ತೆರೆಗೆ ಬರಲಿದೆ ಡಾ. ಕಾಮಿನಿ ರಾವ್ ಬಯೋಪಿಕ್: ಶಿಕ್ಷಣ- ಸಿನಿಮಾಗಳತ್ತ ವೈದ್ಯೆಯ ಚಿತ್ತ..!

ಡಾ. ಕಾಮಿನಿ ರಾವ್ ಅವರ ಬಾಲ್ಯ, ಶಿಕ್ಷಣ, ಸಾಧನೆ ಕುರಿತ ಬಯೋಪಿಕ್‌ ಅನ್ನು ಮಾಡುವ ಆಲೋಚನೆ ಕೂಡ ಇದ್ದು, ಕೆಲ ವರ್ಷಗಳಲ್ಲೇ ಅದನ್ನೂ ಮಾಡುವುದಾಗಿ ಅವರ ಸೊಸೆ ಪೂಜಾ ಹೇಳಿಕೊಂಡಿದ್ದಾರೆ.

ವೈದ್ಯೆ ಕಾಮಿನಿ ರಾವ್​ ಅವರ ಕುಟುಂಬದ ಚಿತ್ರ

ವೈದ್ಯೆ ಕಾಮಿನಿ ರಾವ್​ ಅವರ ಕುಟುಂಬದ ಚಿತ್ರ

  • Share this:
ಡಾ. ಕಾಮಿನಿ ಎ. ರಾವ್. ವೈದ್ಯಕೀಯ ಲೋಕದಲ್ಲಿ ಅತಿ ದೊಡ್ಡ ಹೆಸರು. ಅದಕ್ಕೆ ಕಾರಣ ಬಂಜೆತನಕ್ಕೆ ಚಿಕಿತ್ಸೆ, ಸಂತಾನೋತ್ಪತ್ತಿ ತಂತ್ರಜ್ಞಾನಗಳಲ್ಲಿನ ಪರಿಣಿತಿ, ದಕ್ಷಿಣ ಭಾರತದ ಮೊದಲ ವೀರ್ಯ ಬ್ಯಾಂಕ್ ಸ್ಥಾಪನೆ, ಇಂಟ್ರಾ ಸೈಟೋಪಲಾಸ್ಮಿಕ್ ಸ್ಟೆಮ್ ಇಂಜೆಕ್ಷನ್ ಮೂಲಕ ಜನಿಸಿದ ದಕ್ಷಿಣ ಭಾರತದ ಮೊಲದ ಶಿಶುವನ್ನು ವಿನ್ಯಾಸಗೊಳಿಸಿದ ಸಾಧನೆ, ಭಾರತದ ಮೊದಲ ಸಿಫ್ಟ್ ಬೇಬಿಗೆ ಜನಿಸಲು ಕಾರಣೀಕರ್ತರಾಗುವ ಮೂಲಕ ವೈದ್ಯಕೀಯ ಲೋಕದಲ್ಲಿ ಅಪಾರ ಸೇವೆ ಸಲ್ಲಿಸಿರುವ ವೈದ್ಯೆ. ಇಂತಹ ಕಾಮಿನಿ ರಾವ್ ಅವರ ಸೇವೆಯನ್ನು ಗುರುತಿಸಿ  2014ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಭಾರತ ಸರ್ಕಾರ ನೀಡಿದೆ. ಅವರ ಪತಿ ಅರವಿಂದ್ ಅವರೂ ಸಹ ವೈದ್ಯರೇ ಆಗಿದ್ದು, ಇಬ್ಬರೂ ಈಗ ವೈದ್ಯಕೀಯ ಸೇವೆಗಳ ಜೊತೆಗೆ ಶಿಕ್ಷಣ ಹಾಗೂ ಸಿನಿಮಾ ಕ್ಷೇತ್ರಗಳಿಗೂ ಪದಾರ್ಪಣೆ ಮಾಡಿದ್ದಾರೆ.

ಹೌದು, ಡಾ. ಕಾಮಿನಿ ರಾವ್ ಸದ್ಯ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಶೇಷಾದ್ರಿಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯುನ್ನತ ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆಯುಳ್ಳ ಪ್ರೊಡಕ್ಷನ್ ಹೌಸ್ ‌ಅನ್ನೂ ಈಗಾಗಲೇ ಪ್ರಾರಂಭಿಸಿದ್ದಾರೆ. ಅದರ ಮೊದಲ ಭಾಗವಾಗಿ ಮಾಸ್ಟರ್‌ಕ್ಲಾಸ್ ಎಂಬ ಕಾರ್ಯಕ್ರಮವನ್ನೂ ಮಾಡುತ್ತಿದ್ದು, ಅದರಲ್ಲಿ ಡಾ. ಕಾಮಿನಿ ರಾವ್ ಅವರೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರ ಸಂದರ್ಶನ ನಡೆಸುತ್ತಿದ್ದಾರೆ.

 Dr Kamini Rao, Poorvi Productions, Kamini Rao Biopic Sandalwood, ಸ್ಯಾಂಡಲ್​ವುಡ್​, ಕಾಮಿನಿ ರಾವ್​, ವೈದ್ಯೆ ಕಾಮಿನಿ ರಾವ್​ ಅವರ ಬಯೋಪಿಕ್​, ಸ್ಯಾಂಡಲ್​ವುಡ್​, ಪೂರ್ವಿ ಪ್ರೊಡಕ್ಷನ್ಸ್​
ವೈದ್ಯೆ ಕಾಮಿನಿ ರಾವ್​ ಅವರ ಕುಟುಂಬದ ಚಿತ್ರ


ಮಾತ್ರವಲ್ಲ ಅವರ ಸೊಸೆ ಪೂಜಾ ಮತ್ತು ತಂಡ ಡಾ. ಕಾಮಿನಿ ರಾವ್ ಅವರ ಕುರಿತ ಕಿರುಚಿತ್ರವನ್ನೂ ಸಹ ಮಾಡಿದೆ. ಇದರ ಮುಂದುವರೆದ ಭಾಗವಾಗಿ ಡಾ. ಕಾಮಿನಿ ರಾವ್ ಅವರ ಬಾಲ್ಯ, ಶಿಕ್ಷಣ, ಸಾಧನೆ ಕುರಿತ ಬಯೋಪಿಕ್ ‌ಅನ್ನು ಮಾಡುವ ಆಲೋಚನೆ ಕೂಡ ಇದ್ದು, ಕೆಲ ವರ್ಷಗಳಲ್ಲೇ ಅದನ್ನೂ ಮಾಡುವುದಾಗಿ ಪೂಜಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಆಮೀರ್ ಖಾನ್-ಕಿರಣ್​ ರಾವ್​ ಲವ್​ ಸ್ಟೋರಿ ದಿ ಎಂಡ್​: ಕಾರಣವಾದ್ರಾ ಆ ಸುಂದರ ನಟಿ..!

ಇನ್ನು ಸಿನಿಮಾ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿರುವ ಡಾ. ಕಾಮಿನಿ ರಾವ್, ಪೂರ್ವಿ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈಗಾಗಲೇ ಎಂಟು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದು, ಅವುಗಳಲ್ಲಿ ಏಳು ಸಿನಿಮಾ ಕಥೆಗಳನ್ನು ಓಕೆ ಮಾಡಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ಪೂಜಾ, `ನಾವು ಸಿನಿಮಾ ಮಾಡುತ್ತಿರುವುದು ಕೂಡ ಒಂದು ಸೇವೆಯೇ ಹೊರತು, ಲಾಭಕ್ಕಾಗಿ ಅಲ್ಲ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ನಿಟ್ಟಿನಲ್ಲಿ ಹಾಗೂ ಹೊಸ ಪ್ರತಿಭೆಗಳನ್ನು ಗುರತಿಸಿ ಅವರಿಗೆ ಒಂದು ವೇದಿಕೆ ನೀಡುವುದಕ್ಕಾಗಿ ಸಿನಿಮಾ ಮಾಡುತ್ತಿದ್ದೇವೆ. ಆದರೆ ಹಲವಾರು ಮಂದಿ ನನ್ನ ಬಳಿ ಆ ಹೀರೋ ಡೇಟ್ಸ್ ಇದೆ, ಈ ಕಮರ್ಷಿಯಲ್ ಸ್ಟೋರಿ ಇದೆ ಅಂತ ಕರೆ ಮಾಡುತ್ತಿದ್ದಾರೆ. ಬಂದು ನಮ್ಮನ್ನು ಭೇಟಿ ಮಾಡುತ್ತಿದ್ದಾರೆ. ಆದರೆ ನಾವು ಸಿನಿಮಾ ಮಾಡುತ್ತಿರುವ ಉದ್ದೇಶವೇ ಬೇರೆ ಇದೆ' ಎಂದು ಸ್ಪಷ್ಟನೆ ನೀಡುತ್ತಾರೆ.

ಸಿನಿಮಾ ಮಾತ್ರವಲ್ಲ ಶಿಕ್ಷಣ ಕ್ಷೇತ್ರದಲ್ಲೂ ಏನಾದರೂ ಮಾಡಬೇಕು ಎಂಬ ಉದ್ದೇಶದೊಂದಿಗೆ ಡಾ. ಕಾಮಿನಿ ರಾವ್ ಎಕ್ಸೆಲೆನ್ಸ್ ಅವಾರ್ಡ್ಸ್ ಅನ್ನೂ ಈ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ. ಇಂತಿಷ್ಟು ಹಣವನ್ನು ಡೆಪಾಸಿಟ್ ಇಟ್ಟು ಪ್ರತಿ ವರ್ಷ ಮಕ್ಕಳ ಏಳಿಗೆಗೆ ಅದರಿಂದ ಬರುವ ಹಣವನ್ನು ವಿನಿಯೋಗಿಸಲು ಮುಂದಾಗಿದ್ದಾರೆ ಡಾ. ಕಾಮಿನಿ ರಾವ್. ಅವರು ಇರುವವರೆಗೆ ಮಾತ್ರವಲ್ಲ, ಅವರ ಬಳಿಕವೂ ಈ ಎಕ್ಸೆಲೆನ್ಸ್ ಅವಾರ್ಡ್ಅನ್ನು ಮುಂದುವರಿಸಿಕೊಂಡು ಹೋಗಲು ಈ ಆಲೋಚನೆ ಎನ್ನುತ್ತಾರೆ ಡಾ. ಕಾಮಿನಿ ರಾವ್.

ಇದನ್ನೂ ಓದಿ: Aamir Khan-Kiran Rao: ರಾಜಮನೆತನದ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಆಮೀರ್ ಖಾನ್​​: ಹೇಗಿದೆ ಗೊತ್ತಾ ಇವರ ಲವ್​ ಸ್ಟೋರಿ..!

ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಅರ್ಜಿಯನ್ನು ಸ್ವೀಕರಿಸಲಿದ್ದು, ಅದಕ್ಕೆಂದೇ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಒಂದು ಸಮಿತಿಯನ್ನೂ ಮಾಡಿಕೊಳ್ಳಲಾಗುತ್ತಿದೆ. ಇದೇ ಜುಲೈ 10ರಿಂದ ಆಗಸ್ಟ್ 15ರವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಾರಿ ಸೆಪ್ಟೆಂಬರ್‌ನಲ್ಲಿ ಸುಮಾರಿ 20 ಮಂದಿ ಬೇರೆ ಬೇರೆ ಶಿಕ್ಷಣ ಕ್ಷೇತ್ರಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಿದ್ದು, ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಆಲೋಚನೆ ಅವರದು.

ಒಟ್ಟಾರೆ ಭಾರತೀಯ ವೈದ್ಯ ಲೋಕದ ದಿಗ್ಗಜೆ ಡಾ. ಕಾಮಿನಿ ರಾವ್ ಅವರು ಕೇವಲ ತಮ್ಮ ವೈದ್ಯ ವೃತ್ತಿಗಷ್ಟೇ ಸೀಮಿತವಾಗದೇ, ಸಿನಿಮಾ, ಶಿಕ್ಷಣ ಅಂತ ಬೇರೆ ಬೇರೆ ಕ್ಷೇತ್ರಗಳಿಗೂ ದಾಪುಗಾಲು ಹಾಕಿದ್ದಾರೆ. ಆ ಮೂಲಕ ತಮ್ಮದೇ ರೀತಿಯಲ್ಲಿ ಹೊಸ ಪ್ರತಿಭೆಗಳಿಗೆ ವೇದಿಕೆ ನೀಡಲು ಮುಂದಾಗಿದ್ದಾರೆ.
Published by:Anitha E
First published: