‘ಶಿರ್ಲೆ ಟೆಂಪಲ್’ ಹೆಸರು ಈಗಿನ ತಲೆಮಾರಿಗೆ ಗೊತ್ತಿದೆಯೋ ಇಲ್ಲವೋ. ಆದರೆ ಒಂದು ಕಾಲದಲ್ಲಿ ಹಾಲಿವುಡ್‌ನ ಅತ್ಯಂತ ಬೇಡಿಕೆಯ ಹಾಗೂ ಜನಪ್ರಿಯ ಬಾಲ ನಟಿಯಾಗಿದ್ದ ಈಕೆಗೆ ಗೂಗಲ್ ಬುಧವಾರ (ಇಂದು) ಆನಿಮೇಟೆಡ್ ಡೂಡಲ್ ಮೂಲಕ ಗೌರವ ಅರ್ಪಿಸಿದೆ. 2015 ರ ಇದೇ ದಿನದಂದು ಸಾಂಟಾ ಮೋನಿಕಾ ಹಿಸ್ಟರಿ ಮ್ಯೂಸಿಯಂ, ಈಕೆಯ ಅಪರೂಪದ ಸ್ಮರಣಿಕೆಗಳನ್ನು ಹೊಂದಿರುವ ‘ಲವ್, ಶಿರ್ಲೆ ಟೆಂಪಲ್’ ಎಂಬ ವಿಶೇಷ ಪ್ರದರ್ಶನವನ್ನು ಆರಂಭಿಸಿತ್ತು. ಗೂಗಲ್, ಡೂಡಲ್ ಮೂಲಕ ಅದನ್ನು ನೆನಪಿಸಿದೆ.
ಅಮೆರಿಕದ ರಾಜತಾಂತ್ರಿಕರಾಗಿ, ಪ್ರಶಸ್ತಿ ಪುರಸ್ಕೃತ ನಟಿಯಾಗಿ, ಯುವ ಗಾಯಕಿ, ನರ್ತಕಿಯಾಗಿ ಖ್ಯಾತರಾಗಿ ಪರಿಪೂರ್ಣ ಜೀವನ ನಡೆಸಿದ್ದವರು ಶಿರ್ಲೆ ಟೆಂಪಲ್. ಜನಿಸಿದ್ದು 1928ರ ಏಪ್ರಿಲ್ 23 ರಂದು. ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾ ಇವರ ಹುಟ್ಟೂರು. 1934ರಿಂದ 1938ರವರೆಗೆ ಹಾಲಿವುಡ್ನ ನಂ.1 ಬಾಲ ನಟಿಯಾಗಿದ್ದ ಇವರು, ವಯಸ್ಕರಾದ ಬಳಿಕ ರಾಜತಾಂತ್ರಿಕ ಕ್ಷೇತ್ರದಲ್ಲಿ ಮುನ್ನಡೆದರು. ಘಾನಾ ಹಾಗೂ ಜೆಕೊಸ್ಲೊವಾಕಿಯಾಗೆ ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಅಮೆರಿಕದ ಮೊತ್ತಮೊದಲ ಮಹಿಳಾ ಚೀಫ್ ಆಫ್ ಪ್ರೋಟೋಕಾಲ್ ಆಗಿದ್ದರು. ತುಂಬು ಜೀವನ ನಡೆಸಿ ಅವರು ನಿಧನರಾದಾಗಿದ್ದು 2014 ಫೆ.10 ರಂದು.
ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದ ಶಿರ್ಲೆ
ಅದ್ಭುತ ನೃತ್ಯ ಪ್ರತಿಭೆ ಹೊಂದಿದ್ದ ಶಿರ್ಲೆ, ಅದೆಷ್ಟು ಪ್ರತಿಭಾವಂತರಾಗಿದ್ದರೆಂದರೆ ಮೂರನೇ ವಯಸ್ಸಿಗೆ ನೃತ್ಯ ತರಗತಿ ಆರಂಭಿಸಿದ್ದರು. ಅವರಿಗೆ ಡ್ಯಾನ್ಸಿಂಗ್ ಗರ್ಲ್ ಎಂದೇ ಖ್ಯಾತಿ ದೊರಕಿದ್ದು ಇದೇ ಕಾರಣಕ್ಕೆ. ಆರನೇ ವಯಸ್ಸಿಗೆ ಈಕೆ ನಟಿಸಿದ ಅಮೆರಿಕದ ಸಿನಿಮಾಗೆ ಅಕಾಡೆಮಿ ಪುರಸ್ಕಾರ ಬಂದಿತ್ತು.ಆದಾಗಲೇ ಆಕೆ ಅಮೆರಿಕದ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿ ಹೆಸರು ಮಾಡಿದ್ದರು. 1934 ಆಗುವಷ್ಟರಲ್ಲಿ ಶಿರ್ಲೆ ಡಜನ್ಗೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 1942ರಲ್ಲಿ ಇವರ ಅಪ್ರತಿಮ ಸಾಧನೆಗೆ ‘ಜ್ಯೂನಿಯರ್ ಮಿಸ್’ ಎಂಬ ಹೆಗ್ಗಳಿಕೆ ಒಲಿದು ಬಂದಿತ್ತು. ಹಾಲಿವುಡ್ ಸಿನಿಮಾಗಳಲ್ಲಿ ಮಿಂಚಲು ವಯಸ್ಸಿನ ಹಂಗಿಲ್ಲ. ಕೊನೆಯೆವರೆಗೂ ಅವರು ಹಾಲಿವುಡ್ ನಲ್ಲಿ ನಟಿಯಾಗಿ ಉಳಿದುಕೊಳ್ಳಬಹುದಿತ್ತು.
ಇದನ್ನೂ ಓದಿ: Nusrat jahan: ಬಂಗಾಳಿ ನಟಿ ಗರ್ಭಿಣಿ; ನಟ ಯಶ್ ಮತ್ತು ಆಕೆಯ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ !
ಆದರೆ ತಮ್ಮ ಜೀವನ ಪೂರ್ತಿ ಹಾಲಿವುಡ್ನಲ್ಲಿ ಮಿಂಚುವ ಅಭಿಲಾಷೆ ಆಕೆಗಿರಲಿಲ್ಲ. 22ನೇ ವಯಸ್ಸಲ್ಲಿ ಅಮೆರಿಕದ ಸಿನಿಪ್ರಿಯರಿಗೆ ಶಾಕ್ ನೀಡಿ ಸಿನಿಮಾ ಕ್ಷೇತ್ರದಿಂದ ಹೊರಬಂದರು. ಹಾಲಿವುಡ್ ಐಕಾನ್ ಆಗಿರುವಾಗಲೇ ಆ ಕ್ಷೇತ್ರ ತ್ಯಜಿಸುವುದು ಸಣ್ಣ ಮಾತಲ್ಲ.
ಇದನ್ನೂ ಓದಿ: Paatashaala Song: ಕಡೆಗೂ ರಿಲೀಸ್ ಆಗುತ್ತಿದೆ ಯುವರತ್ನ ಸಿನಿಮಾ ಪಾಠಶಾಲಾ ಹಾಡು...!
1969 ರಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿ ನೇಮಕಗೊಂಡಿದ್ದರು. ರಾಜಕಾರಣವಲ್ಲದೆ, ಸಮರ್ಪಿತ ಪರಿಸರವಾದಿಯಾಗಿಯೂ ಸೇವೆ ಸಲ್ಲಿಸಿದ್ದರು. 1972ರಲ್ಲಿ ಮಾನವ ಪರಿಸರದ ವಿಷಯದಡಿ ನಡೆದ ಸಮ್ಮೇಳನದಲ್ಲಿ ಅಮೆರಿಕವನ್ನು ಪ್ರತಿನಿಧಿಸಿದರು. ಅವರ ಪ್ರತಿಭೆ, ಸಮರ್ಪಣೆ ಹಾಗೂ ಸೇವಾ ಮನೋಭಾವದಿಂದ ಪ್ರಭಾವಿತವಾದ ಅಮೆರಿಕದ ಸರ್ಕಾರ ಅವರನ್ನು ಗೌರವಾರ್ಥ ವಿದೇಶಿ ಸೇವಾ ಅಧಿಕಾರಿಯಾಗಿ 1988ರಲ್ಲಿ ನೇಮಕ ಮಾಡಿತ್ತು. ಒಬ್ಬ ನಟಿಯಾಗಿ ಅವರ ಜೀವಿತಾವಧಿಯ ಸಾಧನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್, 2006ರಲ್ಲಿ ಶಿರ್ಲೆಗೆ ಜೀವಮಾನದ ಸಾಧನೆ ಪುರಸ್ಕಾರ ನೀಡಿ ಗೌರವಿಸಿತ್ತು. ಇದೀಗ ಗೂಗಲ್, ಡೂಡಲ್ ಮೂಲಕ ಗೌರವಿಸಿ, ಸ್ಮರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ