ಚೆನ್ನೈ: ಖ್ಯಾತ ಗಾಯಕಿ ವಾಣಿ ಜಯರಾಂ (singer Vani Jairam) ನಿಧನರಾಗಿದ್ದಾರೆ. ತಮಿಳುನಾಡಿನ (Tamil Nadu) ಚೆನ್ನೈ (Chennai) ನಗರದ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ತಮಿಳು (Tamil), ತೆಲುಗು (Talugu), ಮಲಯಾಳಂ (Malayalam), ಕನ್ನಡ (Kannada), ತುಳು, ಭೋಜ್‌ಪುರಿ, ಮರಾಠಿ, ಬೆಂಗಾಲಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ (Cinema) ಹಾಡಿ ಪ್ರಖ್ಯಾತರಾಗಿದ್ದ ವಾಣಿ ಜಯರಾಂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 78 ವರ್ಷ ವಯಸ್ಸಿನ ವಾಣಿ ಜಯರಾಂ ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಖ್ಯಾತ ಗಾಯಕಿ ನಿಧನಕ್ಕೆ ದೇಶದಾದ್ಯಂತ ಸಂಗೀತ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಬಾಲ್ಯದಿಂದಲೇ ಸಂಗೀತದ ಬಗ್ಗೆ ಒಲವು
ವಾಣಿ ಜಯರಾಂ ಅವರು ತಮಿಳುನಾಡಿನ ಒಂದು ಅಯ್ಯಂಗಾರ್ ಪರಿವಾರದಲ್ಲಿ ವೆಲ್ಲೂರಿನ ಇಡಂಗು ಗ್ರಾಮದಲ್ಲಿ 1945, ನವೆಂಬರ್ 30ರಂದು ಜನಿಸಿದರು. ವಾಣಿಯವರ ತಾಯಿ ಪ್ರಸಿದ್ಧ ಸಂಗೀತ ವಿದ್ವಾಂಸ, ರಂಗ ರಾಮಾನುಜ ಅಯ್ಯಂಗಾರ್ ರ ಶಿಷ್ಯೆ. ಹೀಗಾಗಿ ಇವರಿಗೆ ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಇತ್ತು. ತಮ್ಮ ಐದನೇ ವಯಸ್ಸಿಗೆ ಕಡಲೂರು ಶ್ರೀನಿವಾಸ ಅಯ್ಯಂಗಾರರ ಬಳಿ ಸಂಗೀತಾಭ್ಯಾಸ ಶುರು ಮಾಡಿದರು. ಏಳನೇ ವಯಸ್ಸಿಗೆ ದೇಶಿಕಾಚಾರ್ ಕೃತಿಗಳನ್ನು ಸ್ಫುಟವಾಗಿ ಸರಾಗವಾಗಿ ಹಾಡುತ್ತಿದ್ದರು. 8ನೇ ವಯಸ್ಸಿನಲ್ಲೇ ಆಕಾಶವಾಣಿಯಲ್ಲಿ ಇವರ ದನಿ ಪ್ರಸಾರವಾಗಿತ್ತು.
10ನೇ ವರ್ಷದಲ್ಲೇ ಸಂಗೀತ ಕಚೇರಿ
ತಿರುವನಂತಪುರದಲ್ಲಿ 3 ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿದಾಗ ಇವರಿಗೆ ಕೇವಲ ಹತ್ತು ವರ್ಷ. ವಾಣಿ ಜಯರಾಂ ಅವರದು ಬಹುಮುಖ ಪ್ರತಿಭೆ. ಚಿತ್ರರಚನೆ ಜೊತೆಗೆ ಓದಿನಲ್ಲೂ ಮುಂದು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಂಠಸಿರಿಗೆ ಮಾರುಹೋದ ಮರಾಠಿ ಚಿತ್ರ ನಿರ್ದೇಶಕ ವಸಂತ ದೇಸಾಯಿ ತಮ್ಮ ಚಿತ್ರ ’ಅಮ್ಮ ತಾಯಿ ಗೋಡೆ’ಯಲ್ಲಿ ಹಾಡುವ ಅವಕಾಶ ಕಲ್ಪಿಸಿಕೊಟ್ಟರು. ಈ ಚಿತ್ರದ ಗಾಯನವನ್ನು ಮೆಚ್ಚಿಕೊಂಡ ಹಿಂದಿ ಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ತಮ್ಮ ’ಗುಡ್ಡಿ ’ ಚಿತ್ರದಲ್ಲಿ ಹಾಡಿಸಿದರು.ಈ ಚಿತ್ರದ "ಬೋಲ್‌ರೇ ಪಪ್ಪಿ ಹರಾ" ಹಾಡು ದೇಶಾದ್ಯಂತ ಸಂಚಲನೆಯನ್ನು ಉಂಟುಮಾಡಿತು. ಇದು ವಾಣಿ ಜಯರಾಂ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.
ಇದನ್ನೂ ಓದಿ: K Vishwanath: ‘ಕಲಾ ತಪಸ್ವಿ’ ಬಿರುದಾಂಕಿತ ಹೆಸರಾಂತ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಕೆ. ವಿಶ್ವನಾಥನ್ ಇನ್ನಿಲ್ಲ!
ಸುಮಧುರ ಗೀತೆಗಳಿಗೆ ಗಾಯನ
ಕನ್ನಡದಲ್ಲಿ ವಾಣಿ ಜಯರಾಂ ಅವರು ಅನೇಕ ಹಾಡುಗಳನ್ನು ಹಾಡಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಯುಗಳ ಗೀತೆಗಳು, ಫ್ಯಾಥೋ ಸಾಂಗ್ಸ್ ಸೇರಿದಂತೆ ಹಲವು ಪ್ರಕಾರದ ಗೀತೆಗಳಿನ್ನು ಹಾಡಿದ್ದಾರೆ. ಹಲವು ಭಕ್ತಿಗೀತೆಗಳಿಗೂ ವಾಣಿ ಜಯರಾಂ ದನಿಯಾಗಿದ್ದರು.
ಇಂದೂ ಜನಮಾನಸದಲ್ಲಿರುವ ಹಾಡುಗಳು
ಅನುಭವ ಸಿನಿಮಾದ ಹೋದೆಯಾ ದೂರ ಓ ಜೊತೆಗಾರ, ಇವ ಯಾವ ಸೀಮೆ ಗಂಡು ಕಾಣಮ್ಮೋ, ಏನೇನೋ ಆಸೆ, ಕವಿರತ್ನ ಕಾಳಿದಾಸ ಸಿನಿಮಾದ ಸದಾ ಕಣ್ಣಲಿ ಪ್ರಣಯದ ಕವಿತೆ ಸೇರಿದಂತೆ ಹಲವು ಹಿಟ್ ಗೀತೆಗಳಿಗೆ ವಾಣಿ ಜಯರಾಂ ದನಿ ನೀಡಿದ್ದಾರೆ.
78ನೇ ವಯಸ್ಸಲ್ಲಿ ನಿಧನರಾದ ವಾಣಿ ಜಯರಾಂ
78 ವಯಸ್ಸಿನ ವಾಣಿ ಜಯರಾಂ ಚೆನ್ನೈನ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಇತ್ತೀಚಿಗೆ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ವಾಣಿ ಜಯರಾಂ 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇವರಿಗೆ ಅನೇಕ ರಾಷ್ಟ್ರೀ-ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತಿದ್ದವು.
ವಾಣಿ ಜಯರಾಂ ಹಣೆ ಮೇಲೆ ಗಾಯ?
ವಾಣಿಜಯರಾಮ್ ಹಣೆಯ ಮೇಲೆ ಗಾಯವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ತಲೆಯ ತೀವ್ರ ಗಾಯದಿಂದಲೇ ನಿಧನರಾಗಿರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಪದ್ಮಭೂಷಣ ಪಡೆಯುವ ಮುನ್ನವೇ ನಿಧನ
ಈ ಬಾರಿಯ ಪದ್ಮಭೂಷಣ ಪ್ರಶಸ್ತಿಯನ್ನು ಇತ್ತೀಚಿಗಷ್ಟೇ ವಾಣಿ ಜಯರಾಂ ಅವರಿಗೆ ಘೋಷಿಸಲಾಗಿತ್ತು. ಈ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ವಾಣಿ ಜಯರಾಂ ಅವರು ನಿಧನರಾಗಿದ್ದಾರೆ. ಖ್ಯಾತ ಗಾಯಕಿ ನಿಧನಕ್ಕೆ ದೇಶಾದ್ಯಂತ ಅಭಿಮಾನಿಗಳು, ಸಂಗೀತ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ