ಡೆಡ್ಲಿ ಸೋಮ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ, ಮಾಜಿ ಡಾನ್ ಮುತ್ತಪ್ಪ ರೈ ಬಯೋಪಿಕ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ನಿರ್ಮಾಪಕ ರಾಜಣ್ಣ ಅವರ ಪುತ್ರ ದೀಕ್ಷಿತ್ ಎಂಆರ್ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಡೆಬ್ಯೂ ಮಾಡುತ್ತಿದ್ದು, ಖಾಸಗಿ ರೆಸಾರ್ಟ್‌ನಲ್ಲಿ ಹೆಲಿಕಾಪ್ಟರ್ ತರಿಸಿ ಹತ್ತಾರು ಮಂದಿ ಕಲಾವಿದರ ಜತೆ ಅದ್ದೂರಿಯಾಗಿ ಫೋಟೋಶೂಟ್‌ಅನ್ನು ಮಾಡಲಾಗಿತ್ತು. ನಿರ್ದೇಶಕ ರವಿ ಶ್ರೀವತ್ಸ, ಫಸ್ಟ್ ಲುಕ್ ಪೋಸ್ಟರ್ ಅನ್ನೂ ರಿಲೀಸ್ ಮಾಡಿದ್ದರು. ಆದರೆ ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕ ಪದ್ಮನಾಭ್, ಚಿತ್ರತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಎಂಆರ್ ಬಯೋಪಿಕ್ ಮಾಡಲು ನನ್ನ ಬಳಿ ರೈಟ್ಸ್ ಇದೆ. ಬೇರೆ ಯಾರೂ ಆ ಸಿನಿಮಾ ಮಾಡುವಂತಿಲ್ಲ. 2016ರಲ್ಲಿ ರಾಮ್‌ಗೋಪಾಲ್ ವರ್ಮಾ ಹಾಗೂ ವಿವೇಕ್ ಒಬೆರಾಯ್ ಕಾಂಬಿನೇಷನ್‌ನಲ್ಲಿ ಸಿನಿಮಾ ಪ್ರಾರಂಭಿಸಲಾಗಿತ್ತಾದರೂ, ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಹಾಗಂತ ಆ ಸಿನಿಮಾ ನಾನು ಮಾಡುವುದಿಲ್ಲ ಅಂತಲ್ಲ. ನಾನೇ ಮಾಡುತ್ತೇನೆ. ಬೇರೆಯವರು ಆ ಸಿನಿಮಾ ಮಾಡುವಂತಿಲ್ಲ ಎಂದು ತಾಕೀತು ಮಾಡಿದ್ದರು.
ಇದಾದ ನಂತರ, ಇತ್ತೀಚೆಗಷ್ಟೆ ಮುತ್ತಪ್ಪ ರೈ ಅವರ ಪುತ್ರ ವಿಕ್ಕಿ ರೈ, ಎಂಆರ್ ಸಿನಿಮಾ ಮಾಡಲು ಅನುಮತಿ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಪತ್ರ ಬರೆದಿದ್ದರು. ಹೀಗಾಗಿ ಸುದ್ದಿಗೋಷ್ಠಿ ನಡೆಸಿದ ಎಂಆರ್ ಚಿತ್ರತಂಡ, ಮುತ್ತಪ್ಪ ರೈ ಅವರ ಬಯೋಪಿಕ್ ಅನ್ನು ಕೈಬಿಟ್ಟಿದ್ದೇವೆ. ಎಂಆರ್ ಬದಲು ಅದೇ ತಂಡದ ಜೊತೆಗೆ ಡಿಆರ್ ಅಂತ ಮತ್ತೊಂದು ಸಿನಿಮಾ ಮಾಡುತ್ತೇವೆ ಎಂದು ಪ್ರಕಟಿಸಿದ್ದಾರೆ.
'ಎಂಆರ್ ನನ್ನ ಕನಸಿನ ಕೂಸು. ಈ ಚಿತ್ರಕ್ಕಾಗಿ 20 ವರ್ಷಗಳ ಕಾಲ ಶ್ರಮಪಟ್ಟಿದ್ದೇನೆ. ಈ ಚಿತ್ರಕ್ಕಾಗಿ ನಾನು ಮತ್ತು ನನ್ನ ಗುರುಗಳಾದ ರವಿ ಬೆಳಗೆರೆ ಕಥೆ ಬರೆದು ರೈ ಎಂದು ಹೆಸರಿಟ್ಟಿದ್ದೆವು. ನಾಯಕನಾಗಿ ಉಪೇಂದ್ರ ನಟಿಸಬೇಕಿತ್ತು. ದಿನೇಶ್ ಬಾಬು ಅವರು ನಿರ್ದೇಶಿಸಬೇಕಿತ್ತು. ಕಥೆಗಾಗಿ ನಾನು ಮುತ್ತಪ್ಪ ರೈ ಅವರನ್ನು ಭೇಟಿ ಮಾಡಲು ಸಿಡ್ನಿಗೆ ಹೋಗಿದ್ದೆ. ಆದರೆ ಆಗ ಅವರ ಮಾತಿನಿಂದಲೇ ಈ ಸಿನಿಮಾ ನಿಲ್ಲಿಸಬೇಕಾಯಿತು. ಆ ಬಳಿಕ ನಿರ್ಮಾಪಕ ಧನರಾಜ್ ನಿರ್ದೇಶಕ ಕೆವಿ ರಾಜು ಹಾಗು ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಸುದೀಪ್ ಅವರು ಹೀರೋ ಆಗಿ ಸಿನಿಮಾ ಮಾಡಲು ರೆಡಿಯಾದ್ರು. ಆದರೆ ಏನಾಯಿತೋ ಗೊತ್ತಿಲ್ಲ ಈ ಸಿನಿಮಾ ಕೂಡ ಸ್ಥಗಿತಗೊಂಡಿತ್ತು' ಎಂದು ತಿಳಿಸಿದ್ದಾರೆ ನಿರ್ದೇಶಕ.
ಇದನ್ನೂ ಓದಿ: Pogaru: ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ತೆಲುಗು ಟೀಸರ್ ನಾಳೆ ರಿಲೀಸ್ ಆಗಲಿದೆ..!
'ತಮ್ಮ ಬಗ್ಗೆ ಬಯೋಪಿಕ್ ಆದರೆ ಸರ್ಕಾರಕ್ಕೆ ತನ್ನ ವಿರುದ್ದ ಡಾಕ್ಯುಮೆಂಟ್ ಆಗುತ್ತೆ ಎಂಬ ಭಯ ಬಹುಶಃ ಮುತ್ತಪ್ಪ ರೈ ಅವರಲ್ಲಿತ್ತು ಅನ್ನಿಸುತ್ತೆ. ಹೀಗಾಗಿಯೇ ಅವರಿದ್ದಾಗ ಅವರ ಕುರಿತ ಸಿನಿಮಾ ಆಗಿರಲಿಲ್ಲ' ಎಂದು ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ ರವಿ ಶ್ರೀವತ್ಸ.
ಅಂದಹಾಗೆ ಈಗ ಅವರು ಕೈಗೆತ್ತಿಗೊಂಡಿರುವ ಡಿಆರ್, ಮುತ್ತಪ್ಪ ರೈ ಅವರ ಕುರಿತ ಸಿನಿಮಾ ಅಲ್ಲವಂತೆ. ಆದರೆ ಪದ್ಮನಾಭ್ ಅವರ ರೈ ಬಯೋಪಿಕ್ ರಿಲೀಸ್ ಆದ ದಿನವೇ, ರವಿ ಶ್ರೀವತ್ಸ ತಮ್ಮ ಸಿನಿಮಾವನ್ನು ಅನೌನ್ಸ್ ಮಾಡಲಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ