Exclusive Interview: ಹಂಬಲ್ ಕಾಮಿಡಿಯನ್ ಅಸ್ಗರ್ ಸೇಠ್..!

ಹಂಬಲ್ ಪೊಲಿಟೀಶಿಯನ್ ನೋಗರಾಜ್ ಸೀಸನ್ 1 ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದೂ ರಿಲೀಸ್ ಆಗಲಿದೆ. ಅದಾದ ಬಳಿಕ 777 ಚಾರ್ಲೀ ಸಿನಿಮಾದಲ್ಲೂ ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸುತ್ತಿದ್ದೇನೆ.

news18-kannada
Updated:July 24, 2020, 7:30 PM IST
Exclusive Interview: ಹಂಬಲ್ ಕಾಮಿಡಿಯನ್ ಅಸ್ಗರ್ ಸೇಠ್..!
French Biriyani
  • Share this:
ಹಂಬಲ್ ಪೊಲಿಟೀಶೀಯನ್ ನೋಗರಾಜ್ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳ ಬಳಿಕ ನಿರೂಪಕ, ನಟ, ಕಾಮಿಡಿಯನ್ ಡ್ಯಾನಿಶ್ ಸೇಠ್ ಮತ್ತೆ ವಾಪಸ್ಸಾಗಿದ್ದಾರೆ. ಕಳೆದ ಬಾರಿ ರಾಜಕಾರಣಿಯಾಗಿ ನಗಿಸಿದ್ದವರು ಈ ಬಾರಿ ಆಟೋ ಚಾಲಕನಾಗಿ ಮತ್ತಷ್ಟು ನಗಿಸುತ್ತಿದ್ದಾರೆ. ಫ್ರೆಂಚ್ ಬಿರಿಯಾನಿ ಚಿತ್ರಕ್ಕೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬ್ಯಾನರ್​ನಲ್ಲಿ ನಟಿಸಿದ ಅನುಭವದ ಬಗ್ಗೆ ಡ್ಯಾನಿಶ್ ಸೇಠ್ ಮಾತನಾಡಿದ್ದಾರೆ.

- ಹಂಬಲ್ ಪೊಲಿಟೀಶಿಯನ್ ನೋಗರಾಜ್ ಹಾಗೂ ಫ್ರೆಂಚ್ ಬಿರಿಯಾನಿಯ ಅಸ್ಗರ್ ನಡುವಿನ ವ್ಯತ್ಯಾಸಗಳೇನು?

ಹಂಬಲ್ ಪೊಲಿಟೀಶಿಯನ್ ನೋಗರಾಜ್ ಸಿನಿಮಾದಲ್ಲಿ ನಾನು ಮತ್ತು ನಿರ್ದೇಶಕ ಸಾದ್ ಖಾನ್ ಇಬ್ಬರೂ ಕುಳಿತು ಡೈಲಾಗ್ಸ್ ಬರೆದಿದ್ದೆವು. ಆದರೆ ಇಲ್ಲಿ ಪನ್ನಗಾ ಮತ್ತು ಅವಿನಾಶ್ ಡೈಲಾಗ್ಸ್ ಬರೆದಿದ್ದಾರೆ. ನಾನಿಲ್ಲಿ ಕೇವಲ ನಟನಾಗಿದ್ದೀನಿ ಅಷ್ಟೇ. ಪ್ರತಿದಿನ ಸೆಟ್​ಗೆ ಹೋಗಿ ಅವರು ಕೊಡೋ ಲೈನ್ಸ್​ನ ಇಂಪ್ರುವೈಸ್ ಮಾಡಿ, ಕ್ಯಾಮರಾ ಮುಂದೆ ಹೇಳುವ ಪ್ರಯತ್ನ ಮಾಡಿದ್ದೇನಷ್ಟೇ. ಮೊದಲ ಸಿನಿಮಾದಲ್ಲಿ ಸಿನಿಮಾ ಬಗ್ಗೆ ಸ್ವಲ್ಪ ಕಲಿತೆ, ಈಗ ಎರಡನೇ ಸಿನಿಮಾದಲ್ಲಿ ಮತ್ತಷ್ಟು ಕಲಿತಿದ್ದೇನೆ. ಮುಂದಿನ ಸಿನಿಮಾದಲ್ಲಿ ಇನ್ನಷ್ಟು ಕಲಿಯುತ್ತೇನೆ.

- ಸಿನಿಮಾ ಇಂಡಸ್ಟ್ರಿ ನಿಮ್ಮಲ್ಲಿ ಯಾವ ಬದಲಾವಣೆಗಳನ್ನು ತಂದಿದೆ?

ಸಿನಿಮಾರಂಗಕ್ಕೆ ಬಂದು ನಾನು ಪ್ರಮುಖವಾಗಿ ಪೇಷೆನ್ಸ್ ಕಲಿತೆ. ಮೊದಲೆಲ್ಲಾ ಲೈವ್ ಶೋಸ್ ಮತ್ತು ಪ್ರೋಗ್ರಾಮ್ಸ್ ಮಾಡುತ್ತಿದ್ದೆ. ಎರಡು ತಾಸುಗಳಲ್ಲಿ ಕಾರ್ಯಕ್ರಮ ಮುಗಿದು ಹೋಗುತ್ತಿತ್ತು. ಆದರೆ ಸಿನಿಮಾ ಹಾಗಲ್ಲ. ಎರಡು ತಾಸುಗಳ ಸಿನಿಮಾಗೂ ಹಲವಾರು ದಿನಗಳ ಕಾಲ ಶೂಟಿಂಗ್ ಮಾಡಬೇಕು. ಲೈಟಿಂಗ್ಸ್, ಪ್ರೊಡಕ್ಷನ್, ಕ್ಯಾಮರಾ ಪ್ಲೇಸ್ಮೆಂಟ್, ಲೊಕೇಷನ್ ಅಂತ ಪ್ರತಿ ಸೀನ್​ಗೂ ಸಿದ್ಧತೆ ಮಾಡಿಕೊಳ್ಳಬೇಕು. ಹಲವು ದಿನಗಳ ಕಾಲ ಈ ಪ್ರಕ್ರಿಯೆಗಳನ್ನು ನೋಡುತ್ತಾ ಪೇಷೆನ್ಸ್ ತುಂಬಾ ಕಲಿತೆ.

- ಆಟೋ ಡ್ರೈವರ್ ಅಸ್ಗರ್ ಬಗ್ಗೆ ಹೇಳಿ…

ಆಟೋ ಡ್ರೈವರ್ ಅಸ್ಗರ್ ಜೀವನ ಪೂರ್ತಿ ಫುಲ್ ಪ್ರಾಬ್ಲಂಗಳೇ. ಅದರ ಜೊತೆಗೆ ಫ್ರೆಂಚ್ ವ್ಯಕ್ತಿಯೊಬ್ಬ ಭಾರತಕ್ಕೆ ಬಂದು ಮತ್ತಷ್ಟು ಸಮಸ್ಯೆಯಲ್ಲಿ ಸಿಲುಕಿಸುತ್ತಾನೆ. ಇಬ್ಬರೂ ಒಂದು ಬ್ಯಾಗ್​ಗಾಗಿ ಹುಡುಕ ತೊಡಗುತ್ತಾರೆ. ಚಿಕ್ಕ ವಯಸ್ಸಿನಿಂದ ನಾನೂ ಆಟೋ ಡ್ರೈವರ್​ಗಳನ್ನ ನೋಡಿದ್ದೀನಲ್ಲಾ. ಅವರಂತೆಯೇ ಭಾಷೆ, ಬಾಡಿ ಲಾಂಗ್ವೇಜ್ ಮಾಡಿಕೊಳ್ಳಲು ಹೆಚ್ಚು ಸಮಸ್ಯೆ ಆಗಲಿಲ್ಲ. ತುಂಬಾ ಜನ ನನ್ನ ನಟನೆ ನೋಡಿ ನೀವು ಪಕ್ಕಾ ಆಟೋ ಡ್ರೈವರ್ ಅಂತೆಲ್ಲಾ ಹೇಳಿದರು. ಖುಷಿಯಾಯಿತು.- ಪುನೀತ್ ರಾಜ್​ಕುಮಾರ್ ಅವರ ಬ್ಯಾನರ್​ನಲ್ಲಿ ನಟಿಸಿದ ಬಗ್ಗೆ…

ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ಪವರ್ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ನಾನು ನನ್ನ ಜೀವನದಲ್ಲೇ ಭೇಟಿಯಾದ ತುಂಬ ಸೌಮ್ಯ ಸ್ವಭಾವದ ವ್ಯಕ್ತಿತ್ವ. ಅವರಿಗೆ ಅವರ ಸ್ಟಾರ್​ಡಂ ಬಗ್ಗೆ ಅರಿವಿದೆ, ಆದರೆ ಅದಕ್ಕವರು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೂಲಾಗಿ ಹ್ಯಾಂಡಲ್ ಮಾಡುತ್ತಾರೆ. ನನಗೆ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕ ಖುಷಿಯಿದೆ.

- ಒಂದು ನಿಮಿಷದ ಕಾಮಿಡಿ ವಿಡಿಯೋಗಳ ಮೂಲಕ ಲಾಕ್​ಡೌನ್​ನಲ್ಲೂ ರಂಜಿಸುತ್ತಿದ್ದೀರಿ.

ಮನೆಯಲ್ಲಿ ಕುಳಿತು ಬೇಸರವಾಗಿಯೇ ಈ ಐಡಿಯಾ ಬಂದಿದ್ದು. ನನಗೆ ಬರುವ ಕೆಲಸ ಕೂಡ ಇದೇ. ಜನರಿಗೆ ಮನರಂಜನೆ ನೀಡುವುದು. ನನಗೆ ಮನೇಲಿ ಸುಮ್ಮನೇ ಕುಳಿತುಕೊಂಡರೆ, ಎಂಪ್ಟಿ ಮೈಂಡ್ ಈಸ್ ಡೆವಿಲ್ಸ್ ವರ್ಕ್​ಶಾಪ್ ಎಂಬಂತೆ ಆಗಬಾರದು ಅಂತ ನಾನು ಯಾವಾಗಲೂ ಬ್ಯುಸಿಯಾಗಿರಲು ಇಷ್ಟಪಡುತ್ತೇನೆ. ಹೀಗಾಗಿಯೇ ಈ ರೀತಿಯ ಕಾಮಿಡಿ ವಿಡಿಯೋಸ್ ಮಾಡುತ್ತೇನೆ. ಲಾಕ್ಡೌನ್ ಪ್ರಾರಂಭದಲ್ಲಿ ಅಡುಗೆ ಮಾಡಲು ಪ್ರಯತ್ನಿಸಿದೆ, ಆದರೆ ನಾನು ಮಾಡಿದ ತಿಂಡಿ ನನಗೇ ತಿನ್ನಲಾಗಲಿಲ್ಲ. ವಿಡಿಯೋಸ್ ಮಾಡುತ್ತೇನೆ, ಪ್ಲೇ ಸ್ಟೇಷನ್ನಲ್ಲಿ ಗೇಮ್ಸ್ ಆಡುತ್ತೇನೆ, ಗೆಳೆಯರ ಜೊತೆ ಚಾಟ್ ಮಾಡುತ್ತೇನೆ.

- ಮುಂದಿನ ಪ್ರಾಜೆಕ್ಟ್​ಗಳು?

10 ಎಪಿಸೋಡ್​ಗಳ ವೆಬ್​ ಸಿರೀಸ್, ಹಂಬಲ್ ಪೊಲಿಟೀಶಿಯನ್ ನೋಗರಾಜ್ ಸೀಸನ್ 1 ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದೂ ರಿಲೀಸ್ ಆಗಲಿದೆ. ಅದಾದ ಬಳಿಕ 777 ಚಾರ್ಲೀ ಸಿನಿಮಾದಲ್ಲೂ ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸುತ್ತಿದ್ದೇನೆ.

- ಕ್ರಿಕೆಟ್ ಮತ್ತು ಸಿನಿಮಾ, ಎರಡೂ ಭಾರತೀಯರ ಫೇವರೇಟ್, ನೀವು ಈ ಎರಡೂ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದೀರಿ

ಏನಿರಲಿ, ಬಿಡಲಿ ಆದರೆ ಭಾರತೀಯರಿಗೆ ಮನರಂಜನೆ ಮತ್ತು ಕ್ರಿಕೆಟ್ ಜೀವನದಲ್ಲಿ ಇರಲೇಬೇಕು. ಎರಡೂ ಕ್ಷೇತ್ರಗಳಲ್ಲೂ ನಾನು ತೊಡಗಿಸಿಕೊಂಡಿರುವುದೇ ನನ್ನ ಅದೃಷ್ಟ ಅಂತ ಭಾವಿಸುತ್ತೇನೆ.
Published by: zahir
First published: July 24, 2020, 7:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading