ಚಾಮರಾಜನಗರ: ಇಂದು ಕನ್ನಡದ ಮೇರುನಟ ಡಾ.ರಾಜ್ಕುಮಾರ್ (Dr. Rajkumar) ಅವರ 94 ನೇ ಜನ್ಮದಿನಾಚರಣೆ (Birthday). ಅವರು ಜನ್ಮ ತಳೆದಿದ್ದು ಚಾಮರಾಜನಗರ (Chamarajanagar) ಸಮೀಪದ ಗಾಜನೂರಿನಲ್ಲಿ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಅವರಿಗೆ ತಮ್ಮ ಹುಟ್ಟೂರು ಗಾಜನೂರು ಎಂದರೆ ಪಂಚಪ್ರಾಣ, ಹುಟ್ಟಿದ ಊರು ಸ್ವರ್ಗಕ್ಕೆ ಸಮಾನ ಅಂತ ಅವರು ಹೇಳುತ್ತಾ ಇದ್ದರು. ಅದಕ್ಕಾಗಿಯೇ ಅವರು ಚಾಮರಾಜನಗರದ ಮೂಲಕ ಗಾಜನೂರಿಗೆ (Gajanuru) ತೆರಳುವಾಗ ಚಾಮರಾಜನಗರವನ್ನು ಸ್ವರ್ಗದ ಹೆಬ್ಬಾಗಿಲು ಅಂತಾನೆ ಕರೀತಾ ಇದ್ರು. ಅಷ್ಟು ದೊಡ್ಡ ವ್ಯಕ್ತಿಯಾದರೂ ಹುಟ್ಟೂರಿನ ಮೇಲೆ ಅವರಿಗೆ ವ್ಯಾಮೋಹ, ಪ್ರೀತಿ ಇದ್ದೇ ಇತ್ತು. ಈ ಊರಿನ ಜೊತೆ ಅವರು ಕಂಡಿದ್ದ ಕನಸೊಂದು (Dream) ಕೊನೆಗೂ ನನಸಾಗಲೇ ಇಲ್ಲ.
ಹುಟ್ಟೂರಲ್ಲೇ ಕಾಲ ಕಳೀಬೇಕು ಅಂತಿದ್ದ ರಾಜಣ್ಣ
ಗಾಜನೂರಿನ ಮುತ್ತುರಾಜ ತಮ್ಮ ವಿಶ್ರಾಂತ ಜೀವನವನ್ನು ಗಾಜನೂರಿನಲ್ಲೇ ಕಳೆಯಬೇಕು ಎಂದು ಮಹಾದಾಸೆ ಹೊಂದಿದ್ದರು. ಅದಕ್ಕಾಗಿಯೇ ಗಾಜನೂರಿನಲ್ಲಿ 90 ರ ದಶಕದ ಕೊನೆಯಲ್ಲಿ ಒಂದು ಹೊಸ ಮನೆ ಕಟ್ಟಿಸಿದ್ದರು. ಆದರೆ ಈ ಹೊಸ ಮನೆಯಲ್ಲಿ ವಾಸ ಮಾಡೋ ಭಾಗ್ಯ ಮಾತ್ರ ಮೇರುನಟನಿಗೆ ಸಿಗಲೇ ಇಲ್ಲ.
ಹುಟ್ಟೂರಿಗೆ ಬಂದಿದ್ದಾಗಲೇ ಅಪಹರಣ
ನೆಮ್ಮದಿ ಅರಸಿ ಹುಟ್ಟೂರಿಗೆ ಆಗಾಗ್ಗೆ ಭೇಟಿ ನೀಡಿ ಕಾಲಕಳೆಯುತ್ತಿದ್ದ ವರನಟನ ಮೇಲೆ ಅದ್ಯಾವ ವಕ್ರ ದೃಷ್ಟಿ ಬಿತ್ತೋ ಏನೋ 2000ದ ಜುಲೈನಲ್ಲಿ ಭೀಮನ ಅಮಾವಸ್ಯೆಯ ಕರಾಳ ದಿನ ಕಾಡುಗಳ್ಳ ವೀರಪ್ಪನ್ ಡಾ.ರಾಜ್ಕುಮಾರ್ ಅವರನ್ನು ಅಪಹರಿಸಿದ. ಅಲ್ಲಿಗೆ ಮುತ್ತುರಾಜನ ಆಸೆಯು ಕಮರಿಹೋಯ್ತು.
ಇದನ್ನೂ ಓದಿ: Rajkumar Birthday: ಇಂದು ಯುಗಪುರುಷ ಡಾ. ರಾಜ್ಕುಮಾರ್ ಹುಟ್ಟುಹಬ್ಬ; ಹಿಂದೆ ಯಾರೂ ಇರಲಿಲ್ಲ, ಮುಂದೆ ಯಾರೂ ಹುಟ್ಟಲ್ಲ!
ಮತ್ತೆ ಗಾಜನೂರಿಗೆ ಬರಲೇ ಇಲ್ಲ ಅಣ್ಣಾವ್ರು
ಗಾಜನೂರಿನಲ್ಲಿ ವಿಶ್ರಾಂತ ಜೀವನ ನಡೆಸಬೇಕೆಂಬ ಮನದಿಂಗತವನ್ನು ಕುಟುಂಬಸ್ಥರು ಹಾಗು ಆಪ್ತರ ಬಳಿ ಹಲವಾರು ಹೇಳಿಕೊಂಡಿದ್ದರು. ಅವರನ್ನು ವೀರಪ್ಪನ್ ಅಪಹರಿಸದೇ ಇದ್ದಿದ್ದರೆ ಕೆಲವೇ ದಿನಗಳಲ್ಲಿ ಗಾಜನೂರಿನ ಹೊಸ ಮನೆಯ ಗೃಹಪ್ರವೇಶ ಆಗುತ್ತಿತ್ತು. ರಾಜ್ ಕುಮಾರ್ ಅವರ ಆಸೆ ಈಡೇರುತ್ತಿತ್ತು. ಆದರೆ ಅಪಹರಣ ದುರ್ಘಟನೆ ಅವರ ಆಸೆಗೆ ತಣ್ಣೀರೆರಚಿತು. ಕಾಡುಗಳ್ಳನ ಕಪಿಮುಷ್ಠಿಯಿಂದ ಬಿಡುಗಡೆಯಾದರೂ ಭದ್ರತೆಯ ದೃಷ್ಟಿಯಿಂದ ರಾಜ್ ಕುಮಾರ್ ಅವರು ಗಾಜನೂರಿಗೆ ಹೋಗಲು ಸರ್ಕಾರ ಅನುಮತಿಸಿರಲಿಲ್ಲ.
2002ರಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ
ಈ ಮದ್ಯೆ ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ಅಪ್ಪು ಚಲನಚಿತ್ರ ಶತದಿನ ಆಚರಿಸುತ್ತಿದ್ದ ಹಿನ್ನಲೆಯಲ್ಲಿ. 2002 ರ ಆಗಸ್ಟ್ 26 ರಂದು ಶತದಿನೋತ್ಸವ ಕಾರ್ಯಕ್ರಮವನ್ನು ಚಾಮರಾಜನಗರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಾ.ರಾಜ್ಕುಮಾರ್ ಹಿಂದಿನ ದಿನವೇ ಗಾಜನೂರಿಗೆ ಬಂದು ವಾಸ್ತವ್ಯ ಮಾಡಿ ಮರುದಿನ ಅಪ್ಪು ಚಲನಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ನಿಗಧಿಯಾಗಿತ್ತು.
ಆದರೆ 2002 ರ ಆಗಸ್ಟ್ 25 ರಂದು ರಾತ್ರಿ ಕೊಳ್ಳೇಗಾಲ ಸಮೀಪದ ಕಾಮಗೆರೆಯಿಂದ ಮಾಜಿ ಸಚಿವ ಎಚ್.ನಾಗಪ್ಪ ಅವರನ್ನು ನರಹಂತಕ ವೀರಪ್ಪನ್ ಅಪಹರಣ ಮಾಡಿದ. ಇತ್ತ ಗಾಜನೂರಿನಲ್ಲಿದ್ದ ಡಾ.ರಾಜ್ ಕುಮಾರ್ ಅವರನ್ನು ಈ ಘಟನೆಯ ಹಿನ್ನಲೆಯಲ್ಲಿ ಬೆಂಗಳೂರಿಗೆ ವಾಪಸ್ ಕರೆದೊಯ್ಯಲಾಯಿತು. ಅದೇ ಕೊನೆ ರಾಜ್ಕುಮಾರ್ ಅವರು ಮತ್ತೆ ಗಾಜನೂರಿಗೆ ಬರಲು ಸಾಧ್ಯವಾಗಲೇ ಇಲ್ಲ.
ವ್ಯವಸಾಯ ಮಾಡುವ ಕನಸು ಕಂಡಿದ್ದ ರಾಜ್ಕುಮಾರ್
ರಾಜ್ಕುಮಾರ್ ಅವರಿಗೆ ಗಾಜನೂರು, ಚಾಮರಾಜನಗರ ಎಂದರೆ ಎಲ್ಲಿಲ್ಲದ ಖುಷಿ. ಗಾಜನೂರಿನಲ್ಲಿಯೇ ಉಳಿದುಕೊಂಡು ವ್ಯವಸಾಯ ಮಾಡಿಕೊಂಡು ನೆಮ್ಮದಿಯಿಂದ ಕಾಲ ಕಳೆಯಬೇಕೆಂದು ಬಯಸಿದ್ದರು. ಈ ಬಗ್ಗೆ ನಮ್ಮೊಂದಿಗು ತಮ್ಮ ಆಸೆ ಹಂಚಿಕೊಂಡಿದ್ದರು ಆದರೆ ಅವರ ಆಸೆ ನೆರವೇರದೆ ಇರುವುದು ದುಃಖದ ಸಂಗತಿ ಎನ್ನುತ್ತಾರೆ ಡಾ.ರಾಜ್ ಕುಟುಂಬ ಆಪ್ತ ಸಿಂಹಮೂವಿ ಪ್ಯಾರಡೈಸ್ ಮಾಲೀಕ ಎ.ಜಯಸಿಂಹ
ರಾಜ್ ಮನೆಯಲ್ಲಿ ವಾಸವಿದ್ದಾರೆ ಸಹೋದರಿ
ಗಾಜನೂರಿನಲ್ಲಿ ಡಾ. ರಾಜ್ಕುಮಾರ್ ಕಟ್ಟಿಸಿದ ಮನೆಯಲ್ಲಿ ಈಗ ಅವರ ಸಹೋದರಿ ನಾಗಮ್ಮ ಹಾಗೂ ಅವರು ಕುಟುಂಬಸ್ಥರು ವಾಸಿಸುತ್ತಿದ್ದಾರೆ. ರಾಜ್ಕುಮಾರ್ ಹುಟ್ಟಿದ ಹಳೆಯ ಮನೆಯನ್ನು ಯಥಾ ಸ್ಥಿತಿಯಲ್ಲಿ ಕಾಪಾಡಲಾಗಿದೆ. ಹುಟ್ಟಿದ ಮನೆಯಲ್ಲಿ ಬಾಲ್ಯದ ದಿನಗಳನ್ನು ನೆನಸಿಕೊಂಡು ಭಾವುಕರಾಗುತ್ತಿದ್ದ ರಾಜ್ ಕುಮಾರ್ ಕೆಲ ಹೊತ್ತು ಧ್ಯಾನಾಸಕ್ತರಾಗುತ್ತಿದ್ದರು.
ಹಳೆ ಮನೆನೋಡಿ ಭಾವುಕರಾಗುತ್ತಿದ್ದರು
ತಾವು ಹುಟ್ಟಿ ಬೆಳೆದ ಹಳೆಯ ಮನೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂಬುದು ಮಾವನವರ ಆಸೆಯಾಗಿತ್ತು. ಹಾಗಾಗಿ ಶಿಥಿಲಗೊಂಡಿದ್ದ ಮನೆಯನ್ನು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ದುರಸ್ತಿ ಮಾಡಿಸಿದ್ದೇವೆ ಎಂದು ಡಾ.ರಾಜ್ ಸಹೋದರಿ ನಾಗಮ ಅವರ ಪುತ್ರ ಗೋಪಾಲ್ ತಿಳಿಸಿದರು
ಇದನ್ನೂ ಓದಿ: Rajkumar Birthday: ಇಂದು ಡಾ. ರಾಜ್ಕುಮಾರ್ ಹುಟ್ಟುಹಬ್ಬ, ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಅಣ್ಣಾವ್ರ ಸ್ಮರಣೆ
ವರನಟ ಡಾ ರಾಜ್ ಭೌತಿಕವಾಗಿ ಇಹಲೋಕ ತ್ಯಜಿಸಿದ್ದರೂ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅದರೆ ಅಪಾರ ನಿರೀಕ್ಷೆ ಇಟ್ಟು ಕಟ್ಟಿಸಿದ ಮನೆಯಲ್ಲಿ ಡಾ ರಾಜ್ ವಾಸ ಮಾಡಲಿಲ್ಲ ಅನ್ನೋ ಕೊರಗು ಮಾತ್ರ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಮನೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ