HOME » NEWS » Entertainment » HANSAL MEHTA TO DIRECT SCAM 2003 THE CURIOUS CASE OF ABDUL KARIM TELGI HTV ZP

Scam 2003: ಸ್ಕ್ಯಾಮ್ 1992 ಬಳಿಕ ಸ್ಕ್ಯಾಮ್ 2003...ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಂ ತೆಲಗಿ..! 

ಮುಂಬೈನ ಟೋಪಾಜ್ ಬಾರ್ ಡ್ಯಾನ್ಸರ್ ಮೇಲೆ ಎಷ್ಟು ಮೋಹಿತನಾಗಿದ್ದ ಅಂದರೆ, ಅಲ್ಲಿಗೆ ಹೋದಾಗ ಒಮ್ಮೆ ಬರೋಬ್ಬರಿ 90 ಲಕ್ಷ ರೂಪಾಯಿ ಹಣವನ್ನು ಸುರಿದಿದ್ದನಂತೆ.

news18-kannada
Updated:March 4, 2021, 9:17 PM IST
Scam 2003: ಸ್ಕ್ಯಾಮ್ 1992 ಬಳಿಕ ಸ್ಕ್ಯಾಮ್ 2003...ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಂ ತೆಲಗಿ..! 
Scam-2003
  • Share this:
ರಾಷ್ಟ್ರಪ್ರಶಸ್ತಿ ವಿಜೇತ ಬಾಲಿವುಡ್‍ನ ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಆಕ್ಷನ್ ಕಟ್ ಹೇಳಿದ್ದ ಸ್ಕ್ಯಾಮ್ 1992 - ದಿ ಹರ್ಷದ್ ಮೆಹ್ತಾ ಸ್ಟೋರಿ, ವೆಬ್ ಸರಣಿ ಆನ್‍ಲೈನ್‍ನಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಅದರ ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ಹನ್ಸಲ್ ಮೆಹ್ತಾ ಮತ್ತೊಂದು ನೈಜ ಘಟನೆ ಆಧಾರಿತ ಕಥೆಗೆ ವೆಬ್ ಸರಣಿ ರೂಪ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೆಸರು ಸ್ಕ್ಯಾಮ್ 2003 - ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಮ್ ತೆಲಗಿ.

ಹೌದು, ಅಬ್ದುಲ್ ಕರೀಮ್ ತೆಲಗಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅದರಲ್ಲೂ ಕನ್ನಡಿಗರಿಗೆ ಈ ಹೆಸರು ಕೊಂಚ ಹೆಚ್ಚೇ ಚಿರಪರಿಚಿತ. ಅದಕ್ಕೆ ಕಾರಣ ಇಡೀ ದೇಶವೇ ಬೆಚ್ಚುವಂತೆ ಮಾಡಿದ್ದ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಮ್ ತೆಲಗಿ ಹುಟ್ಟಿದ್ದು ಬೆಳಗಾವಿಯ ಖಾನಾಪುರದಲ್ಲಿ. ಕೊನೆಗೆ ಈತ ಸಿಕ್ಕಿ ಬೀಳುವಷ್ಟರಲ್ಲಿ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿಯಷ್ಟು ಹಣವನ್ನು ನಕಲಿ ಛಾಪಾ ಕಾಗದಗಳನ್ನು ಪ್ರಿಂಟ್ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದ.

ಬಹುಶಃ ತೆಲಗಿ ಮನಸ್ಸು ಮಾಡಿದ್ದರೆ ಒಳ್ಳೆಯ ರೀತಿಯಲ್ಲೇ ಹಣ ಮಾಡಬಹುದಾಗಿತ್ತು. ಯಾಕೆಂದರೆ ಬಾಲ್ಯದಿಂದಲೇ ತೆಲಗಿ ಬುದ್ದಿವಂತನಾಗಿದ್ದ. ರೈಲ್ವೇಸ್‍ನಲ್ಲಿ ಕೆಲಸ ಮಾಡುತ್ತಿದ್ದ ತಂದೆ ತೀರಿಕೊಂಡ ಬಳಿಕ ತಾನೇ ಹಣ್ಣು, ತರಕಾರಿ ಮಾರುತ್ತಾ ಶಾಲಾ ಶಿಕ್ಷಣಕ್ಕೆ ಹಣ ಹೊಂದಿಸಿಕೊಂಡಿದ್ದ ತೆಲಗಿ. ಬಳಿಕ ಬೆಳಗಾವಿಯಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಕೆಲ ವರ್ಷಗಳ ಬಳಿಕ ಸೌದಿ ಅರೇಬಿಯಾಗೆ ಹಾರಿದ ತೆಲಗಿ ಸುಮಾರು ಏಳು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ. ನಂತರ ಭಾರತಕ್ಕೆ ವಾಪಸ್ಸಾದ ಆತ ನಕಲಿ ಪಾಸ್‍ಪೋರ್ಟ್‍ಗಳನ್ನು ಮಾಡಿಸಿ ಇಲ್ಲಿಂದ ಕೆಲಸಗಾರರನ್ನು ಸೌದಿ ಅರೇಬಿಯಾಗೆ ಕಳುಹಿಸುವ ಮೂಲಕ ಅಡ್ಡದಾರಿ ಹಿಡಿದ.

ನಕಲಿ ಪಾಸ್‍ಪೋರ್ಟ್‍ನಲ್ಲಿ ಅಷ್ಟೇನೂ ಲಾಭವಿಲ್ಲದ ಕಾರಣವೋ ಏನೋ, ಕೆಲ ತಿಂಗಳಲ್ಲೇ ತೆಲಗಿ ನಕಲಿ ಛಾಪಾ ಕಾಗದಗಳನ್ನು ಪ್ರಿಂಟ್ ಮಾಡಿಸತೊಡಗಿದೆ. ಅದನ್ನು ದೇಶಾದ್ಯಂತ ಸುಮಾರು 350ಕ್ಕೂ ಹೆಚ್ಚು ಏಜೆಂಟ್‍ಗಳ ಮೂಲಕ ಬ್ಯಾಂಕುಗಳಿಗೆ, ಇನ್ಶೂರೆನ್ಸ್ ಕಂಪನಿಗಳಿಗೆ ಹಾಗೂ ಸ್ಟಾಕ್ ಬ್ರೋಕರೇಜ್ ಕಂಪನಿಗಳಿಗೆ ಮಾರಾಟ ಮಾಡಿಸತೊಡಗಿದ. ಆಗ ಛಾಪಾ ಕಾಗದವನ್ನೂ ನಕಲಿ ಮಾಡಬಹುದು ಎಂಬ ಸಣ್ಣ ಅನುಮಾನವೂ ಯಾರಿಗೂ ಇರಲಿಲ್ಲ. ಹೀಗೆ ಹಲವು ವರ್ಷಗಳ ಕಾಲ ನಕಲಿ ಛಾಪಾ ಕಾಗದ ಮಾರುತ್ತಲೇ ಕೋಟಿಗಟ್ಟಲೆ ಹಣ ಮಾಡಿಕೊಂಡ. ಕೊನೆಗೆ ಮಾಧ್ಯಮಗಳಲ್ಲಿ ಈತನ ಕರಾಳ ದಂಧೆ ಬಯಲಾಯಿತು. ತನಿಖೆ ನಡೆದು ತೆಲಗಿಯ ಬಂಧನವೂ ಆಯಿತು. ಬಳಿಕ 2006ರಲ್ಲಿ ಬರೋಬ್ಬರಿ 30 ವರ್ಷಗಳ ಕಾಲ ಜೈಲುವಾಸದ ಶಿಕ್ಷೆಯೂ ವಿಧಿಸಲಾಗಿತ್ತು. 2017ರಲ್ಲಿ ಜೈಲಿನಲ್ಲಿರುವಾಗಲೇ ಆರೋಗ್ಯ ಸಮಸ್ಯೆ ಉಂಟಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆಲಗಿಯನ್ನು ದಾಖಲಿಸಲಾಯಿತು. ಆದರೆ ಅದೇ ವರ್ಷ ಅಕ್ಟೋಬರ್‍ನಲ್ಲಿ ಚಿಕಿತ್ಸೆ ಫಲಿಸದೇ ತೆಲಗಿ ಕೊನೆಯುಸಿರೆಳೆದ.

ಇಂತಹ ತೆಲಗಿ ಮುಂಬೈನ ಟೋಪಾಜ್ ಬಾರ್ ಡ್ಯಾನ್ಸರ್ ಮೇಲೆ ಎಷ್ಟು ಮೋಹಿತನಾಗಿದ್ದ ಅಂದರೆ, ಅಲ್ಲಿಗೆ ಹೋದಾಗ ಒಮ್ಮೆ ಬರೋಬ್ಬರಿ 90 ಲಕ್ಷ ರೂಪಾಯಿ ಹಣವನ್ನು ಸುರಿದಿದ್ದನಂತೆ. ಹೀಗೆ ತೆಲಗಿಯ ವೈಭವೋಪೇತ ಜೀವನದ ಬಗ್ಗೆ ಹತ್ತು ಹಲವು ಕಥೆಗಳಿವೆ. ಆತನ ಜೀವನಶೈಲಿ, ಜೈಲುವಾಸದ ಬಗ್ಗೆಯೇ ಪತ್ರಕರ್ತ ಸಂಜಯ್ ಸಿಂಗ್ ರಿಪೋರ್ಟರ್ ಕಿ ಡೈರಿ ಎಂಬ ಪುಸ್ತಕ ಬರೆದಿದ್ದಾರೆ. ಅದನ್ನು ಆಧರಿಸಿಯೇ ಈಗ ನಿರ್ದೇಶಕ ಹನ್ಸಲ್ ಮೆಹ್ತಾ ಸ್ಕ್ಯಾಮ್ 2003 - ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಮ್  ತೆಲಗಿ ವೆಬ್‍ಸಿರೀಸ್ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸ್ಕ್ಯಾಮ್ 1992 - ದಿ ಹರ್ಷದ್ ಮೆಹ್ತಾ ಸ್ಟೋರಿಯ ಸೂಪರ್ ಸಕ್ಸಸ್ ಬೆನ್ನಲ್ಲೇ ಈಗ ಸ್ಕ್ಯಾಮ್ 2003 - ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಮ್ ತೆಲಗಿ ವೆಬ್ ಸರಣಿಯ ಬಗ್ಗೆಯೂ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳು ಹುಟ್ಟಿಕೊಂಡಿವೆ.
Published by: zahir
First published: March 4, 2021, 9:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories