ಕೊರೋನಾ ಎಂಬ ಮಹಾಮಾರಿ ವಿಶ್ವದೆಲ್ಲೆಡೆ ತಾಂಡವಾಡುತ್ತಿದೆ. ಈ ವೈರಸ್ ಸೋಂಕಿನಿಂದ ಅಮೆರಿಕಾ, ಇಟಲಿ, ಚೀನಾ ದೇಶಗಳು ತತ್ತರಿಸಿ ಹೋಗಿದೆ. ಇನ್ನು ಭಾರತದಲ್ಲೂ ಕೊರೋನಾ ಕರಿಛಾಯೆ ಇದ್ದು, ಈಗಾಗಲೇ ಮುನ್ನೆಚರಿಕೆ ಕ್ರಮಗನ್ನು ತೆಗೆದುಕೊಳ್ಳಲಾಗಿದೆ.
ಕೊರೋನಾ ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಕೂಡ ಕೆಲ ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಸರ್ಕಾರದ ಆದೇಶದಂತೆ ಶಾಲಾ-ಕಾಲೇಜು, ಶಾಪಿಂಗ್ ಮಾಲ್ಗಳನ್ನು ಮುಚ್ಚಲಾಗಿದೆ. ಇನ್ನು ಕೆಲ ಮಾರ್ಕೆಟ್ಗಳಲ್ಲಿ ವ್ಯಾಪರವನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಕನ್ನಡ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿದ್ದು, ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿವೆ.
ಈಗಾಗಲೇ ಆಲ್ ಇಂಡಿಯಾ ಫಿಲಂ ಫೆಡರೇಶನ್ (ಎ.ಐ.ಎಫ್.ಎಫ್) ಮಾರ್ಚ್ 31ರವರೆಗೆ ಶೂಟಿಂಗ್ ನಡೆಸದಂತೆ ಆದೇಶ ಹೊರಡಿಸಿದೆ. ಹೀಗಾಗಿ ಅಲ್ಲಿ-ಇಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಸಿನಿಮಾಗಳೂ ಕೂಡ ಶೂಟಿಂಗ್ ನಿಲ್ಲಿಸಿದೆ. ಅದೇ ರೀತಿ ಚಿತ್ರಗಳ ಡಬ್ಬಿಂಗ್, ರಿ-ರೆಕಾರ್ಡಿಂಗ್, ಎಡಿಟಿಂಗ್, ಸಿ.ಜಿ, ಕಲರಿಂಗ್, ಡಿ.ಐ ಮತ್ತಿತರ ಕೆಲಸಗಳಿಗೂ ಬರಲು ಕಲಾವಿದರು ಹಿಂದೇಟು ಹಾಕುತ್ತಿದ್ದಾರೆ. ಹಾಗೆಯೇ ಬಿಡುಗಡೆಗೆ ಸಜ್ಜಾಗಿ ನಿಂತಿದ್ದ ಒಂದಷ್ಟು ಚಿತ್ರಗಳನ್ನು ಮುಂದೂಡಲಾಗಿದೆ. ಹೀಗೆ ಪ್ರತಿಯೊಂದು ಹಂತದಲ್ಲೂ ಕೊರೋನಾ ಎಫೆಕ್ಟ್ ನೇರವಾಗಿ ಚಿತ್ರರಂಗಕ್ಕೆ ಬಡಿದಿದೆ.
ಇನ್ನೂ ಕೆಲ ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆದರೆ ಚಿತ್ರೋದ್ಯಮವನ್ನು ನಂಬಿರುವ ಗತಿ ಏನು ಎಂಬ ಚಿಂತೆಯಲ್ಲಿದ್ದಾರೆ ನಿರ್ಮಾಪಕರುಗಳು, ವಿತರಕರು. ಏಕೆಂದರೆ ಈಗಾಗಲೇ ಥಿಯೇಟರುಗಳನ್ನು ಮುಚ್ಚಿರುವುದರಿಂದ ನಿರ್ಮಾಪಕರು ಹಾಗೂ ಡಿಸ್ಟ್ರಿಬ್ಯೂಟರ್ಗಳು ಹೈರಾಣರಾಗಿದ್ದಾರೆ. ಅಷ್ಟೇ ಅಲ್ಲದೆ ಕೇವಲ ಒಂದೇ ವಾರಕ್ಕೆ ಕನ್ನಡ ಸಿನಿರಂಗಕ್ಕೆ ನಷ್ಟವಾಗಿದ್ದು 60 ರಿಂದ 70 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಸುಮಾರು 575 ಸಿಂಗಲ್ ಥಿಯೇಟರುಗಳಿವೆ. ಹಾಗೆಯೇ 240 ಪ್ಲಸ್ ಮಲ್ಟಿಪ್ಲೆಕ್ಸ್ ಪರದೆಗಳಿವೆ. ಇವೆರಡರಲ್ಲಿನ ಪ್ರದರ್ಶನದಿಂದ ಕನಿಷ್ಠ ಅಂದರೂ ಪ್ರತಿ ದಿನ 10 ರಿಂದ 12 ಕೋಟಿ ವಹಿವಾಟು ನಡೆಯುತ್ತಿತ್ತು ಎನ್ನಲಾಗಿದೆ. ಆದರೆ ಸಂಪೂರ್ಣ ಶೋ ಬಂದ್ ಆಗಿರುವ ಹಿನ್ನೆಲೆಯಲ್ಲಿ ಒಂದೇ ವಾರಕ್ಕೆ ಸುಮಾರು 70 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಗಾಂಧಿನಗರ ಮೂಲಗಳು ಹೇಳಿವೆ.
ಕನ್ನಡ ಚಿತ್ರರಂಗದಿಂದ ಸರ್ಕಾರಕ್ಕೆ ಪ್ರತಿ ವರ್ಷ ತೆರಿಗೆ ರೂಪದಲ್ಲಿ ಸುಮಾರು 450 ಕೋಟಿ ಹೋಗುತ್ತಿದೆ. ಈಗ ವಾರಕ್ಕೆ ಸುಮಾರು 70 ಕೋಟಿ ನಷ್ಟವಾದರೂ ಅದರಲ್ಲಿ ಶೇ.20 ರಷ್ಟು ಸರ್ಕಾರ ತೆರಿಗೆ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬಂಡವಾಳ ಹಾಕಿರುವ ನಿರ್ಮಾಪಕರಂತು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಈಗಾಗಲೇ ಸುದೀಪ್, ದರ್ಶನ್, ಪುನೀತ್, ಧ್ರುವ ಸರ್ಜಾ ಅಭಿನಯದ ಚಿತ್ರಗಳು ಬಿಡುಗಡೆಗೆ ಅಣಿಯಾಗುತ್ತಿದ್ದು, ಎಲ್ಲಾ ಚಿತ್ರಗಳು ಕೊರೋನಾ ಭೀತಿಯಿಂದ ರಿಲೀಸ್ ದಿನಾಂಕವನ್ನು ಮುಂದೂಡಲಿದೆ.
ಒಂದು ವೇಳೆ ಸ್ಟಾರ್ ನಟರುಗಳ ಚಿತ್ರಗಳು ಒಟ್ಟೊಟ್ಟಿಗೆ ತೆರೆಗೆ ಬಂದರೂ ಮುಂದಿನ ದಿನಗಳಲ್ಲಿ ಸಣ್ಣ ಚಿತ್ರಗಳಿಗೆ ಥಿಯೇಟರ್ ಸಿಗುವುದಂತು ಡೌಟ್. ಇದರಿಂದ ಕೂಡ ನಿರ್ಮಾಪಕರುಗಳಿಗೆ ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕೊರೋನಾ ಎಂಬ ಮಹಾಮಾರಿಯಿಂದ ಚಿತ್ರರಂಗ ಚೇತರಿಸಿಕೊಳ್ಳಲು ಕಡಿಮೆ ಎಂದರೂ ಒಂದು ತಿಂಗಳು ಬೇಕಾಗಬಹುದು ಎಂಬುದು ನಿರ್ಮಾಪಕರೊಬ್ಬರ ಅಭಿಪ್ರಾಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ