ಅದೊಂದು ಒಳ್ಳೆ ಅವಕಾಶ. ಸಿನಿಮಾ (Cinema Reporting) ವರದಿಗಾರಿಕೆಯ ಅದ್ಭುತ ಕೆಲಸ. ಡಾಕ್ಟರ್ ರಾಜ್ ಕುಮಾರ್ (Dr RajKumar) ಅವರ ಬಗ್ಗೆ ಮತ್ತಷ್ಟು ಇನ್ನಷ್ಟು ತಿಳಿಯೋ ಚಾನ್ಸ್. ನನಗೆ ಅಂದು ನಿಜಕ್ಕೂ ಭಾರೀ ಖುಷಿ ಆಗಿತ್ತು. ರಾಜ್ (Raj) ಬಗ್ಗೆ ತಿಳಿದುಕೊಳ್ಳುವ ಚಾನ್ಸ್ ಮಿಸ್ ಮಾಡಿಕೊಳ್ಳಲು ಸಾಧ್ಯವೇ? ಅಂಬರೀಶ್ ಅವರ ರೀತಿ ನೋ ವೇ ಚಾನ್ಸೇ ಇಲ್ಲ ಅನ್ನಬಹುದೇನೋ. ನಿಜ, ಈ ರೀತಿ ಹೇಳಲಿಕ್ಕೆ ಕಾರಣವೂ ಇದೆ. ಅಂದು ರಾಜ್ ಅವರ ಬಗ್ಗೆ ಬರೆಯಬೇಕಿತ್ತು. ಅದಕ್ಕೂ ಹೆಚ್ಚಾಗಿ ಡಾಕ್ಟರ್ ರಾಜಕುಮಾರ್ ಅವರ ಯೋಗ (Yoga Teacher) ಗುರುಗಳನ್ನ ಮೀಟ್ ಆಗಿ ಬರೆಯೋದೇ ಹೆಚ್ಚು ಖುಷಿ ತಂದಿತ್ತು. ಅದ್ಹೇಗೋ ಗೆಳೆಯರ ಸಹಾಯದಿಂದ ರಾಜ್ ಯೋಗ ಗುರುಗಳ ನಂಬರ್ ಪಡದಿದ್ದಾಯಿತು. ಮಾತು ಕೂಡ ಆಡಿದ್ದಾಯಿತು.
ಆದರೆ ಅವರು ಅಂದು ಸಿಗಲಿಲ್ಲ. ಧ್ಯಾನದಲ್ಲಿಯೇ ಇದ್ದರು. ಮುಂದೇನಾಯ್ತು, ಇಲ್ಲಿದೆ ಓದಿ.
ದೂರದ ಆಶ್ರಮದಲ್ಲಿಯೇ ಇದ್ದರು ರಾಜ್ ಯೋಗ ಗುರು
ಅಣ್ಣಾವ್ರ ಯೋಗ ಗುರುಗಳು ಬೆಂಗಳೂರಲ್ಲಿ ಇರಲಿಲ್ಲ. ಅವರ ವಾಸ ದೂರದ ಆಶ್ರಮದಲ್ಲಿಯೇ ಇತ್ತು. ಅದನ್ನ ಹುಡುಕಿಕೊಂಡು ಬೆಂಗಳೂರಿನ ಕಟ್ಟ ಕಡೆಯ ಪ್ಲೇಸ್ ಗೆ ಬಂದವು. ಅದು ಕನಕಪುರ ರಸ್ತೆ ಆಗಿತ್ತು. ಹಾಗೆ ಸಾಗಿದೆವು, ಸಾಗಿದೆವು.
ಹಾಗೆ ಮುಂದೇ ಸಾಗಿದ್ದರೇ, ಆರ್ಟ್ ಆಫ್ ಲಿವಿಂಗ್ ರವಿ ಶಂಕರ್ ಗುರೂಜಿ ಅವರ ಆಶ್ರಮಕ್ಕೇನೆ ಹೋಗಿ ಬಿಡುತ್ತಿದ್ದೇವೋ ಏನೋ. ಆದರೆ ಅಲ್ಲಿಯೇ ಮತ್ತೊಮ್ಮೆ ಫೋನ್ ಮಾಡಿ ಕೇಳಿದಾಗ್ಲೇ ರೈಟ್ ಸೈಡ್ ಒಂದು ದಾರಿ ಇತ್ತು. ಅದನ್ನ ಬಳಸಿಕೊಂಡು ಅಡ್ರೆಸ್ ಕೇಳ್ತಾ ಹೋದವು.
ರಾಜ್ ಓಡಾಡಿದ ಆಶ್ರಮ ನಿಜಕ್ಕೂ ಪ್ರಶಾಂತ ಸ್ಥಳವೇ ಆಗಿತ್ತು
ಅಲ್ಲಿತ್ತು ನೋಡಿ ಅಣ್ಣಾವ್ರ ಯೋಗ ಗುರುಗಳ ಆಶ್ರಮ. ಇದು ಆಶ್ರಮದ ರೀತಿ ಕಾಣಲೇ ಇಲ್ಲ. ಆದರೆ ಒಳಗೆ ಕಾಲಿಟ್ಟಾಗಲೇ ಗೊತ್ತಾಯಿತು. ಇದು ಅತ್ಯಂತ ಪ್ರಶಾಂತವಾದ ಸ್ಥಳ, ಯೋಗಕ್ಕೆ ಯೋಗ್ಯವಾದ ಜಾಗ ಅಂತಲೇ ತಿಳಿಯಿತು.
ಗುರುಗಳನ್ನ ಭೇಟಿ ಆಗೋ ಮುಂಚೆ ಅವರ ಶಿಷ್ಯೆಯನ್ನ ಭೇಟಿ ಆದೆವು. ಅವರು ಇಲ್ಲಿಯೇ ಕುಳಿತುಕೊಳ್ಳಿ, ಗುರುಗಳು ಬರ್ತಾರೆ ಅಂತಲೇ ಹೇಳಿದ್ರು. ಸ್ವಲ್ಪ ಹೊತ್ತು ಕಾದುಕುಳಿತೇವು. ಆಗಲೇ ನೋಡಿ ಗಿರಿಜಾ ಮೀಸೆಯ ಸಣ್ಣನೇ ದೇಹದ ಹಿರಿಯ ವ್ಯಕ್ತಿ ನಮ್ಮನ್ನ ತಮ್ಮ ಬಳಿ ಕರೆದುಕೊಂಡ್ರು.
ರಾಜ್ ಅವರ ಯೋಗ ಗುರುಗಳು ಯಾರು ಗೊತ್ತೇ?
ಹೌದು, ಅವರೇ ಡಾಕ್ಟರ್ ಹೊನ್ನಪ್ಪ ಫಕೀರಪ್ಪ ನಾಯ್ಕರ್. ಇವರು ಡಾಕ್ಟರ್ ರಾಜ್ಕುಮಾರ್ ಅವರಿಗೆ ಯೋಗವನ್ನ ಹೇಳಿಕೊಟ್ಟಿದ್ದರು. ಬೆಂಗಳೂರಿನಿಂದ ಬಹು ದೂರವೇ ಇರೋ ಪ್ರಶಾಂತವಾದ ಆಶ್ರಮದಲ್ಲಿ ಯೋಗ ಕಲಿಸಿಕೊಟ್ಟವರು.
ಡಾಕ್ಟರ್ ಹೊನ್ನಪ್ಪ ಫಕೀರಪ್ಪ ನಾಯ್ಕರ್ ಏನ್ ಹೇಳಿದ್ರು ಗೊತ್ತೇ?
ನಿಜ, ಹೊನ್ನಪ್ಪ ಫಕೀರಪ್ಪ ನಾಯ್ಕರ್ ನಮ್ಮ ಜೊತೆಗೆ ಮಾತು ಆರಂಭಿಸೋ ಮೊದಲು, ರಾಜ್ ಓಡಾಡಿದ ಸ್ಥಳಕ್ಕೆ ನಮ್ಮನ್ನ ಕರೆದುಕೊಂಡು ಹೋದ್ರು. ರಾಜ್ ಕುಮಾರ್ ಹಾಗೂ ಪಾರ್ವತಮ್ಮನವರು ಕುಳಿತು ಯೋಗ ಮಾಡುತ್ತಿದ್ದ ಆ ಹಾವಿನ ಹುತ್ತವನ್ನ ನಮಗೆ ತೋರಿಸಿದ್ರು.
ಹುತ್ತದ ಬಳಿ ರಾಜ್ ಯೋಗ ಮಾಡಿದ್ದ ಫೋಟೋಗಳನ್ನ ನಾವು-ನೀವೂ ಹಲವು ಕಡೆಗೆ ನೋಡಿದ್ದೇವೆ. ಅದೇ ಜಾಗದಲ್ಲಿಯೇ ಅಂದು ಹೊನ್ನಪ್ಪ ಅವರ ಮುಂದೆ ನಾವು ನಿಂತಿದ್ದೇವು. ನಮ್ಮ ಮಾತು ರಾಜ್ ಸುತ್ತವೇ ಇದ್ದವು. ಅವರ ಯೋಗದ ಬಗ್ಗೇನೆ ಇದ್ದವು.
ಡಾಕ್ಟರ್ ರಾಜ್ ಯೋಗಾಸನಗಳೆಲ್ಲವನ್ನೂ ಮೀರಿದ್ದರು
ರಾಜ್ ಯೋಗ ಗುರು ಹೊನ್ನಪ್ಪ ಅವ್ರು ಅದರ ಬಗ್ಗೇನೆ ನಮಗೆ ಹೇಳ್ತಾ ಹೋದ್ರು. ಯೋಗವನ್ನ ರಾಜ್ ಹೇಗೆಲ್ಲ ಮಾಡ್ತಾಯಿದ್ರು. ಯೋಗದ ಆಸನಗಳೆಲ್ಲವನ್ನೂ ಮೀರಿ ರಾಜ್ ಯೋಗದ ಉತ್ತುಂಗದ ಸ್ಥಿತಿಗೆ ತಲುಪಿದ್ರು. ಹಾಗೆ ಬೆಂಗಳೂರಿನಿಂದ ಇಲ್ಲಿಗೆ ಬಂದು ಗಂಟೆಗಟ್ಟಲೆ ಇಲ್ಲಿ ಕುಳಿತು ಕೊಳ್ಳುತ್ತಿದ್ದರು ಅಂತಲೂ ರಾಜ್ ಯೋಗ ಗುರು ಹೊನ್ನಪ್ಪ ನಾಯ್ಕರ್ ಹೇಳ್ತಿದ್ದರು.
ನನಗೆ ಗೊತ್ತಿತ್ತು ನೀವು ಇಂದು ಬಂದೇ ಬರ್ತೀರಾ ಅಂತ
ಯೋಗ ಗುರುಗಳು ಮಾತಲ್ಲಿಯೇ ಒಂದು ಮಾತು ಹೇಳಿಯೇ ಬಿಟ್ಟರು. ನನಗೆ ಗೊತ್ತಿತ್ತು. ಇಂದು ನೀವೂ ಬರ್ತೀರಾ ಅಂತ. ನಾನು ನನ್ನ ಯೋಗ ಶಕ್ತಿಯಿಂದಲೇ ನಿಮ್ಮನ್ನ ಸಂಪರ್ಕಿಸಿದ್ದೇನೆ ಅಂತಲೂ ಹೇಳಿಕೊಂಡ್ರು. ಆ ಕ್ಷಣ ಒಮ್ಮೆ ನನಗೂ ಆಶ್ಚರ್ಯವಾಯಿತು.
ಹಾಗೆ ಯೋಚಿಸೋ ಹೊತ್ತಿಗೆ ನನ್ನ ಕೈ ನೋಡಿದ್ರು ರಾಜ್ ಯೋಗ ಗುರು ಹೊನ್ನಪ್ಪನವ್ರು. ನಿನಗೆ ಯೋಗ ಸಂಸ್ಕಾರ ಇದೆ. ಯೋಗವನ್ನ ಮಾಡು ಅಂತಲೂ ಹೇಳಿದ್ರು. ಅದನ್ನ ಕೇಳಿದಾಗ ನನಗೆ ಆಶ್ಚರ್ಯವೂ ಆಯಿತು. ಯೋಗದ ಬಗ್ಗೆ ನನಗೆ ಇರೋ ಆಸಕ್ತಿಯ ಬಗ್ಗೆನೂ ನನಗೆ ಕುತೂಹಲ ಮೂಡಿತು.
ರಾಜ್ ಯೋಗ ಗುರುಗಳೂ ಸಾಧಕರೆ ಆಗಿದ್ದರು
ರಾಜ್ ಯೋಗ ಗುರುಗಳು ನಮ್ಮನ್ನ ತಮ್ಮ ಕಚೇರಿಗೆ ಅಲ್ಲಿಂದ ಕರೆದುಕೊಂಡು ಹೋದ್ರು. ಅಲ್ಲಿ ಯೋಗದ ಮಾತುಗಳು ಆರಂಭವಾದವು. ಆ ಮಾತಿನಲ್ಲಿ ನಮಗೆ ಸಿಕ್ಕದ್ದು ಕೆಲವೇ ಕೆಲವು ಅಂಶಗಳು. ಆದರೆ ಯೋಗ ಗುರು ಹೊನ್ನಪ್ಪನವರು ಯೋಗದ ತುತ್ತತುದಿಯ ಮಾತುಗಳನ್ನೆ ಆಡಿದ್ದರು.
ರಾಜ್ ಕುಮಾರ್ ಅವರೂ ಕೂಡ ಯೋಗದ ತುತ್ತತುದಿಯನ್ನ ತಲುಪಿದ್ರು ಅಂತಲೇ ನಮಗೆ ರಾಜ್ ಯೋಗ ಗುರುಗಳನ್ನ ನೋಡಿದಾಗ ಅನಿಸಿಯೇ ಬಿಟ್ಟಿತು. ಅಷ್ಟರಲ್ಲಿಯೇ ನಮಗೆ ಹೊನ್ನಪ್ಪನವರು ತಮ್ಮ ಬಗೆಗಿನ ಮತ್ತು ರಾಜ್ ಅವರ ಬಗೆಗಿನ ಒಂದು ಪುಸ್ತಕವನ್ನೂ ಕೊಟ್ಟರು. ಆ ಪುಸ್ತಕ ನನ್ನ ಬಳಿ ಇನ್ನೂ ಇದೆ.
ಇದನ್ನೂಓದಿ: Ambareesh First Car: ಅಂಬಿ ಕೊಂಡ ಮೊದಲ ಕಾರ್ ನೋಡಿ ಅವ್ರ ತಾಯಿ ಡಬ್ಬಾ ಅಂದ್ಬಿಟ್ರಂತೆ! ಆಮೇಲೆ?
ರಾಜ್ ಯೋಗ ಗುರುಗಳ ಆ ಕಟ್ಟಕಡೆ ಮಾತು ಮನದಲ್ಲಿ ಹಚ್ಚಹಸಿರು
ಈ ಒಂದು ವಿಶೇಷ ಅನುಭವದೊಂದಿಗೆ ಬೆಂಗಳೂರಿಗೆ ವಾಪಸ್ ಬಂದೇವು. ಅಂದುಕೊಂಡ ಪ್ರೋಗ್ರಾಮ್ ಅನ್ನ ಕೂಡ ಯಶಸ್ವಿಯಾಗಿಯೇ ಮಾಡಿದ್ದೂ ಆಯಿತು. ಆದರೆ ಅವರು ಕಟ್ಟ ಕಡೆಯಲ್ಲಿ ಆಡಿದ ಮಾತು ನನ್ನಲ್ಲಿ ಇನ್ನೂ ಹಚ್ಚಹಸಿರಾಗಿಯೇ ಇದೆ. ನಿಮ್ಮಲ್ಲಿ ಯೋಗ ಸಂಸ್ಕಾರ ಇದೆ ಅನ್ನೋದು.
ಯೋಗ ಗುರುಗಳನ್ನೂ ಬಿಡಲಿಲ್ಲ ಪಾಪಿ ಕೊರೊನಾ
ಆ ಒಂದು ಸ್ಪೂರ್ತಿಯ ಮಾತಿನಿಂದಲೋ ಏನೋ. ನಾನು ಈಗಲೂ ಯೋಗ ಮಾಡ್ತಾನೇ ಇದ್ದೇನೆ. ಸಮಾಧಿ ಸ್ಥಿತಿ ನನ್ನಿಂದ ಸಾಧ್ಯವಿಲ್ಲ ಅನ್ನೋ ಮಾತು ಅರ್ಥ ಆಗಿ ಹೋಗಿದೆ. ಆದರೆ ಯೋಗದಲ್ಲಿ ಸಿದ್ಧಿ ಮಾಡಿದ ಹೊನ್ನಪ್ಪನವರನ್ನ ಕೊರೊನಾ ಬಿಡಲೇ ಇಲ್ಲ. ಅವರನ್ನ ತೆಗೆದುಕೊಂಡು ಹೋಗಿಯೇ ಬಿಡ್ತು. ಆ ನೋವು ಇನ್ನೂ ಕಾಡ್ತಾನೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ