ನಟಸಾರ್ವಭೌಮ, ಕೆಂಟಕಿ ಕರ್ನಲ್, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್ಕುಮಾರ್ (Rajkumar). ಕನ್ನಡ ಭಾಷೆ, ಕರ್ನಾಟಕ ನೆಲ, ಜಲ, ಸಂಸ್ಕೃತಿಯ ಪ್ರತೀಕ. ತಮ್ಮ ನಟನೆಯಿಂದ ಮಾತ್ರವಲ್ಲ, ಸರಳ ವ್ಯಕ್ತಿತ್ವದಿಂದ ಕೋಟ್ಯಂತರ ಅಭಿಮಾನಿಗಳನ್ನು ಪಡೆದವರು ಎಲ್ಲರ ನೆಚ್ಚಿನ ಅಣ್ಣಾವ್ರು. ಹೀಗಾಗಿಯೇ ಅವರು ಇಲ್ಲ ಅಂದರೂ ಇಂದಿಗೂ, ಎಂದೆಂದಿಗೂ ಅವರ ನೆನಪು ಕನ್ನಡಿಗರಲ್ಲಿ ಅಜರಾಮರ. ಅವರ ವಿಷಯಕ್ಕೆ, ಅವರ ಕುಟುಂಬದ ವಿಷಯಕ್ಕೆ ಅಥವಾ ಅಣ್ಣಾವ್ರ ಸಿನಿಮಾಗಳ ವಿಷಯಕ್ಕೆ ಬಂದರೂ ಅವರ ಅಭಿಮಾನಿಗಳು ಮೊದಲು ನಿಲ್ಲುತ್ತಾರೆ. ಡಾ. ರಾಜ್ಕುಮಾರ್ ಅವರ ಅಭಿಮಾನಿಗಳು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದರು.
ಅಣ್ಣಾವ್ರ ಸಿನಿಮಾಗಳು ಯಾರ ಆಸ್ತಿ, ಯಾರ ಆಸ್ತಿ... ಅಣ್ಣಾವ್ರ ಸಿನಿಮಾಗಳು ಕನ್ನಡಿಗರ ಆಸ್ತಿ, ಅಭಿಮಾನಿಗಳ ಆಸ್ತಿ... ಉಳಿಸಿಕೊಡಿ, ಉಳಿಸಿಕೊಡಿ ಅಣ್ಣಾವ್ರ ಸಿನಿಮಾಗಳನ್ನು ಉಳಿಸಿಕೊಡಿ... ಹೀಗೆ ದೊಡ್ಮನೆ ಅಭಿಮಾನಿಗಳು ಘೋಷಣೆಗಳನ್ನೂ ಕೂಗುತ್ತಿದ್ದರು. ಅದಕ್ಕೆ ಕಾರಣ, ಅಣ್ಣಾವ್ರ ಸಿನಿಮಾ ಟೈಟಲ್ಗಳನ್ನ ಬೇರೆ ಬೇರೆ ಚಿತ್ರತಂಡಗಳು ತಮ್ಮ ಹೊಸ ಸಿನಿಮಾಗಳಿಗೆ ಮರುಬಳಕೆ ಮಾಡುತ್ತಿರುವುದು.
ಬಹದ್ದೂರ್ ಗಂಡು... 1976ರಲ್ಲಿ ರಿಲೀಸ್ ಆಗಿದ್ದ ಡಾ ರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಈಗ ಇದೇ ಟೈಟಲ್ ಅನ್ನು ಕಿರುತೆರೆ ಸ್ಟಾರ್ ಕಿರಣ್ ರಾಜ್ ನಾಯಕನಾಗಿರುವ ಹೊಸ ಚಿತ್ರಕ್ಕೆ ನಾಮಕರಣ ಮಾಡಲಾಗಿದೆ. ಭಲೇ ಜೋಡಿ... 1970ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಇದೇ ಶೀರ್ಷಿಕೆಯಲ್ಲಿ ಹಾಸ್ಯ ನಟ ಸಾಧು ಕೋಕಿಲಾ 2016ರಲ್ಲಿ ಸಿನಿಮಾ ನಿರ್ದೇಶಿಸಿದ್ದರು. ಆದರೆ ಈ ಹೊಸ ಭಲೇ ಜೋಡಿ ಅಣ್ಣಾವ್ರ ಸಿನಿಮಾದಷ್ಟು ಸದ್ದು ಹಾಗೂ ಸುದ್ದಿ ಎರಡೂ ಮಾಡಲಿಲ್ಲ.
ಇದನ್ನೂ ಓದಿ: Drone Prathap: ಅಪೂರ್ವ ಸಂಗಮ: ತಮ್ಮ ಡ್ರೋನ್ ಪ್ರತಾಪನ ಭೇಟಿಯಾದ ಡ್ರೋನ್ ಪ್ರಥಮ್..!
1970ರಲ್ಲಿ ರಿಲೀಸ್ ಆಗಿದ್ದ ಮತ್ತೊಂದು ಸಿನಿಮಾ ದೇವರ ಮಕ್ಕಳು. 2003ರಲ್ಲಿ ಇದೇ ಹೆಸರಿನಲ್ಲಿ ಮಕ್ಕಳ ಸಿನಿಮಾ ಮಾಡಲಾಗಿತ್ತು. 1964ರಲ್ಲಿ ತೆರೆಗೆ ಬಂದಿದ್ದ ಡಾ. ರಾಜ್ಕುಮಾರ್ ಅವರು ನಟಿಸಿದ್ದ ಉಯ್ಯಾಲೆ. 2015ರಲ್ಲಿ ಹೊಸ ತಂಡವೊಂದು ಉಯ್ಯಾಲೆ ಎಂಬ ಶೀರ್ಷಿಕೆಯನ್ನಿಟ್ಟು ಸಿನಿಮಾ ಮಾಡಿತ್ತು.
ತಾಯಿಗೆ ತಕ್ಕ ಮಗ ಎಂಬ ಸೂಪರ್ ಹಿಟ್ ಸಿನಿಮಾದಲ್ಲಿ ಅಣ್ಣಾವ್ರು 1978ರಲ್ಲೇ ನಟಿಸಿದ್ದರು. ಸಿನಿಮಾಗೆ ಎಲ್ಲಿಲ್ಲದ ಯಶಸ್ಸು ದೊರೆತಿತ್ತು. ಮೂರು ದಶಕಗಳ ಬಳಿಕ ಅರ್ಥಾತ್ 2018ರಲ್ಲಿ ತಾಯಿಗೆ ತಕ್ಕ ಮಗ ಟೈಟಲ್ನಲ್ಲಿಯೇ ನಿರ್ದೇಶಕ ಶಶಾಂಕ್ ಸಿನಿಮಾ ಮಾಡಿದ್ದರು.
ಅಣ್ಣಾವ್ರು ನಟಿಸಿದ್ದ ಮತ್ತೊಂದು ಹಿಟ್ ಚಿತ್ರ ಸ್ವಯಂವರ 1973ರಲ್ಲಿ ತೆರೆಗೆ ಬಂದಿತ್ತು. 2010ರಲ್ಲಿ ಅದೇ ಹೆಸರಿನಲ್ಲಿ ಹೊಸ ಸಿನಿಮಾ ಮಾಡಲಾಯಿತು. 1968ರಲ್ಲಿ ಡಾ. ರಾಜ್ಕುಮಾರ್ ಅಮ್ಮ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದೇ ಟೈಟಲ್ನಲ್ಲಿ 2001ರಲ್ಲಿ ಮತ್ತೊಂದು ಸಿನಿಮಾ ಆಗಿತ್ತು. ಅದರ ಜೊತೆಗೆ ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿರುವ ಹೊಸ ಸಿನಿಮಾ ಶೀರ್ಷಿಕೆಯನ್ನೂ ಅಮ್ಮ ಎಂದೇ ಇಡಲಾಗಿದೆ.
ಇದನ್ನೂ ಓದಿ: Janmashtami 2021: ಯಶೋಧೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಖ್ಯಾತಿಯ ನಟಿ ಸಪ್ತಾ ಪಾವೂರು
1963ರಲ್ಲಿ ಅಣ್ಣಾವ್ರು ನಟಿಸಿದ್ದ ವಾಲ್ಮೀಕಿ ಸಿನಿಮಾ ರಿಲೀಸ್ ಆಗಿತ್ತು. 2005ರಲ್ಲಿ ಅದೇ ಹೆಸರಿನ ಮತ್ತೊಂದು ಚಿತ್ರದಲ್ಲಿ ಶಿವಣ್ಣ ನಟಿಸಿದ್ದರು. ಡಾ. ರಾಜ್ಕುಮಾರ್ ಅವರು ನಟಿಸಿದ್ದ 1974ರ ಸೂಪರ್ಹಿಟ್ ಸಿನಿಮಾ ಎರಡು ಕನಸು. 2017ರಲ್ಲಿ ಇದೇ ಹೆಸರಿನ ಹೊಸ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದರು. 1968ರಲ್ಲಿ ಅಣ್ಣಾವ್ರು ಗಾಂಧಿನಗರ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದೇ ಹೆಸರಿನಲ್ಲಿ 2003ರಲ್ಲಿ ಹೊಸ ಸಿನಿಮಾವೊಂದು ನಿರ್ಮಾಣವಾಗಿತ್ತು.
ಹೀಗೆ ಡಾ. ರಾಜ್ಕುಮಾರ್ ಅವರ ಹಲವಾರು ಹಿಟ್ ಸಿನಿಮಾಗಳ ಶೀರ್ಷಿಕೆಗಳನ್ನು ಆಗೊಮ್ಮೆ ಈಗೊಮ್ಮೆ ಹೊಸ ಚಿತ್ರತಂಡಗಳು ಮರುಬಳಕೆ ಮಾಡಿಕೊಳ್ಳುತ್ತಿವೆ. ಪ್ರತಿ ಬಾರಿ ಹೀಗೆ ಮರುಬಳಕೆಯ ವಿಷಯ ಗೊತ್ತಾಗಲೂ ಡಾ. ರಾಜ್ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ಮಾಡುತ್ತಲೇಯಿದ್ದಾರೆ. ಆದರೆ ಒಂದು ಸಿನಿಮಾ ರಿಲೀಸ್ ಆದ 10 ವರ್ಷಗಳ ಬಳಿಕ ಆ ಸಿನಿಮಾ ಟೈಟಲ್ಅನ್ನು ಮರುಬಳಕೆ ಮಾಡಲು ಅವಕಾಶವಿದೆ. ಹಾಗೇನಾದರೂ ಮರುಬಳಕೆ ಮಾಡಬಾರದು ಅಂದರೆ ಆಯಾ ಸಿನಿಮಾ ನಿರ್ಮಿಸಿದ ನಿರ್ಮಾಪಕರು, ತಮ್ಮ ಬ್ಯಾನರ್ ಅಡಿಯಲ್ಲೇ ಪ್ರತಿ ವರ್ಷ ನವೀಕರಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ