news18-kannada Updated:September 22, 2020, 8:09 PM IST
ಬಾಲಿವುಡ್ ನಟಿಯರು
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪುತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಸುಶಾಂತ್ ಆತ್ಮಹತ್ಯೆಗೆ ಡ್ರಗ್ಸ್ ಜಾಲ ಕೂಡ ಕಾರಣ ಎಂಬ ಸುದ್ದಿ ಹರಡುತ್ತಲೇ ಆ ನಿಟ್ಟಿನಲ್ಲೂ ತನಿಖೆ ನಡೆದಿದ್ದು, ಈಗಾಗಲೇ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ 15 ಮಂದಿಯನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ ರಿಯಾ ಚಕ್ರವರ್ತಿ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಹೆಸರುಗಳನ್ನು ಬಹಿರಂಗಪಡಿಸಿದ್ದು, ಎನ್ಸಿಬಿ ಅಧಿಕಾರಿಗಳು ಅವರಿಗೂ ನೊಟೀಸ್ ನೀಡಿ ವಿಚಾರಣೆಗೆ ಕರೆಯಲಿದ್ದಾರೆ ಎನ್ನಲಾಗಿದೆ. ಅವರ ಜೊತೆಗೆ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆಗೂ ಇದೇ ಪ್ರಕರಣ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲ ವಾಟ್ಸಾಪ್ ಚಾಟ್ಗಳು ಸದ್ಯ ಎಲ್ಲೆಡೆ ವೈರಲ್ ಆಗಿವೆ.
ಅದರಲ್ಲಿ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಡಿ, ಕೆ, ಜೆ ಅಕ್ಷರಗಳ ನಡುವಿನ ಚಾಟ್ಗಳು ಸದ್ಯ ಹಲವು ಅನುಮಾಗಳಿಗೆ ಎಡೆ ಮಾಡಿಕೊಟ್ಟಿದೆ. ಅದರಲ್ಲಿ ಡಿ ಅಂದರೆ ದೀಪಿಕಾ ಪಡುಕೋಣೆ, ಕೆ ಅಂದರೆ ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಕರಿಷ್ಮಾ ಎನ್ನಲಾಗಿದೆ.
2017ರ ಅಕ್ಟೋಬರ್ 28ರಂದು ಮುಂಬೈನ ಹೆಸರಾಂತ ಕೋಕೋ ಕ್ಲಬ್ನಲ್ಲಿ ಹ್ಯಾಲೋವೀನ್ ಪಾರ್ಟಿ ಆಯೋಜಿಸಲಾಗಿತ್ತು. ಆ ಪಾರ್ಟಿ ನಡೆದ ದಿನವೇ ಈ ವಾಟ್ಸಾಪ್ನಲ್ಲಿ ಮಾಲ್ ತರುತ್ತಿರುವೆ ತಾನೇ? ಕೋಕೋಗೆ ಎಷ್ಟು ಗಂಟೆಗೆ ಬರುವೆ? ಅಂತೆಲ್ಲಾ ಚಾಟ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಅದೇ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ಕರಿಷ್ಮಾ ಪ್ರಕಾಶ್ ಮಾತ್ರವಲ್ಲ ನಟ ಸಿದ್ಧಾರ್ಥ್ ಮಲ್ಹೋತ್ರಾ, ಆದಿತ್ಯ ರಾಯ್ ಕಪೂರ್, ನಟಿ ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಹೀಗಾಗಿಯೇ ವಾಟ್ಸಾಪ್ ಗ್ರೂಪ್ನಲ್ಲಿ ಚಾಟ್ ಮಾಡಿರುವುದು ನಿಜಕ್ಕೂ ದೀಪಿಕಾ ಪಡುಕೋಣೆಯವರಾ? ಹ್ಯಾಲೋವೀನ್ ಪಾರ್ಟಿಯಲ್ಲಿ ನಿಜಕ್ಕೂ ಡ್ರಗ್ಸ್ ಸರಬರಾಜಾಗಿತ್ತಾ? ಅಂತೆಲ್ಲಾ ಎನ್ಸಿಬಿ ಅಧಿಕಾರಿಗಳಲ್ಲಿ ಪ್ರಶ್ನೆ ಮೂಡಿದ್ದು, ಕೆಲವೇ ದಿನಗಳಲ್ಲಿ ಎನ್ಸಿಬಿ ದೀಪಿಕಾ ಅವರನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ದೀಪಿಕಾ ಗೋವಾದಲ್ಲಿ ಸಿನಿಮಾ ಶೂಟಿಂಗ್ ಒಂದರಲ್ಲಿ ಬ್ಯುಸಿಯಾಗಿದ್ದು, ಈ ಬಗ್ಗೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.
Published by:
zahir
First published:
September 22, 2020, 8:09 PM IST