Ravichandran Birthday: 59 ವಸಂತಗಳನ್ನು ಪೂರೈಸಿದ ಕನಸುಗಾರ, ಮಕ್ಕಳ ಜೊತೆ ಮನೆಯಲ್ಲೇ ಸರಳ ಹುಟ್ಟುಹಬ್ಬ

ಕನ್ನಡದ ತೆರೆ ಮೇಲೆ ರೊಮ್ಯಾಂಟಿಕ್ ಚಿತ್ರಗಳಿಗೆ ಹೊಸಾ ಭಾಷ್ಯ ಬರೆದ ಕಲಾವಿದ ರವಿಚಂದ್ರನ್. ಕೇವಲ ನಟನೆ ಮಾತ್ರವಲ್ಲ, ರವಿಚಂದ್ರನ್ ನಿರ್ಮಾಣ, ನಿರ್ದೇಶನದಲ್ಲೂ ಎತ್ತಿದ ಕೈ. ಅವರು ಆಗಿನ ಕಾಲಕ್ಕೆ ಬಳಸುತ್ತಿದ್ದ ದುಬಾರಿ ತಂತ್ರಜ್ಞಾನಗಳು ತೆರೆ ಮೇಲೆ ಹೊಸಾ ಲೋಕ ಸೃಷ್ಟಿಸುತ್ತಿದ್ವು.

ರವಿಚಂದ್ರನ್

ರವಿಚಂದ್ರನ್

  • Share this:
Ravichandran Birthday: ಕ್ರೇಜಿಸ್ಟಾರ್ ರವಿಚಂದ್ರನ್​ಗೆ ಇಂದು 59 ವಸಂತಗಳನ್ನು ಪೂರೈಸಿದ ಸಂಭ್ರಮ. ಕೊರೊನಾ ಸಂಕಷ್ಟ ಕಾಲ ಜೊತೆಗೆ ಲಾಕ್​ಡೌನ್ ಎಲ್ಲವೂ ಇರೋದ್ರಿಂದ ಅಭಿಮಾನಿಗಳಿಗೆ ತಮ್ಮ ಬಳಿ ಬಾರದಂತೆ ಖುದ್ದು ರವಿಮಾಮ ವಿನಂತಿ ಮಾಡಿಕೊಂಡಿದ್ದಾರೆ. ಆದ್ರೆ ಅವರ ಅಭಿಮಾನಿಗಳ ಪಾಲಿಗೆ ಇಂದು ಎಲ್ಲಿದ್ದರೂ ಹಬ್ಬವೇ. ಇಂದು ಕನ್ನಡದ ಎಲ್ಲಾ ಎಫ್​ಎಂ ರೇಡಿಯೋಗಳಲ್ಲೂ ಅವರ ಚಿತ್ರಗಳ ಹಾಡೇ ಕೇಳಿಸುತ್ತಿರುತ್ತದೆ. ಇನ್ನು ಮನರಂಜನಾ ಚಾನೆಲ್​ಗಳಲ್ಲೂ ರವಿಚಂದ್ರನ್ ಚಿತ್ರಗಳ ಹಬ್ಬವೇ ಇರುತ್ತದೆ.

ಪ್ರತೀ ವರ್ಷ ತಂದೆಯ ಹುಟ್ಟುಹಬ್ಬವನ್ನು ಮಕ್ಕಳು ಸಂಭ್ರಮದಿಂದ ಆಚರಿಸುತ್ತಿದ್ದರು. ಮನೋರಂಜನ್, ವಿಕ್ರಮ್ ಮತ್ತು ಸಂಗೀತಾ ಅನೇಕ ವಾರಗಳ ಮುಂಚೆಯೇ ವಿಶೇಷವಾಗಿ ಏನು ಮಾಡಬಹುದು ಎಂದು ಯೋಚಿಸಿ ಸೆಲಬ್ರೇಶನ್ ಮಾಡುತ್ತಿದ್ರು. ಅದ್ರಲ್ಲೂ ಮನೋರಂಜನ್ ಪ್ರತೀ ವರ್ಷ ಅಪ್ಪನಿಗೆ ಒಂದು ಶರ್ಟ್ ತಂದುಕೊಡುತ್ತಿದ್ದರಂತೆ. ಅದನ್ನು ಅವರ ಕೈಗೆ ಕೊಡದೆ ಅವರ ವಾರ್ಡ್​ರೋಬಿನಲ್ಲಿ ಇಟ್ಟಿರುತ್ತಿದ್ದರಂತೆ.

ಈ ಬಾರಿ ಮಗಳು ಸಂಗೀತಾ ಜೊತೆಗೆ ಅಳಿಯ ಕೂಡಾ ಸರಳ ಹುಟ್ಟುಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ಅಭಿಮಾನಿಗಳು ಸಾಮಾನ್ಯವಾಗಿ ಕೇಕ್, ಹೂವಿನ ಹಾರ, ಬ್ಯಾನರ್, ಪೋಸ್ಟರ್​ಗಳ ಜೊತೆಗೆ ಅದ್ಧೂರಿಯಾಗಿ ಬರ್ತಡೇ ಆಚರಿಸೋಕೆ ನಾನಾ ಊರುಗಳಿಂದ ಬಂದಿರುತ್ತಿದ್ದರು. ಈ ಬಾರಿ ಅದೆಲ್ಲವೂ ಮಿಸ್ ಆದರೂ ಅಭಿಮಾನಿಗಳು ತಾವು ಇರುವ ಕಡೆಯೇ ಜೋಪಾನವಾಗಿ ಸೇಫ್ ಆಗಿರಲಿ ಎಂದು ಕ್ರೇಜಿಸ್ಟಾರ್ ಆಶಿಸಿದ್ದಾರೆ.

ಇದನ್ನೂ ಓದಿ: ಪುಟ್ಟ ಗ್ಯಾಪ್​ ನಂತರ ಚಿತ್ರೀಕರಣಕ್ಕೆ ಮರಳಿದ ಶಿಲ್ಪಾ ಶೆಟ್ಟಿ

‘ಕುಲಗೌರವ’ ಚಿತ್ರದಲ್ಲಿ ಬಾಲನಟನಾಗಿ ಡಾ ರಾಜ್​ಕುಮಾರ್ ಜೊತೆಗೆ ರವಿಚಂದ್ರನ್ ಮೊದಲು ಬಣ್ಣ ಹಚ್ಚಿದ್ದರು. ನಂತರ 1982ರಲ್ಲಿ ‘ಖದೀಮ ಕಳ್ಳರು’ ಚಿತ್ರದಲ್ಲಿ ವಿಲನ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಆದ್ರೆ ಪ್ರೇಮಲೋಕ ಬಂದಿದ್ದೇ ತಡ, ಕನ್ನಡ ಚಿತ್ರರಂಗಕ್ಕೊಬ್ಬ ಕನಸುಗಣ್ಣಿನ ಹೀರೋ ಸಿಕ್ಕಿಬಿಟ್ಟಂತಾಗಿತ್ತು. ನಂತರ ರವಿ ಮುಟ್ಟಿದ್ದೆಲ್ಲಾ ಚಿನ್ನವೇ.

ರಣಧೀರ, ಅಂಜದ ಗಂಡು, ರಾಮಚಾರಿ, ಹಳ್ಳಿ ಮೇಷ್ಟ್ರು, ಯುದ್ಧಕಾಂಡ, ಅಣ್ಣಯ್ಯ, ಪುಟ್ನಂಜ, ಸಿಪಾಯಿ, ಯಾರೇ ನೀನು ಚೆಲುವೆ, ರೋಜಾ, ಮಾಂಗಲ್ಯಂ ತಂತುನಾನೇನಾ, ಪ್ರೀತ್ಸೋದ್ ತಪ್ಪಾ.. ಹೀಗೆ ಕನ್ನಡದ ತೆರೆ ಮೇಲೆ ರೊಮ್ಯಾಂಟಿಕ್ ಚಿತ್ರಗಳಿಗೆ ಹೊಸಾ ಭಾಷ್ಯ ಬರೆದ ಕಲಾವಿದ ರವಿಚಂದ್ರನ್. ಕೇವಲ ನಟನೆ ಮಾತ್ರವಲ್ಲ, ರವಿಚಂದ್ರನ್ ನಿರ್ಮಾಣ, ನಿರ್ದೇಶನದಲ್ಲೂ ಎತ್ತಿದ ಕೈ. ಅವರು ಆಗಿನ ಕಾಲಕ್ಕೆ ಬಳಸುತ್ತಿದ್ದ ದುಬಾರಿ ತಂತ್ರಜ್ಞಾನಗಳು ತೆರೆ ಮೇಲೆ ಹೊಸಾ ಲೋಕ ಸೃಷ್ಟಿಸುತ್ತಿದ್ವು.

Gold Price May 30: ಚಿನ್ನ ಕೊಳ್ಳುವವರು ಸ್ವಲ್ಪ ಯೋಚಿಸಿ, ರೇಟ್ ಜಾಸ್ತಿ ಆಗಿದೆ

ರವಿಚಂದ್ರನ್ ಲೋ ಬಜೆಟ್ ಸಿನಿಮಾ ಮಾಡಿದವರೇ ಅಲ್ಲ. ಅವರು ಮಾಡೋ ಪ್ರತೀ ಸಿನಿಮಾದಲ್ಲೂ ಅದ್ಧೂರಿತನ ಎದ್ದು ಕಾಣುತ್ತಿತ್ತು. ಪುಟ್ನಂಜ ಚಿತ್ರದ ಆ ಹಳೆಯ ಕೋಟೆಯಂಥಾ ಮನೆಯೇ ಇರಲಿ, ಏಕಾಂಗಿ ಚಿತ್ರದಲ್ಲಿ ಎಲ್ಲೆಲ್ಲೂ ಗಾಜಿನಿಂದ ಮಾಡಿದಂತಿರುವ ಸೆಟ್ ಇರಲಿ ಆ ಅದ್ಧೂರಿತನ ನೋಡಿದ್ರೆ ಗೊತ್ತಾಗುತ್ತೆ ಈ ಅಂಜದ ಗಂಡಿನ ಟೇಸ್ಟ್​ ಎಂಥದ್ದು ಎಂದು.

ಇನ್ನು ಕನ್ನಡ ಸಿನಿಮಾಗಳಿಗೆ ಬಾಲಿವುಡ್ ಬೆಡಗಿಯರನ್ನು ಕರೆತಂದ ಕೀರ್ತಿಯೂ ರವಿಚಂದ್ರನ್​ಗೇ ಸಲ್ಲುತ್ತದೆ. ಪ್ರೇಮಲೋಕ ಚಿತ್ರಕ್ಕಾಗಿ ಜೂಹಿ ಚಾವ್ಲಾ ಬಂದಿದ್ದು ಆರಂಭ. ನಂತರ ಕ್ರೇಜಿಸ್ಟಾರ್ ಬಹುತೇಕ ಚಿತ್ರಗಳಿಗೆ ಪರಭಾಷಾ ನಟಿಯರು ಇರುತ್ತಿದ್ದುದೇ ಹೆಚ್ಚು. ಹಾಗಂತ ಕನ್ನಡದ ನಟಿಯರ ಜೊತೆಗೂ ರವಿಮಾಮ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೂ ಖುಷ್ಬೂ, ರೋಜಾ, ಶಿಲ್ಪಾ ಶೆಟ್ಟಿ ಹೀಗೆ ಈ ನಟಿಯರೆಲ್ಲಾ ಕನ್ನಡ ಚಿತ್ರರಸಿಕರನ್ನೂ ಮನರಂಜಿಸುವಂತಾಗಿದ್ದು ರವಿಚಂದ್ರನ್​ ಚಿತ್ರಗಳಿಂದಲೇ. ಇವರಲ್ಲಿ ಕೆಲವರು ನಂತರ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ರೂ ಕರ್ನಾಟಕದ ದಾರಿ ತಿಳಿಯೋದಕ್ಕೆ ಕ್ರೇಜಿಸ್ಟಾರ್ ಕಾರಣವಾದ್ರು.

ರವಿಚಂದ್ರನ್ ಸಿನಿಮಾದ ವಿಶ್ವಕೋಶ. ಅವರ ಚಿತ್ರಗಳು ಸೋತರೂ, ಗೆದ್ದರೂ ಸಿನಿಮಾ ಮಾಡೋದನ್ನ ಮಾತ್ರ ನಿಲ್ಲಿಸಲ್ಲ ಛಲದಂಕ ಮಲ್ಲ ಆತ. ಅದ್ಭುತ ಹಾಡುಗಳು, ಅದ್ಧೂರಿ ದೃಶ್ಯಗಳು, ಸುಂದರ ಲೊಕೇಶನ್​, ಮನರಂಜನೆಯ ಭಾಷ್ಯವನ್ನೇ ಬದಲಿಸಿದ ಮಾಂತ್ರಿಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
Published by:Soumya KN
First published: