• Home
  • »
  • News
  • »
  • entertainment
  • »
  • Gandhadagudi: ಜಿಲ್ಲೆಗಳಲ್ಲಿ ಗಂಧದಗುಡಿ ಹಬ್ಬ! ಹೀಗಿತ್ತು ಅಪ್ಪು ಸಿನಿ ಸಂಭ್ರಮ

Gandhadagudi: ಜಿಲ್ಲೆಗಳಲ್ಲಿ ಗಂಧದಗುಡಿ ಹಬ್ಬ! ಹೀಗಿತ್ತು ಅಪ್ಪು ಸಿನಿ ಸಂಭ್ರಮ

ಅಪ್ಪು ಅಭಿನಯದ ಗಂಧದಗುಡಿ

ಅಪ್ಪು ಅಭಿನಯದ ಗಂಧದಗುಡಿ

ಗಂಧದ ಗುಡಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವಲ್ಲ, ಜಿಲ್ಲೆ ಜಿಲ್ಲೆಗಳಲ್ಲಿ ಅಪ್ಪು ಅಭಿಮಾನಿಗಳು ಸಿನಿಮಾವನ್ನು ಹಬ್ಬದಂತೆ ಕೊಂಡಾಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಎಲ್ಲೆಡೆ ಗಂಧದ ಗುಡಿಯ (Gandhada Gudi) ಘಮ ಪಸರಿಸುತ್ತಿದೆ. ಅಪ್ಪು (Appu) ಕೊನೆಯ ಚಿತ್ರ ನೋಡಿ ಸಿನಿಪ್ರಿಯರು ಕಣ್ಣೀರಿಡುತ್ತಾ ಹೊರಬಂದಿದ್ದಾರೆ. ಅಪ್ಪುವನ್ನು ಜೀವಂತ ನೋಡಿ ಮತ್ತೆ ಖುಷಿಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಗಂಧದ ಗುಡಿ ಅಬ್ಬರ ಜೋರಾಗಿದೆ. ಜಿಲ್ಲೆಗಳಲ್ಲಿಯೂ ಅಪ್ಪು ಗಂಧದ ಗುಡಿ ಸಿನಿಮಾ ರಿಲೀಸ್  (Release) ಅನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆ ಅಭಿಮಾನಿಗಳು. ಕೆಲವೆಡೆ ಸಸಿ ವಿತರಣೆ, ಜನರಿಗೆ ಬಿರಿಯಾನಿ (biriyani) ಹಂಚಿಕೆ, ಮೆರವಣಿಗೆ, ಆನೆ ಕುಣಿತ, ಕಟೌಟ್, ಪೂಜೆ ಹೀಗೆ ಹಲವಾರು ಬಗೆಯಲ್ಲಿ ರಾಜ್ಯಾಂತ ಜನ ಈ ಸಿನಿಮಾ ಬಿಡುಗಡೆಯನ್ನು ಕೊಂಡಾಡಿದ್ದಾರೆ. ಹಾಗಾದರೆ ಯಾವ್ಯಾವ ಜಿಲ್ಲೆಯಲ್ಲಿ ಏನೇನು ವಿಶೇಷತೆ ನಡೆಯಿತು ಎನ್ನುವುದನ್ನು ಇಲ್ಲಿ ನೋಡಿ.


ಬೀದರ್ ನಲ್ಲಿ ಡಾ. ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಬೆಳಗ್ಗೆ 11-30ಕ್ಕೆ ಮೊದಲ‌ ಶೋ ಎರಡನೇ ಶೋ 1-30 ಸಂಜೆ 4 ಗಂಟೆಗೆ ಮೂರನೇ ಶೋ ನಡೆದಿದೆ.


ಎದೆ ಮೇಲೆ, ಕೈ ಮೇಲೆ ಟ್ಯಾಟೂ


ಕೊಪ್ಪಳದಲ್ಲಿ ಗಂಧದ ಗುಡಿ ಮೊದಲ ಶೋ ನೋಡಲು ನಸುಕಿನಲ್ಲಿಯೇ ಅಭಿಮಾನಿಗಳು ಥಿಯೇಟರ್ ಗೆ ಬಂದಿದ್ದರು. ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಬೆಳಗ್ಗೆ 6 ಗಂಟೆಗೆ ಶೋ ಆರಂಭವಾಗಿತ್ತು. ಕೊಪ್ಪಳದಲ್ಲಿ ಎದೆಯ ಮೇಲೆ, ಕೈ ಮೇಲೆ ಟ್ಯಾಟೊ ಹಾಕಿಸಿಕೊಂಡಿರುವ ಅಭಿಮಾನಿ ಕಂಡುಬಂದರು. ಗಂಗಾವತಿಯ ದೇವು ಎಂಬ ಅಭಿಮಾನಿ ಇಂದು ಗಂಧದಗುಡಿ ಬೆಳಗಿನ ಶೋ ಗೆ ಬಂದಿದ್ದರು.


ಗಂಗಾವತಿಯ ಪೂರ್ಣಿಮಾ ಚಿತ್ರ ಮಂದಿರದಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆಯಾಗಿದ್ದು ಪುನೀತ್ ಭಾವಚಿತ್ರಕ್ಕೆ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಚಿತ್ರ ನೋಡಲು ಚಿತ್ರಮಂದಿರದ ಮುಂದೆ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದರು.


ಅಪ್ಪು ಭಾವಚಿತ್ರದ ಸಿನಿಮಾ ಟಿಕೆಟ್


ಚಾಮರಾಜನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಆಗಿದ್ದು 7 ಗಂಟೆಗೆ ಮೊದಲ ಶೋ ನಡೆದಿದೆ. ತೆರೆಯ ಮೇಲೆ ಅಪ್ಪು ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ ಕೇಕೆ  ಮುಗಿಲು ಮುಟ್ಟಿತ್ತು. ಥಿಯೇಟರ್ ಗೆ ಫ್ಲೆಕ್ಸ್ ಹಾಕಿ ಶುಭಾಶಯ ಅಭಿಮಾನಿಗಳು ಕೋರಿದ್ದಾರೆ. ಗಂಧದಗುಡಿ ಚಿತ್ರಕ್ಕಾಗಿಯೇ ವಿಶೇಷ ರೀತಿಯ ಟಿಕೆಟ್ ಮುದ್ರಣ ಮಾಡಲಾಗಿತ್ತು. ಪುನೀತ್ ರಾಜ್‌ಕುಮಾರ್ ಭಾವಚಿತ್ರಗಳನ್ನು ಒಳಗೊಂಡ ಸಿನಿಮಾ ಟಿಕೆಟ್ ನೀಡಲಾಗಿತ್ತು.


ತುಮಕೂರಿನಲ್ಲಿ ಆನೆ ಕುಣಿತ


ತುಮಕೂರಿನ ಜೈಭಾರತ್ ಥಿಯೇಟರ್ ಮುಂದೆ ಆನೆ ಕುಣಿತ ಇತ್ತು. ಅಭಿಮಾನಿಗಳು ಆನೆಯನ್ನು ಥಿಯೇಟರ್​​ಗೆ ಕರೆತಂದಿದ್ದರು.




ಕೇಕ್ ಕಟ್ ಮಾಡಿ ಗಿಡ ವಿತರಣೆ


ದಾವಣಗೆರೆ ವಸಂತ ಥಿಯೇಟರ್ ನಲ್ಲಿ ಅಪ್ಪು ಗಂಧದ ಗುಡಿ ಬಿಡುಗಡೆ ಹಿನ್ನಲೆ ಪುನೀತ್ ಕಟೌಟ್ ಗೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಲಾಗಿದೆ. ಕೇಕ್ ಕಟ್ ಮಾಡಿ ಅಭಿಮಾನಿಗಳಿಗೆ ಕೇಕ್ ಹಂಚಿದ ಅಪ್ಪು ಅಭಿಮಾನಿಗಳು ಸಿನಿಮಾವನ್ನು ಸಂಭ್ರಮಿಸಿದ್ದಾರೆ. 5 ಸಾವಿರ ಸಸಿ ವಿತರಣೆ ಮಾಡಲು ಅಪ್ಪು ಅಭಿಮಾನಿಗಳು ಯೋಜನೆ ಹಾಕಿದ್ದಾರೆ.


ಚನ್ನಪಟ್ಟಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಇಳಿ ತೆಗೆದು ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಅಪ್ಪು ಬಾಸ್ ಎಂದು ಜಯಘೋಷದೊಂದಿಗೆ ಚಿತ್ರಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ.


ಥಿಯೇಟರ್​​ನಲ್ಲಿಯೇ ರಕ್ತದಾನ ಶಿಬಿರ


ದಾವಣಗೆರೆಯ ವಸಂತ ಚಿತ್ರಮಂದಿರದಲ್ಲಿ ಹಬ್ಬದ ವಾತಾವರಣ ಕಂಡುಬಂದಿತ್ತು. ಪುನೀತ್ ಕಟೌಟ್ ಗೆ ಹಾರ ಹಾಕಿ, ಕುಂಬಳಕಾಯಿ ಒಡೆದ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಯುವರಾಜ್ ಕುಮಾರ್ ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆದಿದೆ. ಥಿಯೇಟರ್ ನಲ್ಲೆ ಅಭಿಮಾನಿಗಳು ರಕ್ತದಾನ ಮಾಡಿದ್ದಾರೆ. ಬಿಪಿ,ಶುಗರ್, ಉಚಿತ ಪರೀಕ್ಷೆ ಇಡಲಾಗಿತ್ತು. ರಕ್ತದಾನ ಮಾಡಿದ ಅಭಿಮಾನಿಗಳಿಗೆ ಯುವರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಸಹಿ ಇರುವ ಪ್ರಮಾಣ ಪತ್ರ ನೀಡಲಾಗಿತ್ತು.


ಬೆಳಗಾವಿಯಲ್ಲಿಯೂ ಸಸಿ ವಿತರಣೆ


ಬೆಳಗಾವಿಯಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಸ್ವರೂಪ-ನರ್ತಕಿ, ಕಾರ್ನಿವಲ್ ಹಾಗೂ ಐನಾಕ್ಸ್ ಮೂರು ಚಿತ್ರ ಮಂದಿರಗಳಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆಯಾಗಿದೆ. ಚಿತ್ರ ನೋಡಲು ಆಗಮಿಸಿದ ಅಭಿಮಾನಿಗಳಿ ಸಸಿಗಳನ್ನು ನೀಡಲಾಯಿತು.


ಭಾವಚಿತ್ರದೊಂದಿಗೆ ಮೆರವಣಿಗೆ


ಬೀದರ್​ನಲ್ಲಿ ಅಭಿಮಾನಿಗಳಿಂದ ಅಪ್ಪು ಭಾವಚಿತ್ರ ಮೆರವಣಿಗೆ ನಡೆಯಿತು. ಅಂಬೇಡ್ಕರ್ ಸರ್ಕಲ್ ನಿಂದ ಚಿತ್ರ ಮಂದಿರದವರಿಗೆ ಮೆರವಣಿಗೆ ನಡೆದಿದೆ.


ಇದನ್ನೂ ಓದಿ: Gandhadagudi Review: ನಮ್ಮ ನಾಡಿನ ಅನ್ಯ ಲೋಕಕ್ಕೆ ಅಪ್ಪು ಪಯಣ! ವನ್ಯ ಸಂಪತ್ತಿನ ಸಂಪೂರ್ಣ ಚಿತ್ರಣ


ಸಿನಿಮಾ ನೋಡದೆ ಅರ್ಧದಿಂದ ಎದ್ದು ಹೊರಬಂದ ಅಭಿಮಾನಿ


ಹುಬ್ಬಳ್ಳಿಯಲ್ಲಿ ಪುನೀತ್ ಅಭಿನಯದ ಗಂಧದಗುಡಿ ಪ್ರದರ್ಶನ ಆರಂಭವಾದಾಗ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಅಪ್ಪು ತೆರೆ ಮೇಲೆ ಬರ್ತಿದ್ದಂತೆ ಭಾವುಕರಾದ ಅಭಿಮಾನಿಗಳು ಪುನಿತ್ ನೆನಪಿಸಿಕೊಂಡು ಭಾವುಕರಾದ ಅಪ್ಪಟ ಅಭಿಮಾನಿ ರಘು ವದ್ದೆ
ಸಿನೆಮಾ ನೋಡದೆ ಅರ್ಧಕ್ಕೆ ಹೊರಬಂದರು. ಬೇರೆ ಎಲ್ಲ ನಾಯಕರನ್ನು ನೋಡೋಕೆ ಆಗುತ್ತೆ. ಅಪ್ಪು ನಮ್ಮನ್ನು ಅಗಲಿರುವುದು ಇನ್ನೂ ಕಾಡ್ತಾ ಇದೆ. ಹಾಗಾಗಿ ತೆರೆ ಮೇಲೆ ನೋಡೋಕೆ ಆಗ್ತಿಲ್ಲ. ಇದರ ಶೂಟಿಂಗ್ ವೇಳೆ ನಾನೂ ಅವರ ಜೊತೆ ಇದ್ದೆ. ಜೋಯ್ಡಾ ದಲ್ಲಿ 10 ದಿನ ಅವರ ಜೊತೆಗಿದ್ದೆ. ಪ್ರೀತಿಯಿಂದ ಅಪ್ಪಿ ಮಾತಾಡ್ತಿದ್ದ ಅಪ್ಪು ನಮ್ಮ ಜೊತೆಗಿಲ್ಲ. ಅದನ್ನ ಅರಗಿಸಿಕೊಳ್ಳೋಕೆ ನಮಗೆ ಆಗ್ತಿಲ್ಲ. ಅಪ್ಪ ನಮ್ಮನ್ನೆಲ್ಲಾ ಬಿಟ್ ಹೋದ್ರು ಎಂದು ಕಣ್ಣೀರಿಟ್ಟಿದ್ದಾರೆ.


ಅರಣ್ಯ ಅಧಿಕಾರಿಗಳಿಗೆ ಸನ್ಮಾನ


ಚಿಕ್ಕಮಗಳೂರಿನಲ್ಲಿ ಗಂಧದ ಗುಡಿ ಸಿನಿಮಾದ ಸಂಭ್ರಮ ಮನೆ ಮಾಡಿತ್ತು. ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆದಿದೆ. ಪುನೀತ್ ಕಟೌಟ್ ಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಸನ್ಮಾನ , ಗಿಡ ನೆಡುವ ಕಾರ್ಯಕ್ರಮವನ್ನೂ ಅಭಿಮಾನಿಗಳು ಮಾಡಿದ್ದಾರೆ.


ಪುನೀತ್ ಫೊಟೋ ಟೀಶರ್ಟ್


ಯಾದಗಿರಿಯಲ್ಲಿ ಪುನೀತ್ ಪೋಟೋ ಇರುವ ವಿಶೇಷವಾದ ಟೀ-ಶರ್ಟ್ ಧರಿಸಿ ಕನ್ನಡ ಬಾವುಟ ಹಾರಿಸಿದ್ದಾರೆ ಅಭಿಮಾನಿಗಳು.


ಇದನ್ನೂ ಓದಿ: Gandhadagudi: ಗಂಧದಗುಡಿ ರಿಲೀಸ್​ ಸಂಭ್ರಮ, ಥಿಯೇಟರ್​ಗೆ ಆನೆ ಕರೆತಂದ ಫ್ಯಾನ್ಸ್


2 ಕ್ವಿಂಟಾಲ್ ಬಿರಿಯಾನಿ ಹಂಚಿಕೆ


ಗದಗ ವೆಂಕಟೇಶ ಥಿಯೇಟರ್ ಮುಂದೆ ಬಿರಿಯಾನಿ ಹಂಚಲಾಗಿದೆ. ಅಪ್ಪು ಅಭಿಮಾನಿಗಳಿಂದ ಚಿಕನ್ ಬಿರಿಯಾನಿ ಹಂಚಿ ಸಂಭ್ರಮಿಸಲಾಗಿದೆ. ಬಿರಿಯಾ‌ನಿ ಹಂಚುವ ಮುನ್ನ ಅಪ್ಪು ಕಟೌಟ್ ಗೆ ನೈವೇದ್ಯ ಮಾಡಲಾಗಿದೆ. ನಂತರ ಅಭಿಮಾನಿಗಳಿಗೆ ಬೊರಿಯಾನಿ ಹಂಚಲಾಗಿದೆ. ಎರಡು ಕ್ವಿಂಟಾಲ್ ಬಿರಿಯಾನಿ ಮಾಡಿ ಹಂಚಿದ ಅಪ್ಪು ಅಭಿಮಾನಿಗಳು ಚಿತ್ರ ವೀಕ್ಷಿಸಿ ಹೊರ ಬಂದು ಜನ ಬಿರಿಯಾನಿ ಸೇವಿಸಿದ್ದಾರೆ.

Published by:Divya D
First published: