ಚೆನ್ನೈ: ದೇಶದಲ್ಲಿ ಹಿಂದಿ (Hindi) V/S ದಕ್ಷಿಣ ಭಾಷೆಗಳ (Southern language) ನಡುವಿನ ಚರ್ಚೆ ಮುಂದುವರಿದಿದೆ. ಈ ಬಗ್ಗೆ ಜನಪ್ರಿಯ ನಟ (Actor), ರಾಜಕಾರಣಿ ಕಮಲ್ ಹಾಸನ್ (Kamal Haasan) ಪ್ರತಿಕ್ರಿಯಿಸಿದ್ದು, ನಮ್ಮ ಭಾಷೆ ನಮಗೆ ಹೆಮ್ಮೆ, ಯಾರೂ ಮತ್ತೊಂದು ಭಾಷೆಯ ಮುಂದೆ ತಮ್ಮ ಭಾಷೆಯನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಇಲ್ಲಿ ಮತ್ತೊಂದು ಭಾಷೆಯನ್ನು ತಿಳಿದುಕೊಳ್ಳುವ, ಕಲಿಯುವ ಕುತೂಹಲ ಅಷ್ಟೇ ಇರುತ್ತದೆ ಎಂದು ಹೇಳಿದ್ದಾರೆ. ಹಿಂದಿ ಭಾಷೆಗೆ ಸಮನಾಗಿ ತಮಿಳನ್ನು (Tamil) ಕೂಡ ಕೇಂದ್ರದ ಅಧಿಕೃತ ಭಾಷೆಯನ್ನಾಗಿ ಘೋಷಿಸಿ, ಹಿಂದಿಯಷ್ಟೇ ಪ್ರಾಮುಖ್ಯತೆ ನೀಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಡಿಕೆಯಿಟ್ಟ ಬೆನ್ನಲ್ಲೇ ಕಮಲ್ ಹಾಸನ್ ಈ ರೀತಿ ಹೇಳಿದ್ದು, ದಿಕ್ಕುಗಳ ಕಾರಣಕ್ಕಾಗಿ ನಮ್ಮದು ದಕ್ಷಿಣ ಭಾರತ. ಅದನ್ನು ಹೊರತು ಪಡಿಸಿದರೆ ನಮ್ಮದು ಭಾರತ ಎಂದಿದ್ದಾರೆ.
ಹಿಂದಿ ಪ್ರಿಯರಿಗೆ ಟಾಂಗ್ ನೀಡಿದ ಕಮಲ್ ಹಾಸನ್
“ನನ್ನ ಪ್ರಕಾರ ದಿಕ್ಕುಗಳ ರೀತಿಯಲ್ಲಿ ನೋಡಿದಾಗ ಮಾತ್ರ ನಮ್ಮದು ದಕ್ಷಿಣ ಭಾರತ. ಅದನ್ನು ಹೊರತುಪಡಿಸಿದರೆ ಅದು ಭಾರತ. ದಿಕ್ಕುಗಳ ಕಾರಣಕ್ಕಾಗಿ ಉತ್ತರ ಭಾರತ, ಪಶ್ಚಿಮ ಭಾರತ, ಪೂರ್ವ ಭಾರತ, ದಕ್ಷಿಣ ಭಾರತ ಎಂದು ಕರೆಯುತ್ತೇವೆ. ಅದು ಬಿಟ್ಟರೇ ನಾವು ಯಾವತ್ತು ಪಶ್ಚಿಮ ಭಾರತದ ಸಿನಿಮಾಗಳೆಂದು ಕರೆದಿಲ್ಲ, ಬಾಲಿವುಡ್ ಸಿನಿಮಾಗಳೆಂದು ಕರೆದಿದ್ದೇವೆ. ಕಲೆಯ ಕಾರಣದದಿಂದ ನಾವು ದಿಕ್ಕು, ಸಮುದಾಯವನ್ನು ಮೀರಿ ನಿಂತಿದ್ದೇವೆ. ಅದೇ ರೀತಿ ಇರಬೇಕು” ಎಂದು ಹಿಂದಿ ಪ್ರಿಯರಿಗೆ ಟಾಂಗ್ ನೀಡಿದ್ದಾರೆ.
ಇನ್ನು, “ಭಾಷೆಗಳ ವಿಚಾರಕ್ಕೆ ಬಂದರೆ, ನಮ್ಮ ಭಾಷೆ ನಮ್ಮ ಹೆಮ್ಮೆ. ಯಾರೂ ತಮ್ಮ ಭಾಷೆಯನ್ನು ಬೇರೆ ಭಾಷೆಯ ಮುಂದೆ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಬೇರೆ ಭಾಷೆಯ ಬಗ್ಗೆ ತಿಳಿದುಕೊಳ್ಳುವ, ಕಲಿಯುವ ಕುತೂಹಲ ಇರುತ್ತದೆ. ಅದನ್ನೇ ನಾವು ಇಂಗ್ಲಿಷ್‌ಗೆ ಅನ್ವಯಿಸಿದ್ದೇವೆ. ಅದು ನಮ್ಮ ಭಾಷೆ ಅಲ್ಲ, ಆದರೂ ನಾವು ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸುತ್ತೇವೆ. ಅದನ್ನು ಒಂದು ಹಂತಕ್ಕೆ ಒಪ್ಪಿಕೊಳ್ಳಬಹುದು. ಆದರೆ, ಅದೇ ಕಾರಣಕ್ಕೆ ನಾವು ನಮ್ಮ ಭಾಷೆ ತಮಿಳು ಅಥವಾ ಮರಾಠಿ ಅಥವಾ ಬಂಗಾಳಿಯನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಬಂಗಾಲಿಯನ್ನು ನೀವು ಕೇಳಿದರೆ ಅವರು ಕೂಡ ಇದನ್ನೇ ಹೇಳುತ್ತಾರೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಅಜಯ್ ದೇವಗನ್ ಟ್ವೀಟ್ ಗೆ ಕಿಚ್ಚ ಸುದೀಪ್ ತಿರುಗೇಟು
ಹಿಂದಿ ರಾಷ್ಟ್ರ ಭಾಷೆಯಲ್ಲ, ಅದು ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ ಎಂದು ಕನ್ನಡದ ನಟ ಕಿಚ್ಚ ಸುದೀಪ್ ಹೇಳಿಕೆಗೆ ಟ್ವಿಟರ್‌ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದು ದೇಶದಲ್ಲಿ ಮತ್ತೊಂದು ಸಲ ಭಾಷಾ ವಿವಾದ ಮುನ್ನೆಲೆಗೆ ಬಂದಿತ್ತು. ಹಿಂದಿ ನಮ್ಮ ಮಾತೃ ಭಾಷೆ. ಅದು ಯಾವಾಗಲೂ ರಾಷ್ಟ್ರೀಯ ಭಾಷೆಯಾಗಿ ಉಳಿಯುತ್ತದೆ.
ಇದನ್ನೂ ಓದಿ: KGF Chapter 2: ರಾಕಿ ಭಾಯ್ ಪಾತ್ರದಿಂದ ಫುಲ್ ಫಿದಾ! ಫುಲ್ ಪ್ಯಾಕ್ ಸಿಗರೇಟ್ ಸೇದಿದ 15ರ ಹುಡುಗ ತೀವ್ರ ಅಸ್ವಸ್ಥ!
ಹಿಂದಿ ರಾಷ್ಟ್ರ ಭಾಷೆಯಲ್ಲ ಅಂದರೆ ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಏಕೆ ಮಾಡುತ್ತೀರಿ ಎಂದು ಅಜಯ್ ದೇವಗನ್ ಪ್ರಶ್ನಿಸಿದ್ದರು. ಅದಕ್ಕೆ ಕಿಚ್ಚ ಸುದೀಪ್ ಕನ್ನಡದಲ್ಲಿಯೇ ನಾನು ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದರೆ ಹೇಗಿರುತ್ತದೆ ಎಂದು ತಿರುಗೇಟು ನೀಡಿದ್ದರು. ಅದು ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಇನ್ನು, ದಕ್ಷಿಣ ಭಾರತದ ಸಿನಿಮಾಗಳು ಉತ್ತಮವಾಗಿವೆ. ಏಕೆಂದರೆ ಅವು ತಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ ಎಂದು ಕಂಗನಾ ರಣಾವತ್ ಹೇಳಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದೀಪ್ ಅವರ ನಿಲುವನ್ನು ಬೆಂಬಲಿಸಿದ್ದರು. ನಮಗೆ ಪ್ರಾದೇಶಿಕ ಭಾಷೆಗಳು ಮುಖ್ಯ. ಆಯಾ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಯನ್ನು ಅನುಸರಿಸುತ್ತವೆ ಎಂದು ಹೇಳಿದ್ದರು. ಮತ್ತೊಂದೆಡೆ ಭಾರತದ ಚಿತ್ರರಂಗವನ್ನು ಜನ ಉತ್ತರ ಮತ್ತು ದಕ್ಷಿಣ ಚಿತ್ರರಂಗ ಹೇಳುವುದನ್ನು ನೋಡಿ ಅಕ್ಷಯ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದರು.
ಪ್ರಾದೇಶಿಕ ಭಾಷೆಗಳು ಭಾರತೀಯ ಸಂಸ್ಕೃತಿ ಎಂದಿದ್ದ ಮೋದಿ!
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪ್ರಾದೇಶಿಕ ಭಾಷೆಗಳ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದರು. ಪ್ರತಿ ಪ್ರಾದೇಶಿಕ ಭಾಷೆಯಲ್ಲಿಯೂ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಬಿಜೆಪಿ ನೋಡುತ್ತದೆ. ಪ್ರತಿ ಭಾಷೆಯೂ ಪೂಜಿಸಲು ಯೋಗ್ಯವಾಗಿದೆ ಎಂದು ಹೇಳಿದ್ದರು.
ಅದಲ್ಲದೇ, ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಯೊಂದು ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಇತ್ತೀಚೆಗೆ ಹೇಳಿರುವುದನ್ನು ಗಮನಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ