ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದಾಗಲೇ ಸಖತ್ ಸೌಂಡ್ ಮಾಡಿದ್ದ 'ಸಲಗ' ಮತ್ತೊಮ್ಮೆ ಘೀಳಿಟ್ಟಿದೆ. ದುನಿಯಾ ವಿಜಯ್ ನಿರ್ದೇಶಕ ಕಮ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಜಬರ್ದಸ್ತ್ ಟೀಸರ್ ಬಿಡುಗಡೆಯಾಗಿದೆ.
ಕೆಲದಿನಗಳ ಹಿಂದೆಯಷ್ಟೇ ಸೂರಿ ಅಣ್ಣಾ..ಸಾಂಗ್ ಮೂಲಕ ಅಭಿಮಾನಿಗಳಿಗೆ ಕಿಕ್ಕೇರಿಸಿದ್ದ ಸಲಗ ತಂಡ ಈ ಬಾರಿ ಅಂಡರ್ವರ್ಲ್ಡ್ನ ಅನಾವರಣ ಮಾಡಿದೆ. ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆಯಾಗಿ ರಿಲೀಸ್ ಮಾಡಲಾಗಿದ್ದ ಟೀಸರ್ 24 ಗಂಟೆಯಲ್ಲೇ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ಮೂಲಕ ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿತ್ತು.
ವರ್ಲ್ಡ್ ಯಾವುದೇ ಕಲರಲ್ಲಿದ್ದರೂ...ಈ ಅಂಡರ್ವರ್ಲ್ಡ್ ಮಾತ್ರ ಕೆಂಪು ಕಲರಲ್ಲಿರುತ್ತೆ...ಎಂಬ ರಕ್ತಪಾತದ ಮುನ್ಸೂಚೆನೆಯ ಡೈಲಾಗ್ನೊಂದಿಗೆ ಆರಂಭವಾಗುವ ಟೀಸರ್ನಲ್ಲಿ ಚಿತ್ರದ ಪಾತ್ರಧಾರಿಗಳನ್ನು ಪರಿಚಯಿಸಲಾಗಿದೆ.
ಇಲ್ಲಿ ದುನಿಯಾ ವಿಜಿ ಆನೆ ನಡೆದಿದ್ದೇ ದಾರಿ ಎಂಬಂತಹ ಖತರ್ನಾಕ್ ರೌಡಿ ಪಾತ್ರದಲ್ಲಿ ಅಭಿನಯಿಸಿದರೆ, ಬ್ಲ್ಯಾಕ್ ಕೋಬ್ರಾಗೆ ಟಕ್ಕರ್ ಕೊಡುವ ಅವತಾರದಲ್ಲಿ ಡಾಲಿ ಧನಂಜಯ್ ಕಾಣಿಸುತ್ತಿದ್ದಾರೆ. 'ಟಗರು', 'ಯಜಮಾನ' ಸಿನಿಮಾದಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ 'ಮಿಠಾಯಿ ಸೂರಿ' ಧನಂಜಯ್ ಈ ಬಾರಿ ಮಾತ್ರ ಖಾಕಿಧಾರಿಯಾಗಿ ಕಾಣಿಕೊಂಡಿರುವುದು ವಿಶೇಷ.
ದುನಿಯಾ ವಿಜಯ್ ಅವರ ಚೊಚ್ಚಲ ಆ್ಯಕ್ಷನ್ ಕಟ್ಗೆ ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಇನ್ನು ಟಗರು ಚಿತ್ರಕ್ಕಾಗಿ ದುಡಿದ ತಂಡವೇ ಇಲ್ಲೂ ಜೊತೆಗೂಡಿದ್ದು, ಈ ಮೂಲಕ ಮತ್ತೊಂದು ಭರ್ಜರಿ ಹಿಟ್ ಹುಡಕಾಟದಲ್ಲಿ ಚಿತ್ರತಂಡ.
ಟೀಸರ್ನಲ್ಲಿ ಕೊಕ್ರೋಚ್ ಸುಧಿ, ದುನಿಯಾ ವಿಜಯ್, ಅಚ್ಯುತ್ ಕುಮಾರ್, ಡಾಲಿ ಧನಂಜಯ್ ಸೇರಿದಂತೆ ಕೆಲ ಪಾತ್ರಗಳ ಅನಾವರಣವಾಗಿದ್ದು, ಹಾಗೆಯೇ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ಬಣ್ಣ ಹಚ್ಚಿದ್ದಾರೆ.
ಇನ್ನು ಸೆಟ್ಟೇರಿದಾಗಲೇ ಹೈಪ್ ಕ್ರಿಯೇಟ್ ಮಾಡಿದ್ದ ದುನಿಯಾ ವಿಜಿ, ಇದೀಗ ಭರ್ಜರಿ ಟೀಸರ್ನ್ನೇ ಅಭಿಮಾನಿಗಳ ಮುಂದಿಡುವ ಮೂಲಕ ನಿರೀಕ್ಷೆಯನ್ನು ಡಬಲ್ ಮಾಡಿರುವುದಂತು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ