ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದಾಗಲೇ ಸಖತ್ ಸೌಂಡ್ ಮಾಡಿದ್ದ 'ಸಲಗ' ಮತ್ತೊಮ್ಮೆ ಘೀಳಿಟ್ಟಿದೆ. ಈ ಬಾರಿ ಅದು ಮಲೆ ಮಹದೇಶ್ವರ ಬೆಟ್ಟದಲ್ಲಿ ಎಂಬುದು ವಿಶೇಷ. ಹೌದು, ದುನಿಯಾ ವಿಜಯ್ ನಿರ್ದೇಶಕ ಕಮ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಸಲಗ ಮಾರ್ಚ್ 25 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಅದಕ್ಕೂ ಮುನ್ನ ಜಬರ್ದಸ್ತ್ ಹಾಡುಗಳನ್ನು ಕೇಳುಗರ ಮುಂದಿಡಲು ಸಲಗ ತಂಡ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಹದೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು.
ಈಗಾಗಲೇ ಸೂರಿ ಅಣ್ಣಾ..ಸಾಂಗ್ ಮೂಲಕ ಅಭಿಮಾನಿಗಳಿಗೆ ಕಿಕ್ಕೇರಿಸಿರುವ ಸಲಗ ತಂಡ ಈ ಬಾರಿ ಐ ಲವ್ ಯೂ ಸಂಜನಾ ಎಂದೇಳಲಿದೆ. ಅಂದರೆ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ ಸಲಗ ಚಿತ್ರದ ಎರಡನೇ ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಈ ಗೀತೆಗೆ ಗಾಯಕ ನವೀನ್ ಸಜ್ಜು ರಾಗ ಸಂಯೋಜಿಸಿರುವುದು ಇಲ್ಲಿ ವಿಶೇಷ. ಹಾಗೆಯೇ ಮತ್ತೊಂದು ಗೀತೆಗೂ ನವೀನ್ ಮ್ಯೂಸಿಕ್ ನೀಡಿದ್ದು, ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ಇನ್ನು ಈಗಾಗಲೇ ಮೋಡಿ ಮಾಡಿರುವ ಸೂರಿ ಅಣ್ಣಾ...ಸಾಂಗ್ ಮ್ಯೂಸಿಕ್ನಲ್ಲೂ ಚರಣ್ ರಾಜ್ ಜೊತೆ ನವೀನ್ ಸಜ್ಜು ಕೈಜೋಡಿಸಿದ್ದರು.
ಸಲಗ ಟೀಸರ್ ಈಗಾಗಲೇ ಸಿನಿಪ್ರಿಯರನ್ನು ಸೆಳೆದಿದ್ದು, ಅದರಲ್ಲೂ
ವರ್ಲ್ಡ್ ಯಾವುದೇ ಕಲರಲ್ಲಿದ್ದರೂ...ಈ ಅಂಡರ್ವರ್ಲ್ಡ್ ಮಾತ್ರ ಕೆಂಪು ಕಲರಲ್ಲಿರುತ್ತೆ...ಎಂಬ ರಕ್ತಪಾತದ ಮುನ್ಸೂಚೆನೆಯ ಖಡಕ್ ಡೈಲಾಗ್ಗೆ ವಿಜಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ಚಿತ್ರದಲ್ಲಿ ದುನಿಯಾ ವಿಜಿ ಆನೆ ನಡೆದಿದ್ದೇ ದಾರಿ ಎಂಬಂತಹ ಖತರ್ನಾಕ್ ರೌಡಿ ಪಾತ್ರದಲ್ಲಿ ಅಭಿನಯಿಸಿದರೆ, ಬ್ಲ್ಯಾಕ್ ಕೋಬ್ರಾಗೆ ಟಕ್ಕರ್ ಕೊಡುವ ಅವತಾರದಲ್ಲಿ ಡಾಲಿ ಧನಂಜಯ್ ಕಾಣಿಸುತ್ತಿದ್ದಾರೆ. 'ಟಗರು', 'ಯಜಮಾನ' ಸಿನಿಮಾದಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ 'ಮಿಠಾಯಿ ಸೂರಿ' ಧನಂಜಯ್ ಈ ಬಾರಿ ಮಾತ್ರ ಖಾಕಿಧಾರಿಯಾಗಿ ಕಾಣಿಕೊಳ್ಳಲಿದ್ದಾರೆ.
ದುನಿಯಾ ವಿಜಯ್ ಅವರ ಚೊಚ್ಚಲ ಆ್ಯಕ್ಷನ್ ಕಟ್ಗೆ ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಇನ್ನು ಟಗರು ಚಿತ್ರಕ್ಕಾಗಿ ದುಡಿದ ತಂಡವೇ ಇಲ್ಲೂ ಜೊತೆಗೂಡಿದ್ದು, ಈ ಮೂಲಕ ಮತ್ತೊಂದು ಭರ್ಜರಿ ಹಿಟ್ ಹುಡಕಾಟದಲ್ಲಿ ಚಿತ್ರತಂಡ.
ಹಾಗೆಯೇ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಕೊಕ್ರೋಚ್ ಸುಧಿ, ಅಚ್ಯುತ್ ಕುಮಾರ್ ಅವರಂತಹ ಪ್ರತಿಭಾವಂತ ನಟರ ದಂಡೇ ಚಿತ್ರದಲ್ಲಿದೆ. ಟೀಸರ್ ಮೂಲಕವೇ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಸಲಗದ ಅಸಲಿ ಘರ್ಜನೆ ವೀಕ್ಷಿಸಲು ಈ ತಿಂಗಳಾಂತ್ಯದವರೆಗೂ ಕಾಯಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ