ಚಿರಂಜೀವಿ ಸರ್ಜಾ 2017ರಲ್ಲಿ ತಮ್ಮ ಬಹುಕಾಲದ ಗೆಳೆತಿ ಮೇಘನಾ ರಾಜ್ ಜೊತೆಗೆ ಎಂಗೇಜ್ ಆಗುವ ಮೂಲಕ ತಮ್ಮಿಬ್ಬರ ಬಗ್ಗೆ ಹಬ್ಬಿದ್ದ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. 2018ರಲ್ಲಿ ಅವರಿಬ್ಬರೂ ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ, ಮದುವೆಯಾಗಿ ಎರಡೇ ವರ್ಷಕ್ಕೆ ಚಿರಂಜೀವಿ ಸರ್ಜಾ ತನ್ನವರೆನ್ನಲ್ಲ ಅಗಲಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಇನ್ನು 5 ತಿಂಗಳಲ್ಲಿ ಮೇಘನಾ ರಾಜ್ ಕಂದಮ್ಮನಿಗೆ ಜನ್ಮ ನೀಡುವವರಿದ್ದರು ಎಂಬ ಸಂಗತಿ ಬಯಲಾಗಿದೆ. ಈ ಸಿಹಿಸುದ್ದಿಯನ್ನು ಎಲ್ಲರೆದುರು ಹೇಳುವ ಮೊದಲೇ ಚಿರಂಜೀವಿ ಸರ್ಜಾ ಕಣ್ಮುಚ್ಚಿದ್ದಾರೆ.
10 ವರ್ಷಗಳ ಕಾಲ ಸ್ನೇಹಿತರಾಗಿದ್ದ ಚಿರು- ಮೇಘನಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಬೆಸ್ಟ್ ಫ್ರೆಂಡ್ಸ್ ಆಗಿದ್ದ ಅವರಿಬ್ಬರೂ ಒಟ್ಟಿಗೇ ಜೀವನ ನಡೆಸಬೇಕೆಂದು ನಿರ್ಧರಿಸಿದ 2 ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು. ಮದುವೆಯಾದ ಮೇಲೂ ಉತ್ತಮ ಸ್ನೇಹಿತರಂತೆ ಇದ್ದ ಚಿರು- ಮೇಘನಾ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ಮೇಘನಾ ಗಾಯನ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ಚಿರು ಸರ್ಜಾ ಅವರ 'ಸಿಂಗ' ಸಿನಿಮಾದಲ್ಲಿ ಮೇಘನಾ ಹಾಡಿದ್ದ 'ವಾಟ್ ಎ ಬ್ಯೂಟಿಫುಲ್ ಹುಡುಗಿ ಸಿವ ಸಿವಾ' ಹಾಡು ಭಾರೀ ಫೇಮಸ್ ಆಗಿತ್ತು.
![Chiranjeevi Sarja Love Story: Chiranjeevi Sarja and Meghana Raj expecting a Baby as Meghana Raj is Pregnant.]()
ಚಿರಂಜೀವಿ ಸರ್ಜಾ- ಮೇಘನಾ ರಾಜ್
ಇದನ್ನೂ ಓದಿ: Chiranjeevi Sarja Death: ನಿನ್ನೆಯೇ ಎದೆ ನೋವು ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡಿದರಾ ಚಿರಂಜೀವಿ ಸರ್ಜಾ?
ಲಾಕ್ಡೌನ್ ವೇಳೆ ಚಿರು ಸರ್ಜಾ ತನ್ನ ಮನೆಯವರೊಂದಿಗೆ ಕುಳಿತು ಆಟವಾಡಿದ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಮೇಘನಾ ಕೂಡ ಇತ್ತೀಚೆಗೆ ಯಾವುದೂ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಆಕೆ ಗರ್ಭಿಣಿಯಾಗಿದ್ದೇ ಕಾರಣ. ಮೇಘನಾ ರಾಜ್ ಈಗ 4 ತಿಂಗಳ ಗರ್ಭಿಣಿ. ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದ ಚಿರು- ಮೇಘನಾ ಕುಟುಂಬಕ್ಕೆ ಚಿರು ಸಾವಿನಿಂದಾಗಿ ಬರಸಿಡಿಲು ಬಡಿದಂತಾಗಿದೆ. ತಾವು ತಂದೆ-ತಾಯಿ ಆಗುತ್ತಿರುವ ವಿಷಯವನ್ನು ಸದ್ಯದಲ್ಲೇ ಎಲ್ಲರೆದುರು ಹೇಳಲು ಮೇಘನಾ ಮತ್ತು ಚಿರಂಜೀವಿ ನಿರ್ಧರಿಸಿದ್ದರು. ಆದರೆ, ಅದಕ್ಕೂ ಮೊದಲೇ ವಿಧಿ ಬೇರೆಯದೇ ಆಟವಾಡಿತ್ತು.
ಇದನ್ನೂ ಓದಿ: ಚಿರನಿದ್ರೆಗೆ ಜಾರಿದ ಚಿರು; ಕಂಬನಿ ಮಿಡಿದ ಸ್ಯಾಂಡಲ್ವುಡ್ ತಾರೆಯರು
ನಿನ್ನೆ ಸಂಜೆ ಚಿರಂಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಇದುವರೆಗೂ ಅವರಿಗೆ ಆ ರೀತಿಯ ಯಾವುದೇ ಸಮಸ್ಯೆ ಕಂಡುಬರದ ಯಾರೂ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದು ಮಧ್ಯಾಹ್ನ 3 ಗಂಟೆಗೆ ತಪಾಸಣೆಗಾಗಿ ಚಿರು ಅಪೋಲೋ ಆಸ್ಪತ್ರೆಯಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಹೊರಡುವ ಮೊದಲೇ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಅವರ ಪಲ್ಸ್ ಕಡಿಮೆಯಾಗಿತ್ತು. ವೈದ್ಯರು ತಕ್ಷಣ ಚಿಕಿತ್ಸೆ ಶುರು ಮಾಡಿದ್ದರಿಂದ ಚಿರುಗೆ ಪ್ರಜ್ಞೆ ಬಂದಿತ್ತು. ಆದರೆ, ಮತ್ತೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ