Phantom: ಹೇಗೆ ನಡೆಯುತ್ತಿದೆ ಫ್ಯಾಂಟಮ್ ಶೂಟಿಂಗ್? ಕಿಚ್ಚನ ಧೈರ್ಯಕ್ಕೊಂದು ಸಲಾಮ್!

Kiccha Sudeep:ವಿಶೇಷ ಅಂದರೆ ಶೂಟಿಂಗ್ ಸೆಟ್​​ನಲ್ಲಿ ಉಪಯೋಗಿಸಲಾಗುವ ಪ್ರತಿಯೊಂದು ಕ್ಯಾಮರಾ, ಜಿಮಿಜಿಪ್, ಲೈಟಿಂಗ್ ಸೆಟ್ ಸೇರಿದಂತೆ ಎಲ್ಲಾ ಎಕ್ವಿಪ್ಮೆಂಟ್​​ಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ. ಆ ಬಳಿಕವಷ್ಟೇ ಚಿತ್ರೀಕರಣ ಶುರು. ಅದಕ್ಕೆಂದೇ ಒಂದು ತಂಡವನ್ನೇ ಇರಿಸಿದ್ದಾರೆ ಕಿಚ್ಚ.

news18-kannada
Updated:July 26, 2020, 8:20 PM IST
Phantom: ಹೇಗೆ ನಡೆಯುತ್ತಿದೆ ಫ್ಯಾಂಟಮ್ ಶೂಟಿಂಗ್? ಕಿಚ್ಚನ ಧೈರ್ಯಕ್ಕೊಂದು ಸಲಾಮ್!
ಕಿಚ್ಚ ಸುದೀಪ್
  • Share this:
ಕಳೆದ ನಾಲ್ಕು ತಿಂಗಳಿನಿಂದ ಇಡೀ ವಿಶ್ವವೇ ಕೊರೋನಾ ಅಟ್ಟಹಾಸಕ್ಕೆ ಸಿಲುಕಿ ನಲುಗಿದೆ. ಭಾರತದಲ್ಲೂ ಕೊವಿಡ್-19 ಅಟ್ಟಹಾಸ ಮಿತಿಮೀರಿದೆ. ಕರ್ನಾಟಕದಲ್ಲೂ ಮಹಾಮಾರಿಗೆ ಸಿಲುಕಿದವರ ಸಂಖ್ಯೆ 1 ಲಕ್ಷದ ಗಡಿಯತ್ತ ಸಾಗಿದೆ. ಹೀಗಾಗಿಯೇ ಚಿತ್ರರಂಗದ ಬಹುತೇಕ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸಿನಿಮಾ ಕೆಲಸಗಳಿಗೂ ಕೊಂಚ ರಿಲೀಫ್ ನೀಡಿತ್ತು. ಧಾರಾವಾಹಿಗಳ ಶೂಟಿಂಗ್​ಗೆ ಅನುಮತಿ ನೀಡೋದರ ಜೊತೆ ಜೊತೆಗೆ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಹಾಗೂ ಅರ್ಧಕ್ಕೆ ನಿಂತ ಶೂಟಿಂಗ್ ಕಂಪ್ಲೀಟ್ ಮಾಡಲು ಅನುಮತಿ ನೀಡಿತ್ತು. ಆದರೆ ಕೊರೋನಾಗೆ ಹೆದರಿ ಬಹುತೇಕ ಮಂದಿ ಮನೆಯಲ್ಲೇ ಉಳಿದರು, ಮತ್ತೆ ಶೂಟಿಂಗ್ ಶುರು ಮಾಡುವ ಧೈರ್ಯ ಯಾರೂ ಮಾಡಲಿಲ್ಲ.

ಆದರೆ ಧೈರ್ಯ ಮಾಡಿದ ಸ್ಯಾಂಡಲ್​ವುಡ್​ ಬಾದ್ಶಾ ಕಿಚ್ಚ ಸುದೀಪ್ ‘ಫ್ಯಾಂಟಮ್’ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಅದೂ 10, 20 ಮಂದಿಯಲ್ಲ, ಬರೋಬ್ಬರಿ 250 ಜನರ ಬೃಹತ್ ತಂಡದೊಂದಿಗೆ ಹೈದರಾಬಾದ್​​ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಅನ್ನಪೂರ್ಣ ಸ್ಟುಡಿಯೋನ ಮೂರು ಮಹಡಿಗಳಲ್ಲೂ ಒಂದೊಂದು ಬೃಹತ್ ಸೆಟ್ ನಿರ್ಮಿಸಲಾಗಿದೆ. ಒಂದರಲ್ಲಿ ದಟ್ಟ ಕಾಡು, ಮತ್ತೊಂದರಲ್ಲಿ ಅರಣ್ಯದ ನಡುವೆ ಹರಿವ ಝರಿ ಇನ್ನೊಂದರಲ್ಲಿ ಅರಣ್ಯದ ಮಧ್ಯೆ ಇರುವ ಒಂದು ಕುಗ್ರಾಮ.

ಹೀಗೆ ತಲಾ 12 ಸಾವಿರ ಚದರ ಅಡಿ ಜಾಗದ ಮೂರೂ ಫ್ಲೋರ್​​ಗಳಲ್ಲಿ ಬರೋಬ್ಬರಿ 4 ಕೋಟಿ ರೂಪಾಯಿಗಿಂತ ಹೆಚ್ಚು ಬಜೆಟ್​​ನಲ್ಲಿ  ಈ ಸೆಟ್​​ಗಳನ್ನು ನಿರ್ಮಿಸಲಾಗಿದೆ.

ವಿಶೇಷ ಅಂದರೆ ಶೂಟಿಂಗ್ ಸೆಟ್​​ನಲ್ಲಿ ಉಪಯೋಗಿಸಲಾಗುವ ಪ್ರತಿಯೊಂದು ಕ್ಯಾಮರಾ, ಜಿಮಿಜಿಪ್, ಲೈಟಿಂಗ್ ಸೆಟ್ ಸೇರಿದಂತೆ ಎಲ್ಲಾ ಎಕ್ವಿಪ್ಮೆಂಟ್​​ಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ. ಆ ಬಳಿಕವಷ್ಟೇ ಚಿತ್ರೀಕರಣ ಶುರು. ಅದಕ್ಕೆಂದೇ ಒಂದು ತಂಡವನ್ನೇ ಇರಿಸಿದ್ದಾರೆ ಕಿಚ್ಚ. ಜೊತೆಗೆ ಸಮೀಪದಲ್ಲೇ ಕಿಚ್ಚನಿಗೂ ವಿಶ್ರಾಂತಿಗಾಗಿ ಜಾಗ ನಿಗದಿಪಡಿಸಲಾಗಿದೆ. ಅಲ್ಲಿಯೇ ವರ್ಕೌಟ್ ಮಾಡುವ ಬಾದ್ಶಾ, ನಿರ್ದೇಶಕ ಅನೂಪ್ ಭಂಡಾರಿ ಜತೆ ಮುಂದಿನ ಸೀನ್​ಗಳ ಬಗ್ಗೆ ಡಿಸ್ಕಸ್ ಕೂಡ ಮಾಡುತ್ತಾರೆ.

ಕಿಚ್ಚ ಸುದೀಪ್


ಇನ್ನು ಕೊರೋನಾ ಮಹಾಮಾರಿ ವಿರುದ್ಧ ಸೆಟ್​​ನಲ್ಲಿ ಹಲವಾರು ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನ ವಹಿಸಲಾಗಿದೆ. ಸೆಟ್​ಗೆ ಬರುವ ಮುನ್ನ ಎಲ್ಲರ ಬಾಡಿ ಟೆಂಪರೇಚರ್ ಪರೀಕ್ಷಿಸಲಾಗುತ್ತೆ. ಅಲ್ಲಿಯೇ ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಗುತ್ತೆ. ಪ್ರತಿಯೊಬ್ಬರಿಗೂ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಕಡ್ಡಾಯ. ಆ ಬಳಿಕವಷ್ಟೇ ಎಲ್ಲರಿಗೂ ಸೆಟ್​ಗೆ ಪ್ರವೇಶ. ಮಾಸ್ಕ್ ಧರಿಸದಿದ್ದರೆ ಅಥವಾ ಬಾಡಿ ಟೆಂಪರೇಚರ್ ಸ್ವಲ್ಪ ಹೆಚ್ಚಿದ್ದರೂ ಅಂತಹವರಿಗೆ ಸೆಟ್ ಒಳಗೆ ಬರುವಂತಿಲ್ಲ. ಮಾತ್ರವಲ್ಲದೆ ಸೆಟ್​ನ ಕೆಲ ಭಾಗಗಳಲ್ಲಿ ಕೈ ತೊಳೆದುಕೊಳ್ಳಲು ಸಿಂಕ್​ಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಮಾತ್ರವಲ್ಲ ಊಟ, ತಿಂಡಿಗಾಗಿಯೇ ಸೆಪರೇಟ್ ಜಾಗ ನಿಗದಿಪಡಿಸಲಾಗಿದೆ. ಅಲ್ಲೂ ಒಂದು ಚೇರ್​ನಿಂದ ಮತ್ತೊಂದು ಚೇರ್ ನಡುವೆ 5 ಅಡಿ ಅಂತರವಿರುತ್ತೆ. ಸೆಟ್ಆಗಲೀ ಅಥವಾ ಊಟ ಮಾಡುವ ಜಾಗವೇ ಆಗಿರಲಿ, ಎಲ್ಲೆಡೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ಯಾರೂ ಹ್ಯಾಂಡ್ ಶೇಕ್ ಮಾಡುವಂತಿಲ್ಲ ಎಂದು ಸೆಟ್​ನ ಹೊರಗೇ ಸೈನ್ ಬೋರ್ಡ್ ಅನ್ನು ಹಾಕಲಾಗಿದೆ. ಹಾಗೆಯೇ ಚಿತ್ರತಂಡದ ಅಷ್ಟೂ ಸದಸ್ಯರ ಬಟ್ಟೆಗಳನ್ನು ಒಗೆದು, ಒಣಗಿಸಿ, ಐರನ್ ಮಾಡಲೆಂದೇ ಸೆಟ್​ನಲ್ಲಿಯೇ ಕೆಲಸಗಾರರು ಹಾಗೂ ಜಾಗವನ್ನು ನಿಗದಿಪಡಿಸಲಾಗಿದೆ. ಫ್ಯಾಂಟಮ್ ಟೀಂಗೆ ಚಿತ್ರತಂಡದ ಆರೋಗ್ಯವೇ ಮೊದಲ ಆದ್ಯತೆ. ಹೀಗಾಗಿಯೇ  ಶೂಟಿಂಗ್ ಸ್ಪಾಟ್​​ನಲ್ಲೇ ಚಿತ್ರತಂಡ ಒಂದು ನರ್ಸಿಂಗ್ ಸ್ಟೇಷನ್​ ಅನ್ನು ಸ್ಥಾಪಿಸಿದೆ. ಏನೇ ಆರೋಗ್ಯ ಸಮಸ್ಯೆ ಆದರೂ ಚಿತ್ರತಂಡದವರು ವೈದ್ಯರನ್ನು ಭೇಟಿಯಾಗಬಹುದು.

ಹೀಗೆ ಫ್ಯಾಂಟಮ್ ಚಿತ್ರತಂಡ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೆಲ ದಿನಗಳಿಂದ ಶೂಟಿಂಗ್ ನಡೆಸುತ್ತಿದೆ. ಆ ಮೂಲಕ ಕೊರೋನಾ ಭಯದಲ್ಲಿರುವ ಸಿನಿಮಾ ತಂಡಗಳಲ್ಲಿ ಧೈರ್ಯ ತುಂಬಿದೆ, ಮಾದರಿಯಾಗಿದೆ.
Published by: Harshith AS
First published: July 26, 2020, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading