪಕರು ದಿನಾಂಕ ಫಿಕ್ಸ್ ಮಾಡಿರುತ್ತಾರೆ. ಈ ವರ್ಷದ ವರಮಹಾಲಕ್ಷ್ಮಿ ಹಬ್ಬಕ್ಕೆ ಸಹ 9 ಕನ್ನಡ ಚಿತ್ರಗಳು ಲಕ್ಷ್ಮಿ ಆಶೀರ್ವಾದ ಬಯಸಿ ಚಿತ್ರಮಂದಿರಕ್ಕೆ ಬಂದಿವೆ.

ಇನ್ನು ಈ ಹಿಂದೆ ಸಹ ಸಾಕಷ್ಟು ಸಿನಿಮಾಗಳು ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಕಂಡಿವೆ. ಅದರಲ್ಲಿ ದ್ವಾರಕೀಶ್ ನಿರ್ಮಾಣದ 'ಆಪ್ತಮಿತ್ರ' ಪ್ರಮುಖ ಸಾಲಿನಲ್ಲಿ ನಿಲ್ಲುತ್ತೆ. ಈ ಸಿನಿಮಾ 2005ರ ವರಮಹಾಲಕ್ಷ್ಮಿ ಹಬ್ಬಕ್ಕೆ ಥಿಯೇಟರ್​ಗೆ ಬಂದಿತ್ತು.

'ಆಪ್ತಮಿತ್ರ' ಚಿತ್ರಕ್ಕೂ ಮುಂಚೆ ನಿರ್ಮಾಪಕ ದ್ವಾರಕೀಶ್ ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದು, ಸತತ ಸೋಲುಗಳಿಂದ ಕಂಗೆಟ್ಟಿದ್ದರು. 18 ವರ್ಷಗಳ ಕಾಲ ಒಂದೇ ಒಂದು ಗೆಲುವಿಗಾಗಿ ಪರಿತಪಿಸಿದ್ದರು. ಆದರೆ ಆಪ್ತಮಿತ್ರನಿಗೆ ವರಮಹಾಲಕ್ಷ್ಮಿ ಜೋರಾಗಿಯೇ ಒಲಿದಿದ್ದಳು. ದ್ವಾರಕೀಶ್ ಅವರ ಅಷ್ಟೂ ವರ್ಷಗಳ ಕಷ್ಟವನ್ನ ಮನೆಯಿಂದ ಓಡಿಸಿದ್ದಳು.

'ಆಪ್ತಮಿತ್ರ' ಚಿತ್ರದ ಯಶಸ್ಸಿನ ನಂತರ ದ್ವಾರಕೀಶ್ ಚಿತ್ರಕ್ಕೂ ಈ ಹಬ್ಬಕ್ಕೂ ಅದೇನೋ ಕನೆಕ್ಷನ್ ಬೆಳೆದುಬಿಟ್ಟಿತ್ತು. ದ್ವಾರಕೀಶ್ ಯಾವುದೇ ಚಿತ್ರ ಮಾಡಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಮಾಡುವುದಕ್ಕೆ ಫಿಕ್ಸಾಗಿ ಬಿಟ್ಟರು.

ಅದರಂತೆ ಆಪ್ತಮಿತ್ರ ನಂತರ ಬಂದ ಸುದೀಪ್ ಅಭಿನಯದ `ಒನ್‍ಟುತ್ರಿ ವಿಷ್ಣುವರ್ಧನ' ಚಿತ್ರವನ್ನ ವರಮಹಾಲಕ್ಷ್ಮಿ ಹಬ್ಬಕ್ಕೆ ಶತಾಯಗತಾಯ ತೆರೆಗೆ ತರುವ ಪ್ರಯತ್ನ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಚಿತ್ರ ಒಂದೆರಡು ತಿಂಗಳು ಲೇಟಾಗಿ ಬಿಡುಗಡೆಯಾಗಿತ್ತು ಅನ್ನೋದು ಬೇರೆ ವಿಷಯ.

ಇನ್ನು 'ಚಾರುಲತಾ' ಚಿತ್ರವನ್ನ ಸಹ ವರಮಹಾಲಕ್ಷ್ಮಿ ಹಬ್ಬದ ದಿನ ತೆರೆಕಾಣಿಸೋ ಪ್ರಯತ್ನದಲ್ಲಿ ವಿಫಲವಾಗಿದ್ದರು. ಆದರೆ 'ಆಟಗಾರ' ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನವೇ ತೆರಕಂಡು ಭರ್ಜರಿ ಯಶಸ್ಸು ಕಂಡಿತ್ತು. ಇನ್ನು ಜೋಗಿ ಪ್ರೇಮ್ ಅವರಿಗೂ ಸಹ ವರಮಹಾಲಕ್ಷ್ಮಿ ಹಬ್ಬದ ಸೆಂಟಿಮೆಂಟ್ ಇದೆ. ಅದಕ್ಕೆ ಕಾರಣವೂ ಇದೆ. ಪ್ರೇಮ್ ನಿರ್ದೇಶನದ `ಜೋಗಿ' ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಿತ್ತು.. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿತ್ತು.

ಜೋಗಿ ನಂತರ ಪ್ರೇಮ್ ವರಮಹಾಲಕ್ಷ್ಮಿಯನ್ನ ವಿಶೇಷವಾಗಿ ಆರಾಧಿಸಲು ಶುರು ಮಾಡಿಬಿಟ್ಟರು. ವರಮಹಾಲಕ್ಷ್ಮಿ ಹಬ್ಬದ ದಿನ ಏನಾದರೊಂದು ಸಿನಿಮಾ ಕಾರ್ಯಕ್ರಮ ಇಟ್ಟುಕೊಳ್ಳೋ ಪ್ರತಿತಿ ಶುರು ಮಾಡಿಕೊಂಡರು. ಪುನೀತ್ ಜೊತೆಗಿನ ರಾಜ್ ದಿ ಶೋಮ್ಯಾನ್, ಶಿವಣ್ಣನ ನೂರನೇ ಚಿತ್ರ 'ಜೋಗಯ್ಯ' ಚಿತ್ರಗಳನ್ನ ವರಮಹಾಲಕ್ಷ್ಮಿ ಹಬ್ಬದ ದಿನವೇ ತೆರೆಗೆ ತಂದಿದ್ದು ವಿಶೇಷ. ಇನ್ನು ಇಂದು ಸಹ ಪ್ರೇಮ್ ಮನೆಯಲ್ಲಿ ಹಬ್ಬದ ಪೂಜೆ ಜೋರಾಗಿದ್ದು, ಪೂಜೆ ಮುಗಿಸಿ ದುಬೈಗೆ ತೆರಳಲಿದ್ದಾರೆ. ಸಂಜೆ ವರಮಹಾಲಕ್ಷ್ಮಿ ಹಬ್ಬದ ದಿನದಂದೇ 'ದಿ ವಿಲನ್' ಚಿತ್ರದ ಆಡಿಯೋ ರಿಲೀಸಾಗಲಿದೆ.

ಹಾಗಂತ ವರಮಹಾಲಕ್ಷ್ಮಿ ಹಬ್ಬದ ದಿನ ಸಿನಿಮಾ ತೆರೆಗೆ ತಂದರೆ ಸೂಪರ್ ಹಿಟ್ ಆಗೇ ಆಗುತ್ತೆ ಅಂತೇನಲ್ಲ. ಯಾವುದೇ ಸಿನಿಮಾ, ಯಾವುದೋ ದಿನ ತೆರೆ ಕಂಡಿತು ಅನ್ನೋ ಕಾರಣಕ್ಕೆ ಹಿಟ್ ಆಗಲ್ಲ. ವಿಷಯ ಚೆನಾಗಿದ್ದರೆ ಯಾವ ದಿನ ರಿಲೀಸಾದರೂ ಸಿನಿಮಾ ಹಿಟ್ ಆಗುತ್ತೆ. ಆದರೆ ಹಬ್ಬದ ದಿನ ರಜೆ ಇರುತ್ತೆ, ಜನ ಥಿಯೇಟರ್​ಗೆ ಬರುತ್ತಾರೆ. ಹೀಗಾಗಿ ಯಾವುದೇ ಹಬ್ಬಗಳಿಗೆ ಸಿನಿಮಾಗಳು ರಿಲೀಸಾಗಲಿ ಓಪನಿಂಗ್ ಅಂತೂ ಚೆನಾಗಿ ಸಿಗುತ್ತೆ. ಅದರ ಮೇಲೆ ಫಿಲಂ ಚೆನಾಗಿದ್ದರೆ ಸೂಪರ್ ಹಿಟ್ ಆಗುತ್ತವೆ ಅಷ್ಟೆ.

 

 

 

 
First published:August 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ