HOME » NEWS » Entertainment » COUPLE SEAT FACILITIES IN HMT THEATER AT BENGALURU RHHSN HTV

ಎಚ್‍ಎಮ್‍ಟಿ ಥಿಯೇಟರ್​ನಲ್ಲಿ ಕಪಲ್ ಸೀಟ್ಸ್! ಫ್ಯಾಮಿಲಿ ಆಡಿಯನ್ಸ್​ಗೆ ವಿಶೇಷ ಆಸನ ವ್ಯವಸ್ಥೆ..!

2019ರಿಂದಲೂ ನಮ್ಮಲ್ಲಿ ಈ ರೀತಿಯ ಆಸನದ ವ್ಯವಸ್ಥೆ ಮಾಡಿದ್ದೇವೆ. ಹೀಗಾಗಿಯೇ ಬಿಇಎಲ್ ಲೇಔಟ್ ಸುತ್ತಮುತ್ತ ಮಾತ್ರವಲ್ಲ ಬೆಂಗಳೂರಿನ ಬೇರೆ ಬೇರೆ ಕಡೆಗಳಿಂದಲೂ ನವವಿವಾಹಿತರು, ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡಲು ನಮ್ಮಲ್ಲಿ ಬುಕ್ಕಿಂಗ್ ಮಾಡಿಸುತ್ತಾರೆ ಎಂದು ಹೇಳುತ್ತಾರೆ ಎಚ್‍ಎಮ್‍ಟಿ ಥಿಯೇಟರ್ ಸಿಬ್ಬಂದಿ ತಿಪ್ಪಣ್ಣ.

news18-kannada
Updated:April 14, 2021, 8:33 PM IST
ಎಚ್‍ಎಮ್‍ಟಿ ಥಿಯೇಟರ್​ನಲ್ಲಿ ಕಪಲ್ ಸೀಟ್ಸ್! ಫ್ಯಾಮಿಲಿ ಆಡಿಯನ್ಸ್​ಗೆ ವಿಶೇಷ ಆಸನ ವ್ಯವಸ್ಥೆ..!
ಬೆಂಗಳೂರಿನ ಬಿಇಎಲ್ ಲೇಔಟ್‍ನಲ್ಲಿರುವ ಎಚ್‍ಎಮ್‍ಟಿ ಥಿಯೇಟರ್
  • Share this:
2020 ಮಾರ್ಚ್ 16. ಅರ್ಥಾತ್ ಲಾಕ್‍ಡೌನ್ ಘೋಷಣೆಯಾಗುವ ಒಂದು ವಾರ ಮೊದಲೇ ಕರ್ನಾಟಕದಾದ್ಯಂತ ಥಿಯೇಟರ್​ಗಳನ್ನು ಬಂದ್ ಮಾಡಲಾಯಿತು. ಆದರೆ ಕೊರೋನಾ ಕರಾಳ ಛಾಯೆ ದಿನ ಕಳೆದಂತೆ ಹೆಚ್ಚಾಗುತ್ತಲೇ ಸಾಗಿದ ಕಾರಣ ಡಿಸೆಂಬರ್​ವರೆಗೂ ಥಿಯೇಟರ್​ಗಳು ತೆರೆಯಲಿಲ್ಲ. ತೆರೆದರೂ ಶೇಕಡಾ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಆ ಬಳಿಕ 2021ರ ಫೆಬ್ರವರಿ ತಿಂಗಳ ಹೊತ್ತಿಗೆ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಎಲ್ಲ ಕ್ಷೇತ್ರಗಳೂ ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿದ್ದವು. ಹೀಗಾಗಿಯೇ ಥಿಯೇಟರ್​ಗಳಲ್ಲೂ ಶೇಕಡಾ 100ರಷ್ಟು ಭರ್ತಿಗೆ ಅವಕಾಶ ನೀಡಲಾಯಿತು. ಅಲ್ಲಿಂದ ಸ್ಯಾಂಡಲ್‍ವುಡ್‍ಗೆ ಸುವರ್ಣ ಕಾಲ ಶುರುವಾಯಿತು ಅಂತಲೇ ಎಲ್ಲರೂ ಭಾವಿಸಿದ್ದರು. ಅದಕ್ಕೆ ತಕ್ಕಂತೆ ಪೊಗರು, ರಾಬರ್ಟ್ ಹಾಗೂ ಯುವರತ್ನ ಚಿತ್ರಗಳು ಥಿಯೇಟರ್​ಗಳನ್ನು ಹೌಸ್‍ಫುಲ್ ಆಗಿಸಿದವು. ಚಿತ್ರರಂಗಕ್ಕೆ ಮತ್ತೆ ಎದ್ದು ನಿಲ್ಲುವ ಭರವಸೆ ಸಿಕ್ಕಿತ್ತು.

ಆದರೆ ಮತ್ತೆ ಕೊರೋನಾ ಎರಡನೆಯ ಅಲೆ ಹೊಡೆತ ನೀಡಿದೆ. ಭಾರತದಲ್ಲಿ ದಿನವೊಂದಕ್ಕೆ ಒಂದೂಮುಕ್ಕಾಲು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲೂ ಪ್ರತಿದಿನ ಎಂಟರಿಂದ ಹತ್ತು ಸಾವಿರ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿಯೂ ಏಪ್ರಿಲ್ 7ರಿಂದ ಶೇಕಡಾ 50ರಷ್ಟು ನಿರ್ಬಂಧ ಹೇರಲಾಗಿದ್ದು, ಚಿತ್ರರಂಗಕ್ಕೆ ಮತ್ತೆ ತಲೆಬಿಸಿ ತಂದೊಡ್ಡಿದೆ.

ಫ್ಯಾಮಿಲಿ ಆಡಿಯನ್ಸ್​ಗಾಗಿ ಮಾಡಲಾಗಿರುವ ಆಸನ ವ್ಯವಸ್ಥೆ


ಹೀಗಾಗಿಯೇ ಪೊಗರು, ರಾಬರ್ಟ್ ಹಾಗೂ ಯುವರತ್ನ ರಿಲೀಸ್ ಆದಾಗ ತುಂಬಿ ತುಳುಕುತ್ತಿದ್ದ ಥಿಯೇಟರ್​ಗಳು ಈಗ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಜೊತೆಯಲ್ಲಿ ಕುಳಿತು ಸಿನಿಮಾ ನೋಡಲು ಅವಕಾಶ ಇಲ್ಲದಿರುವಾಗ ಥಿಯೇಟರ್ಗೆ​ ಇನ್ನೇಕೆ ಹೋಗಬೇಕು ಅಂತ ಫ್ಯಾಮಿಲಿ ಆಡಿಯನ್ಸ್ ಕೂಡ ಚಿತ್ರಮಂದಿರಗಳಿಂದ ದೂರ ಉಳಿದಿದ್ದಾರೆ. ಆದರೆ ಬಿಇಎಲ್ ಲೇಔಟ್‍ನಲ್ಲಿರುವ ಎಚ್‍ಎಮ್‍ಟಿ ಥಿಯೇಟರ್ ಮಾತ್ರ ಕಪಲ್ ಕ್ಲಾಸ್ ಅಂತಲೇ ಫ್ಯಾಮಿಲಿ ಆಡಿಯನ್ಸ್​ಗೆ ನಾಲ್ಕು ವರ್ಷಗಳ ಹಿಂದೆಯೇ ಸ್ಪೆಷಲ್ ಸೀಟಿಂಗ್ ವ್ಯವಸ್ಥೆ ಮಾಡಿದೆ.

ಇದನ್ನು ಓದಿ: ದಿಢೀರ್ ಕುಸಿತಕಂಡ ಪ್ರವಾಸೋದ್ಯಮ, ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕೊರೋನಾ 2ನೇ ಅಲೆ ಭಾರಿ ಹೊಡೆತ!

ಹೌದು, ಎಚ್‍ಎಮ್‍ಟಿ ಥಿಯೇಟರ್​ನಲ್ಲಿ ಒಟ್ಟು 800 ಆಸನದ ವ್ಯವಸ್ಥೆಗಳಿವೆ. ಅದರಲ್ಲಿ 90 ಕಪಲ್ ಸೀಟ್‍ಗಳು. ಅರ್ಥಾತ್ ಇಬ್ಬರು ಒಟ್ಟಿಗೆ ಕೂರಬಹುದಾದ ಅಗಲವಾದ ಆಸನದ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮೂರು ಸಾಲಿನಲ್ಲಿರುವ 90 ಕಪಲ್ ಸೀಟುಗಳಲ್ಲಿ 180 ಜನ ಪ್ರೇಕ್ಷಕರು ಕೂರಬಹುದಾಗಿದೆ. ಹೀಗಾಗಿಯೇ ಪ್ರೇಕ್ಷಕರು ಕುಟುಂಬ ಸಮೇತ ಬಂದು ಜೊತೆಯಲ್ಲೇ ಕುಳಿತು ಸಿನಿಮಾ ವೀಕ್ಷಿಸಬಹುದಾಗಿದೆ. 2019ರಿಂದಲೂ ನಮ್ಮಲ್ಲಿ ಈ ರೀತಿಯ ಆಸನದ ವ್ಯವಸ್ಥೆ ಮಾಡಿದ್ದೇವೆ. ಹೀಗಾಗಿಯೇ ಬಿಇಎಲ್ ಲೇಔಟ್ ಸುತ್ತಮುತ್ತ ಮಾತ್ರವಲ್ಲ ಬೆಂಗಳೂರಿನ ಬೇರೆ ಬೇರೆ ಕಡೆಗಳಿಂದಲೂ ನವವಿವಾಹಿತರು, ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡಲು ನಮ್ಮಲ್ಲಿ ಬುಕ್ಕಿಂಗ್ ಮಾಡಿಸುತ್ತಾರೆ ಎಂದು ಹೇಳುತ್ತಾರೆ ಎಚ್‍ಎಮ್‍ಟಿ ಥಿಯೇಟರ್ ಸಿಬ್ಬಂದಿ ತಿಪ್ಪಣ್ಣ.
ಆದರೂ ಕೊರೋನಾ ಆತಂಕದಿಂದಾಗಿ ಎಲ್ಲ ಥಿಯೇಟರ್​ಗಳು ಹಾಗೂ ಮಲ್ಟಿಪ್ಲೆಕ್ಸ್​ಗಳಂತೆ ಎಚ್‍ಎಮ್‍ಟಿ ಥಿಯೇಟರ್ಗೂ​ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಸದ್ಯ ಏಪ್ರಿಲ್ 20ರವರೆಗೂ ಮಾತ್ರ ಥಿಯೇಟರ್​ಗಳು ಹಾಗೂ ಮಲ್ಟಿಪ್ಲೆಕ್ಸ್ಗಳ ಮೇಲೆ ಈ ರೀತಿಯ ನಿರ್ಬಂಧ ಹೇರಲಾಗಿದೆ. ಆ ಬಳಿಕ ಕೊರೋನಾ ಪ್ರಕರಣಗಳು ಕಡಿಮೆಯಾಗಿ, ಮತ್ತೆ ಸಹಜ ಸ್ಥಿತಿಯತ್ತ ಮರಳುವ ನಿರೀಕ್ಷೆ ಕನ್ನಡ ಚಿತ್ರರಂಗದ್ದು. ಆದಷ್ಟು ಬೇಗ ಕೊರೋನಾ ಕಂಟಕ ಮರೆಯಾಗಲಿ, ಮತ್ತೆ ಥಿಯೇಟರ್​ಗಳ  ಮುಂದೆ ಹೌಸ್‍ಫುಲ್ ಬೋರ್ಡ್ ಬೀಳಲಿ ಎಂದು ಇವರೂ ಕಾತರದಿಂದ ಎದುರು ನೋಡುತ್ತಿದ್ದಾರೆ.
Published by: HR Ramesh
First published: April 14, 2021, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories