ನಾವು ಬಿದ್ದಾಗ ಅವ್ರು ಹತ್ರದಲ್ಲೇ ಇದ್ರು: ನಾಯಕ ಅಜಯ್ ರಾವ್ ಹೇಳಿಕೆ ನಿರಾಕರಿಸಿದ ಗಾಯಾಳು ಫೈಟರ್

ನಾವು ಕೆಳಗೆ ಬಿದ್ದಾಗ ಅವರು (ನಾಯಕನಟ ಅಜೇಯ್ ರಾವ್) 10-15 ಮೀಟರ್ ದೂರದಲ್ಲೇ ಇದ್ದರು. ಸಹಾಯಕ್ಕೆ ಬರದೇ ಸುಮ್ಮನೆ ನೋಡಿಕೊಂಡು ಕೂತಿದ್ದರು ಎಂದು ಗಾಯಾಳು ಸ್ಟಂಟ್​ಮ್ಯಾನ್ ರಂಜಿತ್ ಹೇಳಿದ್ದಾರೆ.

ಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣ ವೇಳೆ ಗಾಯಗೊಂಡ ಫೈಟರ್ ರಂಜಿತ್

ಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣ ವೇಳೆ ಗಾಯಗೊಂಡ ಫೈಟರ್ ರಂಜಿತ್

 • Share this:
  ಬೆಂಗಳೂರು: ದುರಂತ ಘಟನೆ ನಡೆದಾಗ ನಾನು ಸ್ಪಾಟ್​ನಲ್ಲಿ ಇರಲಿಲ್ಲ. ನಾನು ಅಲ್ಲಿ ಇದ್ದಿದ್ದರೆ ಎಚ್ಚರಿಕೆ ವಹಿಸುವಂತೆ ಹೇಳುತ್ತಿದ್ದೆ ಎಂದು ಲವ್ ಯೂ ರಚ್ಚು ಚಿತ್ರದ ನಾಯಕನಟ ಅಜಯ್ ರಾವ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಯಾಳು ಫೈಟರ್ ರಂಜಿತ್ ನಾಯಕನಟನ ಹೇಳಿಕೆಯನ್ನ ತಳ್ಳಿಹಾಕಿದ್ದಾರೆ. ಆಸ್ಪತ್ರೆಯಲ್ಲಿ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಫೈಟರ್ ರಂಜಿತ್, ತಾನು ಪೆಟ್ಟಾಗಿ ಬಿದ್ದಾಗ ಹೀರೋ ಅಲ್ಲೇ 10-15 ಮೀಟರ್ ದೂರದಲ್ಲೇ ಇದ್ದರು. ನನ್ನ ಸಹಾಯಕ್ಕೆ ಬರದೇ ಸುಮ್ಮನೆ ನೋಡುತ್ತಾ ಕೂತಿದ್ದರು. ಘಟನೆ ಸ್ಥಳದಲ್ಲಿ ತಾನು ಇರಲಿಲ್ಲ ಅಂತ ಮಾಧ್ಯಮದ ಮುಂದೆ ಯಾಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಅಜಯ್ ರಾವ್ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

  ನಿನ್ನೆ ಬಿಡದಿಯಲ್ಲಿ ಲವ್ ಯೂ ರಚ್ಚು ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಅವಘಡ ಸಂಭವಿಸಿ ವಿವೇಕ್ ಎಂಬ ಫೈಟರ್ ಸಾವನ್ನಪ್ಪಿದ್ದರು. ಮತ್ತೊಬ್ಬ ಫೈಟರ್ ರಂಜಿತ್ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿದ್ದಾರೆ. ಮೆಟಲ್ ರೋಪ್ ಬಳಸಿ ಸಾಹಸ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಕ್ರೇನ್ ಆಕಸ್ಮಿಕವಾಗಿ ಹೈ ಟೆನ್ಷನ್ ವೈರ್​ಗೆ ತಾಕಿದ ಪರಿಣಾಮ ಇಬ್ಬರು ಫೈಟರ್​ಗಳಿಗೆ ಶಾಕ್ ಹೊಡೆದಿದೆ. ವಿವೇಕ್ ಈ ಸಂದರ್ಭದಲ್ಲಿ ಮೆಟಲ್ ರೋಪ್ ಎಳೆಯುತ್ತಿದ್ದರೆನ್ನಲಾಗಿದೆ. ಈ ಘಟನೆ ಬಗ್ಗೆ ನಾಯಕನಟ ಅಜಯ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದರು. ಸರಿಯಾದ ಮುಂಜಾಗ್ರತೆ ಇಲ್ಲದೇ ಚಿತ್ರೀಕರಣ ನಡೆಯುತ್ತಿತ್ತೆಂದು ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

  ಮೆಟಲ್ ರೋಪ್ ಬಳಕೆಯಿಂದ ಈ ದುರಂತ ಸಂಭವಿಸಿದೆ. ಸಾಹಸ ದೃಶ್ಯ ಚಿತ್ರೀಕರಣ ವೇಳೆ ಮುಂಜಾಗ್ರತೆ ವಹಿಸಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಹೀಗಾಗಿ ಎಲ್ಲದರಲ್ಲೂ ಮೂಗು ತೂರಿಸುತ್ತೇನೆಂದು ದೂರುತ್ತಾರೆ. ಮೆಟಲ್ ರೋಪ್ ಬಳಸಬಾರದು ಎಂದು ಹೇಳಿ ನಾನು ಕೆಟ್ಟವನಾಗಿ ಹೋಗಿದ್ದೆ. ಈಗ ದುರಂತ ಆಗಿ ಹೋಗಿದೆ. ಮೃತ ವಿವೇಕ್​ಗೆ ನ್ಯಾಯ ಸಿಗುವವರೆಗೂ ಶೂಟಿಂಗ್​ಗೆ ಹೋಗುವುದಿಲ್ಲ ಎಂದು ಅಜಯ್ ರಾವ್ ಹೇಳಿದ್ದರು.

  ಇದನ್ನೂ ಓದಿ: ಚಿತ್ರತಂಡದ ಮೇಲೆ ನಾಯಕ ಅಜಯ್ ರಾವ್ ಗಂಭೀರ ಆರೋಪ: ನ್ಯಾಯ ಸಿಗುವವರೆಗೂ ಶೂಟಿಂಗ್‌ಗೆ ಹೋಗದಿರಲು ನಿರ್ಧಾರ

  ಈ ಪ್ರಕರಣದಲ್ಲಿ ಪೊಲೀಸರು ಚಿತ್ರದ ನಿರ್ದೇಶಕ ಶಂಕರ್ ರಾಜು, ಸ್ಟಂಟ್ ಮಾಸ್ಟರ್ ವಿನೋದ್, ಶೂಟಿಂಗ್ ಸ್ಪಾಟ್​ನ ಜಮೀನು ಮಾಲೀಕ ಪುಟ್ಟರಾಜು ಹಾಗೂ ಕ್ರೇನ್ ಚಾಲಕ ಮುನಿಯಪ್ಪ ಈ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂದು ಬಿಡದಿ ಠಾಣೆಯಲ್ಲಿ ಮೃತ ವಿವೇಕ್ ಕುಟುಂಬದವರಿಂದ ದೂರು ದಾಖಲಾಗುವ ಸಾಧ್ಯತೆ ಇದೆ.

  ಸ್ಟಂಟ್ ಮಾಸ್ಟರ್ ವಿನೋದ್ ಅವರ ಬೇಜವಾಬ್ದಾರಿತನದಿಂದ ಈ ಘಟನೆ ಆಗಿ ಹೋಗಿದೆ ಎಂಬಂತಹ ದೂರುಗಳು ಕೇಳಿಬರುತ್ತಿವೆ. ಆದರೆ, ಗಾಯಗೊಂಡಿರುವ ಫೈಟರ್ ರಂಜಿತ್ ಅವರು ಈ ಅಭಿಪ್ರಾಯಗಳನ್ನ ತಳ್ಳಿಹಾಕಿದ್ದಾರೆ. ಸ್ಟಂಟ್ ಮಾಸ್ಟರ್ ಜೊತೆ ಏಳೆಂಟು ವರ್ಷಗಳಿಂದ ತಾನು ಕೆಲಸ ಮಾಡುತ್ತಿದ್ದೇನೆ. ಅವರಷ್ಟು ಕೇರ್ ಮಾಡುವ ಮಾಸ್ಟರ್ ಅನ್ನು ನಾನು ನೋಡಿಯೇ ಇಲ್ಲ. ಅವರ ಬಗ್ಗೆ ಊಹಾಪೋಹ ಹರಿದಾಡುತ್ತಿರುವುದನ್ನು ನಾನು ಒಪ್ಪಲ್ಲ. ಕ್ರೇನ್ ಆಪರೇಟರ್ ಮಿಸ್ಟೇಕ್​ನಿಂದ ಮಾತ್ರ ಈ ಘಟನೆ ಆಗಿದೆ. ಅದು ಬಿಟ್ಟರೆ ಬೇರೆ ಯಾರೂ ಇದಕ್ಕೆ ಹೊಣೆಯಲ್ಲ ಎಂದು ರಂಜಿತ್ ಹೇಳಿದ್ದಾರೆ.

  ನಾಲ್ಕು ವರ್ಷಗಳ ಹಿಂದೆ ಇಂಥದ್ದೇ ಒಂದು ದುರಂತ ಘಟನೆ ಸ್ಯಾಂಡಲ್​ವುಡ್ ಅನ್ನು ಬೆಚ್ಚಿಬೀಳಿಸಿತ್ತು. ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಕ್ರೇನ್​ನಿಂದ ಕೆರೆಗೆ ಬಿದ್ದು ಉದಯ್ ಮತ್ತು ಅನಿಲ್ ಎಂಬ ಪ್ರತಿಭಾನ್ವಿತ ಖಳ ನಟರು ಸಾವನ್ನಪ್ಪಿದ್ದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: