ಕೆಲ ಕಿಡಿಗೇಡಿಗಳು ಇಂದು ಮಾಗಡಿ ರಸ್ತೆಯ ಬಳಿ ಇರುವ ಬಾಲಗಂಗಾಧರನಾಥ ಸ್ವಾಮಿ ವೃತ್ತದಲ್ಲಿ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿ ವಿಕೃತಿ ಮೆರೆದಿದ್ದಾರೆ. ಈ ದುಷ್ಕೃತ್ಯಕ್ಕೆ ನಟ ದರ್ಶನ್ ತೂಗುದೀಪ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸುವ ನೆಚ್ಚಿನ ಆರಾಧ್ಯ ದೈವಗಳಲ್ಲಿ ಮೊದಲಿಗರಾಗಿರುವ ನಟ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಮಾಡಿರುವ ಕಿಡಿಗೇಡಿಗಳ ಕೃತ್ಯ ನಾಚಿಕೆಯಾಗುವ ಸಂಗತಿ ಎಂದು ಕೃತ್ಯ ಎಸಗಿದವರ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಈ ಕಿಡಿಗೇಡಿ ಕೆಲಸ ಮಾಡಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಅಷ್ಟೇ ಅಲ್ಲದೇ ಇಂತಹ ಹೀನ ಕೃತ್ಯಕ್ಕೆ ಕೈ ಜೋಡಿಸುವ ವ್ಯಕ್ತಿಗಳಿಗೆ ಅಭಿಮಾನಿಗಳೇ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು.
ನಿಮ್ಮ ದಾಸ ದರ್ಶನ್ pic.twitter.com/eJ5nGFd6oa
— Darshan Thoogudeepa (@dasadarshan) December 26, 2020
ಇತ್ತೀಚೆಗೆ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಇಡೀ ಸ್ಯಾಂಡಲ್ವುಡ್ ತಿರುಗಿಬಿದ್ದಿತ್ತು. ಕನ್ನಡದ ಕಿರಿಯ ಸ್ಟಾರ್ ನಟರಿಂದ ಹಿಡಿದು ಹಿರಿಯರವರೆಗೆ ವಿಜಯ್ ರಂಗರಾಜು ನೀಡಿದ್ದ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ್ದ ನಟ ಡಾ. ವಿಷ್ಣುವರ್ಧನ್ ಇಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಚಿರವಾಗಿದ್ದಾರೆ. ಇಂತಹ ನಟನನ್ನು ತೆಲುಗು ಪೋಷಕ ನಟ ವಿಜಯ್ ರಂಗರಾಜು ನಿಂದಿಸಿ ಅಪಮಾನ ಮಾಡಿದ್ದು ಕನ್ನಡಿಗರನ್ನು ಕೆರಳಿಸಿತ್ತು. ಇನ್ನೂ ಈ ಘಟನೆ ಮನಸ್ಸಿನಿಂದ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿಷ್ಣು ಅಭಿಮಾನಿಗಳಿಗೆ ನೋವು ಉಂಟುಮಾಡುವ ಘಟನೆಯೊಂದು ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ