ಮೈಸೂರು(ಸೆಪ್ಟೆಂಬರ್. 14): ಮೈಸೂರಿನಲ್ಲಿ ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕಿದ್ದ ಅಡೆತಡೆ ಮುಗಿದಿದ್ದು, ನಾಳೆ ಸಿಎಂ ಯಡಿಯೂರಪ್ಪರಿಂದ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ನಾಳೆ ಬೆಂಗಳೂರಿನಿಂದಲೇ ಮುಖ್ಯಮಂತ್ರಿಗಳು ಆನ್ಲೈನ್ ನಲ್ಲಿ ಚಾಲನೆ ನೀಡುತ್ತಿದ್ದು, ಸ್ಮಾರಕ ನಿರ್ಮಾಣದ ಸ್ಥಳದಲ್ಲಿ ಸ್ವಚ್ಚತಾ ಕಾರ್ಯ ಶುರುವಾಗಿದೆ. ಈ ಮೂಲಕ ಅಭಿಮಾನಿಗಳ ಬಹು ವರ್ಷಗಳ ಸ್ಮಾರಕ ನಿರ್ಮಾಣದ ಆಸೆ ಈಡೇರುತ್ತಿದ್ದು, ವಿಷ್ಣು ಅಭಿಮಾನಿಗಳು ಸಂತಸಗೊಂಡಿದ್ದಾರೆ. ಸಾಹಸ ಹಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿವಾದ ಬಗೆ ಹರಿದು ಹಲವು ತಿಂಗಳೇ ಕಳೆದಿದೆ. ಈಗ ಅವರ ಸ್ಮಾರಕ ನಿರ್ಮಾಣ ಕಾರ್ಯ ಮಾತ್ರ ಶುರುವಾಗಬೇಕು ಅಷ್ಟೇ. ಯಾವಾಗ ಮೈಸೂರಿನಲ್ಲಿ ವಿಷ್ಣು ಅವರ ಸ್ಮಾರಕದ ಕಾಮಗಾರಿ ಶುರುವಾಗುತ್ತೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ನಾಳೆಯಿಂದ ಅಧಿಕೃತವಾಗಿ ಕಾಮಗಾರಿಗೆ ಚಾಲನೆ ಸಿಗಲಿದೆ.
ಮೈಸೂರು ಹೆಚ್.ಡಿ.ಕೋಟೆ ಮುಖ್ಯ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿರುವ 5 ಏಕರೆ ಜಾಗದಲ್ಲಿ ನಾಳೆ ವಿಷ್ಣುವರ್ಧನ್ ಅವರ ಸ್ಮಾರಕದ ಕಾಮಗಾರಿಗೆ ಸಿಎಂ ಯಡಿಯೂರಪ್ಪನವರು ಆನ್ಲೈನ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಮೂಲಕ ಅಧಿಕೃತವಾಗಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಗಲಿದ್ದು, ಸ್ಮಾರಕ ನಿರ್ಮಾಣಕ್ಕಿದ್ದ ಅಡೆ ತಡೆಗೆ ಬ್ರೇಕ್ ಬಿದ್ದಿದೆ. ಈ ಮೂಲಕ ಅಭಿಮಾನಿಗಳು ಕೂಡ ಸ್ಮಾರಕ ಕಾಮಗಾರಿಯ ಪ್ರಾರಂಭಕ್ಕೆ ಸಂತಸ ವ್ಯಕ್ತಪಡಿಸಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಇನ್ನು ಸ್ಮಾರಕದ ಜಾಗದಲ್ಲಿ ಈಗಾಗಲೇ ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್ ಅವರು ಭೇಟಿ ಕೊಟ್ಟು ಶುಚಿತ್ವದ ಕೆಲಸ ಗಮನಿಸಿದ್ದು, ನಾಳೆಯ ಕಾಮಗಾರಿ ಚಾಲನೆಗೆ ಬೇಕಾದ ಸಿದ್ದತೆ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಜಾಗದಲ್ಲಿ ಕೇವಲ ವಿಷ್ಣು ಅವರ ಅಭಿಮಾನಿಗಳ ಕನಸಿನ ಸ್ಮಾರಕ ಮಾತ್ರವಲ್ಲದೇ, ನಾಟಕ, ಕಲೆ, ನಟನೆ ಜೊತೆಗೆ ಕಲೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ.
ಇದನ್ನೂ ಓದಿ : Hindi Imposition: ಹಿಂದಿ ಹೇರಿಕೆ ಕುರಿತಾಗಿ ಟ್ವೀಟ್ ಮಾಡಿ ಟ್ರೋಲ್ ಆದ ನಟ ಪ್ರಕಾಶ್ ರೈ..!
ಜೊತೆಗೆ ವಿಷ್ಣುವರ್ಧನ್ ಅವರ ಚಿತ್ರಗಳು ಸೇರಿದಂತೆ ಅವರ ಬಗೆಗಿನ ಒಂದಷ್ಟು ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಮ್ಯೂಸಿಯಂ ಕೂಡ ಆಗಲಿರುವುದು ಅಭಿಮಾನಿಗಳಿಗೆ ಸಾಕಷ್ಟು ಪುಳಕಿತರಾಗುವಂತೆ ಮಾಡಿದೆ. ಅಲ್ಲದೆ ಮತ್ತಷ್ಟು ಈ ಜಾಗ ಅಭಿಮಾನಿಗಳಿಗೆ ಉಪಯೋಗವಾಗಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಿ ಎಂದು ಅಭಿಮಾನಿಗಳು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ