ಸ್ಯಾಂಡಲ್‌ವುಡ್‌ ಪಾಲಿಗೆ ಶುಭ ಶುಕ್ರವಾರ : ದಿನೇ ದಿನೇ ಹೆಚ್ಚುತ್ತಿದೆ ಪ್ರೇಕ್ಷಕರ ಸಂಖ್ಯೆ 

ನಿನ್ನೆಯಿಂದ ಇಂದಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುವುದು ಚಿತ್ರರಂಗ ಹಾಗೂ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಜೊತೆಗೆ ಶನಿವಾರ ಮತ್ತು ಭಾನುವಾರ ವೀಕೆಂಡ್‌ ಆಗಿರುವ ಕಾರಣ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಪ್ರಿಯರು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಎಲ್ಲರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬರೋಬ್ಬರಿ ಏಳು ತಿಂಗಳ ಬಳಿಕ ಚಿತ್ರಮಂದಿರಗಳು ಮತ್ತೆ ಮರುಜೀವ ಪಡೆದಿವೆ. ನಿನ್ನೆಗಿಂತ ಹೆಚ್ಚು ಪ್ರೇಕ್ಷಕರು ಇಂದು ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳತ್ತ ಹೆಜ್ಜೆ ಹಾಕಿದ್ದಾರೆ. ಅದರಲ್ಲಂತೂ ನಟ ಚಿರು ಸರ್ಜಾ ನಾಯಕನಾಗಿರುವ ಶಿವಾರ್ಜುನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಿನ್ನೆ ಕೆಲ ಸಿನಿಮಾಗಳಿಗೆ 10 ಪ್ರೇಕ್ಷಕರೂ ಬಂದಿರಲಿಲ್ಲ. ಆದರೆ ಇವತ್ತು ಶುಭ ಶುಕ್ರವಾರ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಸಂಖ್ಯೆ 50 ಮುಟ್ಟಿದೆ. ಕೆಜಿ ರಸ್ತೆಯ ಸಂತೋಷ್‌ ಚಿತ್ರಮಂದಿರದಲ್ಲಿ ಶಿವಾರ್ಜುನ ಚಿತ್ರದ ರೀ-ರಿಲೀಸ್‌ಗಾಗಿಯೇ ಚಿರು ಸರ್ಜಾ ಹೊಸ ಕಟೌಟ್‌ ಹಾಕಲಾಗಿತ್ತು. ಹೂಗಳಿಂದ ಅಲಂಕರಿಸಿ, ಪ್ರೇಕ್ಷಕರನ್ನು ಬರಮಾಡಿಕೊಳ್ಳಲು ಥಿಯೇಟರ್‌ಅನ್ನು ಅದ್ದೂರಿಯಾಗಿ ಸಿದ್ಧಪಡಿಸಲಾಗಿತ್ತು. ಸುದೀರ್ಘ ಗ್ಯಾಪ್‌ ಬಳಿಕ ಮತ್ತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ ಪ್ರೇಕ್ಷಕರು ಸಂಭ್ರಮಿಸಿದರು. ವಿಶೇಷ ಅಂದ್ರೆ ಚಿರು ಸರ್ಜಾ ತಾಯಿ ಅಮ್ಮಾಜಿ ತಮ್ಮ ಆಪ್ತರೊಂದಿಗೆ ಬಂದು ಅಭಿಮಾನಿಗಳ ಜೊತೆ ಕುಳಿತೆ ಸಿನಿಮಾ ವೀಕ್ಷಿಸಿದರು. ಸಿನಿಮಾ ನೋಡುವಾಗ ಅಮ್ಮಾಜಿ ಮುದ್ದು ಮಗನ ನೆನೆದು ಭಾವುಕರಾದರು.

ಇನ್ನು ಭೂಮಿಕಾ ಥಿಯೇಟರ್‌ನಲ್ಲಿ ನಮ್ ಜಗದೀಶ್‌ ಹಾಗೂ ರೂಪಿಕಾ ನಟಿಸಿರುವ ಸಿನಿಮಾ ಥರ್ಡ್‌ ಕ್ಲಾಸ್‌ ರೀ - ರಿಲೀಸ್‌ ಆಗಿದೆ. ಪ್ರೇಕ್ಷಕರ ಜೊತೆ ಇಡೀ ಚಿತ್ರತಂಡ ಕುಳಿತು ಸಿನಿಮಾ ನೋಡಿತು. ಏಳು ತಿಂಗಳ ನಂತರ ಮತ್ತೆ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ ಸಂಭ್ರಮ ಪ್ರೇಕ್ಷಕರದ್ದು. ಜೊತೆಗೆ ಕೆಲ ಚಿತ್ರರಂಗದ ಮಂದಿಯೂ ಮತ್ತೆ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದರು.

ಥಿಯೇಟರ್‌ಗಳಂತೆಯೇ ಮಲ್ಟಿಪ್ಲೆಕ್ಸ್‌ಗಳಲ್ಲೂ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಒರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ ಸಿನಿಮಾಸ್‌ನಲ್ಲಿ ಒಟ್ಟು 11 ಸ್ಕ್ರೀನ್‌ಗಳಿದ್ದು, ಸದ್ಯ 5 ಸ್ಕ್ರೀನ್‌ಗಳಲ್ಲಿ 15 ಶೋಗಳಿವೆ. ವಿಶೇಷ ಅಂದ್ರೆ ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿನ್ನೆ ಒಬ್ಬರು ಪ್ರೇಕ್ಷಕನಿಲ್ಲದೆ ಶೋಗಳನ್ನೇ ರದ್ದು ಮಾಡಲಾಗಿತ್ತು. ಆದರೆ, ಇವತ್ತು ಶೇಕಡಾ 25ರಿಂದ 30ರಷ್ಟು ಸೀಟ್‌ಗಳು ಫುಲ್‌ ಆಗಿವ ಎಂದು ಮಲ್ಟಿಪ್ಲೆಕ್ಸ್‌ ಮಂದಿಯೂ ಖುಷಿಯಾಗಿದ್ದಾರೆ.

ಇದನ್ನೂ ಓದಿ : ಭೀಮೆಯಲ್ಲಿ ಪ್ರವಾಹ ; ಸೂರಿಗಾಗಿ ಮೇಲ್ಛಾವಣಿ ಏರಿ ಕುಳಿತ ಅಜ್ಜಿ ; ಮೂರು ದಿನಗಳಿಂದಲೂ ಉಪವಾಸ

ಆದರೆ ದೊಡ್ಡ ಸಿನಿಮಾ ನಿರ್ಮಾಪಕರಿಗೆ ಆತಂಕವಿನ್ನೂ ಕಡಿಮೆ ಆಗಿಲ್ಲ.  ಶೇಕಡಾ 50ರಷ್ಟು ಸೀಟ್‌ಗಳನ್ನು ಇಟ್ಟುಕೊಂಡು ದೊಡ್ಡ ಬಜೆಟ್‌ ಸಿನಿಮಾಗಳನ್ನು ರಿಲೀಸ್‌ ಮಾಡುವುದು ಅಸಾಧ್ಯ. ಆದಷ್ಟು ಬೇಗ ಕೊರೋನಾಗೆ ಔಷಧಿ ಬಂದರಷ್ಟೇ ಈ ಸಮಸ್ಯೆ ಬಗೆಹರಿಯುವುದು ಎನ್ನುವುದು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅಭಿಪ್ರಾಯ.

ಒಟ್ಟಾರೆ ನಿನ್ನೆಯಿಂದ ಇಂದಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುವುದು ಚಿತ್ರರಂಗ ಹಾಗೂ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಜೊತೆಗೆ ಶನಿವಾರ ಮತ್ತು ಭಾನುವಾರ ವೀಕೆಂಡ್‌ ಆಗಿರುವ ಕಾರಣ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಪ್ರಿಯರು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಎಲ್ಲರದು.
Published by:G Hareeshkumar
First published: