Challenging Star Darshan: ನೂರು ದಿನದ ಕಾಲ್ಶೀಟ್ ಕೊಡೋಕೆ ಪ್ರೇಮ್ ಯಾವ ಪುಡಂಗನೂ ಅಲ್ಲ, ಕೊಂಬೂ ಇಲ್ಲ ಅಂದಿದ್ದಾರೆ ದರ್ಶನ್. ಈ ಮಾತಿನ ಮೂಲಕ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವಿನ ಗಲಾಟೆಯಲ್ಲಿ ಅನವಶ್ಯಕ ಎನ್ನುವಂತೆ ನಿರ್ದೇಶಕ ಪ್ರೇಮ್ ಸಿಕ್ಕಿಕೊಂಡಿದ್ದಾರೆ. ಈಗ ವಿಚಾರ ಮತ್ತಷ್ಟು ಎಳೆದಂತಾಗಿದ್ದು ಪ್ರೇಮ್ ಇಂದು ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಒಂದಕ್ಕೆ 10 ಎನ್ನುವಷ್ಟು ರಗಳೆ ರಾದ್ಧಾಂತ ನಡೆಯುತ್ತಿದೆ. ಅರುಣಾ ಕಮಾರಿ ಹಣದ ಮೋಸದ ವಿಚಾರದಿಂದ ಆರಂಭವಾಗಿ ನಿರ್ಮಾಪಕ ಉಮಾಪತಿ, ನಂತರ ಮೈಸೂರಿನ ಹೋಟೆಲ್ನಲ್ಲಿ ದರ್ಶನ್ ಗಲಾಟೆ, ಪುನೀತ್ – ರಾಘವೇಂದ್ರ ರಾಜ್ಕುಮಾರ್ ಆಸ್ತಿ ಬೇಕು ಎಂದು ದರ್ಶನ್ ಹೇಳಿದ್ದು ಎನ್ನುವಲ್ಲಿಯ ತನಕ ಈ ಪ್ರಕರಣ ಏನೇನೋ ಆಗೋಯ್ತು.
ಅದೆಷ್ಟು ಟ್ವಿಸ್ಟ್ ಗಳು, ಟರ್ನ್ಗಳು ಅಬ್ಬಾ.. ಒಂದು ಸಿನಿಮಾ ಮಾಡಬಹುದಾದಷ್ಟು ವಿಚಾರ ಈ ಪ್ರಕರಣದಲ್ಲಿದೆ. ಆದ್ರೆ ಇನ್ನೂ ಇದು ಮುಗಿದಿಲ್ಲ. ನಿನ್ನೆ ಮಾತನಾಡುವ ಭರಾಟೆಯಲ್ಲಿ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ದರ್ಶನ್ ಮಾತನಾಡಿದ್ದಾರೆ. ಅದರಿಂದ ತಮಗೆ ವಿಪರೀತ ಬೇಸರವಾಗಿದೆ ಎಂದು ಅಸಮಾಧಾನ ಹೊರಹಾಕಿರೋ ಪ್ರೇಮ್ ಅವರು ಪುಡಾಂಗ್ ಅನ್ನೋ ಪದ ಬಳಸಿದ್ದು ನನಗೆ ತುಂಬ ಹರ್ಟ್ ಆಗಿದೆ, ನೋವಾಗಿದೆ..ರಕ್ಷಿತಾಗೂ ಬೇಸರವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Sumalatha Ambareesh: ‘ಅಂಬರೀಶ್ ತೋರಿಸಿದ ದಾರಿಯಲ್ಲೇ ಸಾಗ್ತಿದ್ದೇನೆ’, ಸಿಕ್ಕವರಿಗೆಲ್ಲಾ ಉತ್ತರ ಕೊಟ್ರೆ ನನ್ನ ಗೌರವಕ್ಕೇ ಧಕ್ಕೆ !
ನಿನ್ನೆಯಿಂದ ಹಲವು ಬಾರಿ ದರ್ಶನ್ ಹಾಗೆ ಯಾಕೆ ಮಾತಾಡಿದ್ರು ಅಂತ ರಕ್ಷಿತಾ ಮತ್ತು ನಾನು ಮಾತಾಡಿಕೊಂಡಿದ್ದೇವೆ. ದರ್ಶನ್ ನನಗೆ ಒಳ್ಳೆ ಫ್ರೆಂಡ್, ಉಮಾಪತಿನ ಪರಿಚಯ ಮಾಡಿಕೊಟ್ಟಿದ್ದು ನಾನೇ. ಸಿನಿಮಾ ಮಾಡಬೇಕು ಅಂದುಕೊಂಡಿದ್ವಿ. ಆದರೆ ದಿ ವಿಲನ್ ಸಿನಿಮಾ ಡಿಲೇ ಆದ ಕಾರಣ ದರ್ಶನ್, ಉಮಾಪತಿ ಹಾಗೂ ನನ್ನ ಕಾಂಬಿನೇಷನ್ ಸಿನಿಮಾ ಆಗಲಿಲ್ಲ. ರಾಬರ್ಟ್ ಸಿನಿಮಾಗೆ ಮೊದಲು ವಿಶ್ ಮಾಡಿದ್ದು ನಾನೇ, ಆ ಸಿನಿಮಾ ಬಳಿಕವೂ ಐದಾರು ಬಾರಿ ದರ್ಶನ್ ಮತ್ತು ನಾನು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ. ಅವರು ಯಾಕೆ ಹಾಗೆ ಮಾತಾಡಿದರು ಅಂತ ಗೊತ್ತಿಲ್ಲ..ಹೀಗಾಗಿಯೇ ಬೇಸರವಾಗಿ ಅವರಿಗೆ ಒಂದು ಲೆಟರ್ ಬರೆದೆ ಅಷ್ಟೇ. ಇದನ್ನೇ ಬೆಳೆಸಿಕೊಂಡು ಹೋಗಲು ಇಷ್ಟವಿಲ್ಲ ಎಂದಿದ್ದಾರೆ ಜೋಗಿ ಪ್ರೇಮ್.
ನಾನು ಯಾರ ತಂಟೆಗೂ ಹೋಗೋದಿಲ್ಲ. ಆದರೆ ಸುಖಾಸುಮ್ಮನೆ ನನ್ನ ಹೆಸರು ಯಾಕೆ ತಂದರೋ ಗೊತ್ತಿಲ್ಲ, ಪಬ್ಲಿಕ್ ಆಗಿ ಮಾತಾಡುವಾಗ ಪದಬಳಕೆ ನೋಡಿಕೊಂಡು ಮಾತಾಡಬೇಕು. ಮತ್ತೊಬ್ಬರಿಗೆ ಬೇಸರ ಉಂಟಾಗುವಂತೆ ಮಾತಾಡಬಾರದು ಎಂದರು. ಇದರಲ್ಲಿ ನನ್ನ ತಪ್ಪೇನಿದೆ ? ನಿರ್ದೇಶಕ ಸಿನಿಮಾ ಮಾಡಿದರೆ ನಟ ಸ್ಟಾರ್ ಆಗೋದು, ನಿನ್ನೆ ದರ್ಶನ್ ಅವರ ಹೇಳಿಕೆ ಬಳಿಕ ನಾನಾಗಲೀ, ರಕ್ಷಿತಾ ಆಗಲೀ ದರ್ಶನ್ ಜತೆ ಮಾತಾಡಿಲ್ಲ, ಅವರೂ ನಮಗೆ ಕರೆ ಮಾಡಿಲ್ಲ. ಕನ್ನಡ ಚಿತ್ರರಂಗ ಕಷ್ಟದಲ್ಲಿರುವಾಗ ಒಳ್ಳೆ ಸಿನಿಮಾ ಮಾಡಬೇಕು, ನಮ್ ನಮ್ ಕಾಲ್ ಎಳೆದುಕೊಂಡು ಕೂತರೆ ಅದು ಚೆನ್ನಾಗಿರಲ್ಲ. ದರ್ಶನ್ ಅವರ ಹೇಳಿಕೆಯಿಂದ ನನಗೆ, ರಕ್ಷಿತಾ ಇಬ್ಬರಿಗೂ ಬೇಸರವಾಗಿದೆ ಎಂದು ಪ್ರೇಮ್ ಹೇಳಿದ್ದಾರೆ.
ಅವರು ನನ್ನ ಬಗ್ಗೆ ಇಲ್ಲಿ ಯಾಕೆ ಆ ರೀತಿ ಹೇಳಿದರೋ ಗೊತ್ತಿಲ್ಲ, ದರ್ಶನ್ ಆಗಲೀ ಅವರ ಅಭಿಮಾನಿಗಳಾಗಲೀ ನನಗೆ ಕ್ಷಮೆ ಕೇಳೋದು ಬೇಕಿಲ್ಲ. ಆ ರೀತಿ ಹೇಳಿಕೆಗಳನ್ನು ಕೊಡಬಾರದಿತ್ತು ಅಷ್ಟೇ, ಅದು ನಮಗೆ ನೋವಾಗಿದೆ ಎಂದಿದ್ದಾರೆ ಪ್ರೇಮ್. ಇದೇ ಸಂಬಂಧವಾಗಿ ದರ್ಶನ್ಗೆ ಸುದೀರ್ಘ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪ್ರೇಮ್ ಹಂಚಿಕೊಂಡಿದ್ರು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಪದ ‘ಪುಡಾಂಗ್’. ಅಷ್ಟಕ್ಕೂ ಪುಡಾಂಗ್ ಎಂದರೆ ಏನು ? ಅವನೇನು ಪುಡಾಂಗ್ ಅಲ್ಲ ಎಂದಿರುವ ದರ್ಶನ್ ಮಾತಿನ ನಂತರ ಈ ಪದ ಭಾರೀ ಚರ್ಚೆಯಲ್ಲಿದೆ. ಪುಡಾಂಗ್ ಅಂದ್ರೆ ‘ದೊಡ್ಡ ಜನ’ ಎಂದು ಅರ್ಥವಂತೆ. ಅವನೇನು ಪುಡಾಂಗ್ ಅಲ್ಲ ಅಂದ್ರೆ ಅವನೇನು ದೊಡ್ಡ ಜನ ಅಲ್ಲ.. ಜಗ್ಗೇಶ್ ಡೈಲಾಗ್ ಸ್ಟೈಲ್ ನಲ್ಲಿ ಹೇಳೋದಾದ್ರೆ ‘ಲಾರ್ಡ್ ಲಬಕ್ದಾಸ್’ ಅಲ್ಲ ಎನ್ನುವ ಅರ್ಥ ಅನ್ನೋದನ್ನ ಸಿನಿಮಾ ಅಭಿಮಾನಿಯೊಬ್ಬರು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ