ಕೊರೋನಾ ಹಾವಳಿಯಿಂದ ಇಡೀ ಜಗತ್ತು ನಲುಗಿದೆ. ಈ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದೆ. ಒಂದೆಡೆ ಕೊರೋನಾ ಭೀತಿ, ಮತ್ತೊಂದೆಡೆ ಆರ್ಥಿಕ ಸಮಸ್ಯೆಯಿಂದ ಬಡ ಕಾರ್ಮಿಕರು, ದಿನಗೂಲಿ ನೌಕರು ಒಂದೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ.
ಈಗಾಗಲೇ ಮೈಸೂರು ಭಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಕಳೆದೆರಡು ದಿನಗಳಿಂದ ಅನ್ನದಾನದ ಮೂಲಕ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೆಯೇ ಕಿಚ್ಚ ಸುದೀಪ್ ಅಭಿಮಾನಿಗಳು ಕೂಡ ಸುದೀಪ್ ಚಾರಿಟೇಬಲ್ ಮೂಲಕ ಈ ಬೆಂಗಳೂರಿನ ಗೋರಿಪಾಳ್ಯ, ಮೈಸೂರು ರಸ್ತೆ, ಜೆ.ಪಿ ನಗರ, ಬ್ಯಾಟರಾಯನ ಪುರ, ಬಂಗಾರಪ್ಪ ನಗರದಲ್ಲಿ ಬಡವರ ನೆರವಿಗೆ ನಿಂತು ಅವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಚಿತ್ರರಂಗದ ಯುವರಾಜ ಎಂದೇ ಖ್ಯಾತಿ ಪಡೆದಿರುವ ನಿಖಿಲ್ ಕುಮಾರಸ್ವಾಮಿ ಕೂಡ ಸಹಾಯಕ್ಕೆ ಧಾವಿಸಿದ್ದು, 3ಸಾವಿರಕ್ಕೂ ಹೆಚ್ಚಿನ ಸ್ಯಾಂಡಲ್ವುಡ್ ದಿನಗೂಲಿ ಚಿತ್ರ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕಲು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಇದೀಗ ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಕೂಡ ಸಹಾಯ ಹಸ್ತ ಚಾಚಿದ್ದು, ಪ್ರಣಿತಾ ಫೌಂಡೇಶನ್ ಮೂಲಕ 500 ಕುಟುಂಬಗಳಿಗೆ ನಟಿ ಪ್ರಣಿತಾ ನೆರವು ನೀಡಲು ಮುಂದಾಗಿದ್ದಾರೆ. ಒಂದು ಕುಟುಂಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ತಿಂಗಳಿಗೆ ಎರಡು ಸಾವಿರ ರೂಪಾಯಿ ಬೇಕಾಗುತ್ತದೆ.
ಇಂತಹ 50 ದಿನಗೂಲಿ ನೌಕರರ, ಕಾರ್ಮಿಕರಿಗೆ, ಆಟೋ ಡ್ರೈವರ್ಗಳ ಕುಟುಂಬಗಳಿಗೆ ದವಸ, ಧಾನ್ಯ ಹಾಗೂ ಔಷಧಿಗಳನ್ನು ಒದಗಿಸಲು ಸ್ಯಾಂಡಲ್ವುಡ್ ನಟಿ ನಿರ್ಧರಿಸಿದ್ದಾರೆ. ಹಾಗೆಯೇ ಪ್ರಣಿತಾ ಫೌಂಡೇಶನ್ ಮೂಲಕ 500 ಕುಟುಂಬಗಳಿಗೆ ನೆರವು ನೀಡಲು ಇಚ್ಛಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಾರ ಅಗತ್ಯವಾಗಿದ್ದು, ಸಾಧ್ಯವಾದಷ್ಟು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ