ದಿಲೀಪ್ ಕುಮಾರ್​​ರ 2ನೇ ಮದುವೆ ಕಥೆ: ಇಬ್ಬರೂ ಮೊದಲ ಹೆಂಡತಿ, ಮೊದಲ ಗಂಡನ ಬಳಿಗೆ ಮರಳಿದ್ದರು!

ಗುಟ್ಟಾಗಿ ಆಗಿದ್ದ 2ನೇ ಮದುವೆ ಮುರಿದು ಬೀಳುತ್ತಲೇ ದಿಲೀಪ್​​ ಕುಮಾರ್​ ಮೊದಲ ಹೆಂಡತಿಯ ಪಾದವೇ ಗತಿ ಎಂದಿದ್ದರು. 2ನೇ ಹೆಂಡತಿಯೂ ತನ್ನ ಮೊದಲ ಗಂಡನನ್ನೇ ಮರು ಮದುವೆಯಾಗಿದ್ದರು.

ಅಸ್ಮಾ ಖಾನ್​, ಸಾಹಿರಾ ಬಾನು ಜೊತೆ ದಿಲೀಪ್​ ಕುಮಾರ್​

ಅಸ್ಮಾ ಖಾನ್​, ಸಾಹಿರಾ ಬಾನು ಜೊತೆ ದಿಲೀಪ್​ ಕುಮಾರ್​

  • Share this:
ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್​ ಕುಮಾರ್​(98) ಮಂಗಳವಾರ ವಯೋಸಹಜ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಚಿತ್ರರಂಗ ಹಿರಿಯ ನಟನ ಅಗಲಿಕೆಗೆ ಕಂಬನಿ ಮಿಡಿದಿದೆ. ಕಳೆದ ಕೆಲವು ವರ್ಷಗಳಿಂದ ಹಲವು ಬಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದ ದಿಲೀಪ್​ ಸಾಬ್​​​ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದರು. ಆದರೆ ನಿನ್ನೆ ಅಪಾರ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಿಲೀಪ್​​ ಅವರ ಏಕೈಕ ಆಸರೆ ಅವರ ಪತ್ನಿ ಸಾಹಿರಾ ಬಾನು. ಮಕ್ಕಳಿಲ್ಲದ ನಮಗೆ ನನ್ನ ಪತಿಯೇ ಒಂದು ಮಗು ಎಂದು ಸಾಹಿರಾ ಅವರು ಹೇಳಿಕೊಂಡಿದ್ದರು.

ನಟಿ ಸಾಹಿರಾ ಬಾನು , ದಿಲೀಪ್​ ಕುಮಾರ್​ ಅವರದ್ದು 55 ವರ್ಷಗಳ ದಾಂಪತ್ಯ. ಸಾಹಿರಾ ಹಾಗೂ ದಿಲೀಪ್​ ಅವರ ಮಧ್ಯೆ 22 ವರ್ಷಗಳ ವಯಸ್ಸಿನ ಅಂತರವಿದ್ದರೂ ಪ್ರೀತಿಯಿಂದ ಬದುಕಿದ್ದರು. ದಿಲೀಪ್​ ಅವರು 98 ವರ್ಷ ಜೀವನ ಸವೆಸಿದ್ದರಲ್ಲಿ ಸಾಹಿರಾರ ಪಾತ್ರ ದೊಡ್ಡದಿದೆ. ಸಾಹಿರಾರ ಪ್ರೀತಿ, ಮಗುವಿನಂತೆ ನೋಡಿಕೊಳ್ಳುತ್ತಿದ್ದ ವಾತ್ಸಲ್ಯವೇ ದಿಲೀಪ್​ ಅವರ ದೀರ್ಘಾಯುಷ್ಯದ ಗುಟ್ಟು ಎನ್ನತ್ತದೆ ಆಪ್ತ ವಲಯ. ಇಂಥ ಮಾದರಿ ದಾಂಪತ್ಯದ ಮಧ್ಯೆಯೂ ಒಂದು ಬಿರುಗಾಳಿ ಎದ್ದಿತ್ತು.

1966ರ ಅ.11ರಂದು ತಮಗಿಂತ 22 ವರ್ಷ ಚಿಕ್ಕವರಾದ ಸಾಹಿರಾರನ್ನು ದಿಲೀಪ್​ ಕುಮಾರ್​ ಮದುವೆಯಾಗಿದ್ದರು. ಅನೋನ್ಯವಾಗಿದ್ದಾಗಲೇ ದಿಲೀಪ್​ ಅವರು 1981ರಲ್ಲಿ ಗುಟ್ಟಾಗಿ 2ನೇ ಮದುವೆಯಾಗಿದ್ದರು. ಹೈದ್ರಾಬಾದ್​ ಮೂಲದ ಅಸ್ಮಾ ಖಾನ್​ ಎಂಬುವರೊಂದಿಗೆ ನಿಖಾ ಮಾಡಿಕೊಂಡಿದ್ದರು. ಅಸ್ಮಾ ಅವರಿಗೂ ಇದು 2ನೇ ಮದುವೆಯಾಗಿತ್ತು. 3 ಮಕ್ಕಳ ತಾಯಿಯಾಗಿದ್ದ ಅಸ್ಮಾ ಹೈದ್ರಾಬಾದ್​ನಲ್ಲಿ ಕ್ರಿಕೆಟ್​ ನೋಡುವಾಗ ಮೈದಾನದಲ್ಲಿ ದಿಲೀಪ್​ ಅವರಿಗೆ ಪರಿಚಯವಾಗಿದ್ದರು. ಪರಿಚಯ ಸಲಗೆಗೆ ತಿರುಗಿ ಏಕಾಏಕಿ ಗುಟ್ಟಾಗಿ ಮದುವೆಯಾಗಿ ಬಿಟ್ಟಿದ್ದರು.

ಈ ಬಗ್ಗೆ ಮೊದಲ ಪತ್ನಿ ಸಾಹಿರಾ ಬಾನು ಪ್ರಶ್ನಿಸಿದಾಗ ದಿಲೀಪ್​ ಅವರು ಆಣೆ ಪ್ರಮಾಣ ಮಾಡಿ ಇಲ್ಲವೆಂದು ವಾದಿಸಿದ್ದರಂತೆ. ಪತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಸಾಹಿರಾ ಸುಮ್ಮನಾಗಿದ್ದರು. 2ನೇ ಮದುವೆ ಮೂರೇ ವರ್ಷಗಳಿಗೆ ಮುರಿದು ಬಿದ್ದಿತ್ತು. ಅಸ್ಮಾ ಖಾನ್​ರಿಂದ ದಿಲೀಪ್​ ದೂರವಾಗಿದ್ದರು. ಈ ಬಗ್ಗೆ ದಿಲೀಪ್​ ಅವರು ಆತ್ಮಕಥೆಯಲ್ಲಿ ಬರೆದುಕೊಂಡಿದ್ದು, ಅದೊಂದು ವಿಷಯವನ್ನು ನಾನು ನನ್ನ ಜೀವನದಲ್ಲಿ ಮರೆಯಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. 2ನೇ ಮದುವೆ ನನ್ನ ಜೀವನದ ದೊಡ್ಡ ತಪ್ಪು ಎಂದು ಬರೆದುಕೊಂಡಿದ್ದಾರೆ. 2ನೇ ಮದುವೆ ಮುರಿದುಕೊಂಡ ದಿಲೀಪ್, ​ ಮೊದಲ ಪತ್ನಿ ಸಾಹಿರಾ ಬಾನು ಅವರ ಬಳಿ ಮರಳಿದ್ದರು. ಇತ್ತ ಅಸ್ಮಾ ಖಾನ್​ ಕೂಡ ತನ್ನ ಮೊದಲ ಪತಿಯನ್ನು ಮರು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರಂತೆ.

ಇದನ್ನೂ ಓದಿ: ಬೆಡ್ ಮೇಲೆ ನನ್ನ ಹೆಂಡತಿ ಆ ನಟಿಯಂತೆ ಕಂಡಿದ್ದರೆ ಖುಷಿಯಾಗಿ ಇರುತ್ತಿದ್ದೆ ಎಂದಿದ್ದ ಅಮೀರ್ ಖಾನ್!

ಒಮ್ಮೆ ಗರ್ಭಪಾತಕ್ಕೆ ಒಳಗಾಗಿದ್ದ ಸಾಹಿರಾ ಬಾನು ಅವರು ಮತ್ತೆ ಗರ್ಭ ಧರಿಸುವುದು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಮಗು ಪಡೆಯುವ ಸಲಯವಾಗಿ ದಿಲೀಪ್​​​ 2ನೇ ಮದುವೆಯಾಗಿದ್ದರು ಎನ್ನುತ್ತವೆ ಆಪ್ತ ಮೂಲಗಳು. 2ನೇ ಮದುವೆ ಮುರಿದ ಬಳಿಕ ದಿಲೀಪ್​ ಕುಮಾರ್​, ಅಸ್ಮಾ ಖಾನ್​ ಇಬ್ಬರೂ ತಮ್ಮ ಮೊದಲ ಸಾಂಗತಿಗಳ ಬಳಿಗೆ ಮರಳಿದ್ದು ಮಾತ್ರ ಸೋಜಿಗ.

ಯಾರ ಜೀವನವೂ, ಯಾರ ಸಂಸಾರವೂ ಪರ್ಫೆಕ್ಟ್​ ಅಲ್ಲ. ಕ್ಷಮೆ, ತ್ಯಾಗ, ತಪ್ಪುಗಳನ್ನು ಒಪ್ಪಿಕೊಂಡು ಬಾಳುವುದೇ ಯಶಸ್ವಿ ದಾಂಪತ್ಯದ ಗುಟ್ಟು ಎಂದು ಸಾಹಿರಾ ಬಾನು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೇಳಿದ್ದಂತೆ ನಡೆದುಕೊಂಡಿದ್ದಾರೆ ಕೂಡ.
Published by:Kavya V
First published: