ಒಂದು ಸಿನಿಮಾ 25 ಅವತಾರ: ಸಿನಿರಂಗದಲ್ಲಿ ನಿರ್ಮಾಣವಾಗಲಿದೆ ಹೊಸ ಇತಿಹಾಸ..!

ಸೇತು, ಕಾಸಿ, ಪಿತಾಮಗನ್, ದೈವ ತಿರುಮಗನ್, ಇರುಮುಗನ್, ಐ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನಮನ ಗೆದ್ದ ಬಹುಮುಖ ಪ್ರತಿಭೆ ವಿಕ್ರಂಗೆ ಒಂದೇ ಚಿತ್ರದಲ್ಲಿ 25 ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಕಷ್ಟವಲ್ಲ.

zahir | news18-kannada
Updated:August 2, 2019, 7:18 PM IST
ಒಂದು ಸಿನಿಮಾ 25 ಅವತಾರ: ಸಿನಿರಂಗದಲ್ಲಿ ನಿರ್ಮಾಣವಾಗಲಿದೆ ಹೊಸ ಇತಿಹಾಸ..!
ವಿಕ್ರಂ
  • Share this:
ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ನಾಯಕ ನಟ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವುದುಂಟು. ಇನ್ನು ಕೆಲ ಸಿನಿಮಾಗಳಲ್ಲಿ ತ್ರಿಪಾತ್ರದಲ್ಲೂ ಮಿಂಚಿದ ನಟರುಗಳಿದ್ದಾರೆ. ಇವೆಲ್ಲದರ ನಡುವೆ ಸಕಲಕಲಾ ವಲ್ಲಭನ್ ಕಮಲ್ ಹಾಸನ್ 10 ಅವತಾರಗಳೊಂದಿಗೆ 'ದಶವತಾರ' ತೋರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಕಾಲಿವುಡ್​ನಲ್ಲಿ ನಿರ್ಮಾಣವಾಗಿದ್ದ 'ದಶವತಾರ'ವನ್ನು ಮೀರಿಸುವ ಮತ್ತೊಂದು ಚಿತ್ರಕ್ಕಾಗಿ ಭರ್ಜರಿ ಪ್ಲ್ಯಾನ್ ನಡೆದಿದೆ.

ಇನ್ನೂ ಹೆಸರಿಡ ಈ ಚಿತ್ರದಲ್ಲಿ ನಾಯಕ ಬರೋಬ್ಬರಿ 25 ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಂದರೆ ಈ ಪಾತ್ರಗಳನ್ನು ನಿಭಾಯಿಸಬಲ್ಲ ನಟ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಉತ್ತರ ಮಾತ್ರ ಒಂದೇ 'ಚಿಯಾನ್ ವಿಕ್ರಂ'. ಹೌದು, ನಟ ವಿಕ್ರಂ ಅಭಿನಯದ 58ನೇ ಚಿತ್ರದಲ್ಲಿ 25 ಡಿಫೆರೆಂಟ್​ ಲುಕ್​ನಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅನಿಯನ್' ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ವಿಕ್ರಂ ' ಎಲ್ಲರನ್ನು ಮೋಡಿ ಮಾಡಿದ್ದರು. ಇದೀಗ ಅಂತಹದ್ದೇ ಮತ್ತೊಂದು ಪ್ರಯತ್ನಕ್ಕೆ ನಿರ್ದೇಶಕ ಅಜಯ್ ಜ್ಞಾನಮುತ್ತು ಕೈ ಹಾಕಿದ್ದಾರೆ ಎಂದು ಹೇಳಲಾಗಿದೆ.'ಸೇತು', 'ಕಾಸಿ', ಪಿತಾಮಗನ್, 'ದೈವ ತಿರುಮಗನ್', 'ಇರುಮುಗನ್', 'ಐ' ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನಮನ ಗೆದ್ದ ಬಹುಮುಖ ಪ್ರತಿಭೆ ವಿಕ್ರಂಗೆ ಒಂದೇ ಚಿತ್ರದಲ್ಲಿ 25 ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸಹ ಕಷ್ಟಸಾಧ್ಯವೇನಲ್ಲ. ಏಕೆಂದರೆ ಈ ಹಿಂದೆ 'ರಾವಣನ್' ಚಿತ್ರದಲ್ಲಿ ವಿಕ್ರಂ ಒಂದೇ ಸಮಯದಲ್ಲಿ ಪೊಲೀಸ್ ಮತ್ತು ರಾವಣನ ಪಾತ್ರ ನಿರ್ವಹಿಸಿದ್ದರು. ಹಾಗೆಯೇ 3 ಅವತಾರಗಳಲ್ಲಿ ನಟಿಸಿ ಅಭಿನಯ ಎಂದರೇನು ಎಂಬುದನ್ನು 'ಅನಿಯನ್' ಚಿತ್ರದಲ್ಲಿ ವಿಕ್ರಂ ನಿರೂಪಿಸಿದ್ದರು. ಹೀಗಾಗಿ ಕಾಲಿವುಡ್​ ನಟನ 58ನೇ ಸಿನಿಮಾ ವಿಶ್ವ ಚಿತ್ರರಂಗದಲ್ಲೇ ಹೊಸ ಇತಿಹಾಸಕ್ಕೆ ನಾಂದಿಯಾಡಲಿದೆ ಎನ್ನಲಾಗುತ್ತಿದೆ.

ವಯಕಾಂ 18 ಸ್ಟುಡಿಯೋಸ್ ಹಾಗೂ 7 ಸ್ಕ್ರೀನ್ ಜಂಟಿಯಾಗಿ ನಿರ್ಮಿಸಲಿರುವ ಈ ತಮಿಳು ಚಿತ್ರಕ್ಕೆ ಎಆರ್​ ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ. ಇನ್ನು ಈ ಚಿತ್ರದ ಕಥೆಯು ವಿಕ್ರಂ ಸುತ್ತ ಸುತ್ತಲಿರುವುದರಿಂದ ನಾಯಕಿ ಇರಲಿದ್ದಾರೆಯೇ ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಪ್ರಶ್ನೆಗಳಿಗೆಲ್ಲಾ ಶೀಘ್ರದಲ್ಲೇ ಉತ್ತರ ದೊರೆಯಲಿದ್ದು, ಶೀರ್ಷಿಕೆ ಅನಾವರಣದ ವೇಳೆ ಮತ್ತಷ್ಟು ಮಾಹಿತಿ ಹೊರ ಬೀಳಲಿದೆ.

First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading