news18-kannada Updated:January 20, 2021, 10:48 PM IST
ಸಾಜಿದ್ ಖಾನ್ ಮತ್ತು ಆರೋಪ ಮಾಡಿದ ನಟಿಯರು.
ಬೆಂಗಳೂರು; ಸಿನಿಮಾ, ಮಾಯಾಲೋಕ. ಕಣ್ಣಿಗೆ ಕಲರ್‌ಫುಲ್ ಆಗಿ ಕಂಡರೂ, ಒಳ ಹೊಕ್ಕರೆ ಅದರಲ್ಲಿನ ಕೊಳಕುಗಳು ಬಗ್ಗೆ ಗೊತ್ತಾಗುವುದು. ಅದರಲ್ಲೂ ಕಾಸ್ಟಿಂಗ್ ಕೌಚ್ ಪ್ರಕರಣಗಳಂತೂ ಎಲ್ಲಾ ಚಿತ್ರರಂಗಗಳಲ್ಲೂ ಸದ್ದು ಮಾಡಿದೆ. ಹಲವು ಸ್ಟಾರ್‌ಗಳು, ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ಹತ್ತಾರು ನಟಿಮಣಿಯರು ಆರೋಪಗಳನ್ನು ಮಾಡಿದ್ದಾರೆ. ಮೀಟೂ ಆನ್‌ಲೈನ್ ಕ್ಯಾಂಪೇನ್ ಸಮಯದಲ್ಲಿ ಹಲವಾರು ನಟಿಯರು ತಮಗೆ ಆದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗಪಡಿಸಿದ್ದರು. ಕೆಲವರು ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡವರ ಬಗ್ಗೆ ಬಹಿರಂಗವಾಗಿ ತಿಳಿಸಿದರೂ ಕೆಲವರು ಸಿನಿ ಭವಿಷ್ಯಕ್ಕೆ ಎಲ್ಲಿ ಮಾರಕವಾಗುವುದೋ ಎಂಬ ಭಯದಲ್ಲಿ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಆದರೆ ಇಲ್ಲೊಬ್ಬ ಬಾಲಿವುಡ್ ನಿರ್ದೇಶಕನ ಮೇಲೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 8 ಮಂದಿ ನಟಿಯರು ಆರೋಪಿಸಿದ್ದಾರೆ. ಬಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ನೀಡಿರುವ ಈತ ಹೀಗಾ ಅಂತ ಎಲ್ಲರೂ ಆಶ್ಚರ್ಯಪಡುವಂತಾಗಿದೆ. ಮತ್ತೊಂದೆಡೆ ಆನ್‌ಲೈನ್‌ನಲ್ಲಿ ಈ ನಿರ್ದೇಶಕನ ಹೆಸರು ಓಡಾಡಲು ಪ್ರಾರಂಭಿಸಿದ್ದೇ ತಡ, ಸೈಲೆಂಟಾಗಿದ್ದಾನೆ ಆ ಮಹಾಶಯ.
ಹೌದು, ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ಹೆಸರು ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ಕಾಸ್ಟಿಂಗ್ ಕೌಚ್‌ನಿಂದಲೇ ಸುದ್ದಿ ಮಾಡುತ್ತಿದೆ. 2006ರಲ್ಲಿ ಡರ್‌ನಾ ಜರೂರಿ ಹೈ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ ಸಾಜಿದ್ ಆ ಬಳಿಕ ಹೇ ಬೇಬಿ, ಹೌಸ್‌ಫುಲ್, ಹೌಸ್‌ಫುಲ್ 2, ಹಿಮ್ಮತ್‌ವಾಲಾ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ 2014ರಲ್ಲಿ ಹಮ್‌ಶಕಲ್ಸ್ ಸಿನಿಮಾ ಬಳಿಕ ಮತ್ತೆ ಅವರು ನಿರ್ದೇಶಿಸಿದ ಸಿನಿಮಾಗಳು ತೆರೆಗೆ ಬಂದಿಲ್ಲ. 2018ರಲ್ಲಿ ಹೌಸ್‌ಫುಲ್ 4 ಚಿತ್ರಕ್ಕೆ ಅವರೇ ಆಕ್ಷನ್ ಕಟ್ ಹೇಳಬೇಕಿತ್ತಾದರೂ, ಹಲವಾರು ನಟಿಯರು ಅವರ ವಿರುದ್ಧ ಆರೋಪ ಮಾಡಿದ ಪರಿಣಾಮ ಸಿನಿಮಾ ತಂಡ ಅವರನ್ನು ಕೈಬಿಟ್ಟಿತ್ತು.
ಈಗ ಮತ್ತೆ ಸಾಜಿದ್ ಹೆಸರು ಸಿನಿಮಾ ಹೊರತಾಗಿ ಕಾಸ್ಟಿಂಗ್ ಕೌಚ್‌ನಿಂದ ಕೇಳಿಬರುತ್ತಿದೆ. ಮೃತ ನಟಿ ಜಿಯಾ ಖಾನ್ ಸಹೋದರಿ, ಸಾಜಿದ್ ಜಿಯಾಗೆ ಟಾಪ್ ತೆಗೆಯಲು ಹೇಳಿದ್ದ, ಮಾತ್ರವಲ್ಲ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ ಎಂದು ಆರೋಪಿಸಿದ್ದಾರೆ. ಕೇವಲ 16 ವರ್ಷದ ನಟಿ ಕರಿಷ್ಮಾ ಎಂಬಾಕೆಯ ಮೇಲೂ ತನ್ನ ಕಾಮದೃಷ್ಟಿ ನೆಟ್ಟಿದ್ದ ಎಂದೂ ಜಿಯಾ ಸಹೋದರಿ ಸಾಜಿದ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ನಟಿ ಶೆರ್ಲಿನ್ ಚೋಪ್ರಾ ಕೂಡ ಸಾಜಿದ್ ವಿರುದ್ಧ ಹರಿಹಾಯ್ದಿದ್ದಾರೆ. 2005ರಲ್ಲಿ ಆತನನ್ನು ಭೇಟಿಯಾದ ಸಂದರ್ಭದಲ್ಲಿ ಅಶ್ಲೀಲವಾಗಿ ವರ್ತಿಸಿದ್ದ ಎಂದು ಸಾಜಿದ್ ಮೇಲೆ ಕಿಡಿಕಾರಿದ್ದಾರೆ ಶೆರ್ಲಿನ್.
ಇದನ್ನು ಓದಿ: Darshan: ಪುಟ್ಟ ಅಭಿಮಾನಿಯ ಹುಟ್ಟುಹಬ್ಬದಲ್ಲಿ ಭಾಗಿಯಾದ ದರ್ಶನ್..!
ಹಾಗೇ 2014ರಲ್ಲಿ ಹಮ್‌ಶಕಲ್ಸ್ ಸಿನಿಮಾದ ಆಡಿಷನ್‌ಗೆ ಸಾಜಿದ್ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ, ಬಟ್ಟೆ ತೆಗೆದು ಬೆತ್ತಲಾಗಿ ನಿಂತರೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದ ಎಂದು ನಟಿ ಮಂದನಾ ಕರಿಮಿ ಆರೋಪಿಸಿದ್ದಾರೆ. ಅಹಾನಾ ಕುಮ್ರಾ, ಡಿಂಪಲ್ ಪೌಲ್, ಸಲೋನಿ ಚೋಪ್ರಾ, ರಷೆಲ್ ವೈಟ್, ಜಾಕ್‌ಲೀನ್ ಫರ್ನಾಂಡಿಸ್ ಕೂಡ ಸಾಜಿದ್ ವಿರುದ್ಧ ಆರೋಪಗಳು ಸುರಿಮಳೆಗೈದಿದ್ದಾರೆ. ಮಾತ್ರವಲ್ಲ ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ್ ಕೂಡ ಸಾಜಿದ್ ಮೇಲೆ ಕಿಡಿಕಾರಿದ್ದಾರೆ.
ಹೀಗೆ ಮತ್ತೆ ಆನ್‌ಲೈನ್‌ನಲ್ಲಿ ತನ್ನ ಮೇಲೆ ಎಲ್ಲರೂ ಸಮರ ಸಾರಿರುವುದನ್ನು ಮನಗಂಡ ಸಾಜಿದ್, ಸೈಲೆಂಟಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ. ಅದೇನೇ ಇರಲಿ, ಇಷ್ಟೆಲ್ಲಾ ಆರೋಪಗಳು ಕೇಳಿಬಂದಿದ್ದರೂ, ಸಾಜಿದ್ ವಿರುದ್ಧ ಬಾಲಿವುಡ್‌ನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.
Published by:
HR Ramesh
First published:
January 20, 2021, 10:48 PM IST