Miss Universe: ಕ್ರೀಡಾಪಟುಗಳಂತೆ ಸೌಂದರ್ಯ ಸ್ಪರ್ಧೆ ವಿಜೇತರನ್ನು ಏಕೆ ಪ್ರಶಂಸಿಸುವುದಿಲ್ಲ? ಹರ್ನಾಜ್ ಪ್ರಶ್ನೆಗೆ ನಿಮ್ಮ ಉತ್ತರವೇನು?

ನನಗೆ ಸಾಮಾನ್ಯ ನಟಿ ಆಗಲು ಇಷ್ಟ ಇಲ್ಲ ನಾನು ತುಂಬಾ ಪ್ರಭಾವಶಾಲಿಗಳಾಗಿ ಜಾಣ ಮತ್ತು ಸ್ಪೂರ್ತಿದಾಯಕರಾಗಿ ಸಿದ್ಧ ಸೂತ್ರಗಳನ್ನು ಮುರಿಯುವವರಲ್ಲಿ ಒಬ್ಬಳಾಗಲು ಬಯಸುತ್ತೇನೆ ಎಂದು ಹರ್ನಾಜ್ ಹೇಳಿದ್ದಾರೆ

ಹರ್ನಾಜ್ ಸಂಧು

ಹರ್ನಾಜ್ ಸಂಧು

  • Share this:
ಭಾರತಕ್ಕೆ ಮತ್ತೆ ಭುವನ ಸುಂದರಿ ಪಟ್ಟ ಗೆದ್ದು ತಂದ ಹರ್ನಾಜ್ ಸಂಧು, (Harnaaz Sandhu) ಆ ಕುರಿತು ಹಗುರವಾಗಿ ಮಾತನಾಡಿರುವ ಜನರಿಗೆ ಉತ್ತರ ನೀಡಿದ್ದಾರೆ. ಭುವನ ಸುಂದರಿ (Miss Universe )2021 ಸ್ಪರ್ಧೆಯನ್ನು , ಕೇವಲ ತನ್ನ ‘ಸುಂದರ ಮುಖ’ದ ( Beautiful Face) ಕಾರಣದಿಂದ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿರುವ ಜನರಿಗೆ ಹರ್ನಾಜ್ ಪ್ರತಿಕ್ರಿಯೆ ನೀಡಿದ್ದು, ಆ ಗೆಲುವಿನ ಹಿಂದೆ ಸಾಕಷ್ಟು ಶ್ರಮವಿತ್ತು ಎಂದು ಹೇಳಿದ್ದಾರೆ. ಚಂಡೀಗಢ ಮೂಲದ (Chandigarh model ) ರೂಪದರ್ಶಿ - ನಟಿ ಹರ್ನಾಜ್ ಸಂಧು ಈ ತಿಂಗಳ ಆರಂಭದಲ್ಲಿ ಭುವನ ಸುಂದರಿ 2021 ಕಿರೀಟವನ್ನು ಗೆದ್ದರು. 2000ನೇ ಇಸವಿಯಲ್ಲಿ ಲಾರಾ ದತ್ತಾ (Laura Dutta ) ಭುವನ ಸುಂದರಿಯಾಗಿ ಆಯ್ಕೆಯಾಗಿದ್ದರು.

ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಪ್ರಶಂಸಿಸಲು ಏಕೆ ಸಾಧ್ಯವಿಲ್ಲ
ಹರ್ನಾಜ್ ಮಾಧ್ಯಮದ ಜೊತೆ ಮಾತನಾಡುತ್ತಾ, “ ನಾನು ಸುಂದರ ಮುಖ ಹೊಂದಿರುವುದರಿಂದ ಈ ಸ್ಪರ್ಧೆಯನ್ನು ಗೆದ್ದೆ ಎಂದು ಹೇಳುವ ಜನರು ಬಹಳಷ್ಟು ಮಂದಿ ಇದ್ದಾರೆ. ಆದರೆ, ಅದರ ಹಿಂದೆ ಪಟ್ಟ ಶ್ರಮ ಎಷ್ಟಿತ್ತೆಂದು ನನಗೆ ಗೊತ್ತು. ವಾದ ಮಾಡುವ ಬದಲು, ಅವರಿಗೆ ನಾನೇನೆಂದು ಸಾಬೀತು ಪಡಿಸಲು ಕಠಿಣ ಶ್ರಮ ಪಡುತ್ತೇನೆ. ಈ ರೂಢಮಾದರಿಯನ್ನು ನಾನು ಮುರಿಯಲು ಬಯಸುತ್ತೇನೆ.

ಇದನ್ನೂ ಓದಿ: Miss Universe: 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಭುವನ ಸುಂದರಿ ಪಟ್ಟ, ಮಿಸ್ ಯೂನಿವರ್ಸ್ ಆಗಿ ಹೊರ ಹೊಮ್ಮಿದ ಹರ್ನಾಜ್ ಸಂಧು

ಈ ಗೆಲುವು ಬಹುಪಾಲು ಒಂದು ಒಲಿಂಪಿಕ್ ಗೆಲುವಿನಂತೆಯೇ. ದೇಶವನ್ನು ಪ್ರತಿನಿಧಿಸುವ ಕ್ರೀಡಾ ಪಟುವನ್ನು ಪ್ರಶಂಸಿಸುತ್ತೇವೆ, ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಪ್ರಶಂಸಿಸಲು ಏಕೆ ಸಾಧ್ಯವಿಲ್ಲ. ಅದೇನೇ ಇದ್ದರೂ ಮನಸ್ಥಿತಿಗಳು ಬದಲಾಗುತ್ತಿವೆ, ಮತ್ತು ನಾನು ಈಗಾಗಲೇ ರೂಢಿಗತ ಮಾದರಿಯನ್ನು ಮುರಿಯುತ್ತಿರುವುದಕ್ಕೆ ಖುಷಿಯಾಗಿದ್ದೇನೆ” ಎಂದು ಹೇಳಿದರು.

ಸಾಮಾನ್ಯ ನಟಿ ಆಗಲು ಇಷ್ಟ ಇಲ್ಲ
ನಟನೆಯಲ್ಲೂ ತೊಡಗಿಕೊಳ್ಳುವ ಕುರಿತ ತಮ್ಮ ಆಸೆ ವ್ಯಕ್ತಪಡಿಸಿರುವ ಹರ್ನಾಜ್ ಸಂಧು, ಸಿನಿಮಾ ರಂಗದಲ್ಲಿನ ‘ರೂಢಿಗತ ಮಾದರಿಯನ್ನು’ ಕೂಡ ಮುರಿಯುವ ಬಯಕೆ ಹೊಂದಿದ್ದಾರೆ. ಅಲ್ಲಿ ವಿಭಿನ್ನ ಸಾಧನೆ ಮಾಡಬೇಕು ಎಂಬುವುದು ಅವರ ಆಸೆ. ನನಗೆ ಸಾಮಾನ್ಯ ನಟಿ ಆಗಲು ಇಷ್ಟ ಇಲ್ಲ. ನಾನು ತುಂಬಾ ಪ್ರಭಾವಶಾಲಿಗಳಾಗಿ, ಸಮರ್ಥ ಪಾತ್ರಗಳನ್ನು ಆರಿಸಿಕೊಂಡು, ಜಾಣ ಮತ್ತು ಸ್ಪೂರ್ತಿದಾಯಕರಾಗಿ, ಸಿದ್ಧ ಸೂತ್ರಗಳನ್ನು ಮುರಿಯುವವರಲ್ಲಿ ಒಬ್ಬಳಾಗಲು ಬಯಸುತ್ತೇನೆ” ಎಂದು ಹರ್ನಾಜ್ ಹೇಳಿದ್ದಾರೆ.

2 ಪ್ರಾಜೆಕ್ಟ್‌ಗಳಿಗೂ ಹರ್ನಾಜ್ ಸಹಿ
ರೂಪದರ್ಶಿ ಮತ್ತು ನಟಿ ಹರ್ನಾಜ್ ಸಂಧು ಅವರಿಗೆ ನಟನೆ ಹೊಸತಲ್ಲ, ಅವರು ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಕಿರುತೆರೆಗೂ ಪದಾರ್ಪಣೆ ಮಾಡಿದ್ದಾರೆ. ಅವರು ಯಾರಾ ದಿಯಾ ಪೂ ಬರನ್ ಎಂಬ ಪಂಜಾಬಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹರ್ನಾಜ್ ಬಾಯಿ ಜಿ ಕುಟ್ಟಂಗೆ ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಕಪಿಲ್ ಶರ್ಮಾ ಶೋ ಮೂಲಕ ಜನಪ್ರಿಯರಾಗಿರುವ ಉಪಾಸನಾ ಸಿಂಗ್ ನಿರ್ಮಿಸುತ್ತಿರುವ 2 ಪ್ರಾಜೆಕ್ಟ್‌ಗಳಿಗೂ ಹರ್ನಾಜ್ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಭುವನ ಸುಂದರಿಗೆ ಸಿಗುವ ಸೌಲಭ್ಯ ಕೇಳಿದ್ರೆ ಅಚ್ಚರಿಯಿಂದ ಕಣ್ಣರಳಿಸುವುದು ಫಿಕ್ಸ್!

ಪ್ರಿಯಾಂಕಾ ಚೋಪ್ರಾ ಬಯೋಪಿಕ್‍
ನಟಿ ಪ್ರಿಯಾಂಕಾ ಚೋಪ್ರಾ ಜೋನಸ್‌ರನ್ನು ಸಿಕ್ಕಾಪಟ್ಟೆ ಇಷ್ಟ ಪಡುವ ಹರ್ನಾಜ್ ಸಂಧು, ಪ್ರಿಯಾಂಕಾ ಚೋಪ್ರಾ ಬಯೋಪಿಕ್‍ನಲ್ಲಿ ಕಾಣಿಸಿಕೊಳ್ಳುವ ಬಯಕೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಅವರು ಮಾಧ್ಯಮದ ಜೊತೆ ಮಾತನಾಡುತ್ತಾ, “ನಾನು ಅದರ ಭಾಗವಾಗಲು ಇಷ್ಟಪಡುತ್ತೇನೆ. ಆಕೆ ತನ್ನ ಪಯಣದುದ್ದಕ್ಕೂ ನನಗೆ ಸ್ಪೂರ್ತಿ ನೀಡಿದ್ದಾರೆ ಮತ್ತು ನಮ್ಮಂತಹ ಲಕ್ಷಾಂತರ ಮಂದಿಗೆ ಸ್ಪೂರ್ತಿ ನೀಡುತ್ತಲೇ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
Published by:vanithasanjevani vanithasanjevani
First published: