ಜೋಗಿ ಪ್ರೇಮ್ ಅಪ್ಪಟ ಹಳ್ಳಿ ಹೈದ. ಅವರ ಮಾತು, ನಡೆಯಲ್ಲಿ ಇಂದಿಗೂ ಆ ಹಳ್ಳಿಯ ಸೊಗಡನ್ನು ಕಾಣಬಹುದಾಗಿದೆ. ಇಂತಹ ನಿರ್ದೇಶಕ ಲಾಕ್ಡೌನ್ ಸಡಿಲಗೊಂಡಾಗಿನಿಂದ ಸಿನಿಮಾದ ಚಿತ್ರೀಕರಣ ಹಾಗೂ ಲೊಕೇಶನ್ ಅಂತ ಸುತ್ತಾಡುತ್ತಲೇ ಇದ್ದಾರೆ, ತಮ್ಮ ಹುಟ್ಟುಹಬ್ಬ ಹೋಗಲಿ ಈ ಸಲ ಮಗನ ಹುಟ್ಟುಹಬ್ಬಕ್ಕೂ ಪ್ರೇಮ್ ಮನೆಯವರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಹೌದು, ಮೊದಲಿಗೆ ಊಟಿಯಲ್ಲಿ ಲೊಕೇಶನ್ ಹಂಟಿಂಗ್ ಅಂತ ಹೋದವರು ನಂತರ ಅಲ್ಲೇ ಏಕ ಲವ್ ಯಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾದರು. ಇಲ್ಲಿ ಶೂಟಿಂಗ್ ಮುಗಿಸಿ, ಉತ್ತರ ಭಾರತದಲ್ಲಿ ಶೂಟಿಂಗ್ಗೆ ಲೊಕೇಶನ್ ಹುಡುಕಿಕೊಂಡು ಸುತ್ತಾಡಲಾರಂಭಿಸಿದರು. ಕಾಶ್ಮೀರದ ಕಣಿವೆಗಳಲ್ಲಿ ಕ್ಯಾಮೆರಾ ಹಿಡಿದು ತಮ್ಮ ತಂಡದೊಂದಿಗೆ ಫೋಟೋಶೂಟ್ ಮಾಡುತ್ತಾ ಅದರ ಅಪ್ಡೇಟ್ಗಳನ್ನು ಸಾಮಾಜಿಕ ಜಾಲತಾಣದ ಮೂಲಕ ನೀಡುತ್ತಿದ್ದರು. ಹೀಗೆ ಓಡಾಡುತ್ತಾ ನಿರ್ದೇಶಕ ಪ್ರೇಮ್ ಗುಜರಾಜ್ ತಲುಪಿದ್ದರು. ಅಲ್ಲಿ ಅವರಿಗೆ ಸರ್ಪ್ರೈಸ್ ಕಾದಿತ್ತು.
ಏಕ್ ಲವ್ ಯಾ ಸಿನಿಮಾಗೆ ಲೊಕೇಶನ್ ಹುಡುಕುತ್ತಾ ಗುಜರಾತ್ಗೆ ಹೋದ ಪ್ರೇಮ್ ಅವರಿಗೆ ಸಿಕ್ಕಿದ್ದು ಮುದ್ದಾದ ಅಮ್ಮ-ಮಗಳು. ಹೌದು, ಅವರನ್ನು ನೋಡಿದ ಕೂಡಲೇ ಪ್ರೇಮ್ ಅವರಿಗೆ ಇಷ್ಟವಾಯಿತಂತೆ. ಅದಕ್ಕೆ ಅವರನ್ನು ತಮ್ಮ ತೋಟಕ್ಕೆ ಕರೆ ತಂದಿದ್ದಾರೆ.
ಹೌದು, ಮುದ್ದಾದ ಅಮ್ಮ ಮಗಳು ಅಂದರೆ, ಯಾರೋ ಮನುಷ್ಯರನ್ನು ಕರೆತಂದಿದ್ದಾರೆ ಎಂದು ತಿಳಿಯಬೇಡಿ. ಪ್ರೇಮ್ ಗುಜರಾತಿನಿಂದ ಎಮ್ಮೆ ಹಾಗೂ ಅದರ ಕರುವನ್ನು ತಂದಿದ್ದಾರೆ. ಲೊಕೇಶನ್ ಹುಟುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದ ಎಮ್ಮೆ ಹಾಗೂ ಕರು ನಿರ್ದೇಶಕನಿಗೆ ತುಂಬಾ ಇಷ್ಟವಾಯಿತಂತೆ. ಅದಕ್ಕೆ ತೋಟಕ್ಕೆ ತಂದು ತಮ್ಮ ತಾಯಿಗೆ ಕೊಟ್ಟಿದ್ದಾರೆ.
ಶೂಟ್ಗೆ ಲೊಕೇಶನ್ ನೋಡಕ್ಕೆ ಗುಜರಾತ್ನ ಕಚ್ಗೆ ಹೋಗಿದ್ದೆ, ಅಲ್ಲಿ ಒಂದು ಎಮ್ಮೆ ನೋಡ್ದೆ, ತುಂಬಾ ಇಷ್ಟ ಆಯ್ತು, ಯಾಕ್ ಇದುನ್ನ ಅಮ್ಮನ ತೋಟಕ್ಕೆ ತಗೊಂಡು ಹೋಗಬಾರದು ಅಂತ ಅನ್ಕೊಂಡೆ. ನಿರ್ಧರ ಮಾಡಿ, 2000 ಕಿ.ಮೀ ಜೊತೇಲಿ ಕರ್ಕೊಂಡ್ ಬಂದೆ, ತಾಯಿಗೆ ಮಂಡೋದರಿ ಹಾಗೂ ಮಗಳಿಗೆ ಭೈರವಿ ಅಂತ ಹೆಸರಿಟ್ಟೆ.
ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು ಎಂದು ಪ್ರೇಮ್ ಖುಷಿಯಿಂದ ಬರೆದುಕೊಂಡಿದ್ದಾರೆ. ಜೊತೆಗೆ ಎಮ್ಮೆ ಕರುವಿನ ಫೋಟೋ ಸಹ ಹಂಚಿಕೊಂಡಿದ್ದಾರೆ.
ಲಾಕ್ಡೌನ್ ನಂತರ ಪ್ರೇಮ್ ಏಕ್ ಲವ್ ಯಾ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಊಟಿಯಲ್ಲಿ ಮುಗಿಸಿದ್ದು, ಇನ್ನು ಉತ್ತರ ಭಾರತದಲ್ಲಿ ಶೂಟಿಂಗ್ ಆರಂಭಿಸಬೇಕಿದೆ. ಲೊಕೇಶನ್ ಹುಡುಕಿಕೊಂಡು ಬಂದಿರುವ ಪ್ರೇಮ್ ಸದ್ಯದಕ್ಕೆ ಚಿತ್ರೀಕರಣಕ್ಕೆ ತೆರಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ