ಇಂದಿನ ಕಾಲದಲ್ಲಿ ಕ್ರೈಂ ಥ್ರಿಲ್ಲರ್ ಆಕ್ಷನ್ ವೆಬ್ ಸೀರಿಸ್‌ಗಳು (Web Series) ತಮ್ಮದೇ ಆದ ವೀಕ್ಷರನ್ನು ಹೊಂದಿದೆ. ಅಂಥ ಜನಪ್ರಿಯ ವೆಬ್ ಸೀರಿಸ್‌ಗಳ ಪೈಕಿ ಫ್ಯಾಮಿಲಿ ಮ್ಯಾನ್ (Family Man) ವೆಬ್ ಸರಣಿ ಕೂಡ ಒಂದು. ಈಗಾಗಲೇ ಅಮೇಜಾನ್ ಪ್ರೈಮ್ ನಲ್ಲಿ (Amazon Prime) ತೆರೆಕಂಡ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ. ಫ್ಯಾಮಿಲಿ ಮ್ಯಾನ್ ಸೀಸನ್ 1 ಹಾಗೂ ಸೀಸನ್ 2 ಈಗಾಗಲೇ ಬಿಡುಗಡೆಯಾಗಿದ್ದು ಭಾರೀ ಜನಪ್ರಿಯತೆ ಗಳಿಸಿವೆ. ಇದೀಗ ಸೀಸನ್ 3 ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
2019 ರಲ್ಲಿ ತೆರೆಕಂಡ ಫ್ಯಾಮಿಲಿ ಮ್ಯಾನ್ ಸೀಸನ್ 1 ಹಾಗೂ 2021 ರಲ್ಲಿ ತೆರೆಕಂಡ ಫ್ಯಾಮಿಲಿ ಮ್ಯಾನ್ ಸೀಸನ್ 2 ನೋಡಿದ್ದ ಅಭಿಮಾನಿಗಳು ಸೀಸನ್ 3 ಒಟಿಟಿ ರಿಲೀಸ್ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಶ್ರೀಕಾಂತ್ ತಿವಾರಿ ನೋಡೋಕೆ ಅಭಿಮಾನಿಗಳ ಕಾತರ
ಭಾರತದ ರಾಷ್ಟ್ರೀಯ ಗುಪ್ತಚರ ಸಂಸ್ಥೆ (NIA) ಯ ವರ್ಚುವಲ್ ಥ್ರೆಟ್ ಅನಾಲಿಸಿಸ್ ಮತ್ತು ಸರ್ವೆಲೆನ್ಸ್ ಸೆಲ್ (TASC) ನಲ್ಲಿ ಅಧಿಕಾರಿಯಾಗಿ ಅಭಿನಯಿಸಿದ್ದ ಶ್ರೀಕಾಂತ್ ತಿವಾರಿ ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ.
ಮಧ್ಯಮ ವರ್ಗದ ಫ್ಯಾಮಿಲಿಯಲ್ಲಿ ಕೌಟುಂಬಿಕ ಸಮಸ್ಯೆಗಳ ಜೊತೆಗೆ ನಿಷ್ಠಾವಂತ ದಿಟ್ಟ ಅಧಿಕಾರಿಯಾಗಿ ಮನೋಜ್ ಬಾಜಪೇಯಿ ಮನೋಜ್ಞ ಅಭಿನಯ ನೀಡಿದ್ದರು. ಕಳೆದ ಎರಡೂ ಸೀಸನ್ ನಲ್ಲಿ ಆಕ್ಷನ್ ಜೊತೆಗೆ ಹಾಸ್ಯ ಹಾಗೆಯೇ ಬೇಹುಗಾರಿಕೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ನೈಜ ಚಿತ್ರಣ ಅದ್ಭುತವಾಗಿತ್ತು.
ಮೊದಲ ಸೀಸನ್ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು. ಅದರ ಪಾತ್ರಗಳು, ಬಿಗಿಯಾದ ಸ್ಕ್ರಿಪ್ಟ್ ಮತ್ತು ಅದರ ಪ್ರಮುಖ ನಟರ ಅಭಿನಯಕ್ಕಾಗಿ ಭಾರೀ ಮೆಚ್ಚುಗೆ ಪಡೆಯಿತು. ಹಾಗೆಯೇ ಎರಡನೇ ಸೀಸನ್ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ರಾಜ್ ನಿಡಿಮೋರು ಮತ್ತು ಕೃಷ್ಣ ಡಿ.ಕೆ ನಿರ್ಮಿಸಿರುವ ವೆಬ್ ಸರಣಿಯು ಹಿಂದಿನ ಸರಣಿಯ ಕಥೆಯನ್ನೇ ಮುಂದುವರಿಸುತ್ತದೆ ಎನ್ನಲಾಗಿದೆ.
ಶ್ರೀಕಾಂತ್ ತಿವಾರಿ ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲುಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಾರೆ. ಹಾಗೆಯೆ ಮಧ್ಯಮ ವರ್ಗದ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಾ ಸಾಗುತ್ತಾರೆ ಎನ್ನಲಾಗಿದೆ. ಆದ್ರೆ ಈ ಸರಣಿ ಹೊಸ ಥೀಮ್‌ಗಳು ಮತ್ತು ಆಲೋಚನೆಗಳನ್ನು ಹೊಂದಿದೆ. ಅಲ್ಲದೇ ಮತ್ತಷ್ಟು ಹೊಸ ಪಾತ್ರಗಳನ್ನು ಸೃಷ್ಟಿಸಲಾಗಿದೆ.
ಈ ವರ್ಷದ ಮೊದಲಾರ್ಧದಲ್ಲಿ ಸೀಸನ್ 3 ಬಿಡುಗಡೆ?
ಈಗಾಗಲೇ ಹೊಸ ಸೀಸನ್‌ನ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಮೊದಲಾರ್ಧದಲ್ಲೇ ವೆಬ್ ಸರಣಿ ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಮಾರ್ಚ್ 8ರಂದು ಬಿಡುಗಡೆ ಫ್ಯಾಮಿಲಿ ಮ್ಯಾನ್ ಸೀಸನ್ 3 ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಕಳೆದ ಸೀಸನ್ ನಲ್ಲಿದ್ದಂತೆಯೇ ಶ್ರೀಕಾಂತ್ ತಿವಾರಿಯಾಗಿ ಮನೋಜ್ ಬಾಜಪೇಯಿ, ಶ್ರೀಕಾಂತ್ ಪತ್ನಿ ಸುಚಿತ್ರಾ ತಿವಾರಿಯಾಗಿ ನಟಿ ಪ್ರಿಯಾಮಣಿ, ಜೆಕೆ ತಲ್ಪಡೆಯಾಗಿ ಶರೀಬ್ ಹಶ್ಮಿ ಅಭಿನಯಿಸುತ್ತಿದ್ದಾರೆ. ಅಲ್ದೇ ನೀರಜ್ ಮಾಧವ್, ಆಶ್ಲೇಷಾ ಠಾಕೂರ್, ವೇದಾಂತ್ ಸಿನ್ಹಾ ಮತ್ತು ಶರದ್ ಕೇಳ್ಕರ್ ಮುಂತಾದವರೂ ಸೀಸನ್ 3 ರಲ್ಲಿ ಅಭಿನಯಿಸುತ್ತಿದ್ದಾರೆ.
ಆದ್ರೆ ಕಳೆದ ಸೀಸನ್‌ನಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದ ರಾಜಿ ಪಾತ್ರಧಾರಿ ನಟಿ ಸಮಂತಾ ರುತ್ ಪ್ರಭು ಈ ಬಾರಿ ಕಾಣಿಸಿಕೊಂಡಿಲ್ಲ. ಅಲ್ಲದೇ ಶ್ರೇಯಾ ಧನ್ವಂತರಿ ಅಥವಾ ಸನ್ನಿ ಹಿಂದುಜಾ ಅವರನ್ನೂ ಈ ಸೀಸನ್‌ನಲ್ಲಿ ನೋಡಲಾಗುವುದಿಲ್ಲ.
ಇನ್ನು ಈ ವರ್ಷ ಫ್ಯಾಮಿಲಿ ಮ್ಯಾನ್ ಜೊತೆಗೆ ಬಹಳಷ್ಟು ಜನಪ್ರಿಯ ವೆಬ್ ಸರಣಿಗಳ ಹೊಸ ಸೀಸನ್ ಕೂಡ ನೋಡಬಹುದು. ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2, ಪಂಚಾಯತ್, ಮಿರ್ಜಾಪುರ್, ಪಾತಾಲ್ ಲೋಕ್, ಸ್ಕ್ಯಾಮ್ ಮತ್ತು ಇನ್ನೂ ಅನೇಕ ವೆಬ್ ಸರಣಿಯ ಹೊಸ ಸೀಸನ್‌ಗಳು ಬಿಡುಗಡೆಯಾಗಲಿವೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ