ಶಿವಣ್ಣನ ಅಭಿಮಾನಿಗಳಿಗೆ ಸಿಹಿಸುದ್ದಿ; ಜನುಮದ ಜೋಡಿ ರಿಲೀಸ್ ದಿನವೇ ತೆರೆಕಾಣಲಿದೆ ಆಯುಷ್ಮಾನ್​ಭವ

Ayushman Bhava Movie: ಆಯುಷ್ಮಾನ್​ಭವ ಸಿನಿಮಾ ರಿಲೀಸ್ ಆಗುತ್ತಿರುವ ನ. 15ರಂದೇ ಶಿವರಾಜ್​ಕುಮಾರ್​ಗೆ ದೊಡ್ಡ ಬ್ರೇಕ್ ನೀಡಿದ್ದ ಜನುಮದ ಜೋಡಿ ಸಿನಿಮಾ ಕೂಡ ರಿಲೀಸ್ ಆಗಿತ್ತು ಎಂಬುದು ವಿಶೇಷ. 1996ರ ನ. 15ರಂದು ತೆರೆಕಂಡಿದ್ದ ಜನುಮದ ಜೋಡಿ ಸಿನಿಮಾದಲ್ಲೂ ಶಿವಣ್ಣನ ಹೆಸರು ಕೃಷ್ಣ ಎಂದೇ ಇತ್ತು.

Sushma Chakre | news18-kannada
Updated:November 8, 2019, 5:39 PM IST
ಶಿವಣ್ಣನ ಅಭಿಮಾನಿಗಳಿಗೆ ಸಿಹಿಸುದ್ದಿ; ಜನುಮದ ಜೋಡಿ ರಿಲೀಸ್ ದಿನವೇ ತೆರೆಕಾಣಲಿದೆ ಆಯುಷ್ಮಾನ್​ಭವ
ಶಿವರಾಜ್​ಕುಮಾರ್ ನಟನೆಯ ಆಯುಷ್ಮಾನ್​ಭವ ಪೋಸ್ಟರ್
  • Share this:
ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಕೈಲೀಗ ಸಾಲು ಸಾಲು ಸಿನಿಮಾಗಳು. 'ದಿ ವಿಲನ್' ಯಶಸ್ಸಿನ ನಂತರ ತೆರೆಕಂಡ 'ಕವಚ' ಮತ್ತು 'ರುಸ್ತುಂ' ಸಿನಿಮಾಗಳು ಅಷ್ಟೇನೂ ಸದ್ದು ಮಾಡಲಿಲ್ಲ. ಆದರೂ ಶಿವಣ್ಣನ ಕೈಯಲ್ಲಿ ಈಗ 5 ಸಿನಿಮಾಗಳಿವೆ. ಪಿ. ವಾಸು ನಿರ್ದೇಶಿಸಿರುವ 'ಆಯುಷ್ಮಾನ್​ಭವ' ಮುಂದಿನ ವಾರ ತೆರೆಗೆ ಬರುವುದು ಪಕ್ಕಾ ಆಗಿದೆ. ಈ ಮೂಲಕ ಚಿತ್ರತಂಡ ಶಿವಣ್ಣನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ಶಿವರಾಜ್​ಕುಮಾರ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ 'ಆಯುಷ್ಮಾನ್​ಭವ' ಸಿನಿಮಾ ಕಳೆದ ವಾರವೇ ತೆರೆಕಾಣಬೇಕಿತ್ತು. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದೇ ಈ ಸಿನಿಮಾವನ್ನು ತೆರೆಗೆ ತರಲಾಗುವುದು ಎಂದು ಚಿತ್ರತಂಡ ಆರಂಭದಲ್ಲಿ ಹೇಳಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು.

ಇದೀಗ ಸಿನಿಮಾದ ಬಿಡುಗಡೆಯ ದಿನಾಂಕವನ್ನು 'ಆಯುಷ್ಮಾನ್​ಭವ' ಚಿತ್ರತಂಡ ಘೋಷಿಸಿದೆ. ಅನಂತ್​ನಾಗ್, ಸಾಧುಕೋಕಿಲ, ಸುಹಾಸಿನಿ, ರಂಗಾಯಣ ರಘು, ನಿಧಿ ಸುಬ್ಬಯ್ಯ, ಅವಿನಾಶ್, ರಾಜೇಶ್ ನಟರಂಗ ಮುಂತಾದ ಕಲಾವಿದರು ನಟಿಸಿರುವ 'ಆಯುಷ್ಮಾನ್​ಭವ' ಟ್ರೈಲರ್ ಮೆಚ್ಚುಗೆ ಗಳಿಸಿತ್ತು. 'ಆಪ್ತಮಿತ್ರ', 'ಆಪ್ತರಕ್ಷಕ', 'ದೃಶ್ಯ', 'ಶಿವಲಿಂಗ' ಮುಂತಾದ ಸಸ್ಪೆನ್ಸ್​ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಪಿ. ವಾಸು 'ಶಿವಲಿಂಗ' ಸಿನಿಮಾ ಬಳಿಕ ಮತ್ತೊಮ್ಮೆ ಶಿವರಾಜ್​ಕುಮಾರ್​ಗೆ ಆ್ಯಕ್ಷನ್- ಕಟ್ ಹೇಳಿದ್ದಾರೆ.


ಜನುಮದ ಜೋಡಿಗೂ ಆಯುಷ್ಮಾನ್​ಭವಕ್ಕೂ ನಂಟು:

ಅದಕ್ಕೂ ವಿಶೇಷವಾದ ಸುದ್ದಿಯೊಂದನ್ನು ಶಿವರಾಜ್​ಕುಮಾರ್ ಅಭಿಮಾನಿಗಳು ಪತ್ತೆಹಚ್ಚಿದ್ದಾರೆ. 'ಆಯುಷ್ಮಾನ್​ಭವ' ಸಿನಿಮಾ ರಿಲೀಸ್ ಆಗುತ್ತಿರುವ ನ. 15ರಂದೇ ಶಿವರಾಜ್​ಕುಮಾರ್​ಗೆ ದೊಡ್ಡ ಬ್ರೇಕ್ ನೀಡಿದ್ದ 'ಜನುಮದ ಜೋಡಿ' ಸಿನಿಮಾ ಕೂಡ ರಿಲೀಸ್ ಆಗಿತ್ತು ಎಂಬುದೇ ವಿಶೇಷ. 1996ರ ನ. 15ರಂದು ತೆರೆಕಂಡಿದ್ದ 'ಜನುಮದ ಜೋಡಿ' ಸಿನಿಮಾದಲ್ಲೂ ಶಿವಣ್ಣನ ಹೆಸರು ಕೃಷ್ಣ ಎಂದೇ ಇತ್ತು. ಈ ಹಿನ್ನೆಲೆಯಲ್ಲಿ  'ಜನುಮದ ಜೋಡಿ' ಸಿನಿಮಾದಂತೆ 'ಆಯುಷ್ಮಾನ್​ಭವ' ಸಿನಿಮಾ ಕೂಡ ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.


ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ 'ಆಯುಷ್ಮಾನ್​ಭವ' ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ. ಬೆಂಗಳೂರು, ಗೌರಿಬಿದನೂರು, ಅಲೆಪ್ಪಿ, ಚಾಲ್‍ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಿರ್ದೇಶಕ ವಿ.ವಾಸು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ.

 

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ