news18-kannada Updated:June 18, 2020, 7:53 PM IST
ಸಾಂದರ್ಭಿಕ ಚಿತ್ರ
ಚೀನಾ ಭಾರತದ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಇದೆ. ಆಗಾಗ ಗಡಿತಂಟೆ ಮಾಡುತ್ತಿದ್ದರೂ, ಇದೇ ಮೊದಲ ಬಾರಿಗೆ ಭಾರತೀಯ ಸೈನಿಕರ ಮೇಲೆ ಕುತಂತ್ರದಿಂದ ಉಗ್ರ ದಾಳಿ ಮಾಡಿದೆ. ಅತ್ತ ವಿಶ್ವವೇ ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, ಇತ್ತ ಮಹಾಮಾರಿಯ ಸೃಷ್ಟಿಕರ್ತ ಚೀನಾ ಭಾರತದ ಜತೆ ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿದೆ.
ಗಡಿಯಲ್ಲಿ ವಿನಾಕಾರಣ ಗಲಾಟೆ ಮಾಡಿ 20 ಮಂದಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡಿದೆ. ಬಿಹಾರ್ ರೆಜಿಮೆಂಟಿನ ವೀರ ಯೋಧರೂ ಸಹ ಚೀನೀಯರ ಆಕ್ರಮಣಕ್ಕೆ ಜಗ್ಗದೇ, 35ಕ್ಕೂ ಹೆಚ್ಚು ಮಂದಿ ಡ್ರ್ಯಾಗನ್ ದೇಶದ ಸೈನಿಕರ ಸದೆಬಡಿದಿದ್ದಾರೆ. ಚೀನಾದ ಈ ಹುಂಬತನದ ವಿರುದ್ಧ ಇಡೀ ಭಾರತವೇ ಸಿಡಿದೆದ್ದಿದೆ.
ಗಡಿಯಲ್ಲಿ ಸೈನಿಕರು ಬುಲೆಟ್ ಮೂಲಕ ಉತ್ತರಿಸಲು, ಗಡಿಯ ಒಳಗೆ ನಾವು ವ್ಯಾಲೆಟ್ ಮೂಲಕ ಉತ್ತರಿಸೋಣ ಎಂಬ ಕೂಗು ದೇಶದ ಮೂಲೆ ಮೂಲೆಗಳಿಂದಲೂ ಕೇಳಿಬರುತ್ತಿದೆ. ಇದಕ್ಕೆ ಭಾರತೀಯ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಸಂಘಟನೆಗಳ ಒಕ್ಕೂಟವೂ ಧ್ವನಿಗೂಡಿಸಿದೆ.
ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಚೀನಾ ಉತ್ಪನ್ನಗಳಿಗೆ ಜಾಹೀರಾತು, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮೀಡಿಯಾಗಳ ಮೂಲಕ ಪ್ರಚಾರ ಮಾಡಬಾರದೆಂದು ಭಾರತೀಯ ಕಲಾವಿದರು ಹಾಗೂ ತಂತ್ರಜ್ಱರಿಗೆ ಸಲಹೆ ನೀಡಿದೆ. ಜೊತೆಗೆ ಚೀನಾ ಕಲಾವಿದರಿಗೆ, ತಂತ್ರಜ್ಱರಿಗೂ ಕೆಲಸ ಕೊಡಬೇಡಿ ಎಂದೂ ತಿಳಿಸಿದೆ.
ಚೀನಾ ಅಟ್ಟಹಾಸದ ವಿರುದ್ಧ ಎಲ್ಲ ಭಾರತೀಯರೂ ನಿಂತಿದ್ದಾರೆ. ಭಾರತೀಯ ಸೈನಿಕರ ಜತೆ ನಿಲ್ಲುವ ಸಮಯ ಬಂದಿದೆ. ನಮ್ಮ ರಾಷ್ಟ್ರಪ್ರೇಮ, ತೋರುವ ಸಮಯ ಬಂದಿದೆ. ಆರ್ಥಿಕವಾಗಿ ಬಹಿಷ್ಕರಿಸಿ, ಎಲ್ಲರೂ ಚೀನಾಗೆ ಪಾಠ ಕಲಿಸೋಣ. ಆ ಮೂಲಕ ಚೀನಾ ಕುತಂತ್ರಕ್ಕೆ ಬಲಿಯಾದ ಸೈನಿಕರಿಗೆ ಗೌರವ ಸಲ್ಲಿಸೋಣ ಎಂದು FWICE ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಭಾರತೀಯ ಸಿನಿಮಾರಂಗದ 32 ಸಂಘ ಸಂಸ್ಥೆಗಳ ಒಕ್ಕೂಟ FWICE ಆಗಿದ್ದು, ಸರಿಸುಮಾರು ಒಂದು ಲಕ್ಷ ಸದಸ್ಯರನ್ನು ಹೊಂದಿದೆ. ಒಟ್ಟಾರೆ ಚೀನಾ ಬಗ್ಗುಬಡಿಯಲು ಸೈನಿಕರು ಗಡಿಯಲ್ಲಿ ಟೊಂಕ ಕಟ್ಟಿ ನಿಂತಿದ್ದರೆ, ಇತ್ತ ದೇಶದ ಒಳಗೆ ಸಾರ್ವಿಜನಿಕರೂ ಒಂದಾಗಿ ತೋಳೇರಿಸಿದ್ದಾರೆ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಡ್ರ್ಯಾಗನ್ ದೇಶಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
First published:
June 18, 2020, 7:52 PM IST