ಮಕರ ಸಂಕ್ರಾಂತಿ ಸೂರ್ಯ ತನ್ನ ಪಥ ಬದಲಿಸುವ ದಿನ. ಇದನ್ನು ಇಡೀ ದೇಶದಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ದೇಶದ ಒಂದೊಂದು ಭಾಗದಲ್ಲಿ ಇದನ್ನು ಒಂದೊಂದು ರೀತಿಯ ಹೆಸರಿನಿಂದ ಸಂಭ್ರಮಿಸಲಾಗುತ್ತದೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದರೆ, ತಮಿಳು ನಾಡಿನಲ್ಲಿ ಪೊಂಗಲ್, ಉತ್ತರ ಭಾರತದಲ್ಲಿ ಲೋರಿ ಎಂದು ಕರೆಯಲಾಗುತ್ತದೆ. ಹೀಗೆ ನಾನಾ ಹೆಸರುಗಳಲ್ಲಿ ಆಚರಿಸುವ ಹಬ್ಬಕ್ಕೆ ಕಾರಣ ಮಾತ್ರ ನಿತ್ಯ ಬೆಳಗುವ ಜ್ಯೋತಿ ಸೂರ್ಯ. ಇನ್ನು ಕೊರೋನಾ ವೈರಸ್ನಿಂದಾಗಿ ಕವಿದಿದ್ದ ಕರಿಛಾಯೆ ಸಂಕ್ರಾಂತಿ ಹಬ್ಬದ ಸಂಭ್ರಮದಿಂದ ದೂರಾಗಿದೆ. ಜನರು ಎಲ್ಲ ನೋವು ಹಾಗೂ ಆತಂಕ ಮರೆತು ಹಬ್ಬ ಆಚರಿಸಿದ್ದಾರೆ. ಕಳೇದ ವರ್ಷ ಯಾವ ಹಬ್ಬವನ್ನೂ ನೆಮ್ಮದಿಯಾಗಿ ಮಾಡಲು ಆಗಿರಲಿಲ್ಲ. ಇನ್ನು ಸಂಕ್ರಾಂತಿ ಹಬ್ಬವನ್ನು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೂ ತಮ್ಮದೇ ಆದ ರೀತಿಯಲ್ಲಿ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ಸಲವೂ ನಟ ದರ್ಶನ್ ತಮ್ಮ ತೋಟದ ಮನೆಯಲ್ಲಿ ಹಬ್ಬವನ್ನು ಸಂಭ್ರಮಿಸಿದರೆ, ನಿರ್ದೇಶಕ ಪ್ರೇಮ್ ಅವರೂ ಈ ಸಲ ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷದಂತೆ ಈ ಸಲವೂ ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಮುದ್ದಿನ ಸಾಕು ಪ್ರಾಣಿಗಳೊಂದಿಗೆ ಅವರು ಹಬ್ಬ ಆಚರಿಸಿದ್ದಾರೆ.
ಸಂಕ್ರಾಂತಿ ಹಬ್ಬದಂದು ಮಾಡುವ ಸಂಪ್ರಾದಾಯಿಕ ಆಚರಣೆಯನ್ನೂ ಪಾಲಿಸಿದ್ದಾರೆ. ಅದೇ ತೋಟದ ಮನೆಯಲ್ಲೇ ಕಿಚ್ಚು ಹಾಯಿಸಿ ಕೂಡ ಅವರು ಖುಷಿ ಪಟ್ಟಿದ್ದಾರೆ. ತಮ್ಮ ನೆಚ್ಚಿನ ಕುದುರೆಯೊಂದಿಗೆ ಅವರು ಕಿಚ್ಚು ಹಾಯಿಸಿರುವುದು ವಿಶೇಷ.
ನಮ್ಮ ಡಿ ಬಾಸ್ ರವರ ತೂಗುದೀಪ ಫಾರಂ ಹೌಸ್ ಅಲ್ಲಿ ಸಂಕ್ರಾಂತಿಯ ಸಂಭ್ರಮ. ಅಷ್ಟೊಂದು ಹಸು- ಧನ-ಕರುಗಳನ್ನು ನೋಡೋದೇ ಚಂದ. ನಿಮಗಾಗಿ ಡಿ ಕಂಪನಿಯಲ್ಲಿ ಈ ಎಕ್ಸ್ಕ್ಲೂಸಿವ್ ವಿಡಿಯೋ @dasadarshan pic.twitter.com/LWlBRDnjS4
ಇನ್ನು ತಮ್ಮ ತೋಟದಲ್ಲಿರುವ ಹಸು, ಕುರಿ, ಕುದುರೆ ಸೇರಿದಂತೆ ಎಲ್ಲ ಪ್ರಾಣಿಗಳಿಗೂ ಸ್ನಾನ ಮಾಡಿಸಿ, ಹಬ್ಬಕ್ಕೆ ಸಿಂಗರಿಸಲಾಗಿತ್ತು. ಜೊತೆಗೆ ಅಭಿಮಾನಿಗಳು ದರ್ಶನ್ ಅವರ ತೋಟದಲ್ಲಿರುವ ಆಕಳುಗಳ ಮೇಲೆ ರಾಬರ್ಟ್ ಎಂದು ಬರೆದು ಖುಷಿ ಪಟ್ಟರು. ಇನ್ನು ಪೂಜೆಯಾದ ನಂತರ ದರ್ಶನ್ ಪ್ರಾಣಿಗಳಿಗೆ ಪೊಂಗಲ್ ಹಾಗೂ ಹಣ್ಣುಗಳನ್ನು ತಾವೇ ತಿನ್ನಿಸಿದ್ದಾರೆ.
ಇನ್ನು ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾರ ಮನೆಯಲ್ಲೂ ಸಂಕ್ರಾಂತಿ ಹಬ್ಬ ಜೋರಾಗಿತ್ತು. ಈ ಸಲ ಈ ಸೆಲೆಬ್ರಿಟಿ ಜೋಡಿ ಹಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ದೇಸಿ ಸ್ಟೈಲ್ನಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ.
ಇತ್ತೀಚೆಗಷ್ಟೆ ತೋಟಕ್ಕೆ ತಂದ ಹಸು ಮತ್ತು ಕರುವಿಗೂ ಸಿಂಗರಿ ಹಬ್ಬ ಆಚರಿಸಿದ್ದಾರೆ. ನಂತರ ತೋಟದಲ್ಲೇ ಕಿಚ್ಚು ಹಾಯಿಸಿ ತಮ್ಮ ಹಸು ಹಾಗೂ ಕರುವಿನ ಜೊತೆ ಸಂಭ್ರಮಿಸಿದ್ದಾರೆ.
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಅದರ ಮೊದಲ ಹಾಡು ರಿಲೀಸ್ ಆಗಲಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಏಕ್ ಲವ್ ಯಾ ಚಿತ್ರದ ಮೊದಲ ಹಾಡಿನ ಬಿಡುಗಡೆ ದಿನಾಂಕ ಪ್ರಕಟಿಸಿದ್ದಾರೆ. ಪ್ರೇಮಿಗಳ ದಿನದಂದು ಅಂದರೆ ಫೆ. 14ಕ್ಕೆ ನಾಲ್ಕು ಭಾಷೆಗಳಲ್ಲಿ ಹಾಡು ರಿಲೀಸ್ ಆಗಲಿದೆ. ಇದರ ಜೊತೆಗೆ ಈ ಸಿನಿಮಾ ಹೊಸ ಪೋಸ್ಟರ್ಗಳನ್ನೂ ರಿಲೀಸ್ ಮಾಡಲಾಗಿದೆ. ಚಿತ್ರದ ನಾಯಕ ರಾಣಾ ಸಿಕ್ಸ್ ಪ್ಯಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ