ಚಿರು ಪುತ್ರನಿಗೆ ಮುದ್ದಾದ ಹೆಸರು: ವಾಚ್‌ಮ್ಯಾನ್‌ ಆದ್ರು ಸುಂದರ್‌ ರಾಜ್..‌!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿರು ಮತ್ತು ಧ್ರುವ ರಾಮ ಲಕ್ಷ್ಮಣರಂತಿದ್ದವರು, ಅವರ ನಡುವೆ ಅಷ್ಟು ಗಟ್ಟಿ ಸಂಬಂಧವಿತ್ತು. ಆ ನೋವಿನಿಂದ ಆ ಕುಟುಂಬಕ್ಕೆ ಮಾತ್ರವಲ್ಲ ನಮಗೂ ಹೊರಬರಲು ಸಾಧ್ಯವಾಗಿಲ್ಲ.

  • Share this:

ನಟ ಚಿರು ಸರ್ಜಾ ಅಕಾಲಿಕ ಮರಣದ ಬಳಿಕ ಸರ್ಜಾ ಹಾಗೂ ಮೇಘನಾ ಕುಟುಂಬಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ದುಃಖದ ಕಾರ್ಮೋಡ ಆವರಿಸಿತ್ತು. ಆ ಕಾರ್ಮೋಡವನ್ನ ಸರಿಸಿ ಹೊಸ ಬೆಳಕು ಹರಿದಿದ್ದು ಅಕ್ಟೋಬರ್‌ 22 ರಂದು. ಹೌದು, ಚಿರು ಹಾಗೂ ಮೇಘನಾ ರಾಜ್‌ ದಂಪತಿ ನಿಶ್ಚಿತಾರ್ಥವಾದ ದಿನವೇ ಮುದ್ದಾದ ಗಂಡು ಮಗು ಜನಿಸಿತು. ಅದನ್ನು ಜೂನಿಯರ್‌ ಚಿರು ಎಂದೇ ಕುಟುಂಬದವರು, ಆಪ್ತರು ಹಾಗೂ ಅಭಿಮಾನಿಗಳು ಕೊಂಡಾಡಿದ್ದರು.


ಆ ಬಳಿಕ ಮೇಘನಾ ರಾಜ್‌ ಅವರ ಕುಟುಂಬದವರಾಗಲೀ ಅಥವಾ ಸರ್ಜಾ ಕುಟುಂಬದವರಾಗಲೀ ಮಾಧ್ಯಮಗಳ ಮುಂದೆ ಬಂದಿರಲಿಲ್ಲ. ಆದರೆ ಈಗ ಮೇಘನಾ ರಾಜ್‌ ತಂದೆ ಹಿರಿಯ ನಟ ಸುಂದರ್‌ ರಾಜ್‌ ಮೌನ ಮುರಿದಿದ್ದಾರೆ. ಮನಸ್ಸುಬಿಚ್ಚಿ ಮಾತನಾಡಿದ್ದಾರೆ, ಸಂಭ್ರಮಪಟ್ಟಿದ್ದಾರೆ, ಭಾವುಕರಾಗಿದ್ದಾರೆ. ಹಲವು ವಿಷಯಗಳನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.


ʻಏಳು ದಿನಗಳ ನಂತರ ನಾನು ಮಾಧ್ಯಮದವರನ್ನು ಭೇಟಿಯಾಗುತ್ತಿದ್ದೇನೆ. ತಿರುಪತಿ ತಿಮ್ಮಪ್ಪನ ಹರಕೆಯಂತೆ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ಈ ಮಗು ದಸರಾ ಹಬ್ಬದ ಸಮಯದಲ್ಲಿ ಹುಟ್ಟಿರುವುದು ಶುಭ ಸೂಚಕ. ಕೊರೋನಾ ಇರುವುದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು, ಹೀಗಾಗಿಯೇ ಮೇಘನಾ ಮಾಧ್ಯಮಗಳ ಮುಂದೆ ಬಂದು ಮಾತನಾಡಲು ಸಾಧ್ಯವಾಗಿರಲಿಲ್ಲ. ಆದರೆ ನವೆಂಬರ್‌ ೧ರಂದು ಮೇಘನಾ ಮಾತನಾಡುತ್ತಾರೆʻ ಎಂದು ಹೇಳಿಕೊಂಡಿದ್ದಾರೆ ಸುಂದರ್‌ ರಾಜ್‌.


ಇನ್ನು ಚಿರು ಅಕಾಲಿಕ ಮರಣದ ಬಗ್ಗೆ ಮಾತನಾಡುತ್ತಾ ಭಾವುಕರಾದ ಅವರು, ʻಮಗಳನ್ನು ಕೊಟ್ಟು ಮದುವೆ ಮಾಡಿ ಜವಾಬ್ದಾರಿ ಮುಗಿಯಿರು ಅಂದುಕೊಳ್ಳುವಾಲೇ ಚಿರು ಹೋಗಿಬಿಟ್ಟ. ಮದುವೆ ಆಗಿರದಿದ್ದರೆ ಯೋಚನೆ ಇರುತ್ತಿರಲಿಲ್ಲ. ಈ ರೀತಿಯಾಗಿ ಮಗಳನ್ನು ನೋಡಲು ಕಷ್ಟವಾಗುತ್ತಿದೆ. ದೇವರು ಕಣ್ಣು ಕೊಡದೇಯಿದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಕೊಟ್ಟಿರುವ ಕಣ್ಣನ್ನು ಕಿತ್ತುಕೊಂಡರೆ ಹೇಗಲ್ವಾ? ದೇವರು ಸುಂದರವಾದ ಮಗಳನ್ನು ಕೊಟ್ಟ ಆದರೆ ಸುಂದರವಾದ ಜೀವನ ಕೊಡಲಿಲ್ಲ. ಮಗು ಬೆಳೆಯುವವರೆಗೂ ನನಗು ಆಯಸ್ಸು ಕೊಡು ಅಂತ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆʼ ಎನ್ನುತ್ತಾ ಮೌನವಹಿಸುತ್ತಾರೆ ಸುಂದರ್‌ ರಾಜ್‌.


ಸುಂದರ್ ರಾಜ್-ಧ್ರುವ ಸರ್ಜಾ


ಮಗುವನ್ನು ಸುಂದರ್‌ ರಾಜ್‌ ಪ್ರೀತಿಯಿಂದ ಚಿಂಟು ಎಂದು ಕರೆಯುತ್ತಾರಂತೆ. ಹಾಗೇ ಮೇಘನಾ ಕೂಡ ಮಗುವನ್ನು ಪಾಪು ಅನ್ನುತ್ತಾರಂತೆ. ಮಗುವಿನ ಮೂಗು ನಿಜಕ್ಕೂ ಚಿರು ಸರ್ಜಾ ಮೂಗಿನಂತೆಯೇ ಇದೆ ಎಂದು ನಗುತ್ತಾರೆ ಸುಂದರ್‌ ರಾಜ್‌. ಇನ್ನು ಅರ್ಜುನ್‌ ಸರ್ಜಾ ಅವರನ್ನು ಜೆಂಟಲ್‌ಮ್ಯಾನ್‌ ಎನ್ನುವ ಅವರು, ಧ್ರುವ ಸರ್ಜಾ ಅವರನ್ನು ಶೋಮ್ಯಾನ್‌ ಎನ್ನುತ್ತಾರೆ. ಆದರೆ ತಮ್ಮನ್ನು ತಾವು ಸದ್ಯ ಮೊಮ್ಮಗನನ್ನು ಕಾಯುತ್ತಿರುವ ವಾಚ್‌ಮ್ಯಾನ್‌ ಎಂದು ಹಾಸ್ಯ ಮಾಡಿದರು.


ಚಿರು ಮತ್ತು ಧ್ರುವ ರಾಮ ಲಕ್ಷ್ಮಣರಂತಿದ್ದವರು, ಅವರ ನಡುವೆ ಅಷ್ಟು ಗಟ್ಟಿ ಸಂಬಂಧವಿತ್ತು. ಆ ನೋವಿನಿಂದ ಆ ಕುಟುಂಬಕ್ಕೆ ಮಾತ್ರವಲ್ಲ ನಮಗೂ ಹೊರಬರಲು ಸಾಧ್ಯವಾಗಿಲ್ಲ. ಆದರೆ ಈಗ ಮೊಮ್ಮಗನ ಆಗಮನ ಕೊಂಚ ಸಮಾಧಾನ ನೀಡಿದೆ. ಮುಂದೆ ಎಲ್ಲವೂ ಒಳ್ಳೆಯದಾಗುತ್ತೆʼ ಎಂದು ಹೇಳುತ್ತಾರೆ ಸುಂದರ್‌ ರಾಜ್‌.


ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!

Published by:zahir
First published: